ಜಿಲ್ಲೆಯ ಸಾರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಗೆ ಆದ್ಯತೆ- ಸಚಿವ ಶಿವರಾಜ್ ಎಸ್ ತಂಗಡಗಿ

ಕೊಪ್ಪಳ ಜಿಲ್ಲೆಯಲ್ಲಿನ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಸುಧಾರಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.

  ಕೊಪ್ಪಳ ತಾಲೂಕು ಕವಲೂರು ಗ್ರಾಮದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ 38. 57 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಸಾರ್ವಜನಿಕರ ಪ್ರಯಾಣಕ್ಕೆ ಉಪಯುಕ್ತವಾಗಿರುವ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಇನ್ನಷ್ಟು ಉತ್ತಮ ಪಡಿಸಲು ಸರ್ಕಾರ ಆದ್ಯತೆ ನೀಡಿದ್ದು, ಈಗಾಗಲೆ ಬಸ್ ನಿಲ್ದಾಣಗಳನ್ನು ಆಕರ್ಷಕವಾಗಿ ಹಾಗೂ ಗುಣಮಟ್ಟದ ನಿಲ್ದಾಣಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.  ಕವಲೂರು ಗ್ರಾಮದ ಮೂಲಕ ನಿತ್ಯವೂ ಕೊಪ್ಪಳ ಮತ್ತು ಗದಗ ಜಿಲ್ಲೆಗಳಿಂದ ಸಾಕಷ್ಟು ಬಸ್ ಗಳು ಸಂಚರಿಸುತ್ತಿದ್ದು, ಇಲ್ಲಿ ಉತ್ತಮ ಬಸ್ ನಿಲ್ದಾಣವಾಗಬೇಕು ಎನ್ನುವ ಈ ಭಾಗದ ಜನರ ಬೇಡಿಕೆ ಇದೀಗ ಈಡೇರಿದಂತಾಗಿದೆ.  ಬಸ್‍ನಿಲ್ದಾಣಕ್ಕೆ ಅಗತ್ಯವಿರುವ ಕಾಂಪೌಂಡ್ ಹಾಗೂ ಸಿಸಿ ರಸ್ತೆಯ ಪ್ಲಾಟ್ ಫಾರಂ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.  ಬಸ್ ನಿಲ್ದಾಣ, ಶಾಲೆಗಳಂತಹ ಸಾರ್ವಜನಿಕ ಆಸ್ತಿಗಳನ್ನು ಹಾಳಾಗದಂತೆ ಸಂರಕ್ಷಿಸಿ, ಉಪಯೋಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಕಾಳಜಿ ವಹಿಸಬೇಕು.  ಕೊಪ್ಪಳ ನಗರಕ್ಕೆ 
ಮೆಡಿಕಲ್ ಕಾಲೇಜು ಮಂಜೂರು ಹಾಗೂ ತಳಕಲ್ ಗ್ರಾಮದಲ್ಲಿ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವ ಮೂಲಕ ನಗರ ಪ್ರದೇಶವೂ ಸೇರಿದಂತೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡುತ್ತಿದೆ.  ಮಳೆಯ ನೀರು ಹಳ್ಳದ ಮೂಲಕ ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು, ಅಂತಹ ಸ್ಥಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿ, ಅಂತರ್ಜಲ ಹೆಚ್ಚಳ ಮಾಡಲು, ಜಿಲ್ಲೆಗೆ 40 ಕೋಟಿ ರೂ. ಅನುದಾನವನ್ನು ಮೀಸಲಿರಿಸಿ, ಕ್ರಿಯಾ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ.  ಅದೇ ರೀತಿ ರಾಜ್ಯದ ಕೊಪ್ಪಳ, ಬಿಜಾಪುರ ಸೇರಿದಂತೆ ಒಟ್ಟು 05 ಜಿಲ್ಲೆಗಳಲ್ಲಿನ ಅಂತರ್ಜಲ ಮಟ್ಟ ಅಭಿವೃದ್ಧಿಪಡಿಸುವ ಕಾರ್ಯ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ಇದಕ್ಕಾಗಿ ಒಟ್ಟು 80 ಕೋಟಿ ರೂ. ಅನುದಾನ ಒದಗಿಸಲಾಗಿದೆ. ರೈತರ ಬೆಳೆ ಸಾಲವನ್ನು ಒತ್ತಾಯಪೂರ್ವಕವಾಗಿ ಈ ವರ್ಷ ವಸೂಲು ಮಾಡದಂತೆ ಈಗಾಗಲೆ ಮುಖ್ಯಮಂತ್ರಿಗಳು ಘೋಷಿಸಿದ್ದು, ಬೆಳೆ ಸಾಲ ಮಾಡಿರುವ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಕೊಪ್ಪಳ ನಗರದಲ್ಲಿ ಕಡಿಮೆ ದರದಲ್ಲಿ ಸಾರ್ವಜನಿಕರು ಸಂಚರಿಸಲು ಅನುಕೂಲವಾಗುವಂತೆ ಈಗಾಗಲೆ ನಗರ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿದ್ದು, ಇನ್ನೂ 8 ಹೊಸ ಬಸ್‍ಗಳು ಕೊಪ್ಪಳ ನಗರ ಸಾರಿಗೆ ಸೇವೆಗೆ ಶೀಘ್ರದಲ್ಲೆ ಸೇರ್ಪಡೆಯಾಗಲಿವೆ.  ರಸ್ತೆ ಗುಣಮಟ್ಟ ಸುಧಾರಣೆಗೆ ಸರ್ಕಾರ ಲೋಕೋಪಯೋಗಿ ಇಲಾಖೆ ಮೂಲಕ 40 ಕೋಟಿ ರೂ. ಅನುದಾನವನ್ನು ಕೊಪ್ಪಳ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಒದಗಿಸಿದೆ.  ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಈ ಭಾಗದ ಜಮೀನುಗಳಿಗೆ ನೀರು ಒದಗಿಸಲು 2ನೇ ಹಂತದ ಕಾಮಗಾರಿಗೆ ಈಗಾಗಲೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗಿದ್ದು, ತ್ವರಿತವಾಗಿ ಯೋಜನೆ ಪೂರ್ಣಗೊಳಿಸಲು ಸೂಚಿಸಲಾಗಿದೆ.  ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗೂ ಸಹ ಶೀಘ್ರದಲ್ಲಿ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗುವುದು.  ಕ್ಷೇತ್ರದ ಗ್ರಾಮೀಣ ರಸ್ತೆಗಳನ್ನು ಸಿ.ಸಿ. ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು.
  ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಕವಲೂರು ಗ್ರಾ.ಪಂ. ಅಧ್ಯಕ್ಷ ಮಲ್ಲಪ್ಪ ದೊಡ್ಡಹುಚ್ಚಪ್ಪ ಬೂತಣ್ಣವರ, ಈ.ಕ.ರ.ಸಾ.ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಜಿ. ಪಾರ್ಥಸಾರಥಿ, ಕೊಪ್ಪಳ ಎಪಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.  ಸಾರಿಗೆ ಸಂಸ್ಥೆಯ ವಿಭಾಗೀಯ ತಾಂತ್ರಿಕ ಶಿಲ್ಪಿ ಎನ್.ಬಿ. ಗೌಡಗೇರಿ ಅವರು ಸ್ವಾಗತಿಸಿದರು.  ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು.
  ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ 46. 27 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಮುನಿರಾಬಾದ್ ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಸ್‍ನಿಲ್ದಾಣಗಳ ಉದ್ಘಾಟನೆಯನ್ನು ಶುಕ್ರವಾರದಂದು ನೆರವೇರಿಸಿದರು.
Please follow and like us:
error