ರಾಜ್ಯದ ೨೮ ನಗರಗಳಿಗೆ ನಗರ ಸಾರಿಗೆ ಬಸ್ ಸಂಚಾರ : ಸಚಿವ ರಾಮಲಿಂಗಾರೆಡ್ಡಿ

  ರಾಜ್ಯದ ಎಲ್ಲಾ ಜಿಲ್ಲೆಗಳ ನಗರ ಪ್ರದೇಶದವರಿಗೆ ಅನುಕೂಲವಾಗಲು ಬರುವ ಜನವರಿ ತಿಂಗಳೊಳಗಾಗಿ ಕೊಪ್ಪಳ ನಗರವಲ್ಲದೇ ರಾಜ್ಯದ ಎಲ್ಲಾ ೨೮ ನಗರಗಳಿಗೆ ನಗರ ಸಾರಿಗೆ ಬಸ್ ಸಂಚಾರವನ್ನು ಶೀಘ್ರ ಒದಗಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.

 ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ನೂತನ ಬಸ್ ನಿಲ್ದಾಣದ ಅಡಿಗಲ್ಲು ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
  ಹಿಟ್ನಾಳ ಗ್ರಾಮವು ಸುಮಾರು ೩೫೦೦ ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ೪-೫ ತಿಂಗಳೊಳಗಾಗಿ ಈ ಕಾಮಗಾರಿಯನ್ನು ಮುಕ್ತಾಯಗೊಳಿಸುವುದಲ್ಲದೆ ಇಲಾಖೆಯ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು.  ಕೊಪ್ಪಳ ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಸುಮಾರು ೧೨ ನಗರ ಸಾರಿಗೆ ಬಸ್‌ಗಳನ್ನು ಆರಂಭಿಸಲಾಗಲಿದ್ದು, ಇದರಿಂದ ನಗರದ ಸಾರ್ವಜನಿಕರು ನಗರದ ವಿವಿಧೆಡೆ ಕಡಿಮೆ ವೆಚ್ಚದಲ್ಲಿ ಸಂಚರಿಸಲು ತುಂಬ ಅನುಕೂಲವಾಗಲಿದೆ. ರಾಜ್ಯದಲ್ಲಿ ನಗರ ಸಾರಿಗೆ ಬಸ್‌ಗಳು, ಹೊಸ ಬಸ್ ನಿಲ್ದಾಣ ಹಾಗೂ ಬಸ್ ಡಿಪೋಗಳನ್ನು ಆರಂಭಿಸಲು ರಾಜ್ಯ ಸರ್ಕಾರದೊಂದಿಗೆ ಕೇಂದ್ರ ಸರ್ಕಾರ ಕೈಜೋಡಿಸಿದ್ದು ಶೀಘ್ರ ಕೊರತೆ ಇರುವ ಪ್ರಮುಖ ಜಿಲ್ಲೆಗಳಿಗೆ ನೂತನ ಬಸ್‌ಗಳು ಹಾಗೂ ಹೊಸ ನಿಲ್ದಾಣಗಳನ್ನು ಒದಗಿಸಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು. 
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ಜಿ.ಪಂ.ಸದಸ್ಯರುಗಳಾದ ಕೆ.ರಮೇಶ ಹಿಟ್ನಾಳ, ಈರಪ್ಪ ಕುಡಗುಂಟಿ, ತಾ.ಪಂ. ಸದಸ್ಯೆ ವಿಶಾಲಾಕ್ಷಮ್ಮ ವಿ.ಮಾಲಿಪಾಟೀಲ್, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಎಪಿಎಂಸಿ ನಿರ್ದೇಶಕ ಶಿವಲಿಂಗಪ್ಪ ತಿಪ್ಪವ್ವನವರ, ಗ್ರಾ.ಪಂ.ಅಧ್ಯಕ್ಷೆ ಸುಮಾ ಶಾಂತರಾಜ ಜೈನ್, ಗ್ರಾ.ಪಂ. ಉಪಾಧ್ಯಕ್ಷ ಕೆ.ಅಕ್ಸರ್ ಅಲಿ. ಎಮ್, ಈ.ಕ.ರ.ಸಾ.ಸಂಸ್ಥೆಯ ಗುಲಬರ್ಗಾದ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್.ಶಿವಮೂರ್ತಿ, ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಮಿನುಲ್ಲಾ ಸಾಹೇಬ್, ಗಣ್ಯರಾದ ರಮೇಶ ವೈದ್ಯ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.
Please follow and like us:
error