ಆಹಾರದ ಕ್ರೌರ್ಯ ಹಸಿವಿನ ಹೊಟ್ಟೆಗೆ ತಟ್ಟದಿರಲಿ

 ಜ್ಯೋತಿ ಗುರುಪ್ರಸಾದ್
ಪ್ರೊಫೆಸರ್ ಪಟ್ಟಾಭಿರಾಮ ಸೋಮಯಾಜಿ ಯವರಿಗೆ ಸೆಗಣಿ ಎರಚಿರುವ ದುಷ್ಕೃತ್ಯ ಆ ವ್ಯಕ್ತಿಯ ಹಿಂದಿರುವ ದುರುಳ ಹತಾಶ ಮನಸ್ಥಿತಿಗೆ ಸಾಕ್ಷಿ. ಚಿಂತಕ, ಬರಹಗಾರ ಮತ್ತು ಪ್ರಾಧ್ಯಾಪಕ ಪಟ್ಟಾಭಿಯವರನ್ನು ಇದೆಲ್ಲಕ್ಕಿಂತ ಹೆಚ್ಚಾಗಿ ಹೇಳಬೇಕೆಂದರೆ ಮಾನವೀಯ ಪಟ್ಟಾಭಿಯವರನ್ನು ಅವರ ಮುಕ್ತ ಚಿಂತನೆಗಾಗಿ ಸಾರ್ವಜನಿಕವಾಗಿ ಸೆಗಣಿ ಬಳಿದು ಅವಮಾನಿ ಸುವುದೆಂದರೆ ಅದು ಮಾನವ ಹಕ್ಕನ್ನು ದಮನಿಸುವ ಹೇಯ ಕೃತ್ಯ. ವಿವೇಕವಿರುವ ಮನುಷ್ಯರೆಲ್ಲರೂ ಖಂಡಿಸಲೇಬೇಕಾದ ಈ ಕೃತ್ಯ ಪ್ರಜಾಪ್ರಭುತ್ವದ ಅವನತಿಯ ದಾರಿಯ ಅಶುಭ ಸೂಚಕ. ನಾನಿಲ್ಲಿ ಚರ್ಚಾ ಸ್ಪರ್ಧೆಗೆ ಇರಿಸಿರುವ ವಿಷಯದ ಪರ-ವಿರೋಧ ಮಾತನಾಡುವ ಭಾಷಣ ಸ್ಪರ್ಧಿಯಾಗಿ ಈ ಮಾತುಗಳನ್ನು ದಾಖಲಿಸುತ್ತಿಲ್ಲ. ಪಾಯಿಂಟ್ಸ್ ಜಾಸ್ತಿ ಬಂದು ನನಗೇ ಬಹುಮಾನ ಸಿಗಲಿ ಎಂಬ ಕೀರ್ತಿಯ ಆಕಾಂಕ್ಷೆ ಇದಲ್ಲ. ಆದರೆ ಇದನ್ನು ಹೇಳದೆ ಹೋದರೆ ಸತ್ಯಕ್ಕೆ ಅಪಚಾರ ಮಾಡಿದ ಹಾಗೆ ಎಂಬ ಮಾನವೀಯ ಸ್ಪಂದನದ ದೃಢ ನಂಬಿಕೆ ಮಾತ್ರ ಈ ಪ್ರಕರಣದ ಹಿಂದಿರುವ ಮನುಷ್ಯ ವಿರೋಧಿ ನಡವಳಿಕೆಯನ್ನು ಶೋಧಿಸಲು ಹೊರಟಿದೆ.
ಅರ್ಥ ಮಾಡ್ಕೊಂಡು ಆಡೋ ಮಾತು ಗಂಗೆ
ಅರ್ಥಮಾಡ್ಕೊಳ್ಳದೆ ಆಡೋ ಮಾತು ಚಂದ್ರನ ಮುಖಕ್ಕೆ ಉಗಿದಂಗೆ
ಎಂಬ ಜಿ.ಪಿ.ರಾಜರತ್ನಂರವರ ಕವಿ ಸಾಲನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ತುಂಬ ಸೂಕ್ತವೆನಿಸುತ್ತದೆ. ಅರಿವಿನ ವಿಚಾರದಿಂದ ಅಂತ ರಾಳದಿಂದ ಹೊಮ್ಮಿ ಬರುವ ಮಾತು-ಕೃತ್ರಿಮ ವಿಲ್ಲದೆ ಆಡುವ ಮಾತು ಪವಿತ್ರ ಜಲದಂತೆ ನಿರ್ಮಲವಾಗಿರುತ್ತದೆ.
ಆದರೆ ಅರಿವೇ ಇಲ್ಲದೆ ಆಡುವ ನಕಾರಾತ್ಮಕ ಮನೋಭಾವದಿಂದ ರೊಚ್ಚಿಗೆದ್ದು ಆಡುವ ಮಾತು ಆಕಾಶದಲ್ಲಿರುವ ಚಂದ್ರನಿಗೆ ಉಗಿಯುವಷ್ಟೇ ಅರ್ಥಹೀನವಾಗಿ ತನಗೆ ತಾನೇ ಅವಹೇಳನ ಮಾಡಿಕೊಳ್ಳುವಂತೆ ಅವಮಾನಕರವಾಗಿರುತ್ತದೆ. ಏಕೆಂದರೆ ಚಂದ್ರ ನಿಗೆ ಉಗಿಯುವ ಉಗುಳು ಉಗಿಯುವವರ ಮುಖಕ್ಕೆ ಹಿಂದಿರುಗಿ ಬಂದು ಬೀಳುತ್ತದೆಯೇ ವಿನಃ ಚಂದ್ರನನ್ನು ಮಲಿನಗೊಳಿಸುವುದಿಲ್ಲ. ಪಟ್ಟಾಭಿಯವರು ಗೋ ಹತ್ಯೆ ನಿಷೇಧ ಕಾನೂ ನನ್ನು ಪ್ರತಿಭಟಿಸಿ ಆಡಿರುವ ಮಾನವೀಯ ಹಕ್ಕಿನ ಮಾತುಗಳನ್ನು ಸರಿಯಾದ ವಿವೇಚನೆ ಯಿಂದ ಅರಿಯದೆ ತಮ್ಮ ಮಿತಿಮೀರಿ ಸೌಜ ನ್ಯದ ಗಡಿದಾಟಿ ಅವರಿಗೆ ಸೆಗಣಿ ಎರಚಿ ಹಲ್ಲೆ ನಡೆಸುವುದರ ಮೂಲಕ ತಾವು ಧರ್ಮರಕ್ಷಕ ರೆಂದು ಸಮರ್ಥಿಸಿಕೊಳ್ಳುವ ಪರಿವಾರದವರ ಮಾತು ಚಂದ್ರನ ಮುಖಕ್ಕೆ ಉಗಿಯುವಷ್ಟೇ ಅಪಾಯಕಾರಿ ಮತ್ತು ಅವಮಾನಕಾರಿಯಾದುದು.
ಇದೇ ಪರಿವಾರದವರು ಹೀಗೆ ಮನು ಷ್ಯತ್ವವೇ ಇಲ್ಲದೆ ನಡೆದುಕೊಳ್ಳುವ ಬದಲು ಪಟ್ಟಾಭಿಯವರ ಅಭಿಪ್ರಾಯ ಭೇದವನ್ನು ಚರ್ಚೆಗಿರಿಸಿ ಸಂಯಮದಲ್ಲಿ ಪ್ರಶ್ನಿಸಿ ಮುಖಾ ಮುಖಿಯಾಗಿ ಸತ್ಯವನ್ನು ಒರೆಗೆ ಹಚ್ಚಬಹು ದಿತ್ತು. ಮನುಷ್ಯತ್ವವನ್ನೇ ಅವಮಾನಿಸುವವರು ಧರ್ಮವನ್ನಾಗಲೀ ಜೀವ ಜಗತ್ತನ್ನಾಗಲೀ ರಕ್ಷಿಸು ತ್ತಾರೆಯೇ? ನನ್ನ ಮಗ ಖುಷಿಯಿಂದ ಹಾಡುತ್ತಿದ್ದ ಹಾಡೊಂದು ನೆನಪಾಗುತ್ತಿದೆ
ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ
ಗುಣವಿರುವ ಮನುಜರೆಲ್ಲ ಮಕ್ಕಳಂತೆ
ಮಕ್ಕಳಿಗೂ ದೇವರಿಗೂ ಭೇದವಿಲ್ಲ
ಇಬ್ಬರ ಮನದಲು ಕಪಟವಿಲ್ಲ
ಒಂದೇ ಗಿಡದಿ ಹೂವು ಮುಳ್ಳು ಹುಟ್ಟುವಂತೆ
ಒಂದೇ ಮನದಿ ಎರಡು ಗುಣವು ಬೆಳೆವು ದಂತೆ
ಮುಳ್ಳಿನ ಗುಣ ಸೇರದಂತೆ
ಜೋಕೆಯಾಗಿ ಇರಬೇಕು ಜಾರದಂತೆ…
ಗುಲಾಬಿ ಗಿಡದಲ್ಲಾದರೂ ಹೂವನ್ನು ಕಾಯುವ ಕಾವಲುಗಾರನೋ ಎಂಬಂತೆ ಮುಳ್ಳಿನ ಪಾತ್ರವಿರುತ್ತದೆ. ಈ ಮುಳ್ಳಿನ ಪಾತ್ರ ವನ್ನು ಇಂದಿನ ಯುವಕರು ಪ್ರಜಾಪ್ರಭುತ್ವವೆಂಬ ಹೂವಿನ ಸೊಗಸನ್ನು ಉಳಿಸಿ ಪರಿಸರವನ್ನು ಕಾಪಾಡಲು ವಹಿಸಬೇಕು ಎಂದರೆ ಮಾನವ ಹಕ್ಕನ್ನು ದಮನಗೊಳಿಸುವ ಹಲ್ಲೆ ನಡೆಸದೆ ಇರುವ ಸಂಗತಿಯನ್ನು ಕುರಿತು ತಾಳ್ಮೆ-ತಲ್ಲೀನತೆ -ವಿವೇಕದಿಂದ ವರ್ತಿಸಬೇಕಾದುದು ಪ್ರತಿಯೊಬ್ಬ ಪ್ರಜೆಯ ಬಾಧ್ಯತೆ. 
ಆದರೆ ‘ಭಾರತೀಯತೆ’ಯ ಬ್ರಾಂಡ್ ಹೆಸರನ್ನು ಮಾತ್ರ ಹಣೆಗೆ ಅಂಟಿಸಿಕೊಂಡು ಭಾರತದ ನೆಲದ ‘ಓಂ ಶಾಂತಿ’ ಗುಣವನ್ನೇ ಮರೆತರೆ ಅದು ಸ್ವಂತಕ್ಕೆ ಮಾಡಿಕೊಳ್ಳುವ ಅವಮಾನ ಮತ್ತು ಮತಿಹೀನತೆಗೆ ಸಾಕ್ಷಿ. ಇಂಥ ರೊಚ್ಚಿನ ಕ್ರೌರ್ಯ ಮರುಕಳಿಸಕೂಡದು ಎಂಬುದಷ್ಟೇ ನನ್ನಂಥ ಬಹು ಸಂಖ್ಯಾತ ಪ್ರಜಾಪ್ರಭುತ್ವವಾದಿಗಳ ಹಂಬಲ.‘ಗೋ ಹತ್ಯೆ ನಿಷೇಧ’ದ ಕಾನೂನು ಜಾರಿಗೆ ಬಂದರೆ ಅದು ಹೇಗೆ ಮನುಷ್ಯನ ಮಿಶ್ರ ಆಹಾರ ಪದ್ಧತಿಗೆ-ವಾಸ್ತವದ ಸಾಮಾಜಿಕ ಪರಿಸ್ಥಿತಿಗೆ ಮಾರಕವಾಗುತ್ತದೆ ಎಂಬ ಕನಿಷ್ಠ ವಿವೇಕ-ಚಿಂತನೆಯೂ ಇಲ್ಲದೆ ಮೂಢವಾಗಿ ವರ್ತಿಸುವ ಮನಸ್ಸುಗಳಿಂದ ದೇಶಪ್ರೇಮಕ್ಕಿಂತ ದೇಶ ಒಡೆಯುವ ವಿರೋಧಿ ಚಟುವಟಿಕೆಗಳೇ ಹೆಚ್ಚು ಸಂಭವಿಸುತ್ತದೆಂದು ಈಗಾಗಲೇ ನಡೆದಿ ರುವ ಇಂಥ ಅನೇಕ ಐತಿಹಾಸಿಕ ಘಟನೆಗಳು ಸಾರಿ ಸಾರಿ ಹೇಳುತ್ತಿವೆ.
‘ಸಂಘ ಪರಿವಾರ’ ವೆಂದರೆ ಯಾಕೆ ಇಡೀ ದೇಶದ ಸೌಹಾರ್ದತೆ ಉಳಿಸುವ ಜವಾಬ್ದಾರಿಯುತ ಪರಿವಾರವಾಗ ಬಾರದು? ಇಂಥ ವಿಶಾಲ ಮನಸ್ಥಿತಿಯಲ್ಲಿ ಮಾತ್ರ ಹನುಮಂತನ ಆ ಸಮಗ್ರ ಆಂತರ್ಯದ ಶಕ್ತಿ ಕಾಣಿಸುತ್ತದೆ ಮತ್ತು ಮಾನವೀಯತೆಯನ್ನು ಎತ್ತರಕ್ಕೆ ಏರಿಸುವುದೇ ದೈವಿಕ ಶಕ್ತಿ ಎಂಬ ಜ್ಞಾನೋದಯವಾಗುತ್ತದೆ. ಇಂಥ ಸಂದರ್ಭ ದಲ್ಲಿಯೇ ಗೌತಮ ಬುದ್ಧನ ಸಂಘ ಹುಟ್ಟಿ ಕೊಂಡಿದ್ದು: ‘ಬುದ್ಧಂ ಶರಣಂ ಗಚ್ಛಾಮಿ; ಸಂಘಂ ಶರಣಂ ಗಚ್ಛಾಮಿ’ ಎನ್ನುವ ಭಿಕ್ಷು ಮಂತ್ರ ಜ್ಞಾನ ಭಿಕ್ಷೆಯ ಮಂತ್ರವಾಗಿದ್ದು, ಈ ಮಂತ್ರ ಬಲ್ಲವರಿಗೆ ಮನುಷ್ಯರಲ್ಲಿ ಇರಬೇಕಾದ ಸಮಾನತೆಯ ಅರಿ ವಿರುತ್ತದೆ. ಮನುಷ್ಯನ ಪ್ರಾಣ ಉಳಿಸಬೇಕಾದ ಉಳಿವಿನ ಹೊರಾಟದಲ್ಲಿ ಅವರವರಿಗೆ ದಕ್ಕುವ ಆಹಾರ ಮೂಲದ ಸಾಧ್ಯತೆಯ ಹಾಗೂ ಅವರ ವರಲ್ಲಿ ಬೆಳೆದು ಬಂದ ಆಹಾರ ಕ್ರಮದ ಸಾಂಸ್ಕೃತಿಕ ತಳಹದಿಯ ವಿವೇಚನೆಯ ಅರಿವಿರುತ್ತದೆ.
ನನ್ನ ಮಗ ಪೂರ್ಣಪ್ರಜ್ಞ ಅವನು 5 ವರ್ಷಗಳವನಿರುವಾಗಲೇ 15 ವರ್ಷಗಳ ಹಿಂದೆ ನಾವು ಸಸ್ಯಾಹಾರಿಯಾಗಿದ್ದರೂ ತನ್ನಲ್ಲಿ ಮಿಂಚಿದ ಸರಳತೆಯಿಂದ ಬರೆದ ಸಾಲುಗಳು.
ಆಹಾರದ ಬಗ್ಗೆ
ಸಸ್ಯಾಹಾರಿಗಳಿಗೆ ಸಸ್ಯಾಹಾರ ಒಳ್ಳೆಯದು
ಆದರೆ ಮಾಂಸಹಾರಿಗಳಿಗೆ
ಅದೇ ಒಳ್ಳೆಯದು.
ಈ ಸಾಲುಗಳಲ್ಲಿ ಮಿಂಚಿರುವ ಮಾನವತೆ ಮಾತ್ರ ನನ್ನನ್ನು ಆವರಿಸಿ ಅಚ್ಚರಿಗೊಳಿಸುತ್ತದೆ. ಸಸ್ಯಾಹಾರವೆಂದರೆ ವಿವಿಧ ತರಕಾರಿಗಳಾದರೆ, ಮಾಂಸಾಹಾರವೆಂದರೆ ವಿವಿಧ ಪ್ರಾಣಿಗಳು, ಮನುಷ್ಯ ಕಾಡು ಮನುಷ್ಯನಾಗಿದ್ದ ಕಾಲದಿಂದಲೂ- ವೇದ ಪುರಾಣ ಕಾಲದಿಂದಲೂ ತನಗೆ ತನ್ನ ಶರೀರ ಪ್ರಕೃತಿಗೆ ಅನುಕೂಲವಾದಂಥ ಪ್ರಾಣಿಗಳ ಮಾಂಸವನ್ನೂ ತಿಂದುಕೊಂಡು ಬದುಕುತ್ತಿರುವುದು ಹಸುವಿನ ಜೀವದಂತೆಯೇ ಮೀನು, ಕೋಳಿ, ಕುರಿ, ಹಂದಿ, ಜಿಂಕೆ ಇತ್ಯಾದಿ.. ಇತ್ಯಾದಿ. ಅಲ್ಲವೇ? ಎಲ್ಲ ಪ್ರಾಣಿಗಳ ರಕ್ಷಣೆಯೂ ಆಗಬೇಕು. ಎಲ್ಲ ಮನುಷ್ಯರ ರಕ್ಷಣೆಯೂ ಆಗಬೇಕು. ಪರಿಸರದ ರಕ್ಷಣೆಯಾಗಬೇಕು. ಪ್ರಜಾಪ್ರಭುತ್ವದ ರಕ್ಷಣೆಯಾಗಬೇಕು. ಅಲ್ಲವೇ?
ಐಷಾರಾಮೀ ಪರಿಸರದಲ್ಲಿ ಕುಳಿತು ತನಗೆ ಬೇಕಾದ ಆಹಾರವೆಲ್ಲಾ ಸಿಕ್ಕಿದ ಮನುಷ್ಯನೊಬ್ಬ ತಿಂದು ತೇಗಿ ‘ಗೋ ಹತ್ಯೆ ನಿಷೇಧ’ ಕಾನೂನು ಬರಲಿ ಎಂದು ಅಬ್ಬರಿಸುವುದು ಸುಲಭ. ಆದರೆ ಸಿಕ್ಕಿದ ಆಹಾರವನ್ನು ತಿಂದುಕೊಂಡು ಪ್ರತಿದಿನದ ಬದುಕನ್ನು ಅದು ಬಂದಂತೆಯೇ ಸ್ವೀಕರಿಸುತ್ತ ಹೋರಾಡುತ್ತ ಸಾಗುವ ಶ್ರಮಜೀವಿಯೊಬ್ಬನಿಗೆ ಬೇರೆ ಯಾವ ಆಹಾರವೂ ಸಿಗದೆ ಹೊಟ್ಟೆಯ ಹಸಿವೇ ರಾಕ್ಷಸನಾಗಿ ಕಾಡುವಾಗ ದನವೊಂದು ಸತ್ತರೆ ಅದರ ಮಾಂಸವನ್ನು ತಾನು ತಿಂದು ಬದುಕುಳಿಯಬಹುದಲ್ಲಾ ಎಂಬ ಆಹಾರ ಸರಣಿಯ ಕೊನೆಯಾಸೆ ಉದಯಿಸುತ್ತದೆ.
ಆದರೆ ಸತ್ತ ದನವನ್ನೂ ಕೊಡಲೂ ಒಪ್ಪದ ದನವನ್ನು ದೇವರೆಂದು ಪೂಜಿಸುವ ಜನಾಂಗ ಮನುಷ್ಯ ಹಸಿವಿನಿಂದ ಸತ್ತರೂ ಪರ್ವಾಗಿಲ್ಲ ದೇವರ ಪೂಜೆ ನಡೆಯಲಿ ಎಂದು ವಾದಿಸಿದರೆ ಅದು ಬರೀ ಶುಷ್ಕ ‘ವಾದ’ ಮಾತ್ರವಾಗುತ್ತದೆ. ಪ್ರಜಾಪ್ರಭುತ್ವದ ಮನುಷ್ಯ ಆಹಾರ ಸರಪಳಿಯ ಜ್ಞಾನವನ್ನು ಮುಖ್ಯವಾಗಿ ಹೊಂದಬೇಕು.ಗೋವುಗಳಿಗೆ ಕೊನೆಗಾಲದಲ್ಲೂ ಆಹಾರ ಪೂರೈಸುತ್ತಾ ಗೋ ಶಾಲೆಗಳನ್ನು ನಿರ್ಮಿಸುವ ಸಾಧ್ಯತೆಯಿರುವವರು,ಎಲ್ಲ ವರ್ಗದ ಜನಕ್ಕೂ ಆಹಾರ ಪೂರೈಕೆಯಾಗುವಂಥ ಹಸಿರು ಪರಿಸರವನ್ನು ನಿರ್ಮಾಣ ಮಾಡುವವರು, ದಲಿತ-ಬ್ರಾಹ್ಮಣ ಎಂಬ ಭೇದವಿಲ್ಲದಂತೆ ಸಮಾನ ಆಹಾರವನ್ನು ಒಬ್ಬರಿಗೊಬ್ಬರಿಗೆ ಹಂಚಿ ತಿನ್ನುವ ಸೌಹಾರ್ದ ಮನಸ್ಸಿರುವವರು ಈ ದೇಶದಲ್ಲಿ ತುಂಬಿ ತುಳುಕಿದರೆ ಬರೀ ಗೋಹತ್ಯೆ ಮಾತ್ರವಲ್ಲ ಮಾನವ ಹತ್ಯೆ ಕೂಡ ನಿಲ್ಲುತ್ತದೆ. ಶ್ರಮಿಕನೊಬ್ಬನ ಮಾನ ಪ್ರಾಣ ಉಳಿಯುತ್ತದೆ.
ಇಲ್ಲದಿದ್ದರೆ ‘ಗೋ ಹತ್ಯೆ ನಿಷೇಧ ಕಾನೂನು’ ಕೇವಲ ಒಂದು ಅಂಧ ಕಾನೂನು ಮಾತ್ರವಾಗಿ ಮಾನವ ಹತ್ಯೆಯನ್ನು ಪೋಷಿಸುವ ಕ್ರೌರ್ಯಕ್ಕೆ ದೊರೆಯುವ ಪರವಾನಿಗೆ ಮಾತ್ರವಾಗುತ್ತದೆ ಎಂಬ ದುರಂತದ ಸತ್ಯ ನಮಗೆ ಮರೆತು ಹೋಗದಿರಲಿ.
‘ಇಲ್ಲೇ ಸ್ವರ್ಗ ಇಲ್ಲೇ ನರಕ’
ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು
ಬಿಸಿಲಿಗೆ ಕರಗೋ ಮಂಜೇನಲ್ಲ
ಕಷ್ಟನಷ್ಟ ಎಲ್ಲ
ಎದುರಿಸಬೇಕು ಧೈರ್ಯದಿಂದ
ಬೇರೆ ದಾರಿ ಇಲ್ಲ
ಬೆಟ್ಟ ಕೊರೆದು ದಾರಿ ಮಾಡಿ
ನೀರು ನುಗ್ಗೋ ಹಾಗೆ
 ಮುಂದೆ ನುಗ್ಗಿ ಹೋದ್ರೆ ತಾನೇ
ದಾರಿ ಕಾಣೋದ ನಮ್ಗೆ.
Please follow and like us:
error