ಜನತಾದರ್ಶನದಲ್ಲಿ ೧೫೨ ಅರ್ಜಿ ಸ್ವೀಕಾರ, ವಿಲೇವಾರಿಗೆ ೧೫ ದಿನಗಳ ಗಡುವು- ಶಿವರಾಜ ತಂಗಡಗಿ

 

ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಜನತಾದರ್ಶನದಲ್ಲಿ ಒಟ್ಟು ೧೫೨ ಅರ್ಜಿಗಳು ಸ್ವೀಕೃತವಾಗಿದ್ದು, ಹದಿನೈದು ದಿನಗಳ ಒಳಗಾಗಿ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜನತಾದರ್ಶನದಲ್ಲಿ ಸ್ವೀಕೃತಗೊಂಡ ಅರ್ಜಿಗಳ ಪೈಕಿ ಬಹುತೇಕ ಅರ್ಜಿಗಳು ಮನೆ ಮಂಜೂರಾತಿ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸುವುದು ಮುಂತಾದವುಗಳಿಗೆ ಸಂಬಂಧಿಸಿದ್ದವು.  ಇಂತಹ ಅರ್ಜಿಗಳನ್ನು ಸ್ವೀಕರಿಸಿದ ಸಚಿವರು, ನಗರ, ಪಟ್ಟಣ ಪ್ರದೇಶಗಳಲ್ಲಿ ಮನೆ ಮಂಜೂರು ಮಾಡುವುದು, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ, ವಿವಿಧ ನಿಗಮಗಳಡಿ ಸೌಲಭ್ಯಕ್ಕಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯ ಸಮಿತಿಗೆ ಇದೆ.  ಇಂತಹ 

ಅರ್ಜಿಗಳನ್ನು ಆಯಾ ಕ್ಷೇತ್ರದ ಶಾಸಕರಿಗೆ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದಾಗಿದೆ.  ಸದ್ಯ ಸಲ್ಲಿಸಿರುವ ಅರ್ಜಿಗಳನ್ನು ಸಂಬಂಧಪಟ್ಟ ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು.  ಅಧಿಕಾರಿಗಳು ಆಯಾ ಕ್ಷೇತ್ರದ ಶಾಸಕರೊಂದಿಗೆ ಸಮಾಲೋಚಿಸಿ, ಅರ್ಹ ಫಲಾನುಭವಿಗಳ ಆಯ್ಕೆಗೆ ಪರಿಶೀಲಿಸುವಂತೆ ಸೂಚನೆ ನೀಡಲಾಗುವುದು ಎಂದರು.  ಅದೇ ರೀತಿ ಗ್ರಾಮೀಣ ಪ್ರದೇಶದವರಿಗೆ ವಿವಿಧ ಯೋಜನೆಗಳಡಿ ಮನೆ ಮಂಜೂರು ಮಾಡುವ ಅಧಿಕಾರ ಆಯಾ ಗ್ರಾಮ ಪಂಚಾಯತಿಗೆ ಇದ್ದು, ಆಯಾ ಗ್ರಾಮ ಸಭೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ.  ಮುಂದಿನ ದಿನಗಳಲ್ಲಿ ನಡೆಸಲಾಗುವ ಜನತಾದರ್ಶನ ಕಾರ್ಯಕ್ರಮದಲ್ಲಿ ಮನೆ ಮಂಜೂರು ಸೇರಿದಂತೆ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಯೋಜನೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸದೆ, ವಿವಿಧ ಕಚೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳು, ಸಾರ್ವಜನಿಕ ಕುಂದುಕೊರತೆಗಳು, ಮತ್ತಿತರ ಸೌಲಭ್ಯ ಮಂಜೂರಾತಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸುವಂತೆ ಸಾರ್ವಜನಿಕರಲ್ಲಿ ಸಚಿವರು ಮನವಿ ಮಾಡಿದರು.  
  ಶನಿವಾರದಂದು ನಡೆದ ಜನತಾದರ್ಶನದಲ್ಲಿ ಸಚಿವರಿಗೆ ಸಲ್ಲಿಸಿದ ಅಹವಾಲುಗಳ ಪೈಕಿ ಇರಕಲ್ಲಗಡ ಗ್ರಾಮದ ನಂದೀಶ್ ಎಂಬುವವರು ತಮಗೆ ಪಿತ್ತಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಇದ್ದು, ಶಸ್ತ್ರ ಚಿಕಿತ್ಸೆಗೆ ಆರ್ಥಿಕ ತೊಂದರೆ ಇದೆ ಎಂದು ಸಚಿವರಿಗೆ ಮನವಿ ಸಲ್ಲಿಸಿದರು.  ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೆ ಇವರ ಶಸ್ತ್ರ ಚಿಕಿತ್ಸೆಗೆ ವಾಜಪೇಯಿ ಆರೋಗ್ರ ಶ್ರೀ ಯೋಜನೆಯಡಿ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀಕಾಂತ್ ಬಾಸೂರ್ ಅವರಿಗೆ ಸೂಚಿಸಿ, ಅರ್ಜಿಗೆ ಸ್ಥಳದಲ್ಲೆ ಪರಿಹಾರ ಕಲ್ಪಿಸಿದರು.  ಆನೆಗೊಂದಿ ಗ್ರಾಮದ ಚಂಪಕಮಾಲಾ ಎಂಬುವವರು ತಮಗೆ ಜಮೀನು ಮಂಜೂರಾಗಿದ್ದು, ಸಾಗುವಳಿ ಚೀಟಿ ನೀಡುತ್ತಿಲ್ಲ ಎಂಬುದಾಗಿ ಸಲ್ಲಿಸಿದ ಮನವಿಗೆ, ಕೂಡಲೆ ಸಾಗುವಳಿ ಚೀಟಿ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.  ನವಲಹಳ್ಳಿಯ ಎನ್.ಎಸ್. ಬಸವರಾಜ್ ಎಂಬುವವರು ತಾವು ಅಪಘಾತದಲ್ಲಿ ಗಾಯಗೊಂಡು, ಚಿಕಿತ್ಸೆ ಹಾಗೂ ಇನ್ನಿತರೆ ವೆಚ್ಚಗಳಿಗಾಗಿ ಸುಮಾರು ೭೦ ಸಾವಿರ ರೂ. ಬ್ಯಾಂಕ್ ಸಾಲ ಮಾಡಿದ್ದು, ಸಾಲ ತೀರಿಸಲು ಆರ್ಥಿಕ ತೊಂದರೆ ಇದೆ.  ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದು, ಗಂಗಾವತಿ ನಗರಸಭೆ ಸದಸ್ಯ ರಾಮಚಂದ್ರಪ್ಪ ಎಂಬುವವರು ನಗರದ ೨೦ನೇ ವಾರ್ಡ್‌ಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಅಗತ್ಯ ಅನುದಾನ ಒದಗಿಸುವಂತೆ ಕೋರಿದ್ದು ವಿಶೇಷವಾಗಿತ್ತು.   ಹೂವಿನಾಳ ಗ್ರಾಮಕ್ಕೆ ಸರ್ಕಾರಿ ಬಸ್ ಬರುತ್ತಿಲ್ಲ ಎಂದು ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಚಿವರು ನಾಳೆಯಿಂದಲೇ ಬಸ್ ಓಡಾಟ ಪ್ರಾರಂಭಿಸುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಉಳಿದಂತೆ ಜನತಾದರ್ಶನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಹಣ ಪಾವತಿ ಮಾಡುತ್ತಿಲ್ಲ, ರಸ್ತೆ ದುರಸ್ತಿ, ವಿದ್ಯುತ್ ಸಂಪರ್ಕ, ಅಂಗನವಾಡಿ ಕಾರ್ಯಕರ್ತರ ನೇಮಕ, ಉದ್ಯೋಗ ನೀಡಿಕೆ, ಶಿಕ್ಷಕರ ಸಮಸ್ಯೆ ಕುರಿತಂತೆ ಅರ್ಜಿಗಳು ಸಲ್ಲಿಕೆಯಾದವು.
  ಜನತಾದರ್ಶನದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಿ.ಪಂ. ಸದಸ್ಯ ವೀರೇಶ್ ಸಾಲೋಣಿ, ಜನಾರ್ಧನ ಹುಲಿಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Related posts

Leave a Comment