ಕೊಪ್ಪಳ ಏತನೀರಾವರಿ ಯೋಜನೆ ೪ ವರ್ಷದೊಳಗೆ ಪೂರ್ಣ- ಶಿವರಾಜ್ ತಂಗಡಗಿ

 ಕೃಷ್ಣಾ ಮೇಲ್ದಂಡೆ ಯೋಜನೆ ಹಂತ- ೩ ರ ಕೊಪ್ಪಳ ಏತ ನೀರಾವರಿ ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು, ನಾಲ್ಕು ವರ್ಷದೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
  ಕುಷ್ಟಗಿ ತಾಲೂಕು ಮುದಟಗಿ ಗ್ರಾಮದ ಬಳಿ ಕೊಪ್ಪಳ ಏತ ನೀರಾವರಿ ಯೋಜನೆ ಕಾಮಗಾರಿಯ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
  ಕೊಪ್ಪಳ ಜಿಲ್ಲೆಗೆ ವರದಾನವಾಗಲಿರುವ ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ ರ ಒಂದು ಪ್ರಮುಖ ಉಪಯೋಜನೆಯಾಗಿದ್ದು, ಯೋಜನೆಯಡಿ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಕನಕಗಿರಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದೆ.  ಯೋಜನೆಯಡಿ ೧೨. ೮೧೫ ಟಿ.ಎಂ.ಸಿ ನೀರನ್ನು ಸಮ

ರ್ಪಕವಾಗಿ ಬಳಸಿ, ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಯ ಬದಲಿಗೆ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿ ೨. ೮೫ ಲಕ್ಷ ಎಕರೆ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರು ಪೂರೈಸಲಾಗುವುದು.  ಯೋಜನೆಗೆ ೩ ವರ್ಷಗಳ ಕಾಲಮಿತಿ ನಿಗದಿಪಡಿಸಲಾಗಿದ್ದು,  ಕಾಮಗಾರಿ ಪ್ರಾರಂಭಗೊಂಡು ೭ ತಿಂಗಳುಗಳು ಮಾತ್ರ ಆಗಿದೆ.  ಈಗಾಗಲೆ ಶೇ. ೬೦ ರಷ್ಟು ಪೈಪ್‌ಲೈನ್ ಮುಗಿದಿದ್ದು, ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಯುವ ವಿಶ್ವಾಸವಿದೆ.  ಕುಷ್ಟಗಿ, ಕೊಪ್ಪಳ ಮತ್ತು ಗಂಗಾವತಿ ತಾಲೂಕಿನ ಕಾಮಗಾರಿಗೆ ಸರ್ವೆ ಕಾರ್ಯ ೨೦೧೫ ರ ಫೆಬ್ರವರಿ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ.  ನಂತರ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ತರುವಾಯ ಶೀಘ್ರ ಟೆಂಡರ್ ಕರೆದು, ಕಾಮಗಾರಿ ಪ್ರಾರಂಭಿಸಲಾಗುವುದು.  ಹುನಗುಂದಾದಿಂದ ಬಲಕುಂದಿ ತಾಂಡಾ ವರೆಗೆ ಸುಮಾರು ೧೦ ಕಿ.ಮೀ. ಇನ್‌ಟೇಕ್ ಪೀಡರ್ ಕಾಲುವೆ ನಿರ್ಮಾಣವಾಗುತ್ತಿದ್ದು, ಈ ೧೦ ಕಿ.ಮೀ. ಕಾಲುವೆಯ ಮೇಲ್ಭಾಗದಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸುವ ಯೋಜನೆಗೆ ಈಗಾಗಲೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.   ಈ ಮೂಲಕ ಸುಮಾರು ೧೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವಂತಹ ೧೧೫ ಕೋಟಿ ರೂ. ವೆಚ್ಚದ ಮಹತ್ವದ ಯೋಜನೆ ರೂಪಿಸಲಾಗಿದೆ.  ಒಟ್ಟಾರೆ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ನಾಲ್ಕು ವರ್ಷದೊಳಗೆ ಪೂರ್ಣಗೊಳಿಸಿ, ರೈತರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಅನುದಾನದ ಯಾವುದೇ ಕೊರತೆ ಉಂಟಾಗದಂತೆ ಕ್ರಮ ವಹಿಸಲಾಗುವುದು.  ಜಿಲ್ಲೆಯ ನೆಲಜೇರಿ ಮತ್ತು ನಿಡಶೇಸಿ ಕೆರೆಯ ದುರಸ್ತಿ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದು, ಈಗಾಗಲೆ ಉಭಯ ಕೆರೆಗಳ ದುರಸ್ತಿಗಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿದ್ದು, ಶೀಘ್ರದಲ್ಲಿ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.

  ಇದಕ್ಕೂ ಮುನ್ನ ಸಚಿವರು ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳೊಂದಿಗೆ ಮುದಗಟಗಿ ಗ್ರಾಮದಿಂದ ಹನುಮಸಾಗರ ಗ್ರಾಮದ ವರೆಗಿನ ರೈಸಿಂಗ್ ಮೇನ್ ಕಾಮಗಾರಿಯ ಸಮಗ್ರ ಮಾಹಿತಿ ಪಡೆಯುವುದರ ಜೊತೆಗೆ, ಕಾಮಗಾರಿಯ ಸ್ಥಳಗಳಿಗೆ ಭೇಟಿ ನೀಡಿ, ಗುಣಮಟ್ಟದ ಪರಿಶೀಲನೆ ನಡೆಸಿದರು.
  ಕೃಷ್ಣಾ ಭಾಗ್ಯ ಜಲನಿಗಮದ ಕಾರ್ಯಪಾಲಕ ಇಂಜಿನಿಯರ್ ಮೃತ್ಯುಂಜಯ ಎನ್.,  ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಡಿ.ಎಸ್. ಹರೀಶ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply