ಬಜೆಟ್‌ನಲ್ಲಿ ಪಾಲ್ಗೊಳ್ಳಲು ಬಿಎಸ್‌ವೈ ಬಣ ನಿರ್ಧಾರ: ಕೊನೆ ಕ್ಷಣದ ನಾಟಕೀಯ ಬೆಳವಣಿಗೆ; ರೆಸಾರ್ಟ್ ರಾಜಕೀಯ ಅಂತ್ಯ

ರಾಜ್ಯ ಬಿಕ್ಕಟ್ಟು : ಮೂಡದ ಒಮ್ಮತ | ವರಿಷ್ಠರ ಒತ್ತಡ.| `ಸ್ಥಾನ ತ್ಯಜಿಸಲು ಸಿದ್ಧ` – ಈಶ್ವರಪ್ಪ 
ಬೆಂಗಳೂರು,ಮಾ.20:ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ನಡೆಸುತ್ತಿರುವ ರೆಸಾರ್ಟ್ ರಾಜಕೀಯ ಅಂತ್ಯಗೊಂಡಿದ್ದು,ನಾಳೆ ನಡೆಯಲಿರುವ ಬಜೆಟ್ ಮಂಡನೆಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.
ಯಡಿಯೂರಪ್ಪ ತನಗೆ ಸ್ಥಾನ ನೀಡಬೇಕೆಂದು ನಡೆಸುತ್ತಿರುವ ಹೋರಾಟ ತಾರಕಕ್ಕೇರಿದ್ದನ್ನು ಕಂಡಿರುವ ಪಕ್ಷದ ಹೈಕಮಾಂಡ್,ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ಪರೋಕ್ಷ ಎಚ್ಚರಿಕೆ ನೀಡಿದ್ದು,ಇದರಿಂದ ಆತಂಕಕ್ಕೀಡಾದ ಯಡಿಯೂರಪ್ಪ ಹಾಗೂ ಅವರ ಬಣದವರು ತಮ್ಮ ಹೋರಾಟವನ್ನು ಏಕಾಏಕಿ ಅಂತ್ಯಗೊಳಿಸಿದರೆನ್ನಲಾಗಿದೆ.
‘‘ನಿಮ್ಮ ಬೇಡಿಕೆ ಏನಿದ್ದರೂ, ಮಾ.30ರ ವರೆಗೆ ನಡೆಯುವ ಅಧಿವೇಶನದ ಮಧ್ಯೆ ಮಂಡಿಸಲು ಸಾಧ್ಯವೇ ಇಲ್ಲ,ಅದರ ನಂತರ ನೋಡೋಣ.ಅಲ್ಲಿವರೆಗೆ ನೀವು ಅಧಿವೇಶನದಲ್ಲಿ ಭಾಗವಹಿಸಿ, ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಬಹುದು’’ಎಂಬ ಕಟ್ಟೆಚ್ಚರಿಕೆಯನ್ನು ಹೈಕಮಾಂಡ್ ಯಡಿಯೂರಪ್ಪನವರಿಗೆ ನೀಡಿದೆ.
ಇದರಿಂದ ಬೆದರಿರುವ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು,ಸದ್ಯಕ್ಕೆ ಅಧಿವೇಶವನದಲ್ಲಿ ಭಾಗವಹಿಸೋಣ.ಮಾ.30ರ ನಂತರ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ನಿರ್ಧರಿಸಿದ್ದಾರೆ.
ತನಗೆ ಮುಖ್ಯಮಂತ್ರಿ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದು ತನ್ನ ಬೆಂಬಲಿಗ ಶಾಸಕರೊಂದಿಗೆ ನಗರದ ಹೊರ ವಲಯದ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿರುವ ಯಡಿಯೂರಪ್ಪ ಹಾಗೂ ಬೆಂಬಲಿಗರು ಇದೀಗ ಹೈಕಮಾಂಡ್ ನೀಡಿರುವ ಭರವಸೆಯಿಂದ ತಮ್ಮ ರೆಸಾರ್ಟ್ ರಾಜಕೀಯ ಕೊನೆಗೊಳಿಸಿದ್ದಾರೆ.
ಇಂದು ಆರಂಭಗೊಂಡ ಅಧಿವೇಶನವನ್ನು ಬಹಿಷ್ಕರಿಸಿದ್ದ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರನ್ನು ಹೈಕಮಾಂಡ್ ತಣ್ಣಗಾಗಿಸಿದ್ದು,ನಾಳೆ ನಡೆಯಲಿರುವ ಬಜೆಟ್ ಮಂಡನೆಯ ಅಧಿವೇಶನದಲ್ಲಿ ಯಡಿಯೂರಪ್ಪ ಹಾಗೂ ಅವರ ಎಲ್ಲ ಬೆಂಬಲಿಗರು ಭಾಗವಹಿಸಲಿದ್ದಾರೆ.
ಮಂಗಳವಾರ ರಾತ್ರಿ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ನಡೆದ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಯಡಿಯೂರಪ್ಪ ಬಣದ ಪ್ರಮುಖ ನಾಯಕ ಬಸವರಾಜ ಬೊಮ್ಮಾಯಿ,ತಮ್ಮ ಬೇಡಿಕೆ ಈಡೇರಿಸುವ ಕುರಿತು ಹೈಕಮಾಂಡ್ ಪೂರಕ ಭರವಸೆ ನೀಡಿದೆ.ಈ ಹಿನ್ನೆಲೆಯಲ್ಲಿ ತಾವು ಹೋರಾಟವನ್ನು ಅಂತ್ಯಗೊಳಿಸಿ ನಾಳೆಯಿಂದ ಅಧಿವೇಶನದಲ್ಲಿ ಭಾಗವಹಿಸಲಿದ್ದೇವೆ ಎಂದರು.
ಹೈಕಮಾಂಡ್‌ನಿಂದ ತಮಗೆ ಪೂರಕ ಭರವಸೆ ಸಿಕ್ಕಿದೆ.ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ತಾವು ಅಧಿವೇಶನದಲ್ಲಿ ನಾಳೆಯಿಂದ ಭಾಗವಹಿಸುತ್ತೇವೆ ಎಂದವರು ತಿಳಿಸಿದರು.
ನಾಳೆ ಸಂಜೆ ಕೋರ್ ಕಮಿಟಿಯ ಸಭೆ ನಡೆಯಲಿದೆ.ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬಣದ ಜಗದೀಶ್ ಶೆಟ್ಟರ್,ಉಮೇಶ್ ಕತ್ತಿ ಮತ್ತಿತತರು ದಿಲ್ಲಿಗೆ ತೆರಳಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ನಡೆಸುತ್ತಿರುವ ರೆಸಾರ್ಟ್ ರಾಜಕೀಯ ಬಿಜೆಪಿಯನ್ನು ತೀವ್ರ ಮುಜುಗರಕ್ಕೀಡು ಮಾಡಿರುವುದರಿಂದ ಹೈಕಮಾಂಡ್ ಇಂದು ಯಡಿಯೂರಪ್ಪನವರಿಗೆ ಕಟ್ಟಪ್ಪಣೆ ನೀಡಿದ್ದು,ಹೋರಾಟ ಅಂತ್ಯಗೊಳಿಸದಿದ್ದರೆ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆಯೆನ್ನಲಾಗಿದೆ.
ಜೊತೆಗೆ ನಾಳೆಯಿಂದ ಅಧಿವೇಶನದಲ್ಲಿ ಭಾಗವಹಿಸುವಂತೆ ಅದು ತಾಕೀತು ಮಾಡಿದೆ.ಮಾ.30ರ ವರೆಗೆ ನಡೆಯುವ ಬಜೆಟ್ ಅದಿವೇಶನದ ನಂತರ ಅವರ ಬೇಡಿಕೆಯ ಕುರಿತು ಪರಿಶೀಲಿಸುವ ಭರವಸೆಯನ್ನು ಹೈಕಮಾಂಡ್ ನೀಡಿದೆಯೆಂದು ಹೇಳಲಾಗಿದೆ.
ಇದಕ್ಕೆ ಬೆದರಿ ಹೈಕಮಾಂಡ್‌ನ ಸಲಹೆಯಂತೆ ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರು ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದು,ಕೆಲವು ಮಂದಿ ರಾತ್ರಿಯೇ ರೆಸಾರ್ಟ್‌ನಿಂದ ತಮ್ಮ ನಿವಾಸಗಳತ್ತ ಹೋದರೆ, ಇನ್ನು ಕೆಲವರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ ಹೋಗಲಿದ್ದಾರೆ.
ವರಿಷ್ಠರ ಒತ್ತಡ, ಬಜೆಟ್ ಸುಸೂತ್ರ
ಬೆಂಗಳೂರು:ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಬಜೆಟ್ ಮಂಡಿಸಲು ಹಾದಿ ಸುಗಮ ಮಾಡಿರುವ ಯಡಿಯೂರಪ್ಪ ಬಣ,ನಾಯಕತ್ವ ಬದಲಾವಣೆ ಕುರಿತಾದ ತಮ್ಮ ಬಿಗಿ ನಿಲುವಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ ಎಂದು ಹೇಳಿದೆ.ಆದರೆ,ಸದ್ಯಕ್ಕೆ ತಮ್ಮ ರೆಸಾರ್ಟ್ ವಾಸ್ತವ್ಯವನ್ನು ರದ್ದು ಮಾಡಿದ್ದು,ಬಜೆಟ್ ಮಂಡನೆ ವೇಳೆ ಸದನದಲ್ಲಿ ಹಾಜರಿರಲು ತೀರ್ಮಾನಿಸಿದೆ.
ತಮಗೆ ಸೂಕ್ತ ಸ್ಥಾನಮಾನ ನೀಡಲು 48ಗಂಟೆಗಳ ಗಡುವು ವಿಧಿಸಿ,ಬೆಂಬಲಿಗ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದ ಯಡಿಯೂರಪ್ಪ ಅವರ ಒತ್ತಡ ತಂತ್ರಕ್ಕೆ ಪಕ್ಷದ ಹೈಕಮಾಂಡ್ ಬಗ್ಗದ ಕಾರಣ ಅವರಿಗೆ  ತೀವ್ರ ಹಿನ್ನಡೆ ಆದಂತಾಗಿದೆ.
ಸಂಘ ಪರಿವಾರದ ಪ್ರಮುಖರು ಮತ್ತು ಪಕ್ಷದ ರಾಷ್ಟ್ರೀಯ ಮುಖಂಡರ ಸೂಚನೆ ಮೇರೆಗೆ ಯಡಿಯೂರಪ್ಪ ಅವರು ರೆಸಾರ್ಟ್ ವಾಸ್ತವ್ಯವನ್ನು ಅಂತ್ಯಗೊಳಿಸಲು ತೀರ್ಮಾನಿಸಿದ್ದಾರೆ.ವರಿಷ್ಠರ ಜತೆ ಮಾತುಕತೆ ನಡೆಸಲು ಯಡಿಯೂರಪ್ಪ ಅವರಲ್ಲದೆ,ಸಚಿವರಾದ ಜಗದೀಶ ಶೆಟ್ಟರ್,ಬಸವರಾಜ ಬೊಮ್ಮಾಯಿ,ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನೂ ಕೆಲ ಪ್ರಮುಖರು ಒಂದೆರಡು ದಿನಗಳಲ್ಲಿ ದೆಹಲಿಗೆ ತೆರಳಲಿದ್ದಾರೆ.
`ರಾಜ್ಯಸಭಾ ಚುನಾವಣೆ ಸಂಬಂಧ ಪಕ್ಷದ ರಾಷ್ಟ್ರೀಯ ಮುಖಂಡರ ನಡುವೆ ಮನಸ್ತಾಪ ಉಂಟಾಗಿದೆ.ಈ ಹಿನ್ನೆಲೆಯಲ್ಲಿ ನಾವು ಬೆಂಗಳೂರಿಗೆ ಬಂದು ಮಾತುಕತೆ ನಡೆಸಲು ಸಾಧ್ಯವಾಗುತ್ತಿಲ್ಲ.ನೀವೇ ದೆಹಲಿಗೆ ಬನ್ನಿ`ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಮುಖಂಡ ಅರುಣ್ ಜೇಟ್ಲಿ ಅವರು ಯಡಿಯೂರಪ್ಪ ಅವರನ್ನು ಕೋರಿದರು.
ಇದಕ್ಕೆ ಪ್ರಾರಂಭದಲ್ಲಿ ಅವರು ಒಪ್ಪಿರಲಿಲ್ಲ.ನಂತರ ಆರ್‌ಎಸ್‌ಎಸ್ ಪ್ರಮುಖರು ಮಧ್ಯಸ್ಥಿಕೆ ವಹಿಸಿ ಅವರನ್ನು ಒಪ್ಪಿಸಿದ್ದು,ಆದಷ್ಟು ಬೇಗ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ರೆಸಾರ್ಟ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಬೆಂಬಲಿಗರ ಸಭೆಯಲ್ಲಿ ಚರ್ಚಿಸಲಾಗಿದೆ. ಶಾಸಕರು ಒಪ್ಪಿದ ನಂತರವೇ ಯಡಿಯೂರಪ್ಪ ಅವರು ಮಾತುಕತೆ ಸಲುವಾಗಿ ದೆಹಲಿಗೆ ತೆರಳಲು ತೀರ್ಮಾನಿಸಿದರು ಎಂದು ಗೊತ್ತಾಗಿದೆ.
ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ನಿರ್ಧರಿಸಿದ ನಂತರ ಕೆಲವರು ರಾತ್ರಿಯೇ ರೆಸಾರ್ಟ್ ಖಾಲಿ ಮಾಡಿದರು.ಇನ್ನು ಕೆಲವರು ಬುಧವಾರ ರೆಸಾರ್ಟ್‌ನಿಂದ ನೇರವಾಗಿ ವಿಧಾನಸಭೆ ಅಧಿವೇಶನಕ್ಕೆ ಬಸ್‌ನಲ್ಲಿ ಬರಲು ತೀರ್ಮಾನಿಸಿದರು.`ಇನ್ನು ಮುಂದೆ ರೆಸಾರ್ಟ್ ರಾಜಕಾರಣ ಬೇಡ.ಅಗತ್ಯ ಬಿದ್ದಾಗ ರೇಸ್‌ಕೋರ್ಸ್ ರಸ್ತೆಯ ನಮ್ಮ ಮನೆಯಲ್ಲೇ ಸೇರೋಣ`ಎಂದು ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ. 
`ಯಡಿಯೂರಪ್ಪ ಜತೆ ವರಿಷ್ಠರು ನಿರಂತರ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.ಸಂಖ್ಯಾಬಲ ಸೇರಿದಂತೆ ಯಡಿಯೂ ರಪ್ಪನವರ ಶಕ್ತಿ ಪಕ್ಷಕ್ಕೆ ಮನವರಿಕೆಯಾಗಿದೆ.ಸದ್ಯದಲ್ಲೇ ಎಲ್ಲವನ್ನೂ ಬಗೆಹರಿಸಲಾಗುವುದು ಎಂದು ವರಿಷ್ಠರು ಹೇಳಿದ್ದಾರೆ` ಎಂದು ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.
ಆದರೆ, ಅಧಿವೇಶನ ಮುಗಿಯುವವರೆಗೂ ಈ ನಿಟ್ಟಿನಲ್ಲಿ ವರಿಷ್ಠರು ಯಾವುದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ.`ಅಧಿವೇಶನ ನಂತರ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಹೊಸ ನಾಯಕನನ್ನು ಆಯ್ಕೆ ಮಾಡಬೇಕು`ಎಂಬ ತಮ್ಮ ಬೇಡಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದರು.
ಯಡಿಯೂರಪ್ಪ ಅವರೇ ಹೇಳಿರುವಂತೆ ಅವರಿಗೆ 65ಶಾಸಕರ ಬೆಂಬಲ ಇದೆ.ಅಗತ್ಯ ಬಿದ್ದರೆ ಅವರು ಸಹಿಯುಳ್ಳ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ.ಈ ಮಾಹಿತಿಯನ್ನು ಪಕ್ಷದ ಹೈಕಮಾಂಡ್‌ಗೂ ರವಾನಿಸಲಾಗಿದೆ.
ಬಿಎಸ್‌ವೈಗೆ ಸೂಚನೆ:ಎಲ್ಲ ಶಾಸಕರನ್ನು ರೆಸಾರ್ಟ್‌ನಿಂದ`ಬಿಡುಗಡೆ`ಮಾಡುವಂತೆ ಮಾತುಕತೆಗೂ ಮುನ್ನ ವರಿಷ್ಠರು ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದರು.ಮೊದಲು ಬಜೆಟ್ ಅಧಿವೇಶನದಲ್ಲಿ ಭಾಗವಹಿಸಬೇಕು.
ನಂತರ ರಾಜ್ಯಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಬಿ.ಜೆ.ಪುಟ್ಟಸ್ವಾಮಿ ಅವರಿಗೆ ನಾಮಪತ್ರ ವಾಪಸ್ ಪಡೆಯಲು ಸೂಚಿಸಬೇಕು ಎಂದೂ ಯಡಿಯೂರಪ್ಪ ಅವರಿಗೆ ವರಿಷ್ಠರು ಕಟ್ಟಾಜ್ಞೆ ಮಾಡಿದ್ದಾರೆ.
ಸಾಮೂಹಿಕ ರಾಜೀನಾಮೆ:ಒಂದು ವೇಳೆ ವರಿಷ್ಠರು ಯಡಿಯೂರಪ್ಪನವರ ಬೇಡಿಕೆಗೆ ಸ್ಪಂದಿಸದಿದ್ದರೆ 41ಮಂದಿ ಶಾಸಕರು ರಾಜೀನಾಮೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ.ಬಜೆಟ್ ಅಧಿವೇಶನಕ್ಕೆ ಒಂದು ಗಂಟೆ ಮೊದಲು ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದರು.ಆದರೆ,ಅಂತಹ ದುಡುಕಿನ ತೀರ್ಮಾನ ತೆಗೆದುಕೊಳ್ಳುವುದು ಬೇಡ ಎಂದು ವರಿಷ್ಠರು ಸಮಾಧಾನಪಡಿಸಿದ ನಂತರ ಅದನ್ನು ಸದ್ಯಕ್ಕೆ ಕೈಬಿಡಲಾಗಿದೆ.
ಇದಕ್ಕೂ ಮುನ್ನ ಯಡಿಯೂರಪ್ಪ ಅವರು ಶಾಸಕರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. 65 ಶಾಸಕರ ಪೈಕಿ 41ಮಂದಿ  ರಾಜೀನಾಮೆಗೆ ಒಲವು ತೋರಿಸಿದ್ದರು.ಅವರನ್ನು ಉದ್ದೇಶಿಸಿ ಯಡಿಯೂರಪ್ಪ ಅವರು,`ನನ್ನ ಪ್ರಾಣ ಒತ್ತೆ ಇಟ್ಟಾದರೂ ನಿಮ್ಮನ್ನು ಗೆಲ್ಲಿಸುತ್ತೇನೆ`ಎಂದು ಅಭಯ ನೀಡಿದರು ಎನ್ನಲಾಗಿದೆ.
ಶಕ್ತಿ ಪ್ರದರ್ಶನ:`ಯಡಿಯೂರಪ್ಪ ಪರ ಹೆಚ್ಚು ಶಾಸಕರು ಇಲ್ಲ`ಎಂದು ಕುಹಕವಾಡುತ್ತಿದ್ದವರಿಗೆ ತಿರುಗೇಟು ನೀಡುವ ಉದ್ದೇಶದಿಂದ ರೆಸಾರ್ಟ್‌ಗೆ ಬಂದಿದ್ದಾಗಿ ಹೇಳಿದ ಸಚಿವ ಬಸವರಾಜ ಬೊಮ್ಮಾಯಿ,`ರೆಸಾರ್ಟ್‌ಗೆ ಬರುವುದಕ್ಕೆ ಯಡಿಯೂರಪ್ಪ ಅವರಿಗೆ ಇಷ್ಟ ಇರಲಿಲ್ಲ.ಶಾಸಕರ ಒತ್ತಾಯಕ್ಕೆ ಮಣಿದು ಒಪ್ಪಿದರು.ಈಗ ಬೆಂಬಲಿಗ ಶಾಸಕರ ಸಂಖ್ಯೆ 65ಕ್ಕೂ ಹೆಚ್ಚು ಇರುವುದು ಗೊತ್ತಾಗಿದೆ.ಇದನ್ನು ಅರ್ಥ ಮಾಡಿಕೊಂಡು ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು` ಎಂದು ಆಗ್ರಹಪಡಿಸಿದರು.
`ಪಕ್ಷದ ಹೈಕಮಾಂಡ್,ಯಡಿಯೂರಪ್ಪ ಜತೆ ನಿರಂತರ ಸಂಪರ್ಕದಲ್ಲಿದೆ.ಸದಾನಂದಗೌಡರೇ ಬಜೆಟ್ ಮಂಡಿಸಲು ಯಡಿಯೂರಪ್ಪ ಒಪ್ಪಿದ್ದು,ಬಜೆಟ್ ಮಂಡಿಸಿದ ಬಳಿಕ ವರಿಷ್ಠರು ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕು.ಅದರ ಆಧಾರದ ಮೇಲೆ ಸೂಕ್ತ ತೀರ್ಮಾನಕ್ಕೆ ಬರಬೇಕು ಎಂಬುದು ತಮ್ಮ ಒತ್ತಾಯ ಎಂದೂ ಬೊಮ್ಮಾಯಿ ವಿವರಿಸಿದರು.
ಸತೀಶ್ ಜತೆ ಚರ್ಚೆ:ಅಧಿವೇಶನದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಜಗದೀಶ ಶೆಟ್ಟರ್ ಅವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಅವರನ್ನು ಭೇಟಿ ಮಾಡಿ ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು.ಭಿನ್ನಮತ ಬೇಡ ಎನ್ನುವ ಮನವಿಯನ್ನು ಸತೀಶ್ ಮಾಡಿದರು ಎನ್ನಲಾಗಿದೆ.
ಆಚಾರ್ಯ ಸಂತಾಪ:ಅಧಿವೇಶನ ಬಹಿಷ್ಕರಿಸಿದ ಶಾಸಕರು ರೆಸಾರ್ಟ್‌ನಲ್ಲೇ ಡಾ.ವಿ.ಎಸ್.ಆಚಾರ್ಯ ಅವರಿಗೆ ಸಂತಾಪ ಸೂಚಿಸಿದರು.
`ಸ್ಥಾನ ತ್ಯಜಿಸಲು ಸಿದ್ಧ`
ನಂಜನಗೂಡು: ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ನಿರ್ಧರಿಸಿದರೆ  ಸ್ಥಾನ ಬಿಟ್ಟುಕೊಡಲು ಸಿದ್ಧ` ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಂಗಳವಾರ ಹೇಳಿದರು.ಪಟ್ಟಣ ಹೊರ ವಲಯದ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನದ ಬಳಿ ಕೋಟಿಲಿಂಗ ಸ್ಥಾಪನೆ ಸಂಬಂಧ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದರು. 
ಇಂದು ಬಜೆಟ್
ಬೆಂಗಳೂರು: ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಬುಧವಾರ ಬೆಳಿಗ್ಗೆ 11ಗಂಟೆಗೆ 2012-13ನೇ ಸಾಲಿನ ಮುಂಗಡ ಪತ್ರವನ್ನು ವಿಧಾನ ಸಭೆಯಲ್ಲಿ ಮಂಡಿಸಲಿದ್ದಾರೆ.
ವಿಧಾನ ಸಭೆಯಲ್ಲಿ ಮುಖ್ಯಮಂತ್ರಿಗಳು ಬಜೆಟ್ ಓದಲು ಶುರು ಮಾಡುತ್ತಿದ್ದಂತೆಯೇ ವಿಧಾನ ಪರಿಷತ್‌ನಲ್ಲಿ ಸಭಾ ನಾಯಕರು ಬಜೆಟ್‌ನ ಪ್ರತಿಯನ್ನು ಮಂಡಿಸಲಿದ್ದಾರೆ.
ರಾಜ್ಯ ಬಿಕ್ಕಟ್ಟು : ವರಿಷ್ಠರಲ್ಲಿ ಮೂಡದ ಒಮ್ಮತ
ನವದೆಹಲಿ:ಮುಖ್ಯಮಂತ್ರಿ ಕುರ್ಚಿಗಾಗಿ ಬಿ.ಎಸ್.ಯಡಿಯೂರಪ್ಪನವರ ಬಣದ `ಹೋರಾಟ` ರಾಜಧಾನಿಯಲ್ಲಿ ಮಂಗಳವಾರವೂ ಮುಂದುವರಿಯಿತು.ಸಂಸದೀಯ ಪಕ್ಷದ ಸಭೆಯಲ್ಲೂ ಈ ವಿಷಯ ಪ್ರತಿಧ್ವನಿಸಿತು.ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ರಾಜ್ಯದ ಬಿಕ್ಕಟ್ಟು ಕುರಿತು ಚರ್ಚಿಸಿದರು.
ಸಂಸತ್‌ಭವನದ `ಅನೆಕ್ಸ್`ನಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಹುದ್ದೆಗೆ ನೇಮಿಸಬೇಕೆಂಬ ಬೇಡಿಕೆ ಪ್ರಸ್ತಾಪವಾಯಿತು.ಈ ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರಿಂದ ಯಾವುದೇ ಖಚಿತ ಭರವಸೆ ಸಿಗಲಿಲ್ಲ. ನಾಗಪುರದಲ್ಲಿರುವ ನಿತಿನ್ ಗಡ್ಕರಿ ದೆಹಲಿಗೆ ಹಿಂತಿರುಗಿದ ತಕ್ಷಣ ಈ ಬಗ್ಗೆ ಚರ್ಚಿಸಲಾಗುವುದೆಂಬ ಮಾಮೂಲಿ ಉತ್ತರ ಮುಖಂಡರಿಂದ ಬಂತು.
ಬಿಜೆಪಿ ನಾಯಕಿ ಮೇನಕಾ ಗಾಂಧಿ ಹಾಗೂ ಬೆಳಗಾವಿ ಲೋಕಸಭಾ ಸದಸ್ಯ ಸುರೇಶ್ ಅಂಗಡಿ ರಾಜ್ಯದ ಬಿಕ್ಕಟ್ಟು ಕುರಿತು ಪ್ರಸ್ತಾಪಿಸಿದರು.`ಕರ್ನಾಟಕದಲ್ಲಿ ರಾಜಕೀಯ ಪರಿಸ್ಥಿತಿ ವಿಪರೀತ ಹದಗೆಡುತ್ತಿದೆ. ತಕ್ಷಣವೇ ಅದನ್ನು ಸರಿಪಡಿಸಿ`ಎಂದು ಮೇನಕಾ ಆಗ್ರಹಿಸಿದರು.`ಯಡಿಯೂರಪ್ಪ 40 ವರ್ಷಗಳಿಂದ ಪಕ್ಷ ಕಟ್ಟಿದ್ದಾರೆ.ಅವರಿಗೆ ಅನ್ಯಾಯವಾಗಿದೆ. ತಕ್ಷಣ ಸರಿಪಡಿಸಿ.ಅಕ್ರಮ ಗಣಿಗಾರಿಕೆಗೆ ಸಂಬಂಧದ ದೂರನ್ನು (ಎಫ್‌ಐಆರ್)ಹೈಕೋರ್ಟ್ ರದ್ದುಪಡಿಸಿದ್ದು ವಿಳಂಬ ಮಾಡದೆ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ನೇಮಕ ಮಾಡಿ` ಎಂದು ಅಂಗಡಿ ಆಗ್ರಹಿಸಿದರು.
ನಾಗಪುರದಲ್ಲಿ ನಿತಿನ್ ಗಡ್ಕರಿ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ಯಡಿಯೂರಪ್ಪ ಅವರ `ಬಂಡಾಯ`ಕುರಿತು ಸಮಾಲೋಚಿಸಿದರು.`ಇದನ್ನು ಆರ್‌ಎಸ್‌ಎಸ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು,ತುರ್ತು ತೀರ್ಮಾನ ಕೈಗೊಳ್ಳಬೇಕಾದ ಅಗತ್ಯವಿದೆ` ಎಂದು ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಬಯ್ಯಾಜಿ ಹೇಳಿದ್ದಾರೆ.
ಗಡ್ಕರಿ ಯಾವುದೇ ಗಳಿಗೆಯಲ್ಲಿ ರಾಜಧಾನಿಗೆ ಹಿಂತಿರುಗಿ ಹಿರಿಯ ನಾಯಕರ ಜತೆ ಸಮಾಲೋಚಿಸುವ ಸಾಧ್ಯತೆಯಿದೆ ಎಂದು  ಉನ್ನತ ಮೂಲಗಳು ತಿಳಿಸಿವೆ.ಯಡಿಯೂರಪ್ಪ ಅವರಿಗೆ ನಿಷ್ಠರಾಗಿರುವ ಸಂಸದರು ಮಂಗಳವಾರ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಯಡಿಯೂರಪ್ಪ ಅವರಿಗೆ ಮತ್ತೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಅಡ್ವಾಣಿ ಮತ್ತಿತರ ಮನವೊಲಿಸುವಂತೆ ಮನವಿ ಮಾಡಿದರು.
ಯಡಿಯೂರಪ್ಪನವರ ಪರ ಒತ್ತಡ ಇದೇ ರೀತಿ ಮುಂದುವರಿದರೆ ಹೈಕಮಾಂಡ್ ನಿರ್ದಿಷ್ಟ ತೀರ್ಮಾನ ಕೈಗೊಳ್ಳಬೇಕಾಗಬಹುದು.ಆದರೆ,ಮಾಜಿ ಮುಖ್ಯಮಂತ್ರಿ ಮರು ನೇಮಕಕ್ಕೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರಲ್ಲಿ ಒಮ್ಮತವಿಲ್ಲ.ಹೀಗಾಗಿ ನಿರ್ಧಾರ ಏನಾಗಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.ರಾಜ್ಯಸಭೆ ಟಿಕೆಟ್ ಹಂಚಿಕೆ ಸಂಬಂಧ ಗಡ್ಕರಿ ಮತ್ತು ಅಡ್ವಾಣಿ ಬಣದ ನಡುವೆ ಜಟಾಪಟಿ ನಡೆಯುತ್ತಿದೆ. 
ಕರ್ನಾಟಕದ ರಾಜಕೀಯ ಬೆಳವಣಿಗೆ ಮೇಲೂ ಇದು ಪರಿಣಾಮ ಬೀರಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.`ಸದ್ಯಕ್ಕೆ ಹೈಕಮಾಂಡ್ ಯಡಿಯೂರಪ್ಪ ಅವರ ಮನವೊಲಿಸುತ್ತಿದೆ. `ಮುಖ್ಯಮಂತ್ರಿ ಸದಾನಂದಗೌಡ ಅವರಿಗೆ ಬಜೆಟ್ ಮಂಡಿಸಲು ಅಡ್ಡಿಪಡಿಸಬಾರದೆಂಬ ಕಟ್ಟುನಿಟ್ಟಿನ ಸಂದೇಶ ಕಳುಹಿಸಿದೆ.
ಗೌಡರು ಬಜೆಟ್ ಮಂಡಿಸಿ ಸದನದ ಒಪ್ಪಿಗೆ ಪಡೆಯುತ್ತಾರೆ.ಅನಂತರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಬದಲಾವಣೆ ಅಗತ್ಯವಿದೆಯೇ ಎಂಬ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ`ಎಂದು ಮೂಲಗಳು ಹೇಳಿವೆ.
ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣಗಳು ಮತ್ತು ಹೈಕೋರ್ಟ್ ತೀರ್ಪು ಕುರಿತು ಖ್ಯಾತ ವಕೀಲರೂ ಆಗಿರುವ ಅರುಣ್ ಜೇಟ್ಲಿ ಪರಿಶೀಲಿಸಿದ್ದಾರೆ.ಈಗ ಮತ್ತೊಬ್ಬ ಹಿರಿಯ ವಕೀಲ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಅಧ್ಯಯನ ಮಾಡುತ್ತಿದ್ದಾರೆ.
ಎಲ್ಲ ಪ್ರಕರಣಗಳು ಮತ್ತು ಕೋರ್ಟ್ ತೀರ್ಪು ಓದಿದ ಬಳಿಕ ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಅಕ್ರಮ ಗಣಿಗಾರಿಕೆ ಕುರಿತು ಅಧ್ಯಯನ ನಡೆಸುತ್ತಿರುವ`ಕೇಂದ್ರ ಉನ್ನತಾಧಿಕಾರ ಸಮಿತಿ` (ಸಿಇಸಿ) ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಸಿಬಿಐ ತನಿಖೆ ಅಗತ್ಯವಿದೆಯೇ ಎಂಬ ಬಗ್ಗೆ ಏಪ್ರಿಲ್ 11ರಂದು ಅಂತಿಮ ವಿಚಾರಣೆ ನಡೆಸಲಿದೆ.
ಹೇಳಿಕೆ ಮತ್ತು ದಾಖಲೆಗಳನ್ನು ಏಪ್ರಿಲ್ 9ರೊಳಗೆ ಸಲ್ಲಿಸುವಂತೆ ಮಾಜಿ ಮುಖ್ಯಮಂತ್ರಿ ವಕೀಲರು, ಜೆಎಸ್‌ಡಬ್ಲ್ಯು ಮತ್ತು ಅದಾನಿ ಎಂಟರ್‌ಪ್ರೈಸಸ್ ಕಂಪೆನಿಗಳ ವಕೀಲರಿಗೆ ಮಂಗಳವಾರ ಸೂಚಿಸಿದೆ. ಏಪ್ರಿಲ್ 20ರೊಳಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಲಿದೆ.
ಮಣಿದ ಯಡಿಯೂರಪ್ಪ; ಬಜೆಟ್‌ಗೆ ಹಾದಿ ಸುಗಮ ತಾತ್ಕಾಲಿಕ ಕದನ ವಿರಾಮ
ಬೆಂಗಳೂರು:ತಮ್ಮನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಬಿ.ಎಸ್‌.ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್‌ನೊಂದಿಗೆ ನಡೆಸುತ್ತಿದ್ದ ಹೋರಾಟಕ್ಕೆ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದಾರೆ.
ಪರಿಣಾಮ 2012-13ನೇ ಸಾಲಿನ ರಾಜ್ಯ ಬಜೆಟ್‌ ಮಂಡನೆಗೆ ಎದುರಾಗಿದ್ದ ಕಂಟಕ ನಿವಾರಣೆಯಾದಂತಾಗಿದ್ದು,ಹಣಕಾಸು ಖಾತೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಕದನ ವಿರಾಮದ ಪರಿಣಾಮ ಬುಧವಾರ ಸದಾನಂದಗೌಡರು ಮಂಡಿಸುವ ಬಜೆಟ್‌ ಕಲಾಪಕ್ಕೆ ಯಡಿಯೂರಪ್ಪ ಸೇರಿದಂತೆ ಅವರ ಬೆಂಬಲಿಗ ಸಚಿವರು ಹಾಗೂ ಶಾಸಕರೆಲ್ಲರೂ ಹಾಜರಾಗಲಿದ್ದಾರೆ. ಬೆಳಗ್ಗೆ ರೆಸಾರ್ಟ್‌ನಿಂದಲೇ ನೇರವಾಗಿ ವಿಧಾನಸಭೆಗೆ ಆಗಮಿಸಲಿದ್ದು, ಮತ್ತೆ ವಾಪಸ್‌ ರೆಸಾರ್ಟ್‌ಗೆ ತೆರಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದೆಲ್ಲದರ ಫ‌ಲವಾಗಿ ಸದಾನಂದಗೌಡರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸಿನ ಕೂಸಾಗಿದ್ದ ಒಂದು ಲಕ್ಷ ಕೋಟಿ ರೂ.ಗಳ ಮೊತ್ತದ ಬದಲು ತುಸು ಕಡಮೆ ಮೊತ್ತದ ಬಜೆಟ್‌ ಮಂಡಿಸುವ ಸಾಧ್ಯತೆಯಿದೆ.ಅಂದರೆ,ಈ ಬಾರಿಯ ಬಜೆಟ್‌ ಮೊತ್ತ 90ಸಾವಿರ ಕೋಟಿ ರೂ.ಗಳ ಆಸುಪಾಸಿನಲ್ಲಿರಲಿದೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ಗಡ್ಕರಿ ಹಾಗೂ ಹಿರಿಯ ನಾಯಕ ಅರುಣ್‌ ಜೇಟ್ಲಿಅವರು ಮಂಗಳವಾರ ಇಡೀ ದಿನ ಯಡಿಯೂರಪ್ಪ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಅಂತಿಮವಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಸುಗಮವಾಗಿ ಬಜೆಟ್‌ ಮಂಡನೆಗೆ ಅನುವು ಮಾಡಿಕೊಟ್ಟಲ್ಲಿ ಮಾತ್ರ ನಿಮ್ಮೊಂದಿಗೆ ಮಾತುಕತೆ ನಡೆಸುತ್ತೇವೆ.ಇಲ್ಲದಿದ್ದರೆ ಇಲ್ಲ…’ಎಂಬ ವರಿಷ್ಠರ ಖಡಕ್‌ ಮಾತಿಗೆ ಯಡಿಯೂರಪ್ಪ ಮತ್ತವರ ಬೆಂಬಲಿಗರು ಮಣಿದು ಬಜೆಟ್‌ಗೆ ಹಾಜರಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ನಗರದ ಹೊರವಲಯದ ರೆಸಾರ್ಟ್‌ನಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ ಅವರ ಪರಮಾಪ್ತ ಹಾಗೂ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ,ಪಕ್ಷದ ವರಿಷ್ಠರೊಂದಿಗೆ ನಡೆಸಿದ ಮಾತುಕತೆ ಪರಿಣಾಮ ಬುಧವಾರದ ಬಜೆಟ್‌ ಅಧಿವೇಶನದಲ್ಲಿ ಎಲ್ಲರೂ ಪಾಲ್ಗೊಳ್ಳುವ ನಿರ್ಣಯಕ್ಕೆ ಬರಲಾಗಿದೆ ಎಂದು ಪ್ರಕಟಿಸಿದರು.
ಯಡಿಯೂರಪ್ಪ ಅವರೊಂದಿಗೆ ವರಿಷ್ಠರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಸ್ಪಷ್ಟ ಭರವಸೆ ನೀಡಿದ್ದಾರೆ.ಯಡಿಯೂರಪ್ಪ ಅವರ ರಾಜಕೀಯ ಬಲ ಮತ್ತು ಸಂಖ್ಯಾಬಲ ತಮಗೆ ಮನವರಿಕೆ ಆಗಿದೆ ಎಂಬ ಮಾತನ್ನೂ ವರಿಷ್ಠರು ಹೇಳಿದ್ದಾರೆ.ಬುಧವಾರ ಸಂಜೆ ದೆಹಲಿಯಲ್ಲಿ ಪಕ್ಷದ ವರಿಷ್ಠರು ಸಭೆ ಸೇರಿ ಸೂಕ್ತ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಬಜೆಟ್‌ ಮಂಡನೆಗೆ ಅಡ್ಡಿಪಡಿಸಬೇಕು ಎಂಬ ಉದ್ದೇಶ ತಮ್ಮದಾಗಿರಲಿಲ್ಲ. ಆದರೆ, ಯಡಿಯೂರಪ್ಪ ಅವರ ಬಳಿ ಶಾಸಕರ ಸಂಖ್ಯಾಬಲವಿಲ್ಲ ಎಂಬ ಮಾತು ಕೇಳಿಬಂದಿದ್ದರಿಂದ ರೆಸಾರ್ಟ್‌ಗೆ ಬರಬೇಕಾಯಿತು.ಇದೀಗ ವರಿಷ್ಠರಿಗೆ ಯಡಿಯೂರಪ್ಪ ಅವರ ಬಲ ಮನವರಿಕೆಯಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.
ಇದಕ್ಕೂ ಮೊದಲು ಮಂಗಳವಾರ ಬೆಳಗ್ಗೆ ಆರಂಭಗೊಂಡ ಬಜೆಟ್‌ ಅಧಿವೇಶನಕ್ಕೆ ಅಗಲಿದ ಡಾ.ವಿ.ಎಸ್‌.ಆಚಾರ್ಯ ಅವರ ಸಂತಾಪ ಸೂಚಕ ಕಲಾಪಕ್ಕೆ ಯಡಿಯೂರಪ್ಪ ಪಾಳೆಯದಿಂದ ಕೇವಲ ಇಬ್ಬರು ಸಚಿವರು ಮತ್ತು ಇಬ್ಬರು ಶಾಸಕರನ್ನು ಪ್ರತಿನಿಧಿಗಳಾಗಿ ಕಳುಹಿಸಿಕೊಡಲಾಗಿತ್ತು. ಯಡಿಯೂರಪ್ಪ ಸೇರಿದಂತೆ ಇನ್ನುಳಿದ ಎಲ್ಲ ಸಚಿವರು ಹಾಗೂ ಶಾಸಕರು ರೆಸಾರ್ಟ್‌ನಲ್ಲಿಯೇ ಆಚಾರ್ಯ ಅವರಿಗೆ ಸಂತಾಪ ಸೂಚಿಸಿದರು.
66 ಶಾಸಕರ ಬೆಂಬಲ ಪಟ್ಟಿ ಬಿಡುಗಡೆ
ಯಡಿಯೂರಪ್ಪ ಅವರಿಗೆ ನಾಯಕತ್ವ ನೀಡುವ ಸಂಬಂಧ ಬಿಜೆಪಿಯ 66ಶಾಸಕರು ಬೆಂಬಲ ಸೂಚಿಸಿದ್ದಾರೆ.
ಈ ಕುರಿತ ಶಾಸಕರ ಹೆಸರುಗಳನ್ನೂ ಒಳಗೊಂಡ ಪಟ್ಟಿಯೊಂದನ್ನು ಯಡಿಯೂರಪ್ಪ ಪಾಳೆಯ ಮಂಗಳವಾರ ಸಂಜೆ ಬಿಡುಗಡೆಗೊಳಿಸುವ ಮೂಲಕ ತಮ್ಮ ವಿರೋಧಿಗಳಿಗೆ ಹಾಗೂ ಹೈಕಮಾಂಡ್‌ಗೆ ಸಂದೇಶ ರವಾನಿಸಿತು.
ಯಡಿಯೂರಪ್ಪ ಪಾಳೆಯದಲ್ಲಿ ಸಂಖ್ಯಾಬಲ ಕುಸಿಯುತ್ತಿದೆ,35ಕ್ಕೂ ಕಡಮೆ ಶಾಸಕರಿದ್ದಾರೆ ಎಂಬಿತ್ಯಾದಿ ವದಂತಿಗಳ ಹಿನ್ನೆಲೆಯಲ್ಲಿ ಈ ಪಟ್ಟಿ ಬಿಡುಗಡೆ ಮಾಡಲಾಗಿದ್ದು,ಜತೆಗೆ ಪಕ್ಷದ 10 ಸಂಸದರೂ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೇ ಮುಗಿಯಲಿಲ್ಲ
ಬಜೆಟ್‌ ಮಂಡನೆಗೆ ಹಾಜರಾಗುವುದಾಗಿ ಹೇಳಿದ ಕೂಡಲೇ ಯಡಿಯೂರಪ್ಪ ಅವರು ಪೂರ್ಣ ಮಣಿದಿದ್ದಾರೆ ಅಥವಾ ಹೋರಾಟ ಕೈಬಿಟ್ಟಿದ್ದಾರೆ ಎಂದರ್ಥವಲ್ಲ.
ಕೇವಲ ಬಜೆಟ್‌ ಮಂಡನೆಯಾದರಷ್ಟೇ ಸಾಲದು.ಅದು ಸದನದ ಒಪ್ಪಿಗೆಯನ್ನೂ ಪಡೆಯಬೇಕು. ಅದಕ್ಕೆ ಶಾಸಕರ ಸಂಖ್ಯಾಬಲ ಬೇಕೆ ಬೇಕು.ಈ ತಿಂಗಳ ಅಂತ್ಯದವರೆಗೆ ಬಜೆಟ್‌ ಅಧಿವೇಶನ ನಡೆಯಲಿದೆ. ಬಜೆಟ್‌ ಮೇಲಿನ ಚರ್ಚೆ ನಂತರ ಕೊನೆಯ ದಿನ ಸದನದ ಒಪ್ಪಿಗೆ ಪಡೆಯುವವರೆಗೆ ಯಡಿಯೂರಪ್ಪ ಅವರು ಸ್ಥಾನಮಾನಕ್ಕಾಗಿ ಬಿಗಿಪಟ್ಟು ಮುಂದುವರೆಸುವುದು ನಿಶ್ಚಿತ.
ಈ ನಡುವೆ ವರಿಷ್ಠರೂ ಯಡಿಯೂರಪ್ಪ ಅವರ ಬೆನ್ನಿಗಿರುವ ಶಾಸಕರ ಸಂಖ್ಯಾಬಲದಿಂದ ಚಕಿತಗೊಂಡಿದ್ದು,ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಸಂಬಂಧ ಶೀಘ್ರದಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರ ಬಗ್ಗೆ ಪ್ರಬಲ ವಿರೋಧ ವ್ಯಕ್ತಪಡಿಸಿರುವ ಪಕ್ಷದ ವರಿಷ್ಠ ನಾಯಕ ಲಾಲ್‌ಕೃಷ್ಣ ಆಡ್ವಾಣಿ ಅವರನ್ನು ಮನವೊಲಿಸುವ ಪ್ರಯತ್ನ ಮತ್ತೂಮ್ಮೆ ನಡೆಸುವ ಸಂಭವವಿದೆ.ಇದೇ ವೇಳೆ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿರುವ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಿ ರಾಜ್ಯಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳುವಂತೆಯೂ ಸಲಹೆ ನೀಡುವ ನಿರೀಕ್ಷೆಯೂ ಇದೆ ಎನ್ನಲಾಗಿದೆ.
ಸೋಮವಾರ ಮತ್ತು ಮಂಗಳವಾರ ದೆಹಲಿಯಲ್ಲಿ ಯಡಿಯೂರಪ್ಪ ಪರವಾಗಿ ವರಿಷ್ಠರ ಬಳಿ ಬಲವಾಗಿ ಬ್ಯಾಟಿಂಗ್‌ ಮಾಡಿದ ಬೆಂಬಲಿಗ ಸಂಸದರು ಮಂಗಳವಾರ ರಾತ್ರಿ ಬೆಂಗಳೂರಿಗೆ ವಾಪಸಾಗಿ ಸುದೀರ್ಘ‌ ಸಮಾಲೋಚನೆ ನಡೆಸಿದರು.ಸಂಸತ್‌ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಯಡಿಯೂರಪ್ಪ ಬೆಂಬಲಿಗರು ತಮ್ಮ ನಾಯಕನ ಬೇಡಿಕೆಗೆ ಒತ್ತಾಸೆಯಾಗಿ ನಿಲ್ಲಲು ಬುಧವಾರದಿಂದ ಅಧಿವೇಶನಕ್ಕೆ ಗೈರುಹಾಜರಾಗುವ ಸಂಭವವೂ ಇದೆ ಎಂದು ಮೂಲಗಳು ತಿಳಿಸಿವೆ.

Leave a Reply