ಸಾಮಾಜಿಕ ಭದ್ರತೆ ಯೋಜನೆ ಸೌಲಭ್ಯವನ್ನು ಅರ್ಹರಿಗೆ ತಲುಪಿಸಿ- ಡಾ. ಪ್ರವೀಣ್ ಕುಮಾರ.

ಕೊಪ್ಪಳ, ಅ.೧೮ (ಕ ವಾ) ಸಾಮಾಜಿಕ ಭದ್ರತೆ ಯೋಜನೆಗಳಾದ ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯ ಸಂಸ್ಕಾರ ಯೋಜನೆ ಮುಂತಾದ ಯೋಜನೆಗಳ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಅನಗತ್ಯ ವಿಳಂಬ ಮಾಡದೆ  ಶೀಘ್ರ ತಲುಪಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣ್‌ಕುಮಾರ್ ಜಿ.ಎಲ್. ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಂದಾಯ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳ ನೆರವಿಗೆ ಸರ್ಕಾರ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಸಾಮಾಜಿಕ ಭದ್ರತೆ ಯೋಜನೆಗಳು ಜಾರಿಯಾಗಿದ್ದು, ಇಂತಹ ಯೋಜನೆಗಳು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.  ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮುಖ್ಯಸ್ಥ ಮರಣವಾದಲ್ಲಿ, ಅವರ ವಾರಸುದಾರರಿಗೆ ನೆರವು ನೀಡಲು ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಜಾರಿಯಲ್ಲಿದೆ.  ಈ ಯೋಜನೆಗೆ ಜಿಲ್ಲೆಗೆ ಒಟ್ಟು ೪೪. ೯೦ ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಈಗಾಗಲೆ ಅನುದಾನವನ್ನು ತಾಲೂಕುವಾರು ಮರು ಹಂಚಿಕೆ ಮಾಡಲಾಗಿದೆ.  ಅದೇ ರೀತಿ ಕಡು ಬಡತನದ ಕುಟುಂಬದಲ್ಲಿ ಮರಣ ಹೊಂದಿದ ಕುಟುಂಬ ಸದಸ್ಯರ ಅಂತ್ಯ ಸಂಸ್ಕಾರಕ್ಕಾಗಿ ಸರ್ಕಾರ ನೆರವು ಒದಗಿಸಲು ಅಂತ್ಯ ಸಂಸ್ಕಾರ ಯೋಜನೆ ಜಾರಿಯಲ್ಲಿದೆ.  ಈ ಯೋಜನೆಗಾಗಿ ಜಿಲ್ಲೆಗೆ ಈವರೆಗೆ ೯. ೬೮ ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೆ ತಾಲೂಕು ವಾರು ಅನುದಾನವನ್ನು ಮರು ಹಂಚಿಕೆ ಮಾಡಲಾಗಿದೆ.  ಆಯಾ ತಾಲೂಕು ಆಡಳಿತದಲ್ಲಿ ಬಾಕಿ ಇರುವ ಅರ್ಜಿಗಳ ಪೈಕಿ ಅರ್ಹ ಫಲಾನುಭವಿಗಳಿಗೆ ಇಂತಹ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯವನ್ನು ಒಂದು ವಾರದ ಒಳಗಾಗಿ ತಲುಪಿಸಬೇಕು.  ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣ್‌ಕುಮಾರ್ ಜಿ.ಎಲ್. ಅವರು ತಹಸಿಲ್ದಾರರುಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ತ್ವರಿತವಾಗಲಿ : ಕೊಪ್ಪಳ ಜಿಲ್ಲೆಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಈಗಾಗಲೆ ಸಂಬಂಧಿಸಿದ ಮತದಾನ ಕೇಂದ್ರಗಳಲ್ಲಿ, ತಹಸಿಲ್ದಾರರ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಸದ್ಯ ಜಿಲ್ಲೆಯಲ್ಲಿ ನಡೆದಿದೆ.  ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು, ತಿದ್ದುಪಡಿ ಸೇರಿದಂತೆ ಪರಿಷ್ಕರಣೆ ಸಂಬಂಧ ಸಲ್ಲಿಸಲಾಗಿರುವ ಅರ್ಜಿಗಳನ್ನು ಆಯಾ ತಹಸಿಲ್ದಾರರು ತ್ವರಿತವಾಗಿ ನಿರ್ವಹಿಸಬೇಕಿದೆ.  ಅನರ್ಹ ಮತದಾರರ ನೋಂದಣಿ ಕಂಡುಬಂದಲ್ಲಿ, ಪರಿಶೀಲಿಸಿ ನಿಯಮಾನುಸಾರ ಅಂತಹವರ ಹೆಸರನ್ನು ತೆಗೆದುಹಾಕುವುದು ಹಾಗೂ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳ ವಿಲೇವಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಹಸಿಲ್ದಾರರಿಗೆ ಸೂಚನೆ ನೀಡಿದರು.
ಸಮೀಕ್ಷೆ ಡಿಜಿಟಲೈಜೇಷನ್ ಪೂರ್ಣಗೊಳಿಸಿ : ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಈಗಾಗಲೆ ಕೈಗೊಳ್ಳಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಡಿಜಿಟಲೈಜೇಷನ್ ಕಾರ್ಯ ಬಾಕಿ ಉಳಿದಿದ್ದು, ಈ ಕಾರ್ಯವನ್ನು ಅ. ೨೦ ರ ಒಳಗಾಗಿ ಪೂರ್ಣಗೊಳಿಸಿ, ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಸಭೆಯಲ್ಲಿ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ, ಗಂಗಾವತಿ ತಹಸಿಲ್ದಾರ್ ಎಲ್.ಡಿ. ಚಂದ್ರಕಾಂತ್ , ಯಲಬುರ್ಗಾ ತಹಸಿಲ್ದಾರ್ ಎಸ್. ಪಟ್ಟದಕಲ್, ಕುಷ್ಟಗಿ ತಹಸಿಲ್ದಾರ್ ವೇದವ್ಯಾಸ ಮುತಾಲಿಕ್, ಉಪಕೃಷಿ ನಿರ್ದೇಶಕ ವೀರೇಶ್ ಹುನಗುಂದ, ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಭಾಸ್ಕರನಾಯಕ್ ಮುಂತಾದ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯಪುರ ಸೈನಿಕ ಶಾಲೆಗೆ ಪ್ರವೇಶ ಪರೀಕ್ಷೆ ಅರ್ಜಿ ಆಹ್ವಾನ
ಕೊಪ್ಪಳ, ಅ.೧೭ (ಕ ವಾ)ವಿಜಯಪುರದ ಸೈನಿಕ ಶಾಲೆಗೆ ಪ್ರವೇಶ ಪರೀಕ್ಷೆ ಮೂಲಕ ಪ್ರಸಕ್ತ ಸಾಲಿನ ೬ನೇ ಮತ್ತು ೯ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ೬ನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲಿಚ್ಛಿಸುವವರು ೨೦೦೫ ರ ಜುಲೈ ೦೨ ಹಾಗೂ ೨೦೦೬ ರ ಜುಲೈ ೦೧ ಅವಧಿಯಲ್ಲಿ ಜನಿಸಿದವರಾಗಿರಬೇಕು(೧೦ ರಿಂದ ೧೧ ವರ್ಷ). ಯಾವುದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿರಬಹುದು. ೯ನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲಿಚ್ಛಿಸುವವರು ೨೦೦೨ ರ ಜುಲೈ ೦೨ ಹಾಗೂ ೨೦೦೨ ರ ಜುಲೈ ೦೧ ಅವಧಿಯಲ್ಲಿ ಜನಿಸಿದವರಾಗಿರಬೇಕು(೧೩ ರಿಂದ ೧೪ ವರ್ಷ). ಮಾನ್ಯತೆ ಪಡೆದ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿರಬೇಕು. ಕರ್ನಾಟಕ ವಾಸಸ್ಥಳದವರಿಗೆ ಇಲ್ಲವೆ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ರಕ್ಷಣಾ ಪಡೆಯ ಸಿಬ್ಬಂದಿಗಳಿರುವ ಬಹುಭಾಗ ಸ್ಥಳಗಳಿಗೆ ಅರ್ಹತೆ ಪಡೆಯುತ್ತಾರೆ. ಕೆಲವು ಸ್ಥಳಗಳನ್ನು ಬೇರೆ ರಾಜ್ಯದವರಿಗಾಗಿ ಸಹ ತೆಗೆದಿರಿಸಲಾಗಿದ್ದು, ರಕ್ಷಣಾ ಸಿಬ್ಬಂದಿಯ ಸ್ಥಳಗಳು ಉಳಿದರೆ ಕೋಸ್ಟ್ ಗಾರ್ಡ್ ಸಿಬ್ಬಂದಿಯ ಮಕ್ಕಳಿಗೆ ಪ್ರವೇಶ ನೀಡಲಾಗುವುದು. ೬ನೇ ತರಗತಿ ಪ್ರವೇಶಕ್ಕಾಗಿ ವಿಜಯಪುರ, ಬೆಳಗಾವಿ, ಬೆಂಗಳೂರು, ಧಾರವಾಡ ಮತ್ತು ಗುಲ್ಬರ್ಗಾ ಪರೀಕ್ಷಾ ಕೇಂದ್ರಗಳಲ್ಲಿ ೨೦೧೬ ರ ಜನೆವರಿ ೦೩ ರಂದು ಪ್ರವೇಶ ಪರೀಕ್ಷೆಗಳು ನಡೆಯಲಿವೆ. ೯ನೇ ತರಗತಿ ಪ್ರವೇಶಕ್ಕಾಗಿ ವಿಜಯಪುರ ಪರೀಕ್ಷಾ ಕೇಂದ್ರದಲ್ಲಿ ಮಾತ್ರ ೨೦೧೬ ರ ಜನೆವರಿ ೦೩ ರಂದು ಪ್ರವೇಶ ಪರೀಕ್ಷೆಗಳು ನಡೆಯಲಿವೆ.
       ಪ್ರವೇಶ ಪರೀಕ್ಷೆಯಲ್ಲಿ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಿದ ಅರ್ಹತಾ ಪಟ್ಟಿಗೆ ಅನುಕ್ರಮವಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು.   ಅರ್ಜಿ, ವಿವರಣ ಪತ್ರ ಹಾಗೂ ಪ್ರಶ್ನೆ ಪತ್ರಿಕೆಗಳ ಪುಸ್ತಿಕೆಯನ್ನು ಪಡೆಯಲು ಸಾಮಾನ್ಯ ವರ್ಗದವರಿಗೆ ೪೫೦ ರೂ. ರಕ್ಷಣಾ ಪಡೆಯ ಸಿಬ್ಬಂದಿ ಹಾಗೂ ಎಸ್‌ಸಿ ಮತ್ತು ಎಸ್‌ಟಿ ಯವರಿಗೆ ೩೦೦ ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಶುಲ್ಕವನ್ನು ಪ್ರಾಚಾರ್ಯರ ಕಾರ್ಯಾಲಯ, ಸೈನಿಕ ಶಾಲೆ, ವಿಜಯಪುರ ಇವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಡ್ರಾಫ್ಟ್ ಪಡೆದು, ಸ್ವವಿಳಾಸವುಳ್ಳ ರೂ.೭೦ ರ ಅಂಚೆ ಚೀಟಿಯನ್ನು ಅಂಟಿಸಿದ ೯*೭ ಇಂಚುಗಳ ಅಳತೆಯ ಲಕೋಟೆಯಲ್ಲಿಟ್ಟು ಪ್ರಾಚಾರ್ಯರ ಕಾರ್ಯಾಲಯ, ಸೈನಿಕ ಶಾಲೆ, ವಿಜಯಪುರ ಈ ವಿಳಾಸಕ್ಕೆ ನವೆಂಬರ್ ೨೧ ರೊಳಗಾಗಿ ಕಳುಹಿಸುವ ಮೂಲಕ ಪಡೆಯಬಹುದಾಗಿದೆ.
     ಪ್ರವೇಶ ಅರ್ಜಿಗೆ ಸಂಬಂಧಿಸಿದಂತೆ ಆದಾಯ ಅಥವಾ ವೇತನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ರಕ್ಷಣಾ ಸಿಬ್ಬಂದಿ ಭಾಗ -೨ ಆದೇಶ ಅಥವಾ ಸೇವಾ ಪ್ರಮಾಣ ಪತ್ರದ ದಾಖಲೆಗಳನ್ನು ವಿವರಣೆ ಪತ್ರದ ಅನುಬಂಧ-ಎಫ್ ರಲ್ಲಿ ನಿರ್ದಿಷ್ಟಗೊಳಿಸಿರುವಂತೆ ಸಂಪೂರ್ಣವಾಗಿ ಭರ್ತಿಮಾಡಿ ನಕಲುಗಳನ್ನು ಲಗತ್ತಿಸಬೇಕು. ವಿದ್ಯಾರ್ಥಿಯ ಜನ್ಮದಿನಾಂಕ, ತಂದೆಯ ಹೆಸರು, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಸಂಪೂರ್ಣ ಮಾಹಿತಿಗಳನ್ನೊಳಗೊಂಡ ಅರ್ಜಿ ಫಾರ್ಮುಗಳನ್ನು ಪ್ರಾಚಾರ್ಯರು, ಸೈನಿಕ ಶಾಲೆ, ವಿಜಯಪುರ-೫೮೬೧೦೨ ಇವರಿಗೆ ನವೆಂಬರ್.೩೦ ರ ಮಧ್ಯಾಹ್ನ ೦೧ ಗಂಟೆಯೊಳಗಾಗಿ ಕಳುಹಿಸಬಹುದಾಗಿದೆ ಎಂದು ಸೈನಿಕ ಶಾಲೆ ಪ್ರಕಟಣೆ ತಿಳಿಸಿದೆ.
ಮಹರ್ಷಿ ವಾಲ್ಮೀಕಿ ಜಯಂತಿ ಅ.೧೯ ರಂದು ಪೂರ್ವಾಭಾವಿ ಸಭೆ.
ಕೊಪ್ಪಳ, ಅ.೧೭ (ಕ ವಾ)ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅ.೨೭ ರ ಶೀಗೆ ಹುಣ್ಣಿಮೆ ದಿನದಂದು ಕೊಪ್ಪಳ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಆಚರಿಸಬೇಕಾಗಿರುವ ಪ್ರಯುಕ್ತ ಜಯಂತಿಯ ಪೂರ್ವಾಭಾವಿ ಸಭೆಯನ್ನು ಅ.೧೯ ರಂದು ಸಂಜೆ ೦೪ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
     ಪೂರ್ವಾಭಾವಿ ಸಭೆಯನ್ನು ಈ ಹಿಂದೆ ಅ.೧೪ ರಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆಯಲಾಗಿತ್ತು. ಆದರೆ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ಅ.೧೯ ರಂದು ಸಂಜೆ ೦೪ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಆಸಕ್ತ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಸಭೆಗೆ ತಪ್ಪದೇ ಹಾಜರಾಗಿ ಜಯಂತಿ ಆಚರಣೆ ಕುರಿತು ಸಲಹೆ ಸೂಚನೆ ನೀಡಿ, ಸಭೆಯನ್ನು ಯಶಸ್ವಿಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಲ್ಲೇಶ ಮನವಿ ಮಾಡಿದ್ದಾರೆ.
ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ.
ಕೊಪ್ಪಳ, ಅ.೧೭ (ಕ ವಾ) ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಇವರ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿಯ ನಿರುದ್ಯೋಗಿ ಅಭ್ಯರ್ಥಿಗಳಿಗೆ ಲಘು ಮೋಟಾರ್ ವಾಹನ ಹಾಗೂ ಆಟೋ ರಿಕ್ಷಾ ಚಾಲನಾ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಲಘು ಮೋಟಾರ್ ವಾಹನ ಚಾಲನಾ ತರಬೇತಿಗಾಗಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ೧೦ ಜನರನ್ನು  ಹಾಗೂ ಆಟೋರಿಕ್ಷಾ ಚಾಲನಾ ತರಬೇತಿಗಾಗಿ ಪ್ರತಿ ತಾಲೂಕಿನಲ್ಲಿ ೧೦ ಜನ ಪರಿಶಿಷ್ಟ ಜಾತಿ ನಿರುದ್ಯೋಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲಿಚ್ಛಿಸುವವರು ಕೊಪ್ಪಳ ಜಿಲ್ಲೆಗೆ ಸೇರಿದ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.  ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ.೦೧ ಲಕ್ಷ ಮೀರಿರಬಾರದು. ಕನಿಷ್ಠ ೮ನೇ ತರಗತಿ ಉತ್ತೀರ್ಣರಾಗಿರಬೇಕು. ೧೦ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.ಲಘು ಮೋಟಾರು ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸಲು ಕನಿಷ್ಠ ೧೮ ಹಾಗೂ ಆಟೋರಿಕ್ಷಾ ತರಬೇತಿಗೆ ಅರ್ಜಿ ಸಲ್ಲಿಸಲು ಕನಿಷ್ಠ ೨೦ ವರ್ಷ ವಯೋಮಿತಿ ಹೊಂದಿರಬೇಕು. ಗರಿಷ್ಠ ೩೫ ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ವಾಹನ ಚಾಲನೆ ಮಾಡಲು ದೈಹಿಕ ಅರ್ಹತೆಯನ್ನು ಹೊಂದಿರಬೇಕು. ತರಬೇತಿಯನ್ನು ನಿಗದಿಪಡಿಸಿದ ವೇಳೆಯಲ್ಲಿ ಹಾಗೂ ನಿಗದಿಪಡಿಸಿದ ಸ್ಥಳದಲ್ಲಿ ಪಡೆಯಲು ಸಿದ್ಧರಿರಬೇಕು. ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳು ಬಂದಲ್ಲಿ ಅವುಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು.
     ತರಬೇತಿಯು ಒಂದು ತಿಂಗಳ ಅವಧಿಯದಾಗಿದ್ದು, ಅಭ್ಯರ್ಥಿಗಳಿಗೆ ರೂ.೫೦೦ ಗಳ ಮಾಸಿಕ ಭತ್ಯೆ ನೀಡಲಾಗುವುದು. ಅಭ್ಯರ್ಥಿಯು ಆಟೋರಿಕ್ಷಾ ಚಾಲನಾ ತರಬೇತಿ ಅಥವ ಲಘು ಮೋಟಾರು ವಾಹನ ಚಾಲನಾ ತರಬೇತಿಗಳಲ್ಲಿ ಯಾವುದಾದರೂ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಆಯಾ ತಾಲೂಕಿನ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಪಡೆದು, ಭರ್ತಿ ಮಾಡಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ದೈಹಿಕ ಅರ್ಹತೆ ಪ್ರಮಾಣ ಪತ್ರ, ಸರ್ಕಾರಿ ಅಧಿಕಾರಿಗಳಿಂದ ಅಥವಾ ಗಣ್ಯವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಅ.೩೧ ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಕಲ್ಲೇಶ್ ತಿಳಿಸಿದ್ದಾರೆ.

Please follow and like us:
error