ಡಿ.೨೫ ರಿಂದ ಹಂಪಿ ವಿರುಪಾಕ್ಷೇಶ್ವರ ಫಲಪೂಜಾ ಮಹೋತ್ಸವ.

ಕೊಪ್ಪಳ,
ಡಿ.೦೯ (ಕ ವಾ) ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಬಳ್ಳಾರಿ ಜಿಲ್ಲೆ
ಹೊಸಪೇಟೆ ತಾಲೂಕಿನ ಹಂಪಿ ಕ್ಷೇತ್ರದ  ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ಫಲಾಪೂಜಾ
ಮಹೋತ್ಸವವು ಡಿ.೨೫ ರಿಂದ ನಡೆಯಲಿದೆ.
     ಫಲಪೂಜಾ ಮಹೋತ್ಸವದ ಅಂಗವಾಗಿ ಡಿ.೨೫ ರ
ರಾತ್ರಿ ೦೮.೩೦ ಗಂಟೆಗೆ ತುಂಗಭದ್ರಾ ನದಿಯಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ
ತೆಪ್ಪೋತ್ಸವ ನಡೆಯಲಿದೆ ಹಾಗೂ ಡಿ.೨೭ ರಂದು ರಾತ್ರಿ ೧೦ ಗಂಟೆಗೆ ಶ್ರೀ ಚಕ್ರತೀರ್ಥ
ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವ
ಜರುಗಲಿದೆ. ವಿಜಯನಗರದ ಅರಸ ಶ್ರೀಕೃಷ್ಣದೇವರಾಯರು ಶ್ರೀ ವಿರುಪಾಕ್ಷೇಶ್ವರ
ಸ್ವಾಮಿಯವರಿಗೆ ಸಮರ್ಪಿಸಿದ ನವರತ್ನ ಖಚಿತವಾದ ಸುವರ್ಣಮುಖ ಕಮಲವನ್ನು ಡಿ.೨೫ ರಿಂದ
ಡಿ.೨೭ ರವರೆಗೆ ನಡೆಯುವ ಈ ಫಲಪೂಜಾ ಮಹೋತ್ಸವದಲ್ಲಿ ಸ್ವಾಮಿಗೆ ಅಲಂಕರಿಸಲಾಗುವುದು.
ಫಲಪೂಜಾ ನಂತರ ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಹಂಪಿ
ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಅನ್ನಸಂತರ್ಪಣೆ ಕಾರ್ಯ ಜರುಗಲಿದ್ದು,
ದವಸ ಧಾನ್ಯಗಳನ್ನು ಕೊಡಲಿಚ್ಛಿಸುವ ಭಕ್ತಾದಿಗಳು ದೇವಸ್ಥಾನದ ಕಾರ್ಯಾಲಯದಲ್ಲಿ ನೀಡಿ
ರಸೀದಿ ಪಡೆಯಬಹುದಾಗಿದೆ.
     ಭಕ್ತ ಮಹಾಶಯರು ತಮ್ಮ ಬಂಧು-ಮಿತ್ರರೊಡನೆ ಶ್ರೀ
ಪುಣ್ಯಕ್ಷೇತ್ರಕ್ಕೆ ಆಗಮಿಸಿ, ಶ್ರೀ ವಿರೂಪಾಕ್ಷೇಶ್ವರ  ಸ್ವಾಮಿಯ ಸರ್ವ
ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ಭುವನೇಶ್ವರಿ ಸಹಿತ ಶ್ರೀ ಪಂಪಾ ವಿರುಪಾಕ್ಷೇಶ್ವರ
ಸ್ವಾಮಿಯ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಯಂ.ಹೆಚ್. ಪ್ರಕಾಶ್‌ರಾವ್ 
ತಿಳಿಸಿದ್ದಾರೆ.  

Related posts

Leave a Comment