ಮಾನವ ಹಕ್ಕುಗಳ ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ- ಅಮರೇಶ್ ಕುಳಗಿ

ಕಾನೂನಿನ ಮುಂದೆ ಎಲ್ಲರೂ ಸಮಾನರು, ಗೌರವಯುತ ಬದುಕಿಗಾಗಿ, ನಮ್ಮ ಸಂವಿಧಾನ ಒದಗಿಸಿರುವ ಹಕ್ಕುಗಳನ್ನು ಗೌರವಿಸಬೇಕಾದ್ದು ಎಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.
  ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮಾನವ ಹಕ್ಕುಗಳ ಅರಿವು ಹಾಗೂ ಜಾಗೃತಿ ಮೂಡಿಸುವ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಭಾರತ ದೇಶದಲ್ಲಿ ಎಲ್ಲರೂ ಸಮಾನವಾಗಿ ಬದುಕುವ ಹಕ್ಕನ್ನು ನಮ್ಮ ಸಂವಿಧಾನ ಒದಗಿಸಿದೆ.  ಗೌರವಯುತವಾಗಿ ಬದುಕಲು ಎಲ್ಲರಿಗೂ ಹಕ್ಕು ಇದೆ.  ಇದಕ್ಕೆ ಚ್ಯುತಿ ಬಂದಾಗ ಮಾನವ ಹಕ್ಕುಗಳ ಉಲ್ಲಂಘನೆ ಆದಂತೆ.   ಸಂವಿಧಾನ ಹಾಗೂ ಕಾನೂನು ನೀಡಿರುವ ಹಕ್ಕುಗಳ ಬಗ್ಗೆ ನಾಗರೀಕರೇ ಅರಿವು ಹೊಂದದೇ ಇದ್ದಲ್ಲಿ, ಹಕ್ಕುಗಳ ರಕ್ಷಣೆ ಆಗುವುದು ಹೇಗೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗುತ್ತದೆ.  ಪ್ರತಿನಿತ್ಯದ ಬದುಕಿನಲ್ಲಿ ನಾವು ಮಾನವ ಹಕ್ಕುಗಳ ಉಲ್ಲಂಘನೆ ಆಗುವುದನ್ನು ಕಾಣುತ್ತೇವೆ.  ಆದರೆ ಹಕ್ಕುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಹೊಂದಿದ್ದಲ್ಲಿ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯ.  ಕಾನೂನು ಬಾಹಿರ ಚಟುವಟಿಕೆಗಳನ್ನು ಕಂಡೂ ಸುಮ್ಮನಿರುವುದು ನಾಗರೀಕರಿಗೆ ತರವಲ್ಲ.  ನ್ಯಾಯ ಪಡೆಯುವುದು ಸಹ ಎಲ್ಲರ ಹಕ್ಕಾಗಿದೆ.  ಜೀವಿಸುವ ಹಕ್ಕು, ಘನತೆ ಹಕ್ಕು, ಸಮಾನತೆ ಹಕ್ಕು, ವಯಕ್ತಿಕ ಸ್ವಾತಂತ್ರ್ಯ, ಶೋಷಣೆ ವಿರುದ್ಧ ಹಕ್ಕು, ಧರ್ಮದ ಹಕ್ಕು ಹೀಗೆ ಸಂವಿಧಾನ ನಮಗೆ ಒದಗಿಸಿರುವ ಎಲ್ಲ ಹಕ್ಕುಗಳ ಬಗ್ಗೆ ಅರಿವು ಹೊಂದುವುದು ಎಲ್ಲರ ಕರ್ತವ್ಯವಾಗಿದೆ ಎಂದು ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಮಾತನಾಡಿ, ಭಾರತದಲ್ಲಿ ಎಲ್ಲ ನಾಗರಿಕರಿಗೆ ಸಂವಿಧಾನದ ಮೂಲಕ ಮೂಲಭೂತ ಹಕ್ಕುಗಳು ದೊರೆತಿದ್ದರೆ, ಅಂತರರಾಷ್ಟ್ರೀಯ ಒಡಂಬಡಿಕೆ ಮೂಲಕ ದೇಶದಲ್ಲಿ ಜಾರಿಯಲ್ಲಿರುವ ಹಕ್ಕುಗಳು ಹಾಗೂ ಕಾನೂನುಗಳ ಮೂಲಕವೂ ಹಲವು ಹಕ್ಕುಗಳು ದೊರೆತಿವೆ.  ’ಆಚಾರವೇ ಸ್ವರ್ಗ- ಅನಾಚಾರವೇ ನರಕ’ ಎಂಬ ನುಡಿಗಟ್ಟಿನ ಹಿನ್ನೆಲೆಯಲ್ಲಿಯೇ ಮಾನವ ಹಕ್ಕುಗಳ ಸಿದ್ಧಾಂತವಿದೆ.  ೧೯೪೮ ರ ಡಿಸೆಂಬರ್ ೧೦ ರಂದು ವಿಶ್ವಸಂಸ್ಥೆಯಿಂದ ಮಾನವ ಹಕ್ಕುಗಳ ರಕ್ಷಣೆ ಕುರಿತು ಒಪ್ಪಂದ ಅಂಗೀಕಾರವಾಗಿದ್ದು, ಎಲ್ಲ ದೇಶಗಳೂ ಸಹ ಇದನ್ನು ಒಪ್ಪಿಕೊಂಡಿವೆ.  ಇದರನ್ವಯ ಎಲ್ಲ ಮನುಷ್ಯರು ಹುಟ್ಟಿನಿಂದ ಘನತೆ ಮತ್ತು ಹಕ್ಕುಗಳಲ್ಲಿ ಸಮಾನ ಮತ್ತು ಪ್ರತಿಯೊಬ್ಬನಿಗೂ ಯಾವುದೇ ತರಹದ ತಾರತಮ್ಯ ಇಲ್ಲದ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಹೊಂದುವುದಾಗಿದೆ.  ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ನಿಟ್ಟಿನಲ್ಲಿ ಹಲವಾರು ಕಾನೂನು, ಕಾಯ್ದೆಗಳು ಜಾರಿಯಲ್ಲಿವೆ.  ಆದರೂ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಜೀತ ಪದ್ಧತಿ, ಮಕ್ಕಳ ಮತ್ತು ಮಹಿಳೆಯರ ಕಳ್ಳಸಾಗಣೆ ಪ್ರಕರಣಗಳು ಜರುಗುತ್ತಿವೆ.  ಇಂತಹ ಕೆಟ್ಟ ಪಿಡುಗುಗಳ ನಿರ್ಮೂಲನೆಗೆ ಪ್ರತಿಯೊಬ್ಬರೂ ಕಾನೂನಿನ ಅರಿವು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ್, ಬಸವರಾಜಯ್ಯ ಉಪಸ್ಥಿತರಿದ್ದರು.  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಸ್ವಾಗತಿಸಿದರು, ಶಿಕ್ಷಣ ಇಲಾಖೆಯ ಮುಜಗೊಂಡ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಾಗಾರದ ಅಂಗವಾಗಿ ಮಾನವ ಹಕ್ಕುಗಳ ರಕ್ಷಣೆ ಕುರಿತಂತೆ ವಕೀಲರುಗಳಾದ ಗಾಯತ್ರಿ ಕಠಾರೆ ಮತ್ತು ಹನುಮಂತರಾವ್ ಅವರು ವಿಶೇಷ ಉಪನ್ಯಾಸ ನೀಡಿದರು.

Related posts

Leave a Comment