ಮಾರ್ಚ್ ವೇಳೆಗೆ ನಿಗದಿತ ಗುರಿ ಸಾಧಿಸಿ : ಸಿಇಓ ಎಸ್. ರಾಜಾರಾಂ

ಕೊಪ್ಪಳ ಜ.೧೮ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಇಲಾಖೆಗಳು, ತಮಗೆ ನಿಗದಿಪಡಿಸಿರುವ ಆರ್ಥಿಕ ಮತ್ತು ಭೌತಿಕ ಗುರಿಯನ್ನು ಮಾರ್ಚ್ ವೇಳೆಗೆ ತಪ್ಪದೆ ಶೇ. ೧೦೦ ರಷ್ಟು ಸಾಧಿಸಬೇಕು.  ತಪ್ಪಿದಲ್ಲಿ, ಅಂತಹ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಿ, ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಾಸಿಕ ಕೆ.ಡಿ.ಪಿ. ಸಭೆಗೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ ಅವರು ಗೈರು ಹಾಜರಾದ ಕಾರಣ,  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
  ಜಿಲ್ಲಾ ಪಂಚಾಯತಿಯ ಬಹಳಷ್ಟು ಇಲಾಖೆಗಳು ತಮಗೆ ನಿಗದಿಪಡಿಸಿದ ಗುರಿ ಸಾಧನೆಯಲ್ಲಿ ಇನ್ನೂ ಬಹಳಷ್ಟು ಹಿಂದೆ ಉಳಿದಿದ್ದು, ಮಾರ್ಚ್ ಮಾಸಾಂತ್ಯಕ್ಕೆ ಕೇವಲ ಇನ್ನೆರಡು ತಿಂಗಳು ಮಾತ್ರ ಬಾಕಿ ಉಳಿದಿದೆ.  ಆದ್ದರಿಂದ, ಅಧಿಕಾರಿಗಳು ಕೂಡಲೇ ಕಾರ್ಯ ತತ್ಪರರಾಗಿ, ಮಾರ್ಚ್ ಮಾಸಾಂತ್ಯದ ವೇಳೆಗೆ ನಿಗದಿತ ಗುರಿ ಸಾಧಿಸಬೇಕು.  ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು.  ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಯಡಿ, ಕೂಲಿ ಕಾರ್ಮಿಕರಿಗೆ ವೇತನ ಪಾವತಿಸುವ ಬಗ್ಗೆ ಅಮೂಲಾಗ್ರ ಬದಲಾವಣೆಯಾಗಲಿದ್ದು, ಸದ್ಯ ಇರುವ ಗ್ರಾಮ ಪಂಚಾಯತಿ ಮೂಲಕ ಕೂಲಿ ಕಾರ್ಮಿಕರಿಗೆ ವೇತನ ಪಾವತಿ ಪದ್ಧತಿ ಸ್ಥಗಿತಗೊಳ್ಳಲಿದೆ.  ಬದಲಿಗೆ ಆಯಾ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಸರ್ಕಾರವೇ ನೇರವಾಗಿ ಹಣ ಜಮಾ ಮಾಡುವ ವ್ಯವಸ್ಥೆ ಸಧ್ಯದಲ್ಲೇ ಜಾರಿಗೆ ಬರಲಿದೆ.  ಆದ್ದರಿಂದ ಚಾಲ್ತಿಯಲ್ಲಿರುವ ಕೃಷಿ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗಳು ಹಾಗೂ ಸಂಶಯಾಸ್ಪದ ಬ್ಯಾಂಕ್ ಖಾತೆಗಳ ಬಗ್ಗೆ ವರದಿ ಸಲ್ಲಿಸುವಂತೆ ಆಯಾ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಸದ್ಯದ ವರದಿಯಂತೆ ಜಿಲ್ಲೆಯಲ್ಲಿ ೫೦೪೮೪ ಮಾನ್ಯವಿರುವ ಹಾಗೂ ೬೦೮೯೫ ಬ್ಯಾಂಕ್ ಖಾತೆಗಳನ್ನು ಸಂಶಯಾಸ್ಪದ ಖಾತೆಗಳೆಂದು ಗುರುತಿಸಲಾಗಿದೆ.  ಈ ಖಾತೆಗಳ ಸಮಗ್ರ ಪರಿಶೀಲನೆ ನಂತರ, ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಈ ವ್ಯವಸ್ಥೆ ಜಾರಿಯಾದಲ್ಲಿ ಗ್ರಾಮ ಪಂಚಾಯತಿಗೂ ಕೂಲಿ ಕಾರ್ಮಿಕರಿಗೂ ಯಾವುದೇ ಹಣಕಾಸಿನ ವ್ಯವಹಾರ ಇಲ್ಲದಂತಾಗುತ್ತದೆ ಎಂದರು.
ಜ. ೨೩ ರಂದು ಮುಖ್ಯಮಂತ್ರಿಗಳಿಂದ ಪ್ರಗತಿಪರಿಶೀಲನೆ : ಜ. ೨೩ ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು, ಅಂದು ಜಿಲ್ಲೆಯ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುವ ಯೋಜನೆಗಳು, ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪೂರ್ಣ ವಿವರಗಳೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಸೂಚಿಸಿದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಅವರು ಮಾತನಾಡಿ, ಎಲ್ಲ ಗ್ರಾಮ ಪಂಚಾಯತಿಗಳು ಕ್ರಿಯಾ ಯೋಜನೆ ಸಲ್ಲಿಸುವಾಗ ಪ.ಜಾತಿ, ಪ.ಪಂಗಡಕ್ಕೆ ನಿಯಮಾನುಸಾರ ಅನುದಾನ ಮೀಸಲಿಟ್ಟು, ಪ.ಜಾತಿ, ಪ.ಪಂಗಡದ ಕಾಲೋನಿಗಳಿಗೆ ರಸ್ತೆ, ಚರಂಡಿ, ನೀರು ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸುವ ಯೋಜನೆಗಳನ್ನು ಸೇರಿಸಿಕೊಂಡು ಕ್ರಿಯಾ ಯೋಜನೆ ರೂಪಿಸಬೇಕು ಎಂದರು.
  ಸಭೆಯಲ್ಲಿ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಮಾದಿನೂರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.  ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
Please follow and like us:
error