fbpx

ಕರ್ತವ್ಯ ನಿರ್ಲಕ್ಷ್ಯ : ಇಬ್ಬರು ಅಧಿಕಾರಿಗಳ ಅಮಾನತು

 ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಹಾಗೂ ಸಮರ್ಪಕ ದಾಖಲೆಗಳನ್ನು ನಿರ್ವಹಿಸದೆ ಹಣ ದುರುಪಯೋಗ ಮಾಡಿದ ಆರೋಪಕ್ಕಾಗಿ ಯಲಬುರ್ಗಾ ತಾಲೂಕಿನ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಆದೇಶ ಹೊರಡಿಸಿದ್ದಾರೆ.
  ಯಲಬುರ್ಗಾ ತಾಲೂಕಿನ ಪಂಚಾಯತಿ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಿರಿಯ ಅಭಿಯಂತರ ಪದ್ಮನಾಭ ಜೋಷಿ ಹಾಗೂ ಬಳೂಟಗಿ ಗ್ರಾಮ ಪಂಚಾಯತಿಯ ಪ್ರಭಾರಿ ಪಿಡಿಓ ಶ್ಯಾಮರಾವ್ ಮುಕ್ತೆದಾರ ಅವರೇ ಅಮಾನತಿಗೆ ಒಳಗಾದ ಅಧಿಕಾರಿಗಳು.
  ಕಳೆದ ಸಾಲಿನಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಿದ ೧೦ ಗ್ರಾಮ ಪಂಚಾಯತಿಗಳ ದಾಖಲೆಗಳನ್ನು ಪರಿಶೀಲಿಸಲು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಂಡವನ್ನು ರಚಿಸಿ, ಕಾರ್ಯಾಚರಣೆ ಮಾಡಿದ್ದರು.  ಈ ತಂಡ ಅಂತಹ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿತ್ತು.  ಈ ಪೈಕಿ ಬಳೂಟಗಿ ಗ್ರಾಮ ಪಂಚಾಯತಿಯಲ್ಲಿ ೮ ಲಕ್ಷ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ತಡೆಗೋಡೆ ನಿರ್ಮಾಣ, ೫ ಲಕ್ಷ ರೂ. ಮೊತ್ತದಲ್ಲಿ ಕಾಲೇಜು ಮೈದಾನ ಅಭಿವೃದ್ಧಿ, ೬ ಲಕ್ಷ ರೂ. ವೆಚ್ಚದಲ್ಲಿ ಚಿಕ್ಕೊಪ್ಪ ತಾಂಡಾದ ಶಾಲಾ ಕಾಂಪೌಂಡ್, ಹೊಸಹಳ್ಳಿ ಸರ್ಕಾರಿ ಶಾಲೆಗೆ ೩ ಲಕ್ಷ ರೂ. ವೆಚ್ಚದಲ್ಲಿ ರಕ್ಷಣಾ ಗೋಡೆ, ೩ ಲಕ್ಷ ರೂ. ವೆಚ್ಚದಲ್ಲಿ ರೈತರ ಒಕ್ಕಣೆ ಕಣ ನಿರ್ಮಾಣ ಸೇರಿದಂತೆ ಸುಮಾರು ೯ ಕಾಮಗಾರಿಗಳನ್ನು ನಡೆಸಿದ ಕುರಿತಂತೆ ಸಮರ್ಪಕವಾಗಿ ದಾಖಲೆಗಳನ್ನು ನಿರ್ವಹಿಸದೆ, ಕರ್ತವ್ಯ ನಿರ್ಲಕ್ಷ್ಯ ತೋರಿದ್ದು, ಸರ್ಕಾರಿ ಹಣ ದುರುಪಯೋಗ ಮಾಡಿದ ಆರೋಪಕ್ಕಾಗಿ ಯಲಬುರ್ಗಾ ತಾಲೂಕಿನ ಪಂಚಾಯತಿ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಿರಿಯ ಅಭಿಯಂತರ ಪದ್ಮನಾಭ ಜೋಷಿ  ಹಾಗೂ ಬಳೂಟಗಿ ಗ್ರಾಮ ಪಂಚಾಯತಿಯ ಪ್ರಭಾರಿ ಪಿಡಿಓ ಶ್ಯಾಮರಾವ್ ಮುಕ್ತೆದಾರ ಅವರನ್ನು ಮೇ. ೨೯ ರಿಂದ ಜಾರಿಗೆ ಬರುವಂತೆ, ಅಮಾನತುಗೊಳಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
Please follow and like us:
error

Leave a Reply

error: Content is protected !!