ಸರಳ ವಿವಾಹ ಯೋಜನೆಯಡಿ ಆರ್ಥಿಕ ನೆರವು ಅರ್ಜಿ ಆಹ್ವಾನ.

ಕೊಪ್ಪಳ, ಸೆ.೦೨ (ಕ ವಾ)  ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸರಳ ವಿವಾಹ ಯೋಜನೆಯಡಿ ಒಂದು ಬಾರಿಗೆ ರೂ.೫೦,೦೦೦ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಅರ್ಹ ದಂಪತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವ ದಂಪತಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಟ ೧೦ ಜೋಡಿಗಳು ಭಾಗವಹಿಸಬೇಕು. ಮದುವೆಯಾಗುತ್ತಿರುವ ವಧುವಿಗೆ ಕನಿಷ್ಠ ೧೮ ರಿಂದ ಗರಿಷ್ಠ ೪೨ ವರ್ಷ ಹಾಗೂ ವರನಿಗೆ ಕನಿಷ್ಠ ೨೧ ರಿಂದ ಗರಿಷ್ಠ ೪೫ ವರ್ಷ ವಯೋಮಿತಿ ಹೊಂದಿರಬೇಕು. ವಧು ಮತ್ತು ವರನ ಒಟ್ಟಾರೆ ವಾರ್ಷಿಕ ಆದಾಯ ರೂ.೨ ಲಕ್ಷ ಮೀರಿರಬಾರದು. ಜಿಲ್ಲಾ ನೊಂದಣಿ ಕಛೇರಿಯಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ನೊಂದಣಿಯಾಗಿರುವ ಖಾಸಗಿ ಟ್ರಸ್ಟ್‌ಗಳು, ದೇವಸ್ಥಾನದ ಟ್ರಸ್ಟ್‌ಗಳು ಸಂಘಗಳು, ಸೊಸೈಟಿಗಳು ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವುದು ಅವಶ್ಯಕ.
     ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳ ವಿವಾಹವಾದ ಮೂರು ತಿಂಗಳೊಳಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಕಛೇರಿಗೆ ಜಂಟಿಯಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಮತ್ತು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ, ದೂರವಾಣಿ ಸಂಖ್ಯೆ : ೦೮೫೩೯-೨೨೦೧೩೮ ಇವರನ್ನು ಸಂಪರ್ಕಿಸಬಹುದು. 
ಕಾನೂನು ಪದವಿಧರರಿಗೆ ತರಬೇತಿ ಅರ್ಜಿ ಆಹ್ವಾನ.
ಕೊಪ್ಪಳ, ಸೆ.೦೨ (ಕ ವಾ)  ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾನೂನು ಪದವಿ ಪಡೆದಿರುವ ಜಿಲ್ಲೆಯ ಹಿಂದುಳಿದ ವರ್ಗಗಳ ಹಾಗೂ ಮತೀಯ ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
     ಹಿಂದುಳಿದ ವರ್ಗಗಳಾದ ಪ್ರವರ್ಗ-೧, ೨ಎ, ೩ಎ ಹಾಗೂ ೩ಬಿ ಜನಾಂಗದ ಹಾಗೂ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ ಕ್ರಿಶ್ಚಿಯನ್, ಜೈನ್, ಬೌದ್ಧ ಸಿಕ್ ಮತ್ತು ಪಾರ್ಸಿ ಜನಾಂಗದ ಅಭ್ಯರ್ಥಿಗಳಿಗೆ ೦೪ ವರ್ಷಗಳ ತರಬೇತಿ ನೀಡಲಾಗುವುದು.  ತರಬೇತಿಗೆ ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ೦೨ ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಬಾರ್ ಕೌನ್ಸಿಲ್‌ನಲ್ಲಿ ಹೆಸರನ್ನು ನೊಂದಾಯಿಸಿರಬೇಕು. ಪ್ರವರ್ಗ-೦೧ ಕ್ಕೆ ಸೇರಿದ ಅಭ್ಯರ್ಥಿಗಳಿಗೆ ೩೦ ವರ್ಷ ಹಾಗೂ ಇತರೆ ಹಿಂದುಳಿದ ವರ್ಗಗಳ ಮುಸ್ಲಿಂ ೨ಬಿ ಅಭ್ಯರ್ಥಿಗಳಿಗೆ ೩೦ ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಪ್ರವರ್ಗ-೦೧ ರ ಅಭ್ಯರ್ಥಿಗಳ ವಾರ್ಷಿಕ ಆದಾಯ ರೂ.೩.೫೦ ಲಕ್ಷ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ವಾರ್ಷಿಕ ಆದಾಯ ರೂ.೨.೫೦ ಲಕ್ಷ ಮೀರಿರಬಾರದು.
     ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಹಿಂದುಳಿದ ವರ್ಗಗಳ ಹಾಗೂ ಸಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಸಂಕೀರ್ಣ ಕಟ್ಟಡ, ಕೊಪ್ಪಳ ಇವರಿಂದ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸಂಬಂಧಿಸಿದ ದಾಖಲೆಗಳ ದೃಢೀಕರಿಸಿದ ನಕಲು ಪ್ರತಿಗಳನ್ನು ಲಗತ್ತಿಸಿ, ಸೆ.೧೫ ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ.ಕಲ್ಲೇಶ ತಿಳಿಸಿದ್ದಾರೆ.  
ಆಡಳಿತ ನ್ಯಾಯಾಧೀಕರಣ ತರಬೇತಿ ಅರ್ಜಿ ಆಹ್ವಾನ
ಕೊಪ್ಪಳ, ಸೆ.೦೨ ( ವಾ) ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕಾನೂನು ಪದವಿಧರರಿಗೆ ಆಡಳಿತ ನ್ಯಾಯಾಧಿಕರಣ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ ಸಲ್ಲಿಸಲಿಚ್ಛಿಸುವವರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗದವರಾಗಿರಬೇಕು. ೪೦ ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಅಭ್ಯರ್ಥಿಗಳು ಕಾನೂನು ಪದವಿ ತೇರ್ಗಡೆ ಹೊಂದಿ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ್ಕೆ ೨ ವರ್ಷ ಮೀರಿರಬಾರದು. ತರಬೇತಿಯು ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದು, ಅಭ್ಯರ್ಥಿಗಳು ಜಿಲ್ಲಾ ವಕೀಲರ ಸಂಘದಲ್ಲಿ ನೊಂದಾಯಿಸಿರಬೇಕು. ಜಿಲ್ಲಾ ಹಾಗೂ ತಾಲೂಕಾ ಕೇಂದ್ರಗಳಲ್ಲಿ ನಡೆಯಲಿರುವ ಈ ತರಬೇತಿಯು ೦೪ ವರ್ಷ ಅವಧಿಯದ್ದಾಗಿದ್ದು, ತರಬೇತಿ ಅವಧಿಯಲ್ಲಿ ಮಾಸಿಕ ರೂ.೨,೦೦೦ ತರಬೇತಿ ಭತ್ಯೆ ನೀಡಲಾಗುವುದು. ತರಬೇತಿಗಾಗಿ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗುವುದು. 
     ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕಾನೂನು ಪದವಿಯ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿ ಹಾಗೂ ಪದವಿಗೆ ಸಂಬಂಧಿಸಿದ ದಾಖಲೆಗಳು ಮತ್ತು ನೊಂದಣಿ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಹುಟ್ಟಿದ ದಿನಾಂಕ ಸಮರ್ಥಿಸುವ ಪ್ರಮಾಣ ಪತ್ರ ದಾಖಲೆಗಳ ದೃಢೀಕರಿಸಿದ ಝರಾಕ್ಸ್ ಪ್ರತಿಗಳನ್ನು ಲಗತ್ತಿಸಿ, ಸೆ.೧೫ ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ, ದೂರವಾಣಿ ಸಂಖ್ಯೆ : ೦೮೫೩೯-೨೨೦೧೩೮ ಇವರನ್ನು ಸಂಪರ್ಕಿಸಬಹುದಾಗಿದೆ.

ಸೆ.೦೪ ರಂದು ಪ್ರಧಾನ ಮಂತ್ರಿಗಳ ನೇರ ಸಂಭಾಷಣೆ ಕಾರ್ಯಕ್ರಮ.
ಕೊಪ್ಪಳ, ಸೆ.೦೨ (ಕ ವಾ) ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಸೆ.೦೪ ರಂದು ಬೆಳಿಗ್ಗೆ ೧೧ ರಿಂದ ೧೧.೪೫ ಗಂಟೆಯವರೆಗೆ ರಾಷ್ಟ್ರಾದ್ಯಂತ ಶಾಲಾ ಮಕ್ಕಳ ಜೊತೆ ನೇರ ಸಂಭಾಷಣೆಯನ್ನು ನಡೆಸಲಿದ್ದಾರೆ.
     ಈ ನೇರಸಂಭಾಷಣೆ ಕಾರ್ಯಕ್ರಮವು ದೂರದರ್ಶನದ ಎಲ್ಲಾ ಚಾನೆಲ್‌ಗಳ ಮೂಲಕ, ಆಕಾಶವಾಣಿಯ ಮೀಡಿಯಂ ತರಂಗಾಂತರ, ಪ್ರಧಾನ ಮಂತ್ರಿಗಳ ಎಂ.ಹೆಚ್.ಆರ್.ಡಿ ವೆಬ್‌ಸೈಟ್ ಹಾಗೂ ಎಂ.ಹೆಚ್.ಆರ್.ಡಿ ಅವರ ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಕಡ್ಡಾಯವಾಗಿ ಎಲ್ಲಾ ಶಾಲೆಯ ಮಕ್ಕಳು ವೀಕ್ಷಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಮಕ್ಕಳು ವೀಕ್ಷಿಸಲು ಅನುಕೂಲವಾಗುವಂತೆ ಅಗತ್ಯ ಟಿ.ವಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ್ ತಿಳಿಸಿದ್ದಾರೆ. 

Please follow and like us:
error