ಆಕಾಶವಾಣಿ ಫೋನ್-ಇನ್ ಮೂಲಕ ಮತದಾರರಿಗೆ ಜಾಗೃತಿ : ಉತ್ತಮ ಸ್ಪಂದನೆ


  ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ ಕಾರ್ಯಕ್ರಮದಡಿ  ಸೋಮವಾರದಂದು ಹೊಸಪೇಟೆ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾದ ‘ಮತದಾನದ ಮಹತ್ವ’ ನೇರ ಫೋನ್-ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
  ಕೊಪ್ಪಳ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಹೊಸಪೇಟೆ ಎಫ್.ಎಮ್. ಕೇಂದ್ರದಿಂದ ಏರ್ಪಡಿಸಲಾದ ಮತದಾನದ ಮಹತ್ವ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಳುಗರಿಗೆ ಮತದಾನದ ಮಹತ್ವ ಹಾಗೂ ಮತದಾನಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.  ಈ ಕಾರ್ಯಕ್ರಮದಲ್ಲಿ  ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ, ಕೊಪ್ಪಳ, ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳ
ಸಾರ್ವಜನಿಕರು ದೂರವಾಣಿ ಕರೆ ಮೂಲಕ ಮತದಾನಕ್ಕೆ ಸಂಬಂಧಪಟ್ಟ ಮಾಹಿತಿ ಪಡೆದುಕೊಂಡರು.  ಕೇವಲ ಕೊಪ್ಪಳ ಜಿಲ್ಲೆಯ ಶ್ರೋತೃಗಳಷ್ಟೇ ಅಲ್ಲದೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ತೋರಣಗಲ್ ಮುಂತಾದೆಡೆಗಳಿಂದ ಕೇಳುಗರು, ಮತದಾನಕ್ಕೆ ಸಂಬಂಧಪಟ್ಟ ಮಾಹಿತಿ ಪಡೆದುಕೊಂಡರು.  ಬಹುತೇಕ ಕೇಳುಗರು ಮತದಾನಕ್ಕೆ ಅಗತ್ಯವಿರುವ ದಾಖಲೆಗಳು, ಗುರುತಿನ ಚೀಟಿ, ಮತದಾನ ಪ್ರಕ್ರಿಯೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳಿ, ಸಮರ್ಪಕ ಮಾಹಿತಿ ಪಡೆದುಕೊಂಡರು.  ಕಾರ್ಯಕ್ರಮದ ಕೊನೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ ಅವರು, ಮತದಾರರು ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ, ನಿರ್ಭೀತಿಯಿಂದ ತಮ್ಮ ಮತ ಚಲಾಯಿಸಬೇಕು.  ಎಲ್ಲಾ ಕಾರ್ಖಾನೆ, ಸಂಸ್ಥೆಗಳಲ್ಲಿನ ಖಾಯಂ, ದಿನಗೂಲಿ ನೌಕರರು ಮತ ಚಲಾವಣೆಗೆ ಅನುಕೂಲವಾಗುವಂತೆ ಮೇ. ೦೫ ರಂದು ವೇತನ ಸಹಿತ ರಜೆ ಘೋಷಣೆ ಮಾಡಿರುವುದನ್ನು ಸದುಪಯೋಗ ಪಡಿಸಿಕೊಂಡು ಎಲ್ಲ ಕಾರ್ಮಿಕರು ಮತ ಚಲಾವಣೆ ಮಾಡಿ, ಹಣ, ಹೆಂಡದ ಆಸೆಗೆ ತಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡದೆ, ಸೂಕ್ತ ಅಭ್ಯರ್ಥಿಗೆ ಯೋಚಿಸಿ ಮತ ನೀಡಿ, ಒಟ್ಟಾರೆ ಕೊಪ್ಪಳ ಜಿಲ್ಲೆಯ ಮತದಾನ ಪ್ರಮಾಣವನ್ನು ಶೇ. ೯೦ ರಷ್ಟು ಆಗುವ ರೀತಿಯಲ್ಲಿ ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿಕೊಂಡರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಎಲ್ಲ ಕೇಳುಗರಿಗೂ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ, ನೈತಿಕ ಮತದಾನ ಮಾಡಿ, ಪ್ರಜಾಪ್ರಭುತ್ವಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡುವಂತೆ ಮನವಿ ಮಾಡಿದರು.  ಹೊಸಪೇಟೆ ಆಕಾಶವಾಣಿ ಕೇಂದ್ರದ  ಮಂಜುನಾಥ ಡೊಳ್ಳಿನ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.  ಆಕಾಶವಾಣಿ ಕೇಂದ್ರದ ಮುಖ್ಯಸ್ಥ ವೆಂಕಟೇಶ್, ಕಾರ್ಯಕ್ರಮ ನಿರ್ವಾಹಕ ಅನಿಲ್ ದೇಸಾಯಿ, ಪ್ರಸಾರ ನಿರ್ವಾಹಕ ಬಿ. ಸಿದ್ದಣ್ಣ ಸೇರಿದಂತೆ ಆಕಾಶವಾಣಿ ಕೇಂದ್ರದ ವಿವಿಧ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ೨೦ಕ್ಕೂ ಹೆಚ್ಚು ಕೇಳುಗರು ದೂರವಾಣಿ ಕರೆ ಮೂಲಕ ಮತದಾನದ ಮಹತ್ವದ ಬಗ್ಗೆ ಮಾಹಿತಿ ಪಡೆದುಕೊಂಡರು.

Related posts

Leave a Comment