ಗಬ್ಬು ಭವನಕ್ಕೆ ಮುಕ್ತಿ ಕೊಡುವ ಯೋಚನೆಯೇ ಇಲ್ಲ

ಕೊಪ್ಪಳ: ನಗರದಲ್ಲಿರುವ ಸಾಹಿತ್ಯ ಭವನದ ಕೆಟ್ಟ ಸ್ಥಿತಿಯ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತಿವೆ, ಜಿಲ್ಲಾಡಳಿತಕ್ಕೆ ಮನವಿಗಳು ತಲುಪುತ್ತಿವೆ. ಆದರೂ ಜಿಲ್ಲಾಡಳಿತ ಕಣ್ತೆರೆಯುತ್ತಿಲ್ಲ. ಸಾಹಿತ್ಯ ಭವನವನ್ನು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ವ್ಯಾಪ್ತಿಗೆ ತರಬೇಕು, ಅಂದಾಗ ಮಾತ್ರ ಅದಕ್ಕೊಂದು ಅರ್ಥ, ಶಿಸ್ತು ಬರುತ್ತದೆ ಎಂಬುದು ಅನೇಕರ ಅಭಿಪ್ರಾಯವಾಗಿದೆ. ಈ ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕವೂ ನಿರಾಸಕ್ತಿಯನ್ನು ಕೈ ಬಿಟ್ಟು ಬೀದಿಗಿಳಿಬೇಕಿದೆ.
1993ರ ಫೆಬ್ರವರಿ 5, 6 ಮತ್ತು 7ರಂದು ಕೊಪ್ಪಳದಲ್ಲಿ ನಡೆದ 62ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದ ಸವಿನೆನಪಿನಲ್ಲಿ ನಗರದ ಅಶೋಕ ವೃತ್ತದ ಬಳಿ ನಿರ್ಮಾಣವಾಗಿರುವ ಸಾಹಿತ್ಯ ಭವನ ಗಬ್ಬು ನಾರುತ್ತಿದೆ. ಸಮರ್ಪಕ ನಿರ್ವಹಣೆ ಇಲ್ಲದೇ ಎಲ್ಲೆಂದರಲ್ಲಿ ಗಲೀಜು ಕಾಣಿಸುತ್ತಿದೆ. ಜಿಲ್ಲಾಡಳಿತದ ಸುಪರ್ದಿಯಲ್ಲಿರುವ ಕಟ್ಟಡದ ಬಗ್ಗೆ ನಿರ್ಲಕ್ಷé ವಹಿಸಲಾಗಿದೆ.
ತಿರುಳYನ್ನಡ ನಾಡಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಕಟ್ಟಿದ ಸಾಹಿತ್ಯ ಭವನ ಅಕ್ಷರಶಃ ಪಾಳು ಬೀಳುವ ದುಃಸ್ಥಿತಿ ಎದುರಿಸುತ್ತಿದೆ. ಪಟ್ಟಣದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಆಸ್ತಿಯಾಗಬೇಕಿದ್ದ ಭವನ ಸಂಪೂರ್ಣ ನಿರ್ಲಕ್ಷÂಕ್ಕೆ ಒಳಗಾಗಿದೆ. ಇಂಥ ಚಟುವಟಿಕೆಗಳು ನಡೆಯಲಿ ಎನ್ನುವ ಉದ್ದೇಶದಿಂದ ಸಾಹಿತ್ಯ ಭವನವನ್ನು ನಿರ್ಮಾಣ ಮಾಡಿದ್ದರೂ ಭವನದ ಸ್ಥಿತಿ ಹಾಗೂ ಜಿಲ್ಲಾಡಳಿತಕ್ಕೆ ಕಟ್ಟಬೇಕಿರುವ ದುಬಾರಿ ಬಾಡಿಗೆಯಿಂದ ಸಾರ್ವಜನಿಕರು, ಸಂಘ-ಸಂಸ್ಥೆಗಳು ಬೇರೆ ಸಭಾಭವನಗಳನ್ನು ನೋಡುವ ಅನಿವಾರ್ಯತೆ ಇದೆ.
1993ರಲ್ಲಿ ನಗರದಲ್ಲಿ ನಡೆದ 62ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಈ ಭವನಕ್ಕೆ ಶಂಕುಸ್ಥಾಪನೆ ನಡೆದಿತ್ತು. ಸಮ್ಮೇಳನ ಯಶಸ್ವಿಯಾಗಿ ಮುಗಿದು ಉಳಿದ ಹಣದಲ್ಲಿ ಈ ಸಾಹಿತ್ಯ ಭವನವನ್ನು ನಿರ್ಮಿಸಿದ್ದು ನಿಜಕ್ಕೂ ಸಾಧನೆ ಮತ್ತು ಇತಿಹಾಸ. ಉಳಿತಾಯದ 2 ಲಕ್ಷ ರೂ. ಹಣದಲ್ಲಿ ಭವನಕ್ಕೆ ಅಡಿಪಾಯ ಹಾಕಲಾಗಿತ್ತು. ನಂತರ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಸರಕಾರ ಸೇರಿದಂತೆ ವಿವಿಧ ಮೂಲಗಳಿಂದ ಹಣಕಾಸಿನ ನೆರವು ಹರಿದು ಬಂದು ಹೇಗೋ ಸಾಹಿತ್ಯ ಭವನ ನಗರದಲ್ಲಿ ತಲೆ ಎತ್ತಿದೆ.
ಸಾಹಿತ್ಯ ಭವನ ನಿರ್ಮಾಣಗೊಂಡು ಸುಮಾರು 15 ವರ್ಷಗಳಾಗುತ್ತಾ ಬಂದಿದೆ. ಯಾವ ಸುಧಾರಣೆಯನ್ನೂ ಕಂಡಿಲ್ಲ. ಇಲ್ಲಿವರೆಗೆ ಲಕ್ಷಗಟ್ಟಲೆ ಬಾಡಿಗೆ ಹಣ ಸಂಗ್ರಹವಾಗುತ್ತಾ ಬಂದಿದ್ದರೂ ಆ ಹಣವನ್ನು ಅನಗತ್ಯ ಕಾರಣಗಳಿಗಾಗಿ ಖರ್ಚು ಮಾಡಲಾಗಿದೆ. ಕನ್ನಡದ ನೆಲ-ಜಲದ, ಸಾಹಿತ್ಯೀಕ, ಸಾಂಸ್ಕೃತಿಕ ಪರಿಮಳ ಬೀರಬೇಕಿದ್ದ ತಾಣವೊಂದು ಗಬ್ಬೆದ್ದು ನಾರುತ್ತಿದೆ.
ಪರಿಸ್ಥಿತಿ ಹೀಗಿದೆ: ಇಲ್ಲಿನ ಸಾಹಿತ್ಯ ಭವನದಲ್ಲಿ ಆಗೊಮ್ಮೆ ಈಗೊಮ್ಮೆ ಕಾರ್ಯಕ್ರಮಗಳು ಜರುಗುತ್ತಿರುತ್ತವೆ. ಒಂದು ಕಾರ್ಯಕ್ರಮಕ್ಕೆ ಸಂಘಟಕರು ಜಿಲ್ಲಾಡಳಿತಕ್ಕೆ ಮೂರೂವರೆ ಸಾವಿರ ರೂಪಾಯಿ ಬಾಡಿಗೆ ಕಟ್ಟಬೇಕು. ಅಲ್ಲದೇ ಸಾಹಿತ್ಯ ಭವನವನ್ನು ಅವರೇ ಸ್ವತ್ಛ ಮಾಡಿಸಿಕೊಳ್ಳಬೇಕು. ಇದಕ್ಕೆ ಕನಿಷ್ಠ ಸುಮಾರು 500 ರೂ. ಖರ್ಚು. ಭವನದಲ್ಲಿ ಮೈಕ್‌, ಡಯಾಸ್‌, ಪರದೆ ಅಂಥದ್ದೇನೂ ಇಲ್ಲದ್ದರಿಂದ ಇದಕ್ಕೊಂದು ಸುಮಾರು 5 ಸಾವಿರ ರೂ. ಖರ್ಚು ಮಾಡಬೇಕು.
ಸಾಹಿತ್ಯ ಭವನದಲ್ಲಿ ಒಂದು ಕಾರ್ಯಕ್ರಮ ನಡೆಸಬೇಕೆಂದರೆ ಅದು ಸಣ್ಣ ಕಾರ್ಯಕ್ರಮವೇ ಆಗಿರಲಿ, ದೊಡ್ಡ ಕಾರ್ಯಕ್ರಮವೇ ಆಗಿರಲಿ. ಒಂದು ಗಂಟೆಯದ್ದೇ ಆಗಿರಲಿ, 8 ಗಂಟೆಯದ್ದೇ ಆಗಿರಲಿ ಕನಿಷ್ಠ 9ರಿಂದ 10 ಸಾವಿರ ರೂಪಾಯಿ ಖರ್ಚು ಮಾಡಲೇಬೇಕು. ಭವನದೊಳಗೆ ಈಗಿರುವ ಆಸನಗಳು ಅಷ್ಟಕ್ಕಷ್ಟೇ. ಪಕ್ಕದಲ್ಲೇ ಇರುವ ಶೌಚಾಲಯ ಕೊಚ್ಚೆಗುಂಡಿಯಂತಾಗಿದ್ದು ಇಡೀ ಭವನವೇ ದುರ್ನಾತ ಬಿರುತ್ತದೆ.
ಕಸಾಪಕ್ಕೆ ಬಿಟ್ಟು ಕೊಡಲಿ:
ಕೊಪ್ಪಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ನಿರ್ಮಿಸಿದ ಸಾಹಿತ್ಯ ಭವನದ ಸ್ಥಿತಿ ಕಂಡು ಬೇಸರ ಎನಿಸುತ್ತದೆ. ಈಗಾಗಲೇ ಹಲವು ಬಾರಿ ಸ್ಥಳೀಯ ಶಾಸಕರನ್ನು, ಸಚಿವರನ್ನು ಹಾಗೂ ಇತರ ಜನಪ್ರತಿನಿಧಿಗಳನ್ನು ಕಂಡು ಮನವಿ ನೀಡಲಾಗಿದೆ. ಸಾಹಿತ್ಯ ಭವನವನ್ನು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಸುಪರ್ದಿಗೆ ನೀಡುವಂತೆ ಕೋರಲಾಗಿದೆ. ಜೊತೆಗೆ ಭವನದಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಇದ್ದರೆ ಭವನದ ಸ್ವತ್ಛವಾಗಿರುತ್ತದೆ.
-ಅಲ್ಲಮಪ್ರಭು ಬೆಟ್ಟದೂರು, ಬಂಡಾಯ ಸಾಹಿತಿ, ಕೊಪ್ಪಳ.
ಕನ್ನಡಪರ ಸಂಘಟನೆಗಳು ಕೈ ಜೋಡಿಸಲಿ:
ಸಾಹಿತ್ಯ ಭವನದ ವಿಷಯವಾಗಿ ಹಿಂದಿನ ಕಸಾಪ ಜಿಲ್ಲಾ ಘಟಕವೂ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದೆ. ಮನವಿ ನೀಡಿದೆ. ನಮ್ಮ ಹೊಸ ಘಟಕ ಅಸ್ತಿತ್ವಕ್ಕೆ ಬಂದ ನಂತರವೂ ಜಿಲ್ಲಾಡಳಿತಕ್ಕೆ ಸಾಹಿತ್ಯ ಭವನವನ್ನು ಕಸಾಪ ಸುಪರ್ದಿಗೆ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಈವರೆಗೆ ಏನೂ ಪ್ರಯೋಜನವಾಗಿಲ್ಲ. ನಗರದ ಎಲ್ಲ ಕನ್ನಡಪರ ಸಂಘಟನೆಯ ಈ ವಿಷಯದಲ್ಲಿ ಕೈ ಜೋಡಿಸಿದರೆ ಬೀದಿಗಿಳಿಯುವ ಮೂಲಕ ಜಿಲ್ಲಾಡಳಿತಕ್ಕೆ ಸಾಹಿತ್ಯ ಭವನದ ದುಃಸ್ಥಿತಿಯನ್ನು ಗಮನಕ್ಕೆ ತರಬಹುದು. ಆ ಮೂಲಕ ಭವನವನ್ನು ಕಸಾಪ ಸುಪರ್ದಿಗೆ ತರಲು ಪ್ರಯತ್ನಿಸಬಹುದು.
ವೀರಣ್ಣ ನಿಂಗೋಜಿ, ಕಸಾಪ ಜಿಲ್ಲಾಧ್ಯಕ್ಷ, ಕೊಪ್ಪಳ.
                                                                                           ಕೃಪೆ-ಬಸವರಾಜ್ ಕರುಗಲ್ ಉದಯವಾಣಿ 
Please follow and like us:
error

Related posts

Leave a Comment