ನ. ೦೧ ರಂದು ಈಶಾನ್ಯದ ಐಸಿರಿ ೭ ನೇ ಸಂಚಿಕೆ ಪ್ರಸಾರ.

ಕೊಪ್ಪಳ
ಅ. ೩೧ (ಕ ವಾ) ಹೈದ್ರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಇಲ್ಲಿನ
ಕಲೆ, ಸಂಸ್ಕೃತಿ, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳು, ಇಲ್ಲಿನ ಪ್ರತಿಭೆಗಳು, ಸಾಧಕರು
ಮುಂತಾದ ಸಂಗತಿಗಳನ್ನು ಪರಿಚಯಿಸವ ಈಶಾನ್ಯದ ಐಸಿರಿ ಸರಣಿಯ ೭ ನೇ ಸಂಚಿಕೆ ನ. ೦೧ ರಂದು
ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ, ರಾಯಚೂರು ಹಾಗೂ ಕಲಬುರಗಿ ಆಕಾಶವಾಣಿ ಕೇಂದ್ರಗಳಿಂದ
ಏಕಕಾಲಕ್ಕೆ ಪ್ರಸಾರವಾಗಲಿದೆ. 
೭ನೇ ಸಂಚಿಕೆಯಲ್ಲಿ ಮೂಡಿ ಬರಲಿರುವ ಕಾರ್ಯಕ್ರಮದ
ವಿವರಗಳು ಹೀಗಿವೆ. ಸಂಸದ ಡಾ. ಮಲ್ಲಿಕಾರ್ಜುನ ಖರ್ಗೆಯವರು ೩೭೧(ಜೆ) ವಿಧಿಯ ಉಪಯುಕ್ತತೆಯ
ಕುರಿತು ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಯಲಬುರ್ಗಾದ ಶಾಸಕರಾಗಿರುವ ಬಸವರಾಜ
ರಾಯರಡ್ಡಿಯವರು ತಮ್ಮ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕುರಿತು ತಮ್ಮ
ಯೋಜನೆ-ಯೋಚನೆಗಳ ಅನುಷ್ಠಾನದ ಬಗೆಗೆ ಮಾತನಾಡಲಿದ್ದಾರೆ.  ಬೆಂಗಳೂರಿನ ಅಕ್ಷರ
ಫೌಂಡೇಶನ್ನಿನ ಕ್ಷೇತ್ರ ಕಾರ್‍ಯ ಅಧಿಕಾರಿಯಾಗಿರುವ ಜೆ. ವಿ. ಶಂಕರ ನಾರಾಯಣ ಅವರಿಂದ
ಗಣಿತ  ಕಲಿಕೆಯಲ್ಲಿ ಅದಕ್ಕಾಗಿಯೇ ರೂಪಿಸಲಾಗಿರುವ ‘ಕಿಟ್’ನ ಉಪಯುಕ್ತತೆ ಕುರಿತು ಮಾಹಿತಿ
ನೀಡಲಿದ್ದಾರೆ. ಪರಿಣಿತಾ ಮಹಿಳಾ ಗುಂಪಿನ ಸದಸ್ಯೆಯರಿಂದ ಸೇವಿನ ಉಂಡಿ ತಯಾರಿಸುವ ಬಗೆ,
ಕೇಸರಿಯ ಔಷಧೀಯ ಗುಣಧರ್ಮಗಳು ಹಾಗೂ ಝಾನ್ಸಿರಾಣಿ ಲಕ್ಷ್ಮೀಬಾಯಿ ಕುರಿತು ಮಾತುಕತೆ
ಪ್ರಸಾರವಾಗಲಿದೆ. ಬಳ್ಳಾರಿಯ ರಂಗಭೂಮಿ ಕಲಾವಿದರಾಗಿರುವ ಕೆ.ಜಗದೀಶ್ ಅವರ ಸಾಧನೆಯ
ಕುರಿತು ಒಂದು ಸಂಕ್ಷಿಪ್ತ ಪರಿಚಯ ಮೂಡಿ ಬರಲಿದೆ.  ಕುಷ್ಟಗಿಯ ಜನಪದ ಕಲಾವಿದರಾಗಿರುವ
ವಾಲ್ಮೀಕಪ್ಪ ಯಕ್ಕರನಾಳ ಅವರು ತತ್ವಪದ ಹಾಡಲಿದ್ದಾರೆ.
    ಇವುಗಳಲ್ಲದೆ ಕಳೆದ
ವಾರದಲ್ಲಿ ಈ ಭಾಗದ ಆರು ಜಿಲ್ಲೆಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್‍ಯಕ್ರಮಗಳು,
ಘಟಿಸಿದ ಪ್ರಮುಖ ಸಂಗತಿಗಳನ್ನು ಒಳಗೊಂಡ ‘ವಾರದ ವರದಿ’, ಮಹಾತ್ಮರ, ಗಣ್ಯರ
ನುಡಿಮುತ್ತುಗಳು, ನಗೆ ಹನಿ, ಸಾಮಾಜಿಕ ವಿಷಯಗಳ ಕುರಿತು ಜಿಂಗಲ್‌ಗಳು ಮೂಡಿ ಬರಲಿವೆ.
ಸರಣಿಯ
ನಿರೂಪಣಾ ಸಾಹಿತ್ಯ, ನಿರ್ವಹಣೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಕಾರ್ಯಕ್ರಮ
ಅಧಿಕಾರಿಯಾಗಿರುವ ಸೋಮಶೇಖರ ಎಸ್. ರುಳಿ ಅವರು ವಹಿಸಿಕೊಂಡಿದ್ದಾರೆ  ಎಂದು ನಿಲಯದ
ಮುಖ್ಯಸ್ಥೆಯಾಗಿರುವ ಅಂಜನಾ ಯಾತನೂರು ಅವರು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ.
ಕೊಪ್ಪಳ
ಅ. ೩೧ (ಕ ವಾ) ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ
ಶಿವರಾಜ ಎಸ್ ತಂಗಡಗಿ ಅವರು ನ. ೧ ಮತ್ತು ೦೨ ರಂದು ಜಿಲ್ಲಾ ಪ್ರವಾಸ
ಹಮ್ಮಿಕೊಂಡಿದ್ದಾರೆ.
     ಸಚಿವರು ನ. ೦೧ ರಂದು ಬೆಳಿಗ್ಗೆ ೮-೩೦ ಗಂಟೆಗೆ ಕೊಪ್ಪಳ
ನಗರಕ್ಕೆ ಆಗಮಿಸಿ, ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ೬೦ ನೇ ಕರ್ನಾಟಕ
ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಮಧ್ಯಾಹ್ನ ೧-೩೦ ಗಂಟೆಗೆ ಮುನಿರಾಬಾದಿನ
ಇಂದ್ರಭವನಕ್ಕೆ ತೆರಳುವರು.  ಸಂಜೆ ೫ ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕ
ಕುಂದುಕೊರತೆಗಳ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು.  ನ. ೦೨ ರಂದು ಮಧ್ಯಾಹ್ನ ೩
ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿಗಳು
ತಿಳಿಸಿದ್ದಾರೆ.
ಕೋಳಿ ಸಾಕಾಣಿಕೆ ಉಚಿತ ತರಬೇತಿ ಶಿಬಿರ.
ಕೊಪ್ಪಳ ಅ. ೩೧
(ಕ ವಾ) ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ ಇವರು ಕೋಳಿ
ಸಾಕಾಣಿಕೆ ಬಗ್ಗೆ ಮೂರು ದಿನಗಳ ತರಬೇತಿ ಶಿಬಿರವನ್ನು ನವೆಂಬರ್ ತಿಂಗಳಿನಲ್ಲಿ
ಆಯೋಜಿಸಿದ್ದು, ಆಸಕ್ತರು ಹೆಸರು ನೋಂದಯಿಸುವಂತೆ ಸೂಚನೆ ನೀಡಲಾಗಿದೆ.
       ಕೋಳಿ
ಸಾಕಾಣಿಕೆಯಲ್ಲಿ ಅಧಿಕ ಉತ್ಪಾದನೆಗೆ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ
ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು. 
ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ
ಕಲ್ಪಿಸಲಾಗುವುದು.  ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು,
ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ನ. ೧೪ ರ ಒಳಗಾಗಿ ಕಾರ್ಯ ನಿರ್ವಾಹಕ
ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್
ಮಿಲ್ ಆವರಣ, ಗದ್ದನಕೇರಿ ರೋಡ, ಬಾಗಲಕೋಟೆ-೫೮೭೧೦೩ ಇವರಿಗೆ ಸಲ್ಲಿಸಬೇಕು.  ಮಾಹಿತಿಗೆ
೯೪೮೨೬೩೦೭೯೦ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಉತ್ತಮ ಮಾವಿನ ಫಸಲಿಗೆ ರೈತರು ಅನುಸರಿಸಬೇಕಾದ ಕ್ರಮಗಳು ಸಲಹೆಗಳು.
ಕೊಪ್ಪಳ
ಅ. ೩೧ (ಕರ್ನಾಟಕ ವಾರ್ತೆ) ಉತ್ತಮ ಮಾವಿನ ಫಸಲು ಮತ್ತು ಹೆಚ್ಚು ಇಳುವರಿಯನ್ನು
ಪಡೆಯಲು ಈಗಿನಿಂದಲೇ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕೊಪ್ಪಳದ ತೋಟಗಾರಿಕೆ ಸಲಹಾ
ಕೇಂದ್ರದ ಅಧಿಕಾರಿಗಳು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ.
     ಮುಂಗಾರಿನ
ಸಂಪೂರ್ಣ ವೈಫಲ್ಯ ರೈತರಿಗೆ ಮಾರಕವಾಗಿದ್ದರೂ, ಹಿಂಗಾರು ಆಶಾದಾಯಕವೆಂದೇ
ಭಾವಿಸಲಾಗಿದೆಯಾದರೂ ಹಿಂಗಾರಿನ ಆರಂಭದಲ್ಲಿ ಕಾಣಿಸಿಕೊಂಡ  ಮಳೆ ಮತ್ತೆ  ಕೈಕೊಟ್ಟಂತಾಗಿ
ರೈತರು ಸಂಕಷ್ಟದಲ್ಲಿದ್ದಾರೆ. ಇನ್ನೊಂದೆರಡು ಒಳ್ಳೆ ಮಳೆಗಳಾದರೆ ಮಾತ್ರ ರೈತ ಒಳ್ಳೆ
ಫಸಲನ್ನು  ನಿರೀಕ್ಷಿಸಬಹುದು. ಆದರೆ ಮಾವಿನ ಬೆಳೆಗೆ ಈ ಹಂತದಲ್ಲಿ  ಒಳ್ಳೆಯದೇ ಆಗಿದೆ. ಈ
ಪರಿಸ್ಥಿತಿಯಲ್ಲಿ ಒಳ್ಳೆಯ ಮಾವಿನ ಫಸಲನ್ನು ನಿರೀಕ್ಷಿಸ ಬಹುದಾಗಿದೆ.
   
ಅಕ್ಟೋಬರ್‌ನಲ್ಲಿ ರೋಗಗ್ರಸ್ತ ಒಣಗಿದ ರೆಂಬೆಗಳನ್ನು ತೆಗೆದು ಹಾಕಬೇಕು. ಸ್ಕರ್ಟಿಂಗ
ಎಂದು ಕರೆಯಲ್ಪಡುವ ಚಾಟ್ನಿ ವಿಧಾನದಲ್ಲಿ ನೆಲಕ್ಕೆ ತಾಕುವ ಎಲ್ಲ ರಂಬೆಗಳನ್ನು ನೆಲದಿಂದ 
೧ ಮೀ. ವರೆಗೂ ವಿಶೇಷ ಕತ್ತರಿ ಸಹಾಯದಿಂದ ಕತ್ತರಿಸಿ ಶೇ.೧ರ ಬೋರ್ಡೊ ಲೇಪನ ಮಾಡಬೇಕು.
ನಂತರ ಕಾಂಡಕ್ಕೆ ಸಿ.ಓ.ಸಿ. ಮತ್ತು ಕ್ಲೋರೋಪೈರಿಫಾಸ್ ಲೇಪನ ಮಾಡಬೇಕು. ೧೦ ವರ್ಷಗಳ
ಆಯಸ್ಸಿನ ಗಿಡಗಳ ಬಿರುಕು, ಸಂದಿಗೊಂದಿಗಳನ್ನು ಸ್ವಚ್ಚಗೊಳಿಸಿ ಈ ಲೇಪನ ಮಾಡಬೇಕು. ಕಾಂಡ
ಸೀಳಾಗಿ ಸೋರುತ್ತಿದ್ದರೆ  ಸೀಲರ್-ಹೀಲರ್ ಎನ್ನುವ ಜೌಷಧಿಯುಕ್ತ ಪುಡಿಯನ್ನು ಲೇಪಿಸಬೇಕು,
ನಂತರ ೩-೪ ಮೀ. ನಷ್ಟು ಪಾತಿಮಾಡಿ ಶಿಫಾರಸು ಮಾಡಿದ ಗೊಬ್ಬರದ ಜೊತೆಗೆ ಬೇವಿನಹಿಂಡಿ
ಅರ್ಧದಿಂದ ೧ ಕಿ.ಗ್ರಾಂ ಮತ್ತು ಜಿಂಕ್ ೧೦೦ ಗ್ರಾಂ., ಜೋರಾನ್ ೧೦೦ ಗ್ರಾಂ. ಕೊಟ್ಟು
ತಕ್ಷಣ ನೀರುಣಿಸಬೇಕು. ಸಾವಯವ ಪದ್ಧತಿ ಅನುಸರಿಸುವವರು ಎರೆಹುಳು ಗೊಬ್ಬರದೊಂದಿಗೆ
ಟ್ರೈಕೋಡರ್ಮಾ, ಬೇವಿನ ಹಿಂಡಿ ಬೆರೆಸಿ ಕೊಟ್ಟಿಗೆ ಗೊಬ್ಬರ ನೀಡಿ ತಕ್ಷಣ ನೀರುಣಿಸಬೇಕು.
ಬೋರ್ಡೊದ್ರಾವಣ ಲೇಪನ ಮಾಡಿ ಸಿ.ಓ.ಸಿ. ಒಂದು ಸಾರಿ ಸಿಂಪಡಿಸುವುದು ಸೂಕ್ತ.
   
ನವೆಂಬರ್ ಎರಡನೇ ಪಾಕ್ಷಿಕದಿಂದ ಮಾವು ಸ್ಪೇಷಲ್ ಎನ್ನುವ ಫೋಷಕಾಂಶಕವನ್ನು ೫ ಗ್ರಾಂ. ೧
ಲೀ. ನೀರಿಗೆ ಬೆರೆಸಿ ಒಂದು ತಿಂಗಳ ಅಂತರದಲ್ಲಿ ಹೂ ಕಚ್ಚುವಾಗ, ಕಾಯಿಗಳು ಕಡಲೆ
ಗಾತ್ರದಿದ್ದಾಗ ಮತ್ತು ಕಾಯಿಗಳ ಗಾತ್ರ ಹೆಚ್ಚಿಸಲು ಮೂರು ಸಾರಿ ಸಿಂಪಡಿಸಬೇಕು.
ನವೆಂಬರ್‌ನಲ್ಲಿ ನೀರುಣಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.  ಹೂ ಕಚ್ಚಿಕೊಂಡಾಗ
ಜಿಗಿಹುಳು ಮತ್ತು ಬೂದಿ ರೋಗದ ಹಾವಳಿ ಜಾಸ್ತಿಯಾಗಿರುತ್ತದೆ. ಹತೋಟಿಗಾಗಿ ೧ ಗ್ರಾಂ
ಟ್ರೈಯಾಡಿಮಾರ್ಫ ಜೊತೆಗೆ ೦.೩೦ ಮಿ.ಲೀ ಇಮಿಡಾಕ್ಲೋಪ್ರಿಡ್ ೧ ಲೀ. ನೀರಿಗೆ ಬೆರೆಸಿ
ಸಿಂಪರಿಸಬೇಕು. ಇದರ ಬದಲಾಗಿ ಸೇವಿನ್ ೪ಗ್ರಾಂ. ಅಥವಾ ೧ ಮಿ.ಲೀ ಲ್ಯಾಂಬ್ಡಾ ಅಥವಾ ೦.೩೦
ಗ್ರಾಂ.  ಥಯೋಮಿಥಾಕ್ಸಾಮ್ ಸಿಂಪರಿಸಬಹುದು. ಮೋಡ ಕವಿದ ವಾತಾವರಣವಿದ್ದರೆ ಚಿಬ್ಬು ರೋಗ
ನಿಯಂತ್ರಿಸಲು ೧ ಗ್ರಾಂ. ಥಯೋಫನೈಟ್ ಮಿಥೈಲ್ ೧ಲೀ.  ನೀರಿಗೆ ಬೆರೆಸಿ ಸಿಂಪರಿಸಬೇಕು.
ಅನಾವಶ್ಯಕವಾಗಿ ಸಿಂಪರಣೆ ಮಾಡಬಾರದು. ಬೇವಿನ ಎಣ್ಣೆ ಸಿಂಪರಿಸುವುದರಿಂದ ರಾಸಾಯನಿಕಗಳ
ಬಳಕೆ ಕಮ್ಮಿ ಮಾಡಬಹುದು. ಯಾವುದೇ ಕಾರಣಕ್ಕೂ ಕೆಂಪು ತ್ರಿಕೋನ ಚಿನ್ಹೆ ಇರುವ
ರಾಸಾಯನಿಕಗಳನ್ನು ತೋಟಗಾರಿಕೆ ಬೆಳೆಗಳಲ್ಲಿ ಬಳಸಬಾರದು ಮತ್ತು ಶಿಫಾರಸು ಮಾಡಿದ
ರಾಸಾಯನಿಕಗಳನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಮಾತ್ರ ಬಳಸುವುದರಿಂದ ಪರಿಸರ
ಸಂರಕ್ಷಣೆ ಮಾಡುದಂತಾಗುತ್ತದೆ.
     ರೈತರು ವಿಶೇಷವಾಗಿ ಭಾರತೀಯ ತೋಟಗಾರಿಕೆ
ಸಂಶೋಧನಾ ಸಂಸ್ಥೆ ಅಭಿವೃದ್ದಿ ಪಡಿಸಿದ  ಸೀಲರ್ ಮತ್ತು  ಹೀಲರ್ ಹಾಗೂ ಮಾವು
ಸ್ಪೇಷಲ್‌ಗಳನ್ನು ತಜ್ಞರ ಸಲಹೆ ಪಡೆದು ಬಳಸಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ
ತೋಟಗಾರಿಕೆ ನಿರ್ದೇಶಕರು, ಕೊಪ್ಪಳ ಮತ್ತು ಆಯಾ ತಾಲ್ಲೂಕು ತೋಟಗಾರಿಕೆ ಕಛೇರಿಗಳನ್ನು
ಮತ್ತು  ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಕೊಪ್ಪಳ ಇವರನ್ನು
ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.
Please follow and like us:
error