ಕನ್ನಡದ ಏಳಿಗೆಗೆ ಎಲ್ಲರೂ ಜೊತೆಗೂಡಿ ಶ್ರಮಿಸೋಣ- ವೀರಣ್ಣ ನಿಂಗೋಜಿ ಕರೆ

 ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಚೇತನ ತುಂಬುವ ನಿಟ್ಟಿನಲ್ಲಿ ಎಲ್ಲ ಸಾಹಿತಿಗಳು, ಕನ್ನಡ ಪ್ರೇಮಿಗಳ ಜೊತೆಗೂಡಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ನೂತನ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ಹೇಳಿದರು.
  ಕೊಪ್ಪಳ ನಗರದ ಜ.ಚ.ನಿ. ಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪದಗ್ರಹಣ ಸಮಾರಂಭ ಹಾಗೂ ಆಜೀವ ಸದಸ್ಯರಿಗೆ ಕೃತಜ್ಞತಾ ಸಮಾರಂಭದಲ್ಲಿ ಕಸಾಪ ನೂತನ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
  ಕೊಪ್ಪಳ ಜಿಲ್ಲೆಯ ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು, ಜಿಲ್ಲಾಧ್ಯಕ್ಷರ ಹುದ್ದೆಗೆ ಆಯ್ಕೆಗೊಳಿಸಿ, ಕನ್ನಡ ತಾಯಿಯ ಸೇವೆಗೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಜಿಲ್ಲೆಯ ಎಲ್ಲ ಕನ್ನಡ ಪ್ರೇಮಿಗಳಿಗೆ ನಾನು ಚಿರಋಣಿಯಾಗಿದ್ದೇನೆ.  ಯಾವುದೇ ಭಿನ್ನಾಭಿಪ್ರಾಯಗಳು ಆಯಾ ಚುನಾವಣೆ ಸಂದರ್ಭಕ್ಕಷ್ಟೇ ಸೀಮಿತವಾಗಿದ್ದು, ಉಳಿದಂತೆ ಕನ್ನಡ ಭಾಷೆಯ ಏಳಿಗೆಗಾಗಿ ದುಡಿಯುವ ನಿಟ್ಟಿನಲ್ಲಿ ಎಲ್ಲರೂ ಒಂದುಗೂಡಿ ಹೋರಾಟ ನಡೆಸುವುದು, ಕಾರ್ಯಕ್ರಮಗಳನ್ನು ರೂಪಿಸುವುದು ಅಗತ್ಯವಾಗಿದೆ.  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯಾವುದೇ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡುವುದು ಬೇಡ, ಎಲ್ಲರ ಉದ್ದೇಶವೂ ಕನ್ನಡಕ್ಕಾಗಿ ದುಡಿಯುವುದು, ಕನ್ನಡ ನಾಡನ್ನು ಕಟ್ಟುವುದು, ಕನ್ನಡ ಭಾಷೆಯ ಅಭಿವೃದ್ಧಿಗೆ ಶ್ರಮಿಸುವುದಾಗಿದೆ.  ಸಾಹಿತ್ಯ ಪರಿಷತ್ತಿನ ಚುನಾವಣೆ ಸಂದರ್ಭದಲ್ಲಿ ನೀಡಿದ ಚುನಾವಣೆ ಪ್ರಣಾಳಿಕೆಯನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು.  ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಮಟ್ಟದಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟುವ ಕೆಲಸಕ್ಕೆ ಇಂದಿನಿಂದಲೇ ಚಾಲನೆ ನೀಡಲಾಗುವುದು.  ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಕಾರ್ಯ ನಿಜಕ್ಕೂ ಸವಾಲಿನ ವಿಷಯವಾಗಿದ್ದು, ಯಾರೂ ಸಹ ನಮಗೆ ಹುದ್ದೆ ದೊರೆಯಲಿಲ್ಲ ಎನ್ನುವ ಮನಸ್ತಾಪಕ್ಕೆ ಅವಕಾಶ ನೀಡದೆ ಎಲ್ಲರೂ ಕನ್ನಡದ ಏಳಿಗೆಗಾಗಿ ಶ್ರಮಿಸುವುದು ಮುಖ್ಯ.  ಈ ದಿಸೆಯಲ್ಲಿ ಎಲ್ಲರ ಸಹಕಾರವನ್ನು ನಾನು ಬಯಸುತ್ತೇನೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ನುಡಿದರು.
  ಹಂಪಿ ಕನ್ನಡ ವಿ.ವಿ.ಯ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ಗೆ ೯೭ ವರ್ಷಗಳ ಸುದೀರ್ಘ ಇತಿಹಾಸವಿದ್ದು, ಕನ್ನಡ ಭಾಷೆಯ ರುಚಿಕಟ್ಟು ಕರ್ನಾಟಕ ರಾಜ್ಯದಲ್ಲಿಯೇ ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ವೈವಿಧ್ಯತೆಯನ್ನು ಪಡೆದಿದೆ.  ಇದುವರೆಗೂ ರಾಜ್ಯದಲ್ಲಿ ನಡೆದಿರುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಮ್ಮೇಳನಾಧ್ಯಕ್ಷರ ಭಾಷಣಗಳನ್ನು, ಇಂದಿನ ಯುವಪೀಳಿಗೆ ತಪ್ಪದೆ ಓದಬೇಕು, ಆ ಸಾಹಿತಿಗಳಲ್ಲಿ ಕನ್ನಡದ ಬಗ್ಗೆ ಇರುವ ಕಳಕಳಿಯನ್ನು ಅರಿಯುವ ಪ್ರಯತ್ನ ಮಾಡಬೇಕು.  ಯಾವುದೇ ಪ್ರಾದೇಶಿಕ ಅಸಮತೋಲನದ ಸಮಸ್ಯೆಗಳ ನಡುವೆಯೂ ಕನ್ನಡದ ಅಭಿವೃದ್ಧಿಯೊಂದೆ ಎಲ್ಲರ ಒತ್ತಾಸೆಯಾಗಿದೆ ಎಂದು ಬಣ್ಣಿಸಿದರು.
  ನಿವೃತ್ತ ಪ್ರಾಂಶುಪಾಲ ಅಲ್ಲಮಪ್ರಭು ಬೆಟ್ಟದೂರ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.  ಡಾ. ಕೆ.ಬಿ. ಬ್ಯಾಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಂದ್ರಬಾಬು ಅವರು ಕನ್ನಡ ಧ್ವಜವನ್ನು ಕಸಾಪ ನೂತನ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ ಅವರಿಗೆ ಹಸ್ತಾಂತರಿಸಿದರು.  ಪ್ರಾರಂಭದಲ್ಲಿ ಕವಿ ಹಾಗೂ ಸಾಹಿತಿ ಅಕ್ಬರ್ ಕಾಲಿಮಿರ್ಚಿ ಸ್ವಾಗತಿಸಿದರು, ಪ್ರೊ. ಆರ್.ಎಸ್. ಸರಗಣಾಚಾರಿ ಕಾರ್ಯಕ್ರಮ ನಿರೂಪಿಸಿದರು.  ಸಾಹಿತಿ ಶಿ.ಕಾ. ಬಡಿಗೇರ ವಂದಿಸಿದರು.  ಕಾರ್ಯಕ್ರಮದಲ್ಲಿ ಕೊಪ್ಪಳ, ಯಲಬುರ್ಗಾ, ಗಂಗಾವತಿ ಮತ್ತು ಕುಷ್ಟಗಿ ತಾಲೂಕುಗಳಿಂದ ಹಲವಾರು ಗಣ್ಯರು, ಹಿರಿ-ಕಿರಿಯ ಸಾಹಿತಿಗಳು ಭಾಗವಹಿಸಿದ್ದರು.  
Please follow and like us:
error