ಮಳೆಯಿಂದ ಬೆಳೆ ಹಾನಿ : ಸಮರ್ಪಕ ಸರ್ವೆ ನಡೆಸಲು ಅಧಿಕಾರಿಗಳಿಗೆ ಸೂಚನೆ- ಕೃಷ್ಣ ಭೈರೇಗೌಡ

 

: ಕಳೆದ ಏ. ೧೨ ಮತ್ತು ೧೩ ರಂದು ಕೊಪ್ಪಳ ಜಿಲ್ಲೆಯಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಉಂಟಾಗಿರುವ ಬೆಳೆ, ಮನೆ ಹಾಗೂ ಇತರೆ ಹಾನಿಯ ಕುರಿತು ಸರ್ವೆ ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.

  ಮಳೆಯಿಂದ ಹಾನಿಗೊಳಗಾಗಿರುವ ಗಂಗಾವತಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಸಿದ್ದಿಕೇರಿ ಗ್ರಾಮದಲ್ಲಿ ಬೆಳೆ ಹಾನಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
  ಗಂಗಾವತಿ ತಾಲೂಕಿನ ಸಾಣಾಪುರ, ಮಲ್ಲಾಪುರ, ಸಂಗಾಪುರ, ಸಿದ್ದಿಕೇರಿ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದೆ.  ೧೧ ಮಿ.ಮೀ. ವಾಡಿಕೆಯ ಬದಲಿಗೆ ೫೨ ಮಿ.ಮೀ. ಮಳೆ ಸುರಿದಿದೆ.   ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದಿದ್ದರಿಂದ ತೀವ್ರ ಹಾನಿ ಸಂಭವಿಸಿದೆ.  ಈಗಾಗಲೆ ಅಧಿಕಾರಿಗಳು ಹಾನಿಯ ಬಗ್ಗೆ ಪರಿಶೀಲನೆ ನಡೆಸಲು ಸರ್ವೆ ಕಾರ್ಯವನ್ನು ಪ್ರಾರಂಭಿಸಿದ್ದು, ಇನ್ನೆರಡು ದಿನಗಳ ಒಳಗಾಗಿ ಸರ್ವೆ ಕಾರ್ಯ ಪೂರ್ಣವಾಗಲಿದೆ.  ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸರ್ವೆ ಕಾರ್ಯವನ್ನು ಸಮರ್ಪಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಈಗಾಗಲೆ ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ಜಿಲ್ಲೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಪ್ರಾಥಮಿಕ ಹಂತದ ವರದಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು ೩೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸುಮಾರು ೨೦೦ ಕೋಟಿ ರೂ. ನಷ್ಟ ಸಂಭವಿಸಿದೆ.  ಸರ್ವೆ ಪೂರ್ತಿ ಆದ ಮೇಲೆ ಅಂತಿಮ ವರದಿ ಪರಿಶೀಲಿಸಿದ ನಂತರ, ಹಾನಿಯ ಅಂದಾಜು ನಿಖರವಾಗಿ ಗೊತ್ತಾಗಲಿದೆ.  ಮಳೆಯಿಂದ ೨೦೦ ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದ್ದು, ಮನೆ ಹಾನಿಗೆ ಸಂಬಂಧಿಸಿದ ಪರಿಹಾರ ವಿತರಣೆ ಕಾರ್ಯವನ್ನು ನಾಳೆಯಿಂದಲೇ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಅಗತ್ಯ ಬಿದ್ದಲ್ಲಿ ಗಂಜಿ ಕೇಂದ್ರವನ್ನು ಅಂದರೆ ಆಹಾರ ಒದಗಿಸುವ ವ್ಯವಸ್ಥೆ ಕೈಗೊಳ್ಳಲು ಸಹ ತಿಳಿಸಲಾಗಿದೆ.  ಬೆಳೆ ಹಾನಿ ಅನುಭವಿಸಿರುವ ರೈತರು ಹೆಚ್ಚಿನ ಪರಿಹಾರ ನೀಡಲು ಮನವಿ ಸಲ್ಲಿಸಿದ್ದಾರೆ.  ಮುಖ್ಯಮಂತ್ರಿಗಳು ಏ. ೧೭ ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ಮತ್ತು ಪರಿಶೀಲನೆ ನಡೆಸಲಿದ್ದು, ಅದೇ ದಿನದಂದು ಬೆಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು.  ಹೆಚ್ಚಿನ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.  ಕೇಂದ್ರ ಸರ್ಕಾರ ಸ್ಪಂದಿಸದಿದ್ದಲ್ಲಿ, ವಿಶೇಷ ನಿಯೋಗ ಹೋಗಲು ಕ್ರಮ ಕೈಗೊಳ್ಳಲಾಗುವುದು.  ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿರುವ ರೈತರ ಬೆಳೆ ಹಾನಿಗೆ ಸಂಬಂಧಿಸಿದಂತೆ, ಇದರ ಬಗ್ಗೆಯೂ ಸಹ ಸರ್ವೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈಗಾಗಲೆ ಶೇ. ೭೦ ರಷ್ಟು ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
  ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Comment