fbpx

ಇವರ ದೇಶನಿಷ್ಠೆ ಪ್ರಶ್ನಾತೀತವಲ್ಲ

ಪ್ರಧಾನಿ ನರೇಂದ್ರ ಮೋದಿ ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ. ಆದರೆ ಅವರು ಹೇಳಲಿ ಬಿಡಲಿ ಮುಸಲ್ಮಾನರ ದೇಶನಿಷ್ಠೆ ಪ್ರಶ್ನಾತೀತ. ಈ ದೇಶ ಕಟ್ಟಿದ ಸಮುದಾಯಕ್ಕೆ ಯಾರ ಸರ್ಟಿಫಿಕೇಟ್‌ನ ಅಗತ್ಯವೂ ಇಲ್ಲ. ಸ್ವಾತಂತ್ರ ಹೋರಾಟದಲ್ಲಿ ಬಲಿದಾನ ಮಾಡಿದವರಲ್ಲಿ ಮುಸ್ಲಿಮರ ಸಂಖ್ಯೆಯೇನೂ ಕಡಿಮೆ ಇಲ್ಲ. ನೇತಾಜಿ ಸುಭಾಸಚಂದ್ರ ಭೋಸ್, ಭಗತ್ ಸಿಂಗ್, ಗಾಂಧೀಜಿ ಇವರೆಲ್ಲರ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟವರು ಶಹಾನವಾಜ್ ಖಾನ್. ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್, ಅಶ್ಫಾಕುಲ್ಲಾ ಹೀಗೆ ಲಕ್ಷಾಂತರ ಜನರನ್ನು ಹೆಸರಿಸಬಹುದು.

ಆದರೆ ಪ್ರಶ್ನಾರ್ಥಕವಾಗಿರುವುದು ಆರೆಸ್ಸೆಸ್ ದೇಶನಿಷ್ಠೆ. ಸ್ವಾತಂತ್ರ ಹೋರಾಟದಲ್ಲಿ ಈ ಸಂಘಟನೆ ಎಲ್ಲಿತ್ತು? ಆಂದೋಲನದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ? ಗಾಂಧಿ ಉಪ್ಪಿನ ಸತ್ಯಾಗ್ರಹ ನಡೆಸಿದಾಗ, ಸುಭಾಸಚಂದ್ರ ಭೋಸ್ ಆಝಾದ್ ಹಿಂದ್ ಫೌಜ್ ಕಟ್ಟಿದಾಗ, ಶಹಿದ್ ಭಗತ್ ಸಿಂಗ್ ಗಲ್ಲಿಗೇರುವಾಗ ಈಗ ದೇಶಭಕ್ತಿಯ ಪಾಠ ಮಾಡುತ್ತಿರುವ ಸಂಘದ ಸ್ವಯಂ ಸೇವಕರು ಎಲ್ಲಿದ್ದರು? ಅವರೇಕೆ ಭಾಗವಹಿಸಲಿಲ್ಲ. ನಂತರ ಈ ದೇಶ ಅವರನ್ನು ಕಂಡಿದ್ದು ಬಿರ್ಲಾ ಭವನದಲ್ಲಿ ಗಾಂಧಿ ಎದೆಗೆ ಗುಂಡು ಬಿದ್ದಾಗ. ಬಾಬರಿ ಮಸೀದಿ ನೆಲ ಸಮಗೊಂಡಾಗ ಮಾತ್ರ. ‘‘ಮುಸಲ್ಮಾನರ ದೇಶನಿಷ್ಠೆ ಪ್ರಶ್ನಾತೀತ. ಅವರು ಭಾರತಕ್ಕಾಗಿ ಬದುಕುತ್ತಾರೆ, ಭಾರತಕ್ಕಾಗಿ ಸಾಯುತ್ತಾರೆ’’-ಪ್ರಧಾನಿ ನರೇಂದ್ರ ಮೋದಿ ಅವರು ಟಿವಿ ಸಂದರ್ಶನ ವೊಂದರಲ್ಲಿ ಹೇಳಿದ ಮಾತಿದು. ಮೋದಿ ಇಂಥ ಅಭಿಪ್ರಾಯ ವ್ಯಕ್ತಪಡಿಸಿರುವ ಬಗ್ಗೆ ಅನೇಕರಿಗೆ ಅಚ್ಚರಿ ಉಂಟಾಗಿರುವುದು ಸಹಜ. ಅಮೆರಿಕ ಪ್ರವಾಸದ ಹಿನ್ನೆಲೆಯಲ್ಲಿ ಪ್ರಧಾನಿಯಾಗಿ ಇಂಥ ಮಾತನ್ನು ಅವರು ಆಡಲೇಬೇಕಾಗಿತ್ತು. ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಕೂಡ ಇದೇ ರೀತಿಯ ಮಾತನ್ನು ಕೆಲ ಬಾರಿ ಆಡಿದ್ದಾರೆ. ಹಾಗೆಂದ ಮಾತ್ರಕ್ಕೆ ಇವರೆಲ್ಲ ಆರೆಸ್ಸೆಸ್ ಹಿಂದೂರಾಷ್ಟ್ರ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟರೆಂದು ತೀರ್ಮಾನಕ್ಕೆ ಬರಲು ಆಗುವುದಿಲ್ಲ. ಪ್ರಧಾನಿಯಾಗಿ ನರೇಂದ್ರ ಮೋದಿ ಇಂಥ ಹೇಳಿಕೆ ನೀಡುತ್ತಿರುವಾಗಲೇ ಅವರ ಪರಿವಾರದ ಇತರ ನಾಯಕರು ಶಾಂತಿ ನೆಮ್ಮದಿಗೆ ಕೊಳ್ಳಿ ಇಡುವ ಮಾತುಗಳನ್ನು ಆಡುತ್ತಿದ್ದಾರೆ. ಮುಸ್ಲಿಮರಿದ್ದಲ್ಲಿ ಕೋಮುಗಲಭೆಗಳು ನಡೆಯುತ್ತವೆ ಎಂದು ಬಿಜೆಪಿ ಸಂಸದ ಮಹಾಂತ್ ಅವೈದ್ಯನಾಥ್ ಉತ್ತರಪ್ರದೇಶದಲ್ಲಿ ಹೇಳಿದರು. ‘‘ಮದ್ರಸಗಳು ಭಯೋತ್ಪಾದಕರನ್ನು ಸೃಷ್ಟಿಸುವ ತಾಣಗಾಳಗಿವೆ’’ ಎಂದು ಇನ್ನೊಬ್ಬ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದರು. ನವರಾತ್ರಿ ಉತ್ಸವಗಳಲ್ಲಿ ಪಾಲ್ಗೊಳ್ಳಲು ಬರುವ ಮುಸ್ಲಿಂ ಯುವಕರು ಹಿಂದುತ್ವದಲ್ಲಿ ನಂಬಿಕೆ ಇರುವುದಾಗಿ ಪ್ರಮಾಣಪತ್ರ ಸಲ್ಲಿಸಬೇಕೆಂದು ಮಧ್ಯಪ್ರದೇಶದ ಇನ್ನೊಬ್ಬ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಹೇಳಿದ.
ಇನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ‘ಸಾಹಸ’ಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಈತ ಸೇಡು ತೀರಿಸಿಕೊಳ್ಳುವ ಭಾಷಣ ಮಾಡಿದ ನಂತರ ಮುಝಫ್ಫರ್‌ನಗರದಲ್ಲಿ ರಕ್ತಪಾತ ನಡೆಯಿತು. ಆ ಹಿಂಸಾಚಾರದಲ್ಲಿ ನಿರಾಶ್ರಿತರಾದವರು ಇಂದಿಗೂ ನಿರಾಶ್ರಿತರ ಶಿಬಿರಗಳಲ್ಲಿ ನರಳುತ್ತಿದ್ದಾರೆ. ಆದರೂ ‘ಅಹಿಂಸಾ ಪರಮೋಧರ್ಮ’ ಎಂದು ಹೇಳುವ ಧರ್ಮದಲ್ಲಿ ಜನಿಸಿದ ಈ ಶಾ ಈಗಲೂ ಕೋಮು ವಿಭಜನೆಯ ಸ್ಕೆಚ್ಚು ಹಾಕುತ್ತಲೇ ದೇಶವ್ಯಾಪಿ ಸಂಚರಿಸುತ್ತಿದ್ದಾರೆ. ಈ ರೀತಿ ವಿಭಿನ್ನ ಹೇಳಿಕೆಗಳನ್ನು ನೀಡಿರುವ ಬಿಜೆಪಿಯಲ್ಲಿ ಅದರಲ್ಲೂ ಮುಖ್ಯವಾಗಿ ಸಂಘಪರಿವಾರದವರಿದ್ದಾರೆ. ಇದರಲ್ಲಿ ಯಾರು ಅಧಿಕೃತ-ಯಾರು ಅನಧಿಕೃತ. ಮೋದಿ ಮುಸಲ್ಮಾನರ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳು ಹೃದಯಾಂತರಾಳದಿಂದ ಬಂದ ಮಾತುಗಳೇ ಅಲ್ಲ. ಇಲ್ಲಿ ಬರೀ ತುಟಿಯಿಂದೀಚೆಗೆ ಬಂದ ಮಾತುಗಳೇ ಆಗಿವೆ. ಇವರ ಇತಿಹಾಸ ನೋಡಿದರೆ ಈ ಮಾತುಗಳನ್ನು ನಂಬಲು ಸಾಧ್ಯವಾಗುವುದಿಲ್ಲ. ಆದರೆ ಜನರನ್ನು ನಂಬಿಸಲೆಂದೇ ಈ ರೀತಿ ಹೇಳುತ್ತಿರುವುದು ಇವರ ಕಾರ್ಯತಂತ್ರವಾಗಿರಬಹುದೇ?
ಮೋದಿ ಹೀಗೆ ಹೇಳುತ್ತಿರುವಾಗಲೇ ಉಜ್ಜಯನಿ ವಿಶ್ವವಿದ್ಯಾಲಯದ ಉಪಕುಲಪತಿ ಜೆ ಎಲ್ ಕೌಲ್ ಕಚೇರಿ ಮತ್ತು ಮನೆಯ ಮೇಲೆ ವಿಎಚ್‌ಪಿ ಪುಂಡರು ದಾಳಿ ಮಾಡಿ ಗ್ಲಾಸು ಹಾಗೂ ಕಂಪ್ಯೂಟರಗಳನ್ನು ಧ್ವಂಸಗೊಳಿಸಿದ್ದಾರೆ. ಈ ಕೌಲ್ ಮಾಡಿದ ಅಪರಾಧವೆಂದರೆ ಈ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಜಮ್ಮು ಕಾಶ್ಮೀರ ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿ ತೋರಿಸಿದ್ದು. ಕಾಶ್ಮೀರದಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿ ಜನ ಬೀದಿ ಪಾಲಾಗಿದ್ದಾರೆ. ಇಂಥ ಸನ್ನಿವೇಶದಲ್ಲಿ ಆ ರಾಜ್ಯದಿಂದ ವ್ಯಾಸಂಗಕ್ಕೆ ಬಂದಿರುವ ವಿದ್ಯಾರ್ಥಿಗಳು ತಂಗಿದ ಮನೆ ಮಾಲಕರು ಬಾಡಿಗೆಗಾಗಿ ಪೀಡಿಸಬಾರದು. ಈ ವಿದ್ಯಾರ್ಥಿಗಳು ತಮ್ಮ ತಾಯಿ-ತಂದೆ ಹಾಗೂ ಕುಟುಂಬದ ಸಂಪರ್ಕ ಕಡಿದುಕೊಂಡಿದ್ದಾರೆ ಎಂದು ಉಪಕುಲಪತಿ ಕೌಲ್ ಮಾನವೀಯ ಅನುಕಂಪದಿಂದ ಉಜ್ಜಯನಿಯ ಮನೆ ಮಾಲಕರಿಗೆ ಮನವಿ ಮಾಡಿಕೊಂಡಿದ್ದರು. ಇದೆ ಅಪರಾಧವಾಗಿ, ವಿಎಚ್‌ಪಿ ಈ ಗೂಂಡಾಗಿರಿ ನಡೆಸಿದೆ. ಈಗ ಕೌಲ್ ಪೊಲೀಸ್ ಭದ್ರತೆಯಲ್ಲಿ ತಮ್ಮ ಕಚೇರಿಗೆ ಬರುತ್ತಿದ್ದಾರೆ. ಹೀಗೆ ಮೋದಿ ಸಾಂತ್ವನದ ಮಾತುಗಳನ್ನು ಆಡುತ್ತಿರುವಾಗಲೇ ಅವರ ಪರಿವಾರದವರು ದೇಶದ ಎಲ್ಲೆಡೆ ಹಿಂಸೆಗೆ ಪ್ರಚೋದಿಸುತ್ತಿದ್ದಾರೆ. ಕರ್ನಾಟಕದಲ್ಲಿ ಶ್ರೀರಾಮಸೇನೆಯನ್ನು ನಿಷೇಧಿಸುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಹೇಳಿದರೆ, ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಿಂದೂ ಸಂಘಟನೆಯನ್ನು ನಿಷೇಧಿಸಿದರೆ ಎಚ್ಚರಿಕೆ. ಮೊದಲು ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಿ ಎಂದು ಹೇಳುತ್ತಾರೆ. ಗೋವಾದ ಬಿಜೆಪಿ ಸರಕಾರವೇ ಶ್ರೀರಾಮಸೇನೆಯನ್ನು ನಿಷೇಧಿಸಿದೆ ಯಲ್ಲವೇ? ಎಂದು ಪ್ರಶ್ನಿಸಿದರೆ ಕರಂದ್ಲಾಜೆ ನಿರುತ್ತರಾಗುತ್ತಾರೆ. ಮುಸಲ್ಮಾನರ ರಾಷ್ಟ್ರನಿಷ್ಠೆಯನ್ನು ಈ ದೇಶದ ನೂರು ಕೋಟಿ ಜನರಲ್ಲಿ ಯಾರೂ ಪ್ರಶ್ನಿಸಿಲ್ಲ. ಮೋದಿ ಅವರ ಸರ್ಟಿಫಿಕೇಟ್ ಮುಸ್ಲಿಮರಿಗೆ ಅಗತ್ಯವಿಲ್ಲ. ಮುಸಲ್ಮಾನರ ದೇಶನಿಷ್ಠೆಯನ್ನು ಯಾರಾದರೂ ಪ್ರಶ್ನಿಸಿದ್ದರೆ ಅದು ಆರೆಸ್ಸೆಸ್ ಮಾತ್ರ. ಆರೆಸ್ಸೆಸ್‌ನ ಸರಸಂಘ ಚಾಲಕ ಮೋಹನ ಭಾಗವತರಿಂದ ಹಿಡಿದು ಪ್ರವೀಣ್ ಭಾ ತೊಗಾಡಿಯಾ, ಪ್ರಮೋದ ಮುತಾಲಿಕ್‌ವರೆಗೆ ಪ್ರತಿನಿತ್ಯ ಈ ಸ್ವಯಂ ಸೇವಕರೆಲ್ಲ ಮುಸಲ್ಮಾನರ ವಿರುದ್ಧ ಅವಹೇಳನಕಾರಿ ಮಾತು ಗಳನ್ನು ಆಡಿ ಅವಮಾನಿಸುತ್ತಲೇ ಬಂದಿದ್ದಾರೆ. ಅದಕ್ಕಾಗಿ ಆರೆಸ್ಸೆಸ್‌ನ ನಿಷ್ಠೆ ಯಾರಿಗೆ ಎಂದು ಪ್ರಶ್ನಿಸಬೇಕಾಗಿದೆ. ನರೇಂದ್ರ ಮೋದಿ ನಿಜವಾಗಿ ಬದಲಾಗಿದ್ದರೆ ಹಿಂದೂ ರಾಷ್ಟ್ರ ಸಿದ್ಧಾಂತ ಪ್ರತಿಪಾದಿಸುವ ಆರೆಸ್ಸೆಸ್‌ನಿಂದ ಹೊರಗೆ ಬರಲಿ. ಮುಸ್ಲಿಮರ ದೇಶನಿಷ್ಠೆಯ ಬಗ್ಗೆ ಅವರಿಗೆ ನಂಬಿಕೆ ಇದ್ದರೆ ಪದೇ ಪದೇ ಪ್ರಚೋದನಕಾರಿ ಮಾತುಗಳನ್ನು ಆಡುತ್ತಿರುವ ಮಹಾಂತ ಅವೈದ್ಯನಾಥ, ಸಾಕ್ಷಿ ಮಹಾರಾಜ್, ಅಮಿತ್ ಶಾ ಇಂಥವರನ್ನೆಲ್ಲ ಪಕ್ಷದಿಂದ ಹೊರಗೆ ದಬ್ಬಲಿ. ಅದ್ಯಾವುದನ್ನು ಮಾಡದೇ ಅವರಿಗೆ ವಿಷಕಾರಲು ಬಿಟ್ಟು ತಾನು ಈ ರೀತಿ ಸಾಂತ್ವನದ ಮಾತು ಗಳನ್ನಾಡುವುದು ವಂಚನೆಯಲ್ಲದೇ ಬೇರೇನೂ ಅಲ್ಲ. ಇತ್ತೀಚಿನ 32 ಕ್ಷೇತ್ರಗಳ ವಿಧಾನಸಭಾ ಉಪಚುನಾವಣಾ ಫಲಿತಾಂಶದಿಂದ ದಿಗಿಲುಗೊಂಡಿರುವ ಮೋದಿ ಈ ಮಾತುಗಳನ್ನು ಆಡಿ ತಾನು ಅಮಿತ್ ಶಾ, ತೊಗಾಡಿಯಾ ಅವರಂತೆ ಅಲ್ಲ ಎಂದು ತೋರಿಸಿಕೊಳ್ಳಲು ಈ ರೀತಿ ಮಾತಾಡಿರ ಬಹುದು. ಆದರೆ ಆರೆಸ್ಸೆಸ್‌ನ ಎಂಟು ದಶಕಗಳ ಕರಾಳ ಚರಿತ್ರೆ ಗೊತ್ತಿರುವ ಯಾರೂ ಇವರನ್ನು ನಂಬುವುದಿಲ್ಲ.

courtesy : varthabharati

Please follow and like us:
error

Leave a Reply

error: Content is protected !!