ವಿಧಾನಪರಿಷತ್ ಚುನಾವಣೆ : ಹೆಲ್ಪ್-ಡೆಸ್ಕ್

  ಕರ್ನಾಟಕ ವಿಧಾನಪರಿಷತ್ತಿಗೆ ಈಶಾನ್ಯ ಪದವೀಧರರ ಮತಕ್ಷೇತ್ರದಿಂದ ನಡೆಯುವ ಚುನಾವಣೆ ಅಂಗವಾಗಿ ಜೂ. ೧೦ ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಜಿಲ್ಲೆಯ ೨೨ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ಮತದಾನದ ಹಿಂದಿನ ದಿನ ಮತ್ತು ಮತದಾನದ ದಿನದಂದು ಪ್ರತಿ ಮತಗಟ್ಟೆಯ ಹೊರಗಡೆ ಮತದಾರರ ಅನುಕೂಲಕ್ಕಾಗಿ ಹೆಲ್ಪ್-ಡೆಸ್ಕ್ ಸ್ಥಾಪಿಸಲಾಗಿದ್ದು, ಮತದಾರರು ಹೆಲ್ಪ್-ಡೆಸ್ಕ್‌ನ ಉಪಯೋಗ ಪಡೆದುಕೊಳ್ಳಬಹುದಾಗಿದೆ.
  ಕಳೆದ ೨೦೦೬ ರಲ್ಲಿ ನಡೆದ ಪದವೀಧರರ ಮತಕ್ಷೇತ್ರದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ೧೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.  ಆದರೆ ಪ್ರಸಕ್ತ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಹಾಗೂ ಮತದಾರರಿಗೆ ಅನುಕೂಲವಾಗುವ ಉದ್ದೇಶದಿಂದ ಹೆಚ್ಚುವರಿಯಾಗಿ ೬ ಮತಗಟ್ಟೆಗಳನ್ನು ಸ್ಥಪಿಸಲಾಗಿದ್ದು, ಒಟ್ಟಾರೆ ೨೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ನಗರ/ಪಟ್ಟಣ ಪ್ರದೇಶದ ಮತದಾರರಿಗೆ ಆಯಾ ತಾಲೂಕಿನ ಕೇಂದ್ರಸ್ಥಾನದಲ್ಲಿಯೇ ಮತಗಟ್ಟೆ ಸ್ಥಾಪಿಸಲಾಗಿದೆ.  ಗ್ರಾಮಾಂತರ ಪ್ರದೇಶದ ಮತದಾರರಿಗೆ ಆಯಾ ಗ್ರಾಮಗಳು ಬರುವ ಕಂದಾಯ ಹೋಬಳಿಯ ಕೇಂದ್ರಸ್ಥಾನದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ.   
ಮತಗಟ್ಟೆ ಹಾಗೂ ವ್ಯಾಪ್ತಿ : ಕುಷ್ಟಗಿ ತಾಲೂಕಿನಲ್ಲಿ ಕುಷ್ಟಗಿ ಪಟ್ಟಣ ಪ್ರದೇಶ ವ್ಯಾಪ್ತಿಯ ಮತದಾರರಿಗೆ ಕುಷ್ಟಗಿಯ ತಹಸಿಲ್ದಾರರ ಕಚೇರಿ, ಕುಷ್ಟಗಿ ಕಂದಾಯ ಹೋಬಳಿ ಗ್ರಾಮಗಳ ವ್ಯಾಪ್ತಿಯ ಮತದಾರರಿಗೆ ಕುಷ್ಟಗಿಯ ತಾ.ಪಂ. ಕಚೇರಿ, ಹನುಮಸಾಗರ ಹೋಬಳಿ ವ್ಯಾಪ್ತಿ- ಹನುಮಸಾಗರದ ಗ್ರಾ.ಪಂ. ಕಟ್ಟಡ, ತಾವರಗೇರಾ ಹೋಬಳಿ- ತಾವರಗೇರಾ ಗ್ರಾ.ಪಂ. ಕಟ್ಟಡ, ಹನುಮನಾಳ ಹೋಬಳಿ-  ಹನುಮನಾಳ ಗ್ರಾ.ಪಂ. ನಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ಯಲಬುರ್ಗಾ ಹೋಬಳಿಯ  ಮತದಾರರಿಗೆ ತಹಸಿಲ್ದಾರರ ಕಚೇರಿ, ಕುಕನೂರು ಹೋಬಳಿ- ಕುಕನೂರು ಗ್ರಾ.ಪಂ., ಹಿರೇವಂಕಲಕುಂಟಾ ಹೋಬಳಿ- ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾ.ಶಾಲೆ.  ಮಂಗಳೂರು ಹೋಬಳಿ- ಮಂಗಳೂರು ಗ್ರಾಮದ ಸರ್ಕಾರಿ ಮಾದರಿ ಹಿ.ಪ್ರಾ.ಶಾಲೆ.  ಗಂಗಾವತಿ ತಾಲೂಕಿನಲ್ಲಿ ಗಂಗಾವತಿ ನಗರ- ಗಂಗಾವತಿಯ ಸರ್ಕಾರಿ ಪ.ಪೂ. ಕಾಲೇಜು.  ವೆಂಕಟಗಿರಿ ಹೋಬಳಿ- ವೆಂಕಟಗಿರಿ ಗ್ರಾ.ಪಂ., ಮರಳಿ ಹೋಬಳಿ- ಮರಳಿ ಗ್ರಾ.ಪಂ., ಗಂಗಾವತಿ ಹೋಬಳಿ ಮತ್ತು ನಗರದ ಬಾಕಿ ಮತದಾರರಿಗೆ- ಗಂಗಾವತಿಯ ಸರ್ಕಾರಿ ಪ.ಪೂ. ಕಾಲೇಜು.  ಕಾರಟಗಿ ಹೋಬಳಿ- ಕಾರಟಗಿ ವಿಶೇಷ ತಹಸಿಲ್ದಾರರ ಕಚೇರಿ, ಸಿದ್ದಾಪುರ ಹೋಬಳಿ- ಸಿದ್ದಾಪುರ ಗ್ರಾ.ಪಂ., ಕನಕಗಿರಿ, ನವಲಿ ಹಾಗೂ ಹುಲಿಹೈದರ್ ಹೋಬಳಿ- ಕನಕಗಿರಿಯ ನಾಡಕಚೇರಿ, ಕೊಪ್ಪಳ ತಾಲೂಕಿನಲ್ಲಿ ಕೊಪ್ಪಳ ನಗರದ ಮತದಾರರಿಗೆ ತಾ.ಪಂ. ಕಚೇರಿ, ಕೊಪ್ಪಳ ತಾ.ಪಂ. ಸಭಾಂಗಣ, ಕೊಪ್ಪಳ ಹೋಬಳಿ ಮತ್ತು ಹಲಗೇರಿ ಮತದಾರರಿಗೆ ಕೊಪ್ಪಳದ ತಹಸಿಲ್ದಾರರ ಕಚೇರಿ ಆವರಣದ ಜಿಲ್ಲಾ ತರಬೇತಿ ಕೇಂದ್ರ.  ಇರಕಲ್ಲಗಡ ಹೋಬಳಿ- ಇರಕಲ್ಲಗಡ ಗ್ರಾ.ಪಂ.  ಅಳವಂಡಿ ಹೋಬಳಿ-  ಅಳವಂಡಿ ಗ್ರಾ.ಪಂ., ಹಾಗೂ ಹಿಟ್ನಾಳ ಹೋಬಳಿಯ ಮತದಾರರಿಗೆ ಮುನಿರಾಬಾದ್ ಡ್ಯಾಂ ಗ್ರಾ.ಪಂ. ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ.
  ಜಿಲ್ಲೆಯ ಮತದಾರರು ಸುಗಮ ಹಾಗೂ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ  ಮನವಿ ಮಾಡಿದ್ದಾರೆ.
Please follow and like us:
error