ಶೋಷಿತ ಗ್ರಾಹಕರು ಪರಿಹಾರ ಪಡೆಯಲು ಮುಂದಾಗಿ- ರವಿರಾಜ ಕುಲಕರ್ಣಿ.

ಕೊಪ್ಪಳ ಡಿ. ೨೩ (ಕ.ವಾ) ದಿನನಿತ್ಯದ ವ್ಯವಹಾರಗಳಲ್ಲಿ ವಂಚನೆಗೆ ಹಾಗೂ ಶೋಷಣೆಗೆ ಒಳಗಾಗುವ ಗ್ರಾಹಕರು, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿ, ಪರಿಹಾರ ಪಡೆಯಲು ಮುಂದಾಗಬೇಕು ಎಂದು ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯ ರವಿರಾಜ ಕುಲಕರ್ಣಿ ಅವರು ಕರೆ ನೀಡಿದರು.
     ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರುಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಗ್ರಾಹಕರ ಹಿತರಕ್ಷಣೆಗಾಗಿ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿ ೩೦ ವರ್ಷಗಳೇ ಆಗಿದ್ದರೂ, ಕಾಯ್ದೆಯನ್ನು ಸಮರ್ಪಕವಾಗಿ ಬಳಕೆ ಮಾಡುವುದರಲ್ಲಿ ದೇಶದ ಗ್ರಾಹಕರು ಹಿಂದುಳಿದಿದ್ದಾರೆ.  ಗ್ರಾಹಕರ ಹಿತರಕ್ಷಣಾ ಕಾಯ್ದೆ ಕುರಿತು ನಾನಾ ಮಾಧ್ಯಮಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರ ವೇದಿಕೆಗೆ ಶೋಷಿತ ಗ್ರಾಹಕರಿಂದ ದೂರುಗಳು ದಾಖಲಾಗುತ್ತಿಲ್ಲ. ಮೋಸ, ವಂಚನೆಗಳಿಗೆ ಒಳಗಾಗುತ್ತಿರುವ ಗ್ರಾಹಕರು ಹೊಂದಾಣಿಕೆಯ ಸ್ವಭಾವನ್ನು ಮೈಗೂಡಿಸಿಕೊಂಡಿರುವುದರಿಂದ, ಗ್ರಾಹಕರ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ.  ಕೃಷಿ, ವೈದ್ಯಕೀಯ, ಸಾರಿಗೆ, ಬ್ಯಾಂಕಿಂಗ್ ಹೀಗೆ ದಿನನಿತ್ಯದ ಜನಸಾಮಾನ್ಯರ ಎಲ್ಲ ವ್ಯವಹಾರಗಳೂ ಕಾಯ್ದೆಯ ವ್ಯಾಪ್ತಿಯೊಳಗೆ ಬರುತ್ತವೆ.  ಹೀಗಿದ್ದರೂ, ಸಾರ್ವಜನಿಕರಿಂದ ಕಾಯ್ದೆಯ ಸದುಪಯೋಗ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದು ವಿಷಾದದ ಸಂಗತಿಯಾಗಿದೆ.  ಈ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಈಗಾಗಲೆ ತಿದ್ದುಪಡಿಯ ಕರಡು ಸಿದ್ಧವಾಗಿದೆ.  ಶೀಘ್ರದಲ್ಲೇ ಈ ಕಾಯ್ದೆಗೆ ತಿದ್ದುಪಡಿಯಾಗುವ ಎಲ್ಲ ಸಾಧ್ಯತೆಗಳಿವೆ.  ಹೊಸ ಕಾಯ್ದೆಯಲ್ಲಿ ಇನ್ನಷ್ಟು ವ್ಯವಹಾರಿಕ ಕ್ಷೇತ್ರಗಳು ಗ್ರಾಹಕ ರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಸೇರಲಿವೆ.  ಅನ್ಯಾಯಕ್ಕೆ ಒಳಗಾದವರು ಜಿಲ್ಲಾ ಮಟ್ಟದಲ್ಲಿರುವ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗಳಿಗೆ ಮನವಿಯನ್ನು ಸಲ್ಲಿಸಿ, ಸೇವಾ ನ್ಯೂನತೆಗೆ ಪರಿಹಾರ, ಖರೀದಿ ವಸ್ತುಗಳ ಬದಲಾವಣೆ, ನಷ್ಟ ಪರಿಹಾರ ಸೇರಿದಂತೆ ನ್ಯಾಯ ಪಡೆಯಲು ಸಾಧ್ಯವಿದೆ.  ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸುವ ವಿಧಾನವನ್ನು ಅತ್ಯಂತ ಸರಳೀಕರಣ ಮಾಡಲಾಗಿದ್ದು, ಮೂರು ತಿಂಗಳೊಳಗಾಗಿ ನ್ಯಾಯ ದೊರಕಿಸಲಾಗುತ್ತಿದೆ.  ಇನ್ನಾದರೂ ಸಾರ್ವಜನಿಕರು ಶೋಷಣೆಗೆ ಪ್ರತಿರೋಧ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಗ್ರಾಹಕರ ವೇದಿಕೆ ಸದಸ್ಯ ರವಿರಾಜ ಕುಲಕರ್ಣಿ ನುಡಿದರು.
     ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಹಾಯಕ ಆಯುಕ್ತ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಅವರು ಮಾತನಾಡಿ, ದೈನಂದಿನ ಜೀವನದಲ್ಲಿ ಎಲ್ಲರೂ ಗ್ರಾಹಕರೇ ಆಗಿದ್ದು, ಆಹಾರ ಪದಾರ್ಥ, ನಿತ್ಯ ಬಳಕೆಯ ಸಾಮಗ್ರಿಗಳು ಸೇರಿದಂತೆ ಎಲ್ಲದರಲ್ಲೂ ಕಲಬೆರಕೆ, ನಕಲಿ ವಸ್ತುಗಳ ಹಾವಳಿ ಸಮಾಜದಲ್ಲಿ ಹೆಚ್ಚಾಗಿದೆ.  ವಿದ್ಯಾರ್ಥಿಗಳು ಗ್ರಾಹಕರ ಹಿತರಕ್ಷಣೆಗಾಗಿ ಜಾರಿಯಲ್ಲಿರುವ ಕಾಯ್ದೆಯ ಬಗ್ಗೆ ಅರಿವು ಹೊಂದಿದಲ್ಲಿ, ಮಾರಾಟಗಾರರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.
     ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ್ ಅವರು ಮಾತನಾಡಿ, ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ದರ ಪಡೆಯದೆ, ಮೋಸಕ್ಕೆ ಒಳಗಾಗುತ್ತಿದ್ದಾರೆ.  ಕಷ್ಟ ಪಡುವವನು ರೈತನಾದರೆ, ಮಧ್ಯವರ್ತಿಗಳು ಲಾಭ ಗಳಿಸುತ್ತಿದ್ದಾರೆ.  ಅನ್ನದಾತನಿಗೆ ನ್ಯಾಯ ದೊರಕಿಸುವಂತೆ ಕಾಯ್ದೆಗಳು ರೂಪುಗೊಳ್ಳಬೇಕು ಎಂದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ. ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.  ಕಾರ್ಯಕ್ರಮದ ಅಂಗವಾಗಿ ರಾಘವೇಂದ್ರ ಕುಲಕರ್ಣಿ ಮತ್ತು ನ್ಯಾಯವಾದಿ ಸಾವಿತ್ರಿ ಮುಜುಂದಾರ್ ಅವರು ವಿಶೇಷ ಉಪನ್ಯಾಸ ನೀಡಿದರು. 
     ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯೆ ಸುಜಾತಾ ಅಕ್ಕಸಾಲಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಅಮೃತಾ ಚೌಹಾಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ, ಶಿವಾನಂದ ಹೊದ್ಲೂರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಲಕ್ಷ್ಮಿ ಕೆಸರಹಟ್ಟಿ ನಿರೂಪಿಸಿದರು.

Please follow and like us:
error