ಅಂಚೆ ಉಳಿತಾಯಗಳಿಗೆ ಬಡ್ಡಿದರ ಹೆಚ್ಚಳ

ಹೊಸದಿಲ್ಲಿ, ನ.11: ಸಣ್ಣ ಉಳಿತಾಯಗಾರರಿಗೆ ನೀಡಿರುವ ಕೊಡುಗೆಯೊಂದರಲ್ಲಿ ಸರಕಾರವಿಂದು ಅಂಚೆ ಕಚೇರಿಯ ಉಳಿತಾಯ ಯೋಜನೆಗಳಾದ ಉಳಿತಾಯ ಖಾತೆ, ಮಾಸಿಕ ಆದಾಯ ಯೋಜನೆ ಹಾಗೂ ಸಾರ್ವಜನಿಕ ಭವಿಷ್ಯ ನಿಧಿಗಳ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಅಂಚೆ ಕಚೇರಿ ಉಳಿತಾಯ ಖಾತೆಯ (ಪೋಸಾ) ಬಡ್ಡಿ ದರವನ್ನು ಶೇ. 3.5ರಿಂದ 4ಕ್ಕೇರಿಸಲಾಗಿದ್ದು, ಮಾಸಿಕ ಆದಾಯ ಯೋಜನೆ (ಎಂಐಎಸ್) ಶೇ.8.2 ಹಾಗೂ ಸಾರ್ವಜನಿಕ ಭವಿಷ್ಯನಿಧಿ ಶೇ. 8.6 ಬಡ್ಡಿ ಪಡೆಯಲಿದೆಯೆಂದು ಸರಕಾರಿ ಪ್ರಕಟನೆಯೊಂದು ತಿಳಿಸಿದೆ.
ಅತಿ ಹೆಚ್ಚು ಬಡ್ಡಿ ಏರಿಕೆಯಾಗಿರುವುದು ವಾರ್ಷಿಕ ನಿರಖು ಠೇವಣಿಗೆ ಅದು ಶೇ. 6.25ರಿಂದ 7.7ಕ್ಕೇರಿದೆ. ಇತರ ಅವಧಿಕ ಠೇವಣಿಗಳ ಬಡ್ಡಿ ದರಗಳನ್ನೂ ಏರಿಸಲಾಗಿದೆ. ಈ ಹೊಸ ದರಗಳು ಸದ್ಯದಲ್ಲೇ ಘೋಷಣೆಯಾಗಲಿರುವ ಅಧಿಸೂಚನೆಯ ದಿನಾಂಕದಿಂದ ಅನ್ವಯವಾಗಲಿದೆ. ಶ್ಯಾಮಲಾ ಗೋಪಿನಾಥ ಸಮಿತಿಯ ಶಿಫಾರಸಿನನ್ವಯ ಸಣ್ಣ ಉಳಿತಾಯಗಾರರಿಗೆ ಉತ್ತೇಜನ ನೀಡಲು ಈ ಬಡ್ಡಿ ಹೆಚ್ಚಳ ಮಾಡಲಾಗಿದೆ.

Leave a Reply