You are here
Home > Koppal News > ಉರ್ದು ಭಾಷೆಯನ್ನು ಸಂಕುಚಿತ ದೃಷ್ಟಿಯಿಂದ ನೋಡದಿರಿ

ಉರ್ದು ಭಾಷೆಯನ್ನು ಸಂಕುಚಿತ ದೃಷ್ಟಿಯಿಂದ ನೋಡದಿರಿ

:ಎಚ್.ಆರ್.ಭಾರದ್ವಾಜ್
ಬೆಂಗಳೂರು:ಉರ್ದು ಭಾಷೆಯ ತವರೂರು ಹಿಂದೂಸ್ಥಾನ.ಉರ್ದುಭಾಷೆ ಜನಿಸಿದ್ದು ದೆಹಲಿಯಲ್ಲಿ. ಆದರೆ ಕೆಲವು ಜನರ ಸಂಕುಚಿತ ದೃಷ್ಟಿಯಿಂದಾಗಿ ಉರ್ದು ಕೇವಲ ಒಂದು ವರ್ಗದ ಭಾಷೆ ಎಂದು ಬಿಂಬಿಸಲಾಗುತ್ತಿದೆ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ವಿಷಾದ ವ್ಯಕ್ತಪಡಿಸಿದರು.ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ಉರ್ದು ಅಕಾಡಮಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಉರ್ದು ವಿಭಾಗ ಜಂಟಿಯಾಗಿ ‘1985ರ ನಂತರದ ಉರ್ದು ಸಾಹಿತ್ಯ ಎಂಬ ವಿಷಯದ ಬಗ್ಗೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಉರ್ದು ಸಾಹಿತ್ಯದ ಕೊಡುಗೆ ಅಪಾರ.ನನ್ನ ಬಳಿ ಈಗಲೂ ಉರ್ದು ಶಾಯರಿಗಳ ಭಂಡಾರವೇ ಇದೆ.ಈ ಶಾಯರಿಗಳ ಸಾರ ಅದ್ಭುತವಾಗಿದ್ದು, ಮಾನವೀಯತೆಯಿಂದ ಹಾಗೂ ಜಾತ್ಯತೀತ ತತ್ವಗಳಿಂದ ಕೂಡಿದೆ. ಇವುಗಳನ್ನು ಓದಿದಾಗ ನನ್ನ ಮನಸ್ಸು ಹಗುರವಾಗುತ್ತದೆ. ಎಂದು ರಾಜ್ಯಪಾಲರು ತಿಳಿಸಿದರು.
 ಕವ್ವಾಲಿಗಳು ಉರ್ದು ಸಾಹಿತ್ಯದ ಮತ್ತೊಂದು ಪ್ರಕಾರವಾಗಿದ್ದು, ಇವುಗಳನ್ನು ಕೇಳಲಿಕ್ಕೆ ಆನಂದವಾಗುತ್ತದೆ.ಇಂತಹ ಭಾಷೆಯ ಬಗ್ಗೆ ಸೀಮಿತ ದೃಷ್ಟಿಯನ್ನು ಹೊಂದುವುದರಿಂದ ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಲಿದೆ ಎಂದು ಭಾರದ್ವಾಜ್ ತಿಳಿಸಿದರು. ಉರ್ದು ಭಾಷೆಯು ರಾಜ್ಯ, ದೇಶಗಳ ಗಡಿಯನ್ನು ಮೀರಿ ಬೆಳೆದಿದೆ. ನೆರೆಯ ಪಾಕಿಸ್ತಾನ ದೇಶದ ಮಾತೃಭಾಷೆ ಉರ್ದು ಆಗಿದೆ.ಆದರೆ ಈ ಭಾಷೆ ತಾನು ಹುಟ್ಟಿದ ದೇಶದಲ್ಲೇ ತೀವ್ರ ನಿರ್ಲಕ್ಷಕ್ಕೀಡಾಗುತ್ತಿದೆ ಎಂದು ಭಾರದ್ವಾಜ್ ವಿಷಾದ ವ್ಯಕ್ತ ಪಡಿಸಿದರು.
ಚಿಕ್ಕಂದಿನಿಂದಲೇ ಉರ್ದು ಪಾಠಗಳನ್ನು ಶಾಲೆಯಲ್ಲಿ ಕಲಿಸಿದ್ದರಿಂದ ನನಗೆ ಉರ್ದು ಸುಲಭವಾಗಿದೆ. ಬಂಗಾಳಿಯಾಗಿದ್ದರೂ ಡಾ.ರಾಜಾರಾಂ ಮೋಹನ ರಾಯ್ ಉರ್ದು, ಅರೇಬಿಕ್, ಪರ್ಷಿಯನ್ ಭಾಷೆಗಳನ್ನು ಅಧ್ಯಯನ ಮಾಡಿದ್ದರು. ಅವರು ಉರ್ದು ಭಾಷೆಯನ್ನು ಸರಾಗವಾಗಿ ಮಾತನಾಡುತ್ತಿದ್ದರು.ಹಾಗಾಗಿ ಅವರನ್ನು ವೌಲಾನ ರಾಜಾರಾಂ ಮೋಹನ ರಾಯ್ ಎಂದು ಕರೆಯಲಾಗುತ್ತಿತ್ತು. ಆದ ಕಾರಣ ಉರ್ದು ಭಾಷೆಯನ್ನು ಶಾಲೆ, ಕಾಲೇಜು, ಯೂನಿವರ್ಸಿಟಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಬೋಧಿಸಬೇಕು ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಆಗ್ರಹಿಸಿದರು.
ಇದೇ ವೇಳೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎನ್.ಪ್ರಭುದೇವ್ ಮಾತನಾಡಿ, ಬೆಂಗಳೂರು ವಿವಿಯಲ್ಲಿ ಕವಿ ಮಿರ್ಝಾ ಗಾಲಿಬ್ ಹಾಗೂ ಇಕ್ಬಾಲ್ ರವರ ಅಧ್ಯಯನ ಪೀಠಗಳ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.ಉರ್ದು ಭಾಷೆಯ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಸಹಕಾರಗಳನ್ನು ನೀಡುವುದಾಗಿ ಅವರು ತಿಳಿಸಿದರು.
ಉರ್ದು ಒಂದು ಸುಂದರ ಭಾಷೆ.ಉರ್ದುವಿನ ಶಾಯರಿಗಳು,ಗಝಲ್‌ಗಳು ಹಾಗೂ ಕಾದಂಬರಿಗಳು ಓದುಗರನ್ನು ಮಂತ್ರ ಮುಗ್ಧಗೊಳಿಸಿಸುತ್ತವೆ.ಆದರೆ ಈ ಭಾಷೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಹೊರತುಪಡಿಸಿದರೆ,ಉನ್ನತ ಶಿಕ್ಷಣದಲ್ಲಿ ಇಲ್ಲದಿರುವುದು ಈ ಭಾಷೆಯ ಬೆಳವಣಿಗೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಅವರು ತಿಳಿಸಿದರು.
ಉರ್ದು ಪ್ರಪಂಚದಾದ್ಯಂತ ಮಾತನಾಡುವ ನಾಲ್ಕನೆ ಅತ್ಯಂತ ದೊಡ್ಡ ಭಾಷೆಯಾಗಿದೆ. ಶಾಲೆ, ಕಾಲೇಜುಗಳಲ್ಲಿ ಬೇರೆ ಬೇರೆ ಭಾಷೆಯ ಮಕ್ಕಳಿಗೆ ಉರ್ದುವನ್ನು ಬೋಧಿಸದಿದ್ದರೆ ಈ ಭಾಷೆ ನಾಶವಾಗಲಿದೆ ಎಂದು ಪ್ರಭುದೇವ್ ಅಭಿಪ್ರಾಯ ಪಟ್ಟರು.ಇದೇ ವೇಳೆ ದೆಹಲಿ ವಿಶ್ವವಿದ್ಯಾಲಯದ ಉರ್ದು ವಿಭಾಗದ ಪ್ರೊ.ಅತೀಕುಲ್ಲಾ ಮಾತನಾಡಿ,ಗಝಲ್‌ಗಳು ಹೆಚ್ಚಾಗಿ ಮಾನವೀಯತೆ ಹಾಗೂ ಬೌದ್ಧಿಕ ಗುಣಮಟ್ಟದಿಂದ ಕೂಡಿದವುಗಳಾಗಿವೆ. ಚಿಕ್ಕಚಿಕ್ಕ ಸಾಲುಗಳೂ ಕೂಡ ಬೆಟ್ಟದಷ್ಟು ಅರ್ಥವನ್ನು ಹೊಂದಿವೆ.ಇವುಗಳು ಸಂಪ್ರದಾಯದ ಜೊತೆಗೆ ಬೆಳೆದು ಬಂದಿರುವುದರಿಂದ,ಗಝಲ್‌ಗಳಿಗೆ ಸಮಾಜದ ಎಲ್ಲಾ ಜನರನ್ನೂ ಒಳಗೊಳ್ಳುವ ಗುಣವಿದೆ. ಗಝಲ್‌ಗಳು ಸೃಜನಶೀಲ ಸಾಹಿತ್ಯದ ಪ್ರಮುಖ ಭಾಗವಾಗಿವೆ ಎಂದು ಅವರು ತಿಳಿಸಿದರು.
ಇದೇ ವೇಳೆ ಹಿರಿಯ ಐ‌ಎ‌ಎಸ್ ಅಧಿಕಾರಿ ಸೈಯದ್ ಝಮೀರ್ ಪಾಷಾ,ಕರ್ನಾಟಕ ಉರ್ದು ಅಕಾಡಮಿಯ ಅಧ್ಯಕ್ಷ ಹಫೀಝ್ ಕರ್ನಾಟಕಿ, ಡಾ. ಯಾಸೀನ್ ಬೇಗಂ, ಪ್ರೊ.ನೂರುದ್ದೀನ್, ಪ್ರೊ. ರಂಗಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Top