fbpx

ನರೇಂದ್ರ ಮೋದಿಗೆ ಸೋಲಿನ ಭೀತಿ


 – ಸನತ್‌ಕುಮಾರ ಬೆಳಗಲಿ

ದೇಶದ ಪ್ರಧಾನಿಯಾಗಲು ಹೊರಟಿರುವ ನರೇಂದ್ರ ಮೋದಿ ಇದೀಗ ಬೆವರುತ್ತಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯ ಸಂಭವನೀಯ ಸೋಲಿನ ಭೀತಿಯಿಂದ ಆತ ಧೃತಿಗೆಟ್ಟಿದ್ದಾರೆ. ‘‘ಅಭಿವೃದ್ಧಿಯ ಹರಿಕಾರ’’ ‘‘ಗುಜರಾತಿನ ಉದ್ಧಾರಕ’’ ಎಂದೆಲ್ಲ ಭಟ್ಟಂಗಿ ಮಾಧ್ಯಮಗಳಿಂದ ಬಹುಪರಾಕು ಹೇಳಿಸಿ ಕೊಂಡರೂ ಆತನ ಗೆಲುವು ಈ ಬಾರಿ ಸುಲಭವಲ್ಲ. ಮೋದಿ ಮುಂದಿನ ಪ್ರಧಾನಿಯೆಂದು ಸುಷ್ಮಾಸ್ವರಾಜ್, ಅಡ್ವಾಣಿ, ಜೇಟ್ಲಿ, ಜೇಠ್ಮಲಾನಿ ಡಂಗೂರ ಸಾರಿದರೂ ಜನ ನಂಬುತ್ತಿಲ್ಲ. ಮೋದಿಯ ಸ್ವಂತ ವಿಧಾನಸಭಾ ಕ್ಷೇತ್ರದಲ್ಲಿ (ಮಣಿನಗರ) ಶ್ವೇತಾಭಟ್ ಆತನ ವಿರುದ್ಧ ಸ್ಪರ್ಧಿಸಿ ಹೊಸ ಅಲೆ ಎಬ್ಬಿಸಿದ್ದಾರೆ. ಇನ್ನೊಂದೆಡೆ ಪಟೇಲ್ ಸಮುದಾಯದ ನಾಯಕ ಕೇಶುಭಾಯಿ ಪಟೇಲ್ ಬಿಜೆಪಿಯಿಂದ ಹೊರಗೆ ಬಂದು ತಮ್ಮದೇ ಪ್ರತ್ಯೇಕ ಪಕ್ಷ ಕಟ್ಟಿಕೊಂಡು ಮೋದಿಯನ್ನು ಮಣ್ಣು ಮುಕ್ಕಿಸಲು ಓಡಾಡುತ್ತಿದ್ದಾರೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡವನ್ನು ಜನಮರೆತಿಲ್ಲ. ಅದನ್ನು ಜನ ಮರೆತು ಬಿಡಲೆಂದು ಮೋದಿ ಅಭಿವೃದ್ಧಿಯ ಹರಿಕಾರನೆಂಬ ಪೋಶು ನೀಡಿದ.

ದೇಶ ವಿದೇಶಗಳ ಕಾರ್ಪೊರೇಟ್ ಕಂಪೆನಿಗಳ ಮಾಲಕರನ್ನು ರಾಜ್ಯಕ್ಕೆ ಕರೆತಂದು ಅವರಿಗೆ ಸಾವಿರಾರು ಎಕರೆ ಭೂಮಿಯನ್ನು ನೀಡಿದ. ಇದನ್ನೇ ಅಭಿವೃದ್ಧಿ ಎಂದು ಹೇಳಿಕೊಂಡ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತ್ ಪಾತಾಳಕ್ಕೆ ಹೋಗಿದ್ದನ್ನು ಮರೆಮಾಚಿದ. ಬಡತನ, ಅಸ್ಪೃಶತೆ, ಅಸಮಾನತೆ, ಅಪೌಷ್ಟಿಕತೆ, ರೈತರ ಆತ್ಮಹತ್ಯೆಗಳಿಂದ ಗುಜರಾತ್ ನರಳುತ್ತಿದೆ ಎಂಬುದು ಅಧಿಕೃತ ಅಂಕಿ-ಅಂಶಗಳಿಂದಲೇ ಸಾಬೀತಾಗಿದೆ.

ಈತನ ಅಭಿವೃದ್ಧಿಯ ಪ್ರಹಸನದ ಬಗ್ಗೆ ಮೀಡಿಯಾಗಳಲ್ಲಿರುವ ಚೆಡ್ಡಿ, ಜುಟ್ಟು, ಜನಿವಾರಗಳು ಎಷ್ಟೇ ಪ್ರಚಾರ ಮಾಡಿದರೂ ಗುಜರಾತಿನ ಮತದಾರರೇ ಅದನ್ನು ನಂಬುತ್ತಿಲ್ಲ. ಇನ್ನೊಂದೆಡೆ ಆಡಳಿತ ವಿರೋಧಿ ಅಲೆ ತೀವ್ರವಾಗಿದೆ. ಮತ್ತೊಂದೆಡೆ ಕೇಂದ್ರ ಚುನಾವಣಾ ಆಯೋಗ ಮೋದಿಯ ಪ್ರಚಾರ ವೈಖರಿಯನ್ನು ಹದ್ದಿನ ಕಣ್ಣಿನಿಂದ ನೋಡುತ್ತಿದೆ. 2007ರ ಚುನಾವಣೆಯಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದ ಲಕ್ಷಾಂತರ ಅಲ್ಪಸಂಖ್ಯಾತರ ಹೆಸರುಗಳನ್ನೇ ನಾಪತ್ತೆ ಮಾಡಿ ಮೋದಿ ಗೆದ್ದು ಬಂದಿದ್ದರು. ಆಗ ದೇಶಾದ್ಯಂತ ಆಕ್ಷೇಪ ವ್ಯಕ್ತವಾಗಿತ್ತು. ಅಂತಲೇ ಈ ಬಾರಿ ಚುನಾವಣಾ ಆಯೋಗ ಅತ್ಯಂತ ಎಚ್ಚರದಿಂದ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದೆ.

ತನ್ನ ‘ಅಭಿವೃದ್ಧಿ’ ಎಂಬ ವಂಚನೆಯ ಮಂತ್ರವನ್ನು ಜನತೆ ಈ ಬಾರಿ ನಂಬುವುದಿಲ್ಲ ಎಂದು ಖಾತರಿಪಡಿಸಿಕೊಂಡ ಮೋದಿ ಈಗ ಮತ್ತೆ ಬಹುಸಂಖ್ಯಾತ ಹಿಂದೂ ಉನ್ಮಾದ ಕೆರಳಿಸಲು ಮುಂದಾಗಿದ್ದಾನೆ. ಆರು ಕೋಟಿ ಗುಜರಾತಿಗಳ ನಾಯಕ ತಾನೆಂದು ಹೇಳಿ ಕೊಳ್ಳುತ್ತಿದ್ದ ಈತ ಈಗ ಮತ್ತೆ ಕೋಮು ವಿಷಬೀಜ ಬಿತ್ತುತ್ತಿದ್ದಾನೆ. ತನ್ನ ಪ್ರಮುಖ ಎದುರಾಳಿ ಕಾಂಗ್ರೆಸನ್ನು ಅದರ ನೀತಿ ಧೋರಣೆಗಳ ಆಧಾರದಲ್ಲಿ ಟೀಕಿಸದೇ ಅಡ್ಡಹಾದಿ ಹಿಡಿದಿದ್ದಾನೆ. ಸೋನಿಯಾ ಗಾಂಧಿಯವರ ಆಪ್ತ ಕಾರ್ಯದರ್ಶಿಯಾಗಿರುವ ಅಹ್ಮದ್ ಪಟೇಲರ ಹೆಸರನ್ನು ಎಲ್ಲೆಡೆ ಹೇಳುತ್ತ ಅಹ್ಮದ್ ಮಿಯಾ ಪಟೇಲ್ ಎಂದು ಲೇವಡಿ ಮಾಡಿ ಕೆಟ್ಟ ಭಾಷೆಯಲ್ಲಿ ಮಾತಾಡುತ್ತಿದ್ದಾನೆ.

‘‘ಗುಜರಾತಿನ ಮುಂದಿನ ಮುಖ್ಯಮಂತ್ರಿ ಅಹ್ಮದ್ ಮಿಯಾ ಪಟೇಲ್ ಎಂದು ಕಾಂಗ್ರೆಸ್ ಬಿಂಬಿಸುತ್ತದೆಯೇ?’’ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದ ಮೋದಿ ತನ್ನ ಸಂಕುಚಿತ ಕೊಳಕು ಬುದ್ಧಿ ತೋರಿಸಿದ್ದಾನೆ. ಇಂಥ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಜಯಶಾಲಿಯಾದರೆ ರಾಜ್ಯಕ್ಕೆ ಮುಸ್ಲಿಂ ಮುಖ್ಯಮಂತ್ರಿ ಬರುತ್ತಾರೆ ಎಂದು ಹಿಂದುಗಳಲ್ಲಿ ಭೀತಿ ಮೂಡಿಸುವ, ಕೋಮುಭಾವನೆ ಕೆರಳಿಸುವ ಹುನ್ನಾರವನ್ನು ಮೋದಿ ನಡೆಸಿದ್ದಾನೆ. ಆದರೆ ಈ ಬಾರಿ ಮೋದಿ ಗೆಲ್ಲುವುದು ಸುಲಭವಲ್ಲ. ಅಲ್ಪಸಂಖ್ಯಾತರು ಮಾತ್ರವಲ್ಲ, ದಲಿತರು, ಆದಿವಾಸಿಗಳು, ಹಿಂದುಳಿದವರು ಈಗ ತಿರುಗಿ ಬಿದ್ದಿದ್ದಾರೆ.ಪೌಷ್ಟಿಕಾಂಶದ ಕೊರತೆಯಿಂದ ಗುಜರಾತಿನ ಜನತೆ ಬಳಲುತ್ತಿದ್ದಾರೆ’ ಎಂದು ಅಧಿಕೃತ ಅಂಶಗಳು ಖಚಿತಪಡಿಸಿವೆ.

ಆದರೆ ಇದಕ್ಕೆ ಮೋದಿ ನೀಡಿದ ವಿವರಣೆ ಅಪಹಾಸ್ಯಕರ ಮಾತ್ರವಲ್ಲ, ಅಮಾನವೀಯ ಕೂಡವಾಗಿತ್ತು. ರಾಜ್ಯದಲ್ಲಿ ತಾನು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳಿಂದ ಯುವಕರು ತಿಂದು ತಿಂದು ಕೊಬ್ಬಿ ಹೋಗಿದ್ದಾರೆ. ಆ ಕೊಬ್ಬನ್ನು ಕರಗಿಸಿಕೊಳ್ಳಲು ಪಥ್ಯ ಮಾಡುತ್ತಿದ್ದಾರೆ. ಪಥ್ಯ ಮಾಡಿ ಸಣ್ಣಗಾಗಿದ್ದಾರೆ. ಅದಕ್ಕೆ ಪೌಷ್ಟಿಕಾಂಶದ ಕೊರತೆ ಎಂದು ಕೆಲವರು ಹೇಳುತ್ತಾರೆ’’ ಎಂದು ಮೋದಿ ಅವಿವೇಕಿಯಂತೆ ಮಾತಾಡಿ ಅನೇಕರಿಂದ ಉಗಿಸಿಕೊಂಡಿದ್ದಾನೆ. ಮಾಧ್ಯಮಗಳು ಪ್ರಚಾರ ಮಾಡುವಂತೆ ಗುಜರಾತ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ.

ರಾಜ್ಯದ ನೆಲ ಜನ ಸಕಲ ಸಂಪತ್ತನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದುಕೊಟ್ಟ ಮೋದಿ ಬಡವರ ಹೊಟ್ಟೆಯ ಮೇಲೆ ಚಪ್ಪಡಿ ಎಳೆದಿದ್ದಾನೆ. ಅಂತಲೇ ಎಲ್ಲ ಗುಜರಾತಿಗಳೂ ಈತನನ್ನು ನಂಬಿಲ್ಲ. ಆದರೆ ಶೇ.47ರಷ್ಟು ಗುಜರಾತಿಗಳು ಈತನ ವಿರುದ್ಧ ಮತ ಚಲಾಯಿಸುತ್ತಲೇ ಬಂದಿದ್ದಾರೆ. ಈತ ಹೇಳುವ ಆರು ಕೋಟಿ ಗುಜರಾತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗುಜರಾತಿಗಳು ಈ ಬಾರಿ ಈತನಿಗೆ ಪಾಠ ಕಲಿಸಲು ಪಣತೊಟ್ಟಿದ್ದಾರೆ.

ಕರ್ನಾಟಕದ ಬಿಜೆಪಿ ಅಧಿಕಾರಕ್ಕೆ ಬಂದಾಗ ಕೆಲವೇ ಕೆಲವು ಅಲ್ಪಸಂಖ್ಯಾತ ನಾಯಕರು ತಮ್ಮ ಸ್ವಾರ್ಥಸಾಧನೆಗಾಗಿ ಚೆಡ್ಡಿ ಧರಿಸಿದಂತೆ ಗುಜರಾತ್‌ನಲ್ಲೂ ಕೆಲವು ವ್ಯಾಪಾರಿ ಮೈನಾರಿಟಿ ನಾಯಕರನ್ನು ಬಳಸಿಕೊಂಡ ಮೋದಿ ಅವರನ್ನು ಟಿವಿ ಚಾನೆಲ್‌ಗಳಲ್ಲಿ ತಂದು ನರೇಂದ್ರ ಮೋದಿ ಗುಜರಾತಿನ ಉದ್ಧಾರಕ, 2002ರ ಹತ್ಯಾಕಾಂಡವನ್ನು ನಾವು ಮರೆತು ಬಿಡಬೇಕು ಎಂದು ಹೇಳಿಸುತ್ತಿದ್ದಾನೆ. ಆದರೆ ಗುಜರಾತ್ ಹಿಂಸಾಕಾಂಡದಲ್ಲಿ ಕೊಲ್ಲಲ್ಪಟ್ಟ ಎರಡು ಸಾವಿರ ಮುಸ್ಲಿಂ ಕುಟುಂಬಗಳ ಗಾಯ ಹೇಗೆ ಮಾಯಲು ಸಾಧ್ಯ? ಅನೇಕ ಮುಸ್ಲಿಂ ಕುಟುಂಬಗಳು ಇನ್ನೂ ಬೀದಿಯ ಮೇಲಿವೆ.

ಇಂಥ ನರಹಂತಕ ನರೇಂದ್ರ ಮೋದಿ ದೇಶದ ಮುಂದಿನ ಪ್ರಧಾನಿ ಎಂದು ಅಡ್ವಾಣಿ-ಸುಷ್ಮಾ ಯಾಕೆ ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆ ನಡೆದು ಬಿಜೆಪಿ ಸ್ವತಂತ್ರವಾಗಿ 250ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಮಾತ್ರ ಆ ಪಕ್ಷಕ್ಕೆ ಮುಂದಿನ ಪ್ರಧಾನಿ ಪಟ್ಟ ಸಿಗಬಹುದು. (ಅದು ಕನಸಿನ ಮಾತು) ಇನ್ನೂ ಎನ್‌ಡಿಎ ಮಿತ್ರ ಪಕ್ಷಗಳಾದ ನಿತೀಶ್ ಕುಮಾರ್‌ರ ಸಂಯುಕ್ತ ಜನತಾದಳ, ಬಿಜು ಜನತಾದಳ, ಅಕಾಲಿದಳಗಳು ಮೋದಿಯನ್ನು ಪ್ರಧಾನಿ ಮಾಡಲು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ಇಂಥ ವಿರೋಧ ಇನ್ನೂ ಹೆಚ್ಚಾಗಿ ಬರಲೆಂದೇ ಅಡ್ವಾಣಿ, ಸುಷ್ಮಾ ಮೋದಿ ಹೆಸರಿನಲ್ಲಿ ಬೇಕಂತಲೇ ಟಾಂ ಟಾಂ ಮಾಡುತ್ತಿದ್ದಾರೆ.

ಇಷ್ಟೆಲ್ಲ ಪ್ರತಿಕೂಲ ಅಂಶಗಳಿದ್ದರೂ ಗುಜರಾತಿನಲ್ಲಿ ಮೋದಿ ಗೆಲುವು ಸಾಧಿಸುವ ಭ್ರಮೆಯಲ್ಲಿದ್ದಾನೆ. ಈ ಬಾರಿ ಗೆದ್ದರೂ ಕಳೆದ ಚುನಾವಣೆಯಷ್ಟು ಭಾರೀ ಬಹುಮತದಿಂದೇನು ಗೆಲ್ಲುವುದಿಲ್ಲ. ಈ ಗೆಲುವನ್ನು ಬಳಸಿಕೊಂಡು ಬಿಜೆಪಿ ಮುಂದಿನ ಪ್ರಧಾನಿ ಎಂದು ಮೋದಿಯನ್ನು ಬಿಂಬಿಸಬಹುದು. ಆರೆಸ್ಸೆಸ್‌ಗೂ ಇಂಥ ರಕ್ತಪಿಪಾಸು ನರಹಂತಕ ಸ್ವಯಂ ಸೇವಕನೇ ಬೇಕು. ಆದರೆ ಬಿಜೆಪಿ ಪ್ರಧಾನಿ ಎಂದು ಬಿಂಬಿಸಿದರೂ ಈತನನ್ನು ಬೆಂಬಲಿಸಲು ಈ ದೇಶದ ಜನ ಮೂರ್ಖರಲ್ಲ. ಬಿಜೆಪಿಯಲ್ಲೇ ಈತನಿಗೆ ತೀವ್ರ ವಿರೋಧವಿದೆ.

ನರೇಂದ್ರ ಮೋದಿಯ ಬಗ್ಗೆ ಸಂಘ ಪರಿವಾರದಲ್ಲೇ ಭಿನ್ನಾಭಿಪ್ರಾಯಗಳಿವೆ. ಈತ ತಮ್ಮ ನಿಯಂತ್ರಣ ಮೀರಿ ಬೆಳೆಯುತ್ತಿದ್ದಾನೆ ಎಂದು ಆರೆಸ್ಸೆಸ್ ನಾಯಕತ್ವ ಮುಖ್ಯವಾಗಿ ಮೋಹನ್ ಭಾಗವತ್, ಪ್ರವೀಣ್ ತೊಗಾಡಿಯಾ, ವಿಜಯ ಕಟಿಯಾರ್, ರಾಮ ಮಾಧವರಂಥವರಿಗೆ ಅಸಮಾಧಾನವಿದೆ. ಅಂತಲೇ ನಾಗಪುರದ ವ್ಯಾಪಾರಿ ನಿತೀನ್ ಗಡ್ಕರಿಯೆಂಬ ಬೆದರು ಬೊಂಬೆಯನ್ನು ಅವರು ದಿಲ್ಲಿಗೆ ತಂದಿಟ್ಟರು. ಈಗ ಆ ಬೊಂಬೆಗೂ ಹೊಲಸು ಮೆತ್ತಿಕೊಂಡಿದೆ. ಅಂತಲೇ ಮೋದಿಯನ್ನು ಬಿಟ್ಟರೆ ಸಂಘಕ್ಕೆ ಗತಿ ಇಲ್ಲದಂತಾಗಿದೆ.

Please follow and like us:
error

Leave a Reply

error: Content is protected !!