ಜಿಲ್ಲೆಗೆ ಸಚಿವ ಸ್ಥಾನ- ವರಿಷ್ಠರಿಗೆ ಒತ್ತಡ

ಕೊಪ್ಪಳ: ಕಳೆದ ವರ್ಷ ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಸಚಿವ ಸ್ಥಾನ ಕಳೆದುಕೊಂಡ ನಂತರ ಜಿಲ್ಲೆಗೆ ಇನ್ನೂ ಸಚಿವ ಸ್ಥಾನ ಸಿಕ್ಕಿಲ್ಲ. ಈಗಲೂ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.
ಹೀಗಾಗಿ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ವರಿಷ್ಠರಿಗೆ ಮನವಿ ಸಲ್ಲಿಸಲು ಬಿಜೆಪಿ ಮುಖಂಡರ ನಿಯೋಗವೊಂದು ಡಿ. 21ರಂದು ಬೆಂಗಳೂರಿಗೆ ತೆರಳಲು ಸಜ್ಜಾಗಿದೆ. ಡಿ. 22ರಂದು ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಪಕ್ಷದ ವರಿಷ್ಠರು ಬೆಂಗಳೂರಿನಲ್ಲಿಯೇ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ತಮ್ಮ ಅಹವಾಲು ಸಲ್ಲಿಸಲು ನಿರ್ಧರಿಸಿದ್ದಾರೆ. 
ಅದರಲ್ಲೂ, ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರಿಗೇ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲು ನಿಯೋಗ ನಿರ್ಧರಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು `ಪ್ರಜಾವಾಣಿ`ಗೆ ಸ್ಪಷ್ಟಪಡಿಸಿದ್ದಾರೆ. 
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ, ಅವರ ಪರ ವರಿಷ್ಠರ ಮಟ್ಟದಲ್ಲಿ ಒತ್ತಡ ಹೇರಬಲ್ಲ ಬೆಂಬಲಿಗರ ಪಡೆ ಇಲ್ಲ ಎಂದು ಇದೇ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಸೆಪ್ಟಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜಯ ಸಾಧಿಸಿದ ಸಂಗಣ್ಣ ಕರಡಿ ಅವರಿಗೆ ಈ ವರೆಗೂ ಸಚಿವ ಸ್ಥಾನ ನೀಡಿಲ್ಲ. ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದ ಕೊಪ್ಪಳ ಶಾಸಕ ವಿರೂಪಾಕ್ಷಪ್ಪ ಅಗಡಿ ಆಗ ನಡೆದ ದಿಢೀರ್ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಒಂದೇ ವಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡರು. ಅದಾದ ನಂತರ ಕೊಪ್ಪಳ ಕ್ಷೇತ್ರದಿಂದ ಆಯ್ಕೆಗೊಂಡ ಯಾವ ಶಾಸಕರಿಗೂ ಸಚಿವ ಸ್ಥಾನ ಲಭಿಸಿಲ್ಲ.
ಇದು ಸಂಗಣ್ಣ ಬೆಂಬಲಿಗರ ವಾದ.ಅಲ್ಲದೇ, ಬಿ.ಎಸ್.ಯಡಿಯೂರಪ್ಪ ಅವರ ಪಾಲಿಗೆ ಅಗ್ನಿಪರೀಕ್ಷೆ ಎಂದೇ ಪರಿಗಣಿಸಲಾಗಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಂಗಣ್ಣ ಅವರು ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳುವಂತೆ ಮಾಡಿದ್ದಾರೆ. ಅಲ್ಲದೇ, ಕೆಎಸ್‌ಎಸ್‌ಐಡಿಸಿ ಅಧ್ಯಕ್ಷ ಸ್ಥಾನವನ್ನು ಉಪಚುನಾವಣೆ ಸಂದರ್ಭದಲ್ಲಿ ಸಂಗಣ್ಣ ತ್ಯಜಿಸಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಸಂಗಣ್ಣಗೆ ಸಚಿವ ಸ್ಥಾನ ನೀಡುವುದು ಅಗತ್ಯ ಎಂಬುದಾಗಿ ಪಕ್ಷದ ಮುಖಂಡರು ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ.
ಪರಣ್ಣ ಸಹ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದು, ಆ ನಿಟ್ಟಿನಲ್ಲಿ ವರಿಷ್ಠರ ಮನವೊಲಿಸುವ ಕಾರ್ಯ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಡಿ. 9ರಿಂದ ಮೂರು ದಿನಗಳ ಕಾಲ ಗಂಗಾವತಿಯಲ್ಲಿ ನಡೆದ ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಪರಣ್ಣ ಶ್ರಮಿಸಿದ್ದಾರೆ. ಈಗ ಜಿಲ್ಲೆಗೆ ಒಂದೂ ಸಚಿವ ಸ್ಥಾನ ಇಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಪರಣ್ಣಗೆ ಸಚಿವ ಪದವಿ ನೀಡುವುದರಲ್ಲಿ ತಪ್ಪಿಲ್ಲ ಎಂಬುದು ಅವರ ಬೆಂಬಲಿಗರ ವಾದ. ಈ ಇಬ್ಬರು ಶಾಸಕರಲ್ಲಿ ವರಿಷ್ಠರ ಅಭಯ ಯಾರಿಗೆ ಸಿಗಲಿದೆ ಎಂಬುದೇ ಜಿಲ್ಲೆಯ ಜನರ ಕುತೂಹಲ.
Please follow and like us:
error