ಅನ್ನಭಾಗ್ಯ, ಕ್ಷೀರಭಾಗ್ಯ ಮೇಲ್ವಿಚಾರಣೆಗೆ ಹೋಬಳಿಗೊಬ್ಬರು ಅಧಿಕಾರಿ- ಕೆ.ಪಿ. ಮೋಹನ್‌ರಾಜ್

 ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ ಮುಂತಾದ ಯೋಜನೆಗಳ ಅನುಷ್ಠಾನ ಕುರಿತಂತೆ ಮೇಲ್ವಿಚಾರಣೆ ಕೈಗೊಳ್ಳಲು ಪ್ರತಿ ಹೋಬಳಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು

ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದರು.

  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಬಡವರಿಗೆ ಪ್ರತಿ ಕೆ.ಜಿ.ಗೆ ೦೧ ರೂ. ನಂತೆ ಪ್ರತಿ ಕುಟುಂಬಕ್ಕೆ ೩೦ ಕೆ.ಜಿ. ಅಕ್ಕಿಯನ್ನು ಪಡಿತರ ಮೂಲಕ ವಿತರಣೆ ಮಾಡಲಾಗುವ ‘ಅನ್ನಭಾಗ್ಯ’ ಯೋಜನೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಪ್ರತಿ ವಾರಕ್ಕೆ ಮೂರು ಬಾರಿ ಹಾಲು ವಿತರಣೆ ಮಾಡಲಾಗುವ ‘ಕ್ಷೀರಭಾಗ್ಯ’ ಯೋಜನೆಗಳು ಸಮಾಜದ ಕಡುಬಡತನದಲ್ಲಿನ ಕುಟುಂಬಗಳ ಪಾಲಿಗೆ ಸಂಜೀವಿನಿಯಾಗಿದ್ದು, ಇಂತಹ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ.  ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿನ ಲೋಪ-ದೋಷಗಳು, ಅಕ್ರಮ ಮುಂತಾದ ವಿಷಯಗಳ ಬಗ್ಗೆ ನಿಗಾ ವಹಿಸಲು ಮತ್ತು ಮೇಲ್ವಿಚಾರಣೆಗಾಗಿ ಪ್ರತಿ ಹೋಬಳಿಗೆ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು.  ಅಲ್ಲದೆ ಈ ಅಧಿಕಾರಿಗಳಿಗೆ ವಿಶೇಷ ಅಧಿಕಾರವನ್ನೂ ಸಹ ನೀಡಲಾಗುವುದು.  ಈ ಅಧಿಕಾರಿಗಳು ತಮ್ಮ ಹೋಬಳಿ ವ್ಯಾಪ್ತಿಯಲ್ಲಿನ ನ್ಯಾಯಬೆಲೆ ಅಂಗಡಿಗಳು, ಅಂಗನವಾಡಿಗಳಿಗೆ ಆಕಸ್ಮಿಕ ಭೇಟಿ ನೀಡಿ ಯೋಜನೆಯ ಸಮರ್ಪಕ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಬೇಕು.  ಇದೇ ಸಂದರ್ಭದಲ್ಲಿ ಬಿಸಿಯೂಟ ಯೋಜನೆ, ಹಾಸ್ಟೆಲ್‌ಗಳಲ್ಲಿನ ಸ್ಥಿತಿ-ಗತಿಗಳನ್ನೂ ಸಹ ಪರಾಮರ್ಶಿಸಬೇಕು.  ಪ್ರತಿ ವಾರಕ್ಕೆ ಒಮ್ಮೆ ತಾವು ಭೇಟಿ ನೀಡಿದ ಗ್ರಾಮ, ಶಾಲೆ, ಅಂಗನವಾಡಿ, ಹಾಸ್ಟೆಲ್‌ಗಳಿಗೆ ಸಂಬಂಧಿಸಿದ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬೇಕು.  ಈ ಕುರಿತಂತೆ ಪ್ರತಿ ತಿಂಗಳಿಗೆ ಒಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುವುದು.  ಜಿಲ್ಲೆಯಲ್ಲಿ ಕೆರೆ ಹಾಗೂ ಸರ್ಕಾರಿ ಭೂಮಿ ಅಕ್ರಮ ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಆದ್ಯತೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
  ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಮಾಡುವುದು ಕಡ್ಡಾಯವಾಗಿದ್ದು, ಈ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.  ಅಧಿಕಾರಿಗಳೂ ಸಹ ತಮ್ಮ ಅಧೀನದಲ್ಲಿ ಬರುವ ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಮಾಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.  ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಶ್ರಮಿಸಬೇಕು.  ಆದರೆ ಕಾನೂನು ಉಲ್ಲಂಘಿಸಿ ಯಾರ ಪರವಾಗಿಯೂ ಅಥವಾ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡಿದಲ್ಲಿ ಅಂತಹವರನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
  ಶಾಲಾ ಮಕ್ಕಳು ಮತ್ತು ಹಾಸ್ಟೆಲ್‌ಗಳಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಅನುದಾನದ ಕೊರತೆಯ ನೆಪವೊಡ್ಡಿ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇರುವುದು ಸಮಂಜಸವಲ್ಲ.  ಕಬ್ಬರಗಿ ಮತ್ತು ಹೂಲಗೇರಾ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ಅನುದಾನವಿಲ್ಲ ಎಂದು ಬೇಳೆ ರಹಿತ ಊಟ ನೀಡಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತಂತೆ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಗೆ ನೋಟೀಸ್ ಜಾರಿಗೊಳಿಸಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಜಿ.ಹೆಚ್. ವೀರಣ್ಣ ಅವರಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಸೂಚನೆ ನೀಡಿದರು.
  ಸಭೆಯಲ್ಲಿ ಸಹಾಯಕ ಆಯುಕ್ತ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಾದೇವಸ್ವಾಮಿ, ಆಹಾರ ಇಲಾಖೆ ಡಿಡಿ ಅಶೋಕ್ ಕಲಘಟಗಿ, ಆರ್.ಟಿ.ಓ ಪಾಂಡುರಂಗಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ದೊರೈಸ್ವಾಮಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಸುಜ್ಞಾನಮೂರ್ತಿ, ಬಿಸಿಎಂ ಅಧಿಕಾರಿ ಕಲ್ಲೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply