ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ದೂರು ಸ್ವೀಕೃತಿ ಕೇಂದ್ರ ಪ್ರಾರಂಭ.

ಕೊಪ್ಪಳ ಡಿ. ೨೨ (ಕ ವಾ) ರಾಯಚೂರು-ಕೊಪ್ಪಳ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ದೂರು ಸ್ವೀಕೃತಿ ಕೇಂದ್ರವನ್ನು (೦೮೫೩೯-೨೨೦೮೫೪) ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ವಿಭಾಗದಲ್ಲಿ ಪ್ರಾರಂಭಿಸಲಾಗಿದೆ.
     ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ, ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಾರ್ಯಾಲಯದ ದೂರು ಸ್ವೀಕೃತಿ ಕೇಂದ್ರ ದೂರವಾಣಿ ಸಂ : ೦೮೫೩೯-೨೨೦೮೫೪ ಕ್ಕೆ ಕರೆ ಮಾಡಿ ದೂರನ್ನು ದಾಖಲಿಸಬಹುದಾಗಿದೆ.  ದೂರು ಸ್ವೀಕೃತಿ ಕೇಂದ್ರವು ದಿನದ ೨೪ ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ಈಗಾಗಲೆ ಪಾಳಿಯಂತೆ ಕರ್ತವ್ಯ ನಿರ್ವಹಣೆಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಚುನಾವಣೆ ಪೂರ್ವಾನುಮತಿ ಇಲ್ಲದೆ ರಜೆಯ ಮೇಲೆ ತೆರಳುವಂತಿಲ್ಲ.
ಕೊಪ್ಪಳ, ಡಿ.೨೨ (ಕ ವಾ)  ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಜೆಯ ಮೇಲೆ ತೆರಳದಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
     ಪ್ರಸಕ್ತ ವಿಧಾನಪರಿಷತ್ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳು ನಡೆಯಲಿವೆ.  ಚುನಾವಣೆಗಳನ್ನು ಸುಗಮ ಮತ್ತು ಯಶಸ್ವಿಯಾಗಿ ಜರುಗಿಸಬೇಕಾಗಿರುವುದರಿಂದ, ಜಿಲ್ಲೆಯ ಯಾವುದೇ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಜೆಯ ಮೇಲೆ ತೆರಳುವಂತಿಲ್ಲ. ಒಂದು ವೇಳೆ ಅನಿವಾರ್ಯ ಕಾರಣಗಳಿಂದ ಸಾರ್ವತ್ರಿಕ ರಜಾ ದಿನಗಳಲ್ಲಿ ಅಥವಾ ಇನ್ನಿತರ ಸಂದರ್ಭಗಳಲ್ಲಿ ಕೇಂದ್ರ ಸ್ಥಾನ ಬಿಡುವ ಪೂರ್ವದಲ್ಲಿ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಜಿಲ್ಲೆಯ ಎಲ್ಲ ತಹಸಿಲ್ದಾರರು ಹಾಗೂ ಸಂಬಂಧಪಟ್ಟ ಎಲ್ಲ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯ ಮಟ್ಟದ ದೊಣ್ಣೆವರಸೆ ಕ್ರೀಡಾಕೂಟ ಯಶಸ್ವಿ ಡಿಡಿಪಿಯು ಅಭಿನಂದನೆ
ಕೊಪ್ಪಳ ಡಿ. ೨೨ (ಕ ವಾ) ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ದೊಣ್ಣೆ ವರಸೆ ಪಂದ್ಯಾವಳಿಯನ್ನು ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಯಶಸ್ವಿಯಾಗಿ ಆಯೋಜಿಸಲು ಕಾರಣರಾದ ಎಲ್ಲರಿಗೂ ಕೊಪ್ಪಳ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಮೂರ್ತಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
     ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಿಲಂಬಮ್ (ದೊಣ್ಣೆ ವರಸೆ) ಪಂದ್ಯಾವಳಿಯನ್ನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ಹನಮಸಾಗರದಲ್ಲಿ ಆಯೋಜಿಸಲಾಯಿತು.  ಪಂದ್ಯಾವಳಿಯಲ್ಲಿ ಕೊಪ್ಪಳ ಜಿಲ್ಲೆಯ ೦೯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸಿಲಂಬಮ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ಸಂತಸದಾಯಕವಾಗಿದೆ.  ಜಿಲ್ಲೆಯಲ್ಲಿ ಪಂದ್ಯಾವಳಿಯನ್ನು ಅಭೂತಪೂರ್ವವಾಗಿ ಸಂಘಟಿಸಿದ್ದಕ್ಕಾಗಿ ಹನಮಸಾಗರದ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ರಾಜೇಂದ್ರ ಪಂತ್, ಸಿಲಂಬಮ್ ಆಟದ ರಾಜ್ಯ ಕಾರ್ಯಾಧ್ಯಕ್ಷ ಅಬ್ದುಲ್ ರಜಾಕ್ ಟೇಲರ್, ಕಾರ್ಯದರ್ಶಿ ಚಂದ್ರಶೇಖರ ಹಂಚಿನಾಳ, ರಾಜ್ಯ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಅಬ್ದುಲ್ ಕರೀಂ, ಅಲ್ಲದೆ ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಿಡಿಓ ಸೇರಿದಂತೆ ಎಲ್ಲ ಕ್ರೀಡಾ ಪ್ರೇಮಿಗಳಿಗೆ ಕೊಪ್ಪಳ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಮೂರ್ತಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
Please follow and like us:
error