ಜಾನುವಾರು ಹತ್ಯೆ ನಿಷೇದ ಹಾಗೂ ಸಂರಕ್ಷಣೆ ಕಾಯ್ದೆ ವಿರೋಧಿಸಿ ಪತ್ರ ಚಳುವಳಿ ಉದ್ಘಾಟನೆಕೊಪ್ಪಳ : ದಿನಾಂಕ ೬-೪-೨೦೧೦ರ ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ ನಗರದ ಹೂವಿನಾಳ ರಸ್ತೆಯ ಆಶ್ರಯ ಕಾಲೋನಿಯಲ್ಲಿ ನಡೆದ ಜಾನುವಾರು ಹತ್ಯೆ ನಿಷೇದ ಹಾಗೂ ಸಂರಕ್ಷಣೆ ಕಾಯ್ದೆ ವಿರೋಧಿಸಿ ನಡೆದ ಪತ್ರ ಚಳುವಳಿಯ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಠ್ಠಪ್ಪ ಗೋರಂಟ್ಲಿಯವರು ಮಾಂಸ ಸೇವನೆ ಇಂದು ನಿನ್ನೆಯದಲ್ಲ, ಶತ ಶತಮಾನಗಳಿಂದಲೂ ನಡೆದುಕೊಂಡು ಬಂದಿರುವಂಥದ್ದು, ಮಾಂಸ ಸೇವನೆಯನ್ನು ಯಾವ ಧರ್ಮವೂ ವಿರೋಧಿಸುವುದಿಲ್ಲ. ಮಾಂಸ ಸತ್ವಯುತ ,ಶಕ್ತಿಯುತ ಆಹಾರ ಆಗಿರುವುದರಿಂದ ಸಾಮಾನ್ಯವಾಗಿ ಎಲ್ಲರೂ ಮಾಂಸ ಸೇವನೆಯನ್ನು ಮಾಡುತ್ತಾರೆ. ಆಹಾರ ಸೇವನೆ ಅವರವರ ಇಚ್ಛೆಗೆ ಬಿಟ್ಟ ವಿಚಾರ, ಹೀಗಾಗಿ ಆಹಾರ ಸೇವನೆಯ ಹಕ್ಕಿನ ಮೇಲೆ ನಿಭಂದಿಸುವುದು ಹಕ್ಕಿನ ಮೇಲೆ ನಡೆದಂಥ ದೌರ್ಜನ್ಯ ಮತ್ತು ದಬ್ಬಾಳಿಕೆಯಾಗುತ್ತದೆ. ಮನುಷ್ಯರನ್ನು ಆಹಾರ ಸೇವನೆಯ ಮೇಲೆ ಅಳೆಯಬಾರದು. ಪ್ರಾಣಿ ಹಿಂಸೆ ವಿರೋಧಿಸುವವರು ಕದ್ದು ಮುಚ್ಚಿ ಮಾಂಸಾಹಾರ ಸೇವನೆಯನ್ನು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವಂಥ ವಿಚಾರ, ಈ ವಿಚಾರ ಗೊತ್ತಿದ್ದೂ ಸರಕಾರ ಓಟ್ ಬ್ಯಾಂಕ್ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಆಹಾರ ಹಕ್ಕಿನ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಖಂಡನೀಯ, ಕಾರಣ ಜನತೆ ಸುಮ್ಮನೇ ಇರದೇ ಸರಕಾರದ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಬೇಕಾದ ಅನಿವಾರ್‍ಯತೆ ಬಂದೊದಗಿದೆ. ಈ ಸಂದರ್ಭದಲ್ಲಿ ಗೋರಂಟ್ಲಿಯವರು ಪತ್ರಗಳನ್ನು ಸಭೆಯಲ್ಲಿದ್ದವರೆಲ್ಲರಿಗೂ ಹಂಚುವುದರ ಮೂಲಕ ಪತ್ರ ಚಳುವಳಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಸವರಾಜ ಶೀಲವಂತರರು ಆಹಾರದ ಹಕ್ಕಿನ ಮೇಲೆ ನಡೆದಂಥ ದೌರ್ಜನ್ಯವನ್ನು ಜನರು ವಿಶಾಲ ದೃಷ್ಟಿಕೋನದಿಂದ ನೋಡಬೇಕಾಗಿದೆ. ಕೇವಲ ಒಂದು ಸಮುದಾಯದ ಮೇಲೆ ನಡೆದಂಥ ದೌರ್ಜನ್ಯವಲ್ಲ, ಮಾಂಸ ಸೇವನೆ ಮಾಡುವಂಥ ಎಲ್ಲ ಸಮುದಾಯದ ಜನರ ಮೇಲೆ ನಡೆದ ದೌರ್ಜನ್ಯವಾಗಿದೆ. ಸರಕಾರ ಜಾರಿಗೆ ತರುತ್ತಿರುವ ಜಾನುವಾರು ಹತ್ಯೆ ನಿಷೇದ ಹಾಗೂ ಸಂರಕ್ಷಣೆ ಕಾಯ್ದೆ ಅತ್ಯಂತ ಅಪಾಯಕಾರಿಯಾಗಿದ್ದು ಜನತೆ ಸುಮ್ಮನಿರದೆ ಜಾರಿಯಾಗುತ್ತಿರುವ ಜನವಿರೋದಿ ಕಾಯ್ದೆ ವಿರುದ್ದ ಚಳುವಳಿಯನ್ನು ರೂಪಿಸಬೇಕಾಗಿದೆ ಎಂದರು.
ಸೈಯದ್ ಗೌಸ್ ಪಾಷಾ ಮಾತನಾಡುತ್ತ ಜಾರಿಯಾಗುತ್ತಿರುವ ಈ ಕಾಯ್ದೆಯ ಕ್ರೂರ ಪರಿಣಾಮ ತೀವ್ರವಾಗಿ ಅಲ್ಪಸಂಖ್ಯಾತ ಮುಸ್ಲಿಂ ಜನಾಂಗದ ಮೇಲೆ ಬೀಳಲಿದ್ದು, ಇದು ಸಂವಿಧಾನದತ್ತವಾದ ಧಾರ್‍ಮಿಕ ಸ್ವಾತಂತ್ರವನ್ನು ಕಸಿದುಕೊಳ್ಳಲಿದೆ. ಆದ್ದರಿಂದ ಇದರ ವಿರುದ್ದ ಹೋರಾಟ ಮಾಡಲೇಬೇಕೆಂದು ಹೇಳಿದರು.
ರಾಜಾಬಕ್ಷಿ ಎಚ್.ವಿಯವರು ಮಾತನಾಡುತ್ತಾ ಈ ಕಾಯ್ದೆ ಜಾರಿಯಿಂದ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಈ ಕಾಯ್ದೆ ವಿರುದ್ಧ ಜನ ಎಚ್ಚೆತ್ತುಕೊಡು ರಾಜ್ಯವ್ಯಾಪ್ತಿಯಲ್ಲಿ ಉಗ್ರ ಹೋರಾಟಕ್ಕೆ ಸಿದ್ದಗೊಳ್ಳಬೇಕಿದೆ ಎಂದು ಕರೆ ನೀಡಿದರು.
ಹನುಮಂತಪ್ಪ ಮ್ಯಾಗಳಮನಿಯವರು ಮಾತನಾಡುತ್ತ ಈ ಕಾಯ್ದೆಯಿಂದ ದಲಿತ ಜನಾಂಗಕ್ಕೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಸಿಗುವ ಪೌಷ್ಟಿಕ ಆಹಾರವನ್ನು ಕಸಿದು, ಅವರನ್ನು ಇನ್ನಷ್ಟು ದುರ್ಬಲಗೊಳಿಸಿದಂತಾಗುತ್ತದೆ ಎಂದು ಹೇಳುತ್ತಾ ದಲಿತ ಸಮುದಾಯದವರು ಒಗ್ಗಟ್ಟಿನಿಂದ ಈ ಕಾಯ್ದೆಯ ವಿರುದ್ಧ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲು ಕರೆ ನೀಡಿದರು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮೈಲಪ್ಪ ಬಿಸರಳ್ಳಿಯವರು ಮಾತನಾಡುತ್ತಾ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ ಬಿಜೆಪಿ ಸರಕಾರ ಮುಸ್ಲಿಂರನ್ನು ಗುರಿಯಾಗಿಟ್ಟುಕೊಂಡು ಈ ಕಾಯ್ದೆಂಯನ್ನು ಜಾರಿಗೆ ತರುತ್ತಿದ್ದು ಈ ಕಾಯ್ದೆ ಜಾರಿಯಾದರೆ ಎಲ್ಲ ಸಮುದಾಯದವರಿಗೂ ಅನ್ಯಾಯವಾಗುತ್ತದೆ ಕಾರಣ ಈ ಕಾಯ್ದೆ ಜಾರಿಯಾಗದಂತೆ ತಡೆಯುವುದು ಹೋರಾಟದಿಂದ ಮಾತ್ರ ಸಾಧ್ಯವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೆ.ಭಾರದ್ವಾಜ್ ರವರು ಗಂಗಾವತಿಯಲ್ಲಿ ಈಗಾಗಗಲೇ ಈ ಕಾಯ್ದೆ ಜಾರಿ ಇಲ್ಲದೆಯೇ ಕಸಾಯಿ ಖಾನೆಗಳನ್ನು ಮುಚ್ಚಲಾಗಿದೆ. ಇನ್ನು ಕಾಯ್ದೆ ಜಾರಿಯಾದರೆ ಅತ್ಯಂತ ದುರಂತ ಕಾದಿದೆ. ಮೌನವಹಿಸಿ ಕೂಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಾನಂದ ಹೊದ್ಲೂರ, ಸಿರಾಜ್ ಬಿಸರಳ್ಳಿ, ಎಸ್.ನೂರುಲ್ಲಾ ಖಾದ್ರಿ, ಅಜೀಜ್ ಮಾನ್ವಿಕರ್, ಅಜೀಮ್ ಪಾಷಾ ಖಾಜಿ ಹಾಗೂ ನೂರಾರು ಜನ ರಾಜ್ಯಪಾಲರಿಗೆ ಈ ಕಾಯ್ದೆಯಯನ್ನು ಹಿಂಪಡೆಯುವಂತೆ ಒತ್ತಾಯಿಸುವ ಪತ್ರಗಳನ್ನು ಬರೆದುಕೊಡುವುದರ ಮೂಲಕ ಪತ್ರ ಚಳುವಳಿಯಲ್ಲಿ ಪಾಲ್ಗೊಂಡರು. ಹೇಮರಾಜ ವೀರಾಪೂರ ಕಾರ್‍ಯಕ್ರಮ ನಿರೂಪಣೆ ಮಾಡಿದರು

Leave a Reply