ಧರ್ಮ ಸ್ಥಾಪನೆಗೆ ಶ್ರೀ ಕೃಷ್ಣನ ರಾಜಕೀಯ ನೀತಿ ಸರ್ವಕಾಲಕ್ಕೂ ಪ್ರಸ್ತುತ : ಅಮರೇಶ್ ಕುಳಗಿ

  ಜಗತ್ತಿನಲ್ಲಿ ಅಧರ್ಮವನ್ನು ತೊಡೆದುಹಾಕಿ, ಧರ್ಮವನ್ನು ಸ್ಥಾಪಿಸಲು ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಕೈಗೊಂಡ ರಾಜಕೀಯ ನಡೆ, ಸರ್ವ ಯುಗಕ್ಕೂ ಪ್ರಸ್ತುತವಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.
  ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಯಾದವ ಸಮಾಜದ ಸಹಯೋಗದೊಂದಿಗೆ ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಶ್ರೀ ಕೃಷ್ಣ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ರಾಜನೀತಿಯ ನಿಪುಣನಾಗಿದ್ದ ಶ್ರೀ ಕೃಷ್ಣ, ದ್ವಾಪರ ಯುಗದಲ್ಲಿ ತಾಂಡವವಾಡುತ್ತಿದ್ದ ಅಧರ್ಮವನ್ನು ನಾಶಮಾಡಿ, ಜಗತ್ತಿನಲ್ಲಿ ಧರ್ಮ ಸ್ಥಾಪಿಸುವುದಕ್ಕೆಂದೇ ಅವತಾರವನ್ನೆತ್ತಿದ್ದ.  ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕಾಯಕ ಮಾಡುವುದಷ್ಟೇ ಮನುಷ್ಯನ ಧರ್ಮವಾಗಿದ್ದು, ಅನ್ಯಾಯ ಕಂಡುಬಂದಾಗ, ಅದನ್ನು ನಿರ್ಭೀತಿಯಿಂದ ಎದುರಿಸಬೇಕು ಎನ್ನುವ ತತ್ವವನ್ನು ಭಗವದ್ಗೀತೆಯ ಮೂಲಕ ಶ್ರೀ ಕೃಷ್ಣ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವ ನೀತಿಯನ್ನು ಸಾರಿದ್ದನು.  ತನ್ನ ಹುಟ್ಟಿನಿಂದಲೇ ಸಂಕಷ್ಟವನ್ನು ಎದುರಿಸಿದ ಶ್ರೀ ಕೃಷ್ಣ, ಬದುಕಿನುದ್ದಕ್ಕೂ ಅನ್ಯಾಯದ ವಿರುದ್ಧ ಹೋರಾಡಿ ಯಶಸ್ವಿಗೊಳಿಸಿದ್ದ ಎಂಬುದು, ಮಹಾಭಾರತ ಕಾವ್ಯದಿಂದ ತಿಳಿದುಬರುತ್ತದೆ.  ಇಂತಹ ಮಹಾಪುರುಷನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು, ಆದೇಶ ಹೊರಡಿಸಿರುವುದು ಸ್ವಾಗತಾರ್ಹವಾಗಿದ್ದು, ಕೃಷ್ಣ ಜಯಂತಿಯ ಅಂಗವಾಗಿ ಜಿಲ್ಲೆಯಾದ್ಯಂತ ಕೃಷ್ಣನ ವೇಷಭೂಷಣ ಸ್ಪರ್ಧೆ ಆಯೋಜಿಸಿದಲ್ಲಿ ಅರ್ಥಪೂರ್ಣ ಜಯಂತಿಯಾಗಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.
  ಕಾರ್ಯಕ್ರಮದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ್ ಅವರು, ಭಾರತ ದೇಶದ ಸಂಸ್ಕøತಿ, ಸಮಾಜಕ್ಕೆ ಘನತೆ ತಂದಿದ್ದೆ ಶ್ರೀಕೃಷ್ಣನ ಭಗವದ್ಗೀತೆ.  ಕ್ರಿಸ್ತಶಕ ಪೂರ್ವ 3000 ವರ್ಷಗಳ ಹಿಂದೆ ನಡೆಯಿತು ಎನ್ನಲಾದ ಮಹಾಭಾರತದಲ್ಲಿ ಅಧರ್ಮವನ್ನು ಮಣಿಸಿ, ಧರ್ಮದ ಸ್ಥಾಪನೆ ಮಾಡಲು ಸೂತ್ರ ಹೆಣೆದಿದ್ದೇ ಶ್ರೀ ಕೃಷ್ಣ.  ಜಾತಿ, ಜನಾಂಗ, ದೇಶವನ್ನು ದಾಟಿ ಇಡೀ ಜಗತ್ತಿನಲ್ಲಿ ಪೂಜಿಸಿಕೊಳ್ಳುವಂತಹ ದೈವವಾಗಿದ್ದಾನೆ ಅಲ್ಲದೆ ಸಮಸ್ತ ಮಾನವ ಕುಲಕ್ಕೆ ಧರ್ಮದ ಪ್ರೇರಣಾ ಶಕ್ತಿ ಶ್ರೀ ಕೃಷ್ಣ.   ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರ ಕಳೆದು, ಅಪಮಾನ ಮಾಡಲು ಯತ್ನಿಸಿದಾಗ, ಆಕೆಯ ಮಾನವನ್ನು ಕಾಪಾಡಿದ್ದನು.  ಕಷ್ಟದಲ್ಲಿರುವ ಮಹಿಳಯರ ದುಖಕ್ಕೆ ಸ್ಪಂದಿಸಿದ ಕಾರಣದಿಂದಲೇ ಕೃಷ್ಣ ಸರ್ವರಿಂದಲೂ ಪೂಜಿತ ಮಹಾನ್ ದೈವವಾಗಿದ್ದಾನೆ.  ಜಗತ್ತಿನಲ್ಲಿ ಧರ್ಮಕ್ಕಿಂತಲೂ ಅಧರ್ಮವೇ ಹೆಚ್ಚಾದಾಗ, ಮತ್ತೆ ಹುಟ್ಟಿಬರುವೆನೆಂಬ ಸಂದೇಶವನ್ನು ಶ್ರೀಕೃಷ್ಣ ಮಹಾಭಾರತದಲ್ಲಿ ನೀಡಿದ್ದಾನೆ ಎಂದರು.
  ನಗರಸಭೆ ಸದಸ್ಯೆ ರೇಣುಕಾ ಪೂಜಾರ್ ಕಾರ್ಯಕ್ರಮ ಕುರಿತು ಮಾತನಾಡಿದರು.  ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಉಪಾಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯರುಗಳಾದ ಮುತ್ತುರಾಜ ಕುಷ್ಟಗಿ, ಬಾಳಪ್ಪ ಬಾರಕೇರ, ಯಾದವ ಸಮಾಜದ ಅಧ್ಯಕ್ಷ ಯಂಕಣ್ಣ ಬಂಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿಡಿಪಿಐ ಜಿ.ಹೆಚ್. ವೀರಣ್ಣ, ಶಿವಾನಂದ ಹೊದ್ಲೂರ, ರಮೇಶ್ ಕರಡಿ, ರಾಧಿಕಾ ಜಗನ್ನಾಥ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  
  ಸಮಾರಂಭಕ್ಕೂ ಮುನ್ನ ನಗರದ ಶಿರಸಪ್ಪಯ್ಯನ ಮಠದ ಬಳಿಯಿಂದ ಶ್ರೀ ಕೃಷ್ಣನ ಫೋಟೋ ಸಹಿತ ವೈಭವದ ಮೆರವಣಿಗೆ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೂ ಸಾಗಿ ಬಂದಿತು.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜಾಂಜ್ ಮೇಳ ಮುಂತಾದ ಕಲಾತಂಡಗಳು ಪಾಲ್ಗೊಂಡು, ಆಕರ್ಷಕಗೊಳಿಸಿದವು.
Please follow and like us:
error