ಕೊಪ್ಪಳ ಶ್ರೀಗವಿಮಠದ ಜಾತ್ರೆ ಜ್ಞಾನ ದಾಸೋಹದ ಯಾತ್ರೆ- ಬನ್ನಿ ತಡವೇಕೆ.

ಭಾರತ ದೇಶ ಧಾರ್ಮಿಕ ಶಕ್ತಿ ಕೇಂದ್ರ. ನಂಬಿಕೆ, ಆಚರಣೆ, ಸಂಪ್ರದಾಯಗಳಿಗೆ, ಇಲ್ಲಿ ವಿಶ್ವಮಾನ್ಯತೆಯಿದೆ. ಕರ್ನಾಟಕದ ಕೊಪ್ಪಳಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕವಾದ ಗಟ್ಟಿತನವಿದೆ. ಸಾಹಿತ್ಯ & ಆಚರಣೆಗಳ ಸತ್ವವಿದೆ. ಕೊಪ್ಪಳ ನಾಡಿನ ಆರಾಧ್ಯ ದೈವ, ಕರುಣಿಸುವ ಕೈಂಕರ್ಯ ಮೂರ್ತಿ ಕೊಪ್ಪಳದ   ಶ್ರೀ ಗವಿಮಠ ಶ್ರೀ ಗವಿಸಿದ್ಧೇಶ್ವರ ಭಕ್ತರ ಪಾಲಿನ ಆರಾಧನೆಯ ಕೇಂದ್ರವು ಹೌದು.
    ಶ್ರೀ ಗವಿಮಠದ ಜಾತ್ರೆಗೆ ಕರ್ನಾಟಕದಲ್ಲಿ ವಿಶೇಷ ಮಾನ್ಯತೆಯಿದೆ. ಜಾತ್ರೆಯೆಂದರೆ ಕೇವಲ ರಥ ಎಳೆದು ಕಾಯಿ, ನೈವೆದ್ಯಗೆ, ಮನೋರಂಜನೆಗೆ ಅಷ್ಟೇ ಸೀಮಿತವಲ್ಲ. ಅಲ್ಲಿ ಜ್ಞಾನವಿದೆ. ಮಾನವೀಯ ಕಳಕಳಿ ಇದೆ. ಸಮಾಜಮುಖಿ ಸ್ಫೂರ್ತಿಯಿದೆ. ಮನುಷ್ಯಕರಣದ ಒಲುವಿದೆ. ಜಾತ್ರೆಗೆ ಬಂದ ಭಕ್ತರಿಗೆ ಏನಾದರೂ ಕೊಡಬೇಕು ಎಂದು ಸದಾ ಚಿಂತನೆ ಮಾಡುತ್ತಿರುವ ಈಗಿನ ಪೀಠಾಧಿಪತಿಗಳ ಕಾರ್ಯಶೀಲತೆಯನ್ನು ಅಭಿನಂದಿಸಲೇಬೇಕು.
    ಕೊಪ್ಪಳ ಶ್ರೀ ಗವಿಮಠ ನಾಡಿನ ಜನರಿಗೆ ಸದಾ ಜಾಗೃತಿಯ ಸಂದೇಶವನ್ನು ನೀಡುತ್ತಲೇ ಇದೆ. ಇದಕ್ಕೆ ಸಾಕ್ಷಿ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಮಾನವೀಕರಣದ ಚಿಂತನೆಗಳು. ಜಾತ್ರೆಯ ಮೂಲಕ ತ್ರಿವಿಧ ದಾಸೋಹಗಳ ಸಂಗಮದ ಶಕ್ತಿಯನ್ನು ನಾಡಿಗೆ ತಿಳಿಸುತ್ತಲೇ ಮಾನವ ಜಗತ್ತಿಗೆ ಹೊಸ ಸಂದೇಶವನ್ನು ಸಾರುತ್ತಿದ್ದಾರೆ. ಮಹಾದಾಸೋಹವು ರಾಜ್ಯದಲ್ಲೇ ವಿಶಿಷ್ಟವಾಗಿದೆ. ರಾಜ್ಯ, ದೇಶ, ವಿದೇಶಗಳಿಂದ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
    ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿಯಾಗಿರುತ್ತಿರುವ ಕೊಪ್ಪಳದ ಶ್ರೀ ಗವಿಮಠದ ಜಾತ್ರಾ ಮಹೋತ್ಸವದಲ್ಲಿ ಮಾನವೀಕರಣದ ಸ್ಪಂದನೆಯನ್ನು ಕಾಣಬಹುದು. ಬಾಲ್ಯ ವಿವಾಹ ತಡೆ ಜಾಗೃತಿ ರ್‍ಯಾಲಿಯಿಂದ, ರಕ್ತದಾನ, ಉದ್ಯೋಗಮೇಳ, ಪ್ರತಿಭಾ ಸನ್ಮಾನ, ಕಾರ್ಯೋನ್ಮುಖತೆಗೆ ಗೌರವ, ಹಸಿದವರಿಗೆ ಅನ್ನ, ದಣಿದವರಿಗೆ ನೆರಳು, ಕೌಶಲ್ಯ ಒರೆ ಹಚ್ಚುವವರಿಗೆ ದಾರಿ ತೋರಿಸುತ್ತಿರುವುದು ನಿಜಕ್ಕೂ ದೇಶದ ಇತಿಹಾಸದಲ್ಲಿ ಪ್ರಥಮವೆನ್ನಬಹುದು. ಬನ್ನಿ ತಡವೇಕೆ ದಿನಾಂಕ ೨೬.೦೧.೨೦೧೬ ರಿಂದ ಜರುಗುವ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಜ್ಞಾನಯಾತ್ರೆಯನ್ನು ಮಾಡಿ.

Please follow and like us:
error