ಲೋಕಶಿಕ್ಷಣ ಕೇಂದ್ರಗಳು ಸಮರ್ಪಕ ಸೇವೆ ನೀಡಲಿ- ಸಂಸದ ಸಂಗಣ್ಣ ಕರಡಿ

 ಸಾಕ್ಷರತೆ ಪ್ರಮಾಣ ಹೆಚ್ಚಿಸಿ, ವಯಸ್ಕರನ್ನೂ ಸಾಕ್ಷರರನ್ನಾಗಿಸುವ ಉದ್ದೇಶದಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೋಕಶಿಕ್ಷಣ ಕೇಂದ್ರಗಳು ಸಮರ್ಪಕ ಸೇವೆ ಒದಗಿಸಬೇಕು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ವಯಸ್ಕರ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ ಯೋಜನೆ ಮತ್ತು ಸರ್ವ ಶಿಕ್ಷಣ ಅಭಿಯಾನ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಶನಿವಾರ ಏರ್ಪಡಿಸಲಾಗಿದ್ದ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಸಾಕ್ಷರತೆ ಪ್ರಮಾಣ ವೃದ್ಧಿಸಲು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದೇ ರೀತಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲೂ ಲೋಕ ಶಿಕ್ಷಣ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.  ಆದರೆ ಹಲವಾರು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಇಂತಹ ಶಿಕ್ಷಣ ಕೇಂದ್ರಗಳು ಸಮರ್ಪಕವಾಗಿ ಸೇವೆ ನೀಡುತ್ತಿರುವ ನಿದರ್ಶನಗಳು ಕಂಡುಬಂದಿಲ್ಲ.  ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ೧೧,೭೧,೧೪೫ ಒಟ್ಟು ಜನಸಂಖ್ಯೆ ಇದ್ದು, ಇದರಲ್ಲಿ ೧೫ ವರ್ಷ ಮೇಲ್ಪಟ್ಟವರಲ್ಲಿ ೧,೫೩,೫೯೮ ಪುರುಷ ಮತ್ತು ೨,೧೩,೪೦೯ ಮಹಿಳೆಯರು ಸೇರಿದಂತೆ ೩,೬೭,೦೦೭ ಜನ ಅನಕ್ಷರಸ್ಥರಿದ್ದಾರೆ.  ಅದರಲ್ಲೂ ಮಹಿಳಾ ಅನಕ್ಷರಸ್ಥರೇ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಗ್ರಾಮ ಮಟ್ಟದಲ್ಲಿನ ಕಲಿಕಾ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ.  ಪ್ರತಿ ಕೇಂದ್ರಕ್ಕೆ ೨ ಜನ ಪ್ರೇರಕರು ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ಸಲ್ಲಿಸಿದ್ದು, ಇಂತಹ ಕಲಿಕಾ ಕೇಂದ್ರಗಳಲ್ಲಿ ಸಮರ್ಪಕ ಕಾರ್ಯ ನಡೆಯದೇ ಇರುವುದರಿಂದ, ಜಿಲ್ಲೆಯಲ್ಲಿ ಅನಕ್ಷರತೆ ಪ್ರಮಾಣ ಹೆಚ್ಚಾಗುತ್ತಿದೆ.  ಲೋಕ ಶಿಕ್ಷಣ ಕೇಂದ್ರಗಳಿಗೆ ದಿನಪತ್ರಿಕೆ, ವಾರ, ಮಾಸ ಪತ್ರಿಕೆಗಳನ್ನು ಖರೀದಿಸಲು ವೆಚ್ಚವನ್ನು ಹಾಕುತ್ತಿದ್ದು, ಆದರೆ ಕೇಂದ್ರಗಳಲ್ಲಿ ಯಾವುದೇ ಬಗೆಯ ಪತ್ರಿಕೆಗಳು ನವ ಸಾಕ್ಷರರರಿಗೆ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಸಹ ಕೇಳಿಬರುತ್ತಿವೆ.  ವಯಸ್ಕರ ಶಿಕ್ಷಣಕ್ಕಾಗಿ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನ, ಅನಕ್ಷರತೆ ನಿವಾರಣೆಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರ, ಅನುದಾನ ಬಳಕೆ ಕುರಿತ ಯಾವುದೇ ಮಾಹಿತಿಯನ್ನು ಸಭೆಗೆ ಸಲ್ಲಿಸದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು.  ವಯಸ್ಕರ ಶಿಕ್ಷಣ ಇಲಾಖೆಗೆ ಸರ್ಕಾರ ಒದಗಿಸುತ್ತಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು, ಸಮರ್ಪಕ ಕಾರ್ಯ ನಿರ್ವಹಿಸಿದಲ್ಲಿ, ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತೆ ಜಿಲ್ಲೆಯನ್ನಾಗಿಸಬಹುದು.  ಆದರೆ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ, ಸರ್ಕಾರದ ಉತ್ತಮ ಯೋಜನೆಗಳು ವೈಫಲ್ಯವನ್ನು ಕಾಣುತ್ತಿವೆ ಎಂದು ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಹಾರಧಾನ್ಯ ಗುಣಮಟ್ಟ ಕಾಯ್ದುಕೊಳ್ಳಿ : ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಉತ್ತಮಪಡಿಸಲು ಸರ್ಕಾರ ಜಾರಿಗೆ ತಂದಿರುವ ಅಕ್ಷರದಾಸೋಹ ಯೋಜನೆಯಲ್ಲಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.  ಆದರೆ ಹಲವೆಡೆ ಕಳಪೆ ಗುಣಮಟ್ಟದ ಹಾಗೂ ಸ್ವಚ್ಛ ಮಾಡದಿರುವ ಆಹಾರಧಾನ್ಯಗಳನ್ನು ಬಳಸಿ, ಅಡುಗೆ ಮಾಡುತ್ತಿರುವುದಾಗಿ ದೂರುಗಳು ಕೇಳಿ ಬರುತ್ತಿವೆ.  ಅಲ್ಲದೆ ಶಿಕ್ಷಕರು, ಅಡುಗೆಯವರು ಆಹಾರ ಧಾನ್ಯಗಳನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆಯೂ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿವೆ.  ಆದರೆ ಅಧಿಕಾರಿಗಳು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.  ಯಾವ ಶಿಕ್ಷಕರು ಅಥವಾ ಅಡುಗೆಯವರ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ.  ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಿಸುವುದನ್ನು ಬಿಟ್ಟು, ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು.  ಬಿಸಿಯೂಟಕ್ಕೆ ಬಳಸುವ ಆಹಾರಧಾನ್ಯಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು.  ಆಹಾರಧಾನ್ಯಗಳನ್ನು ಸ್ವಚ್ಛಗೊಳಿಸಿದ ನಂತರವೇ ಅಡುಗೆಗೆ ಬಳಸುವಂತೆ ಸೂಚನೆಗಳನ್ನು ನೀಡಬೇಕು ಎಂದು ಅಕ್ಷರ ದಾಸೋಹ ಯೋಜನೆ ಶಿಕ್ಷಣಾಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.

ಸಿಲಿಂಡರ್ ಸಮಸ್ಯೆ ಪರಿಹರಿಸಿ : ಅಕ್ಷರ ದಾಸೋಹ ಯೋಜನೆಗೆ ಜಿಲ್ಲೆಯಲ್ಲಿ ಸಿಲಿಂಡರ್ ಪೂರೈಕೆ ಸಮಸ್ಯೆ ಇದ್ದು, ಬೇಡಿಕೆಗೆ ಅನುಗುಣವಾಗಿ ಸಿಲಿಂಡರ್ ಕಂಪನಿಗಳು ಶಾಲೆಗಳಿಗೆ ಪೂರೈಸುತ್ತಿಲ್ಲ.  ಇದರಿಂದಾಗಿ ಅಡುಗೆ ತಯಾರಿಕೆಗೆ ತೀವ್ರ ಸಮಸ್ಯೆ ಆಗುತ್ತಿದ್ದು, ಹಲವೆಡೆ ಕಟ್ಟಿಗೆಯನ್ನು ಉಪಯೋಗಿಸಿ ಅಡುಗೆ ತಯಾರಿಸಲಾಗುತ್ತಿದೆ.  ಈ ವೆಚ್ಚವನ್ನು ಸಾದಿಲ್ವಾರು ಅನುದಾನದಲ್ಲಿ ಭರಿಸಲಾಗುತ್ತಿದೆ.  ಪ್ರತಿ ತಿಂಗಳು ೪೫೦೦ ಸಿಲಿಂಡರ್‌ಗಳ ಅಗತ್ಯವಿದ್ದು, ೩೩೦೦ ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ,  ಇನ್ನೂ ೪೨೧ ಹೊಸ ಅನಿಲ ಸಂಪರ್ಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಸಿಲಿಂಡರ್ ಸಮಸ್ಯೆ ಕುರಿತಂತೆ ಇದುವರೆಗೂ ತಮ್ಮ ಗಮನಕ್ಕೆ ತಾರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಸಿಲಿಂಡರ್ ಸಮಸ್ಯೆ ಉದ್ಭವವಾಗದಂತೆ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದರು.

ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಧನ : ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ೧ ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಜಿಲ್ಲೆಯ ೧೧೧೨೦ ಹೆಣ್ಣು ಮಕ್ಕಳಿಗೆ ದಿನಕ್ಕೆ ೨ ರೂ. ಗಳಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ.  ಇದುವರೆಗೂ ೧೬, ೦೧,೨೮೦ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.  ಆದರೆ ಮಕ್ಕಳಿಗೆ ಸಮರ್ಪಕವಾಗಿ ಪ್ರೋತ್ಸಾಹ ಧನ ವಿತರಣೆಯಾಗುತ್ತಿರುವ ಬಗ್ಗೆ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕು.  ಯಾವುದೇ ಹೆಣ್ಣು ಮಗು, ಯೋಜನೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕು.  ಜಿಲ್ಲೆಯ ಅಳವಂಡಿ, ದಾಸನಾಳ, ಹನುಮಸಾಗರ ಮತ್ತು ತಳಕಲ್‌ನಲ್ಲಿ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ಒಟ್ಟು ೪೦೦ ಮಕ್ಕಳಿಗೆ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಬೇಕಾಗಿದ್ದು, ೧೭೬. ೧೨ ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.  ಆದರೆ ೩೮೧ ಮಕ್ಕಳನ್ನು ದಾಖಲಿಸಲಾಗಿದ್ದು, ಕೇವಲ ೩೮. ೮೬ ಲಕ್ಷ ಅನುದಾನ ಮಾತ್ರ ಬಳಕೆಯಾಗಿದೆ.  ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಇಂತಹ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
 ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿ.ಪಂ. ಸದಸ್ಯರುಗಳಾದ ಪಿಲ್ಲಿ ವೆಂಕಟರಾವ್, ಈರಪ್ಪ ಕುಡಗುಂಟಿ, ಅಶೋಕ್ ತೋಟದ, ರಾಮಣ್ಣ ಸಾಲಭಾವಿ, ವನಿತಾ ಗಡಾದ, ಉಮಾ ಮುತ್ತಾಳ, ಅರವಿಂದಗೌಡ ಪಾಟೀಲ್, ಜ್ಯೋತಿ ಬಿಲ್ಗಾರ್ ಸೇರಿದಂತೆ ಜಿಲ್ಲಾ ಯೋಜನಾ ಸಮಿತಿಯ ಸದಸ್ಯರುಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Related posts

Leave a Comment