ಈರುಳ್ಳಿ ಬೆಳೆಗೆ ಮಚ್ಚೆರೋಗ ಹತೋಟಿಗೆ ಸಲಹೆಗಳು.

ಕೊಪ್ಪಳ ಸೆ. ೨೧ (ಕ ವಾ) ಕೊಪ್ಪಳ ಜಿಲ್ಲೆಯ ಹಲವೆಡೆ ಈರುಳ್ಳಿ ಬೆಳೆಗೆ ನೇರಳೆ ಮಚ್ಚೆರೋಗ ಬಾಧೆ ಕಂಡುಬಂದಿದ್ದು, ಇದರ ಹತೋಟಿಗೆ ಕೊಪ್ಪಳ ತೋಟಗಾರಿಕೆ ಮತ್ತು ಸಲಹಾ ಕೇಂದ್ರವು ರೈತರಿಗೆ ಸಲಹೆಗಳನ್ನು ನೀಡಿದೆ.
     ಜಿಲ್ಲೆಯ ಹಲವೆಡೆ ಇತ್ತೀಚಿಗೆ ಹಿರಿಯ ಸಹಾಯಕ  ತೋಟಗಾರಿಕೆ ನಿರ್ದೇಶಕ ನಜೀರ್ ಅಹ್ಮದ್ ಮತ್ತು   ಸಹಾಯಕ ತೋಟಗಾರಿಕೆ ನಿರ್ದೇಶಕ ರಮೇಶ ಗುಡಸಲಿ ರವರು ಈರುಳ್ಳಿ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈರುಳ್ಳಿ ಬೆಳೆಗೆ ನೇರಳೆ ಮಚ್ಚೆರೋಗ ಬಾಧೆ ಕಂಡುಬಂದಿದ್ದು, ಈ ಖುತುಮಾನದಲ್ಲಿ ಕಂಡು ಬಂದಿರುವ ಮುಖ್ಯ ರೋಗ ನೇರಳೆ ಮಚ್ಚೆರೋಗ. ಈ ರೋಗದ ಲಕ್ಷಣಗಳು ಹಾಗೂ ಹತೋಟಿಯ ಕ್ರಮಗಳ ಬಗ್ಗೆ ಹಾರ್ಟಿಕ್ಲಿನಿಕ್ ಕೊಪ್ಪಳದಿಂದ ರೈತರಿಗೆ ಸಲಹೆ ನೀಡಲಾಗಿದೆ.
ನೇರಳ ಮಚ್ಚೆರೋಗದ ಲಜ್ಷಣಗಳು: ಈ ರೋಗವು  ಆಲ್ಟರ್‍ನೇರಿಯಾ ಪೋರೈ ಎನ್ನುವ ಶಿಲೀಂದ್ರದಿಂದ ಹರಡುತ್ತದೆ. ಇದರಿಂದಾಗಿ ಶೇ.೨೫ ರಿಂದ ಶೇ.೪೦ರಷ್ಟು ಹಾನಿ ಉಂಟಾಗಬಹುದಾಗಿದೆ. ತಗ್ಗಿನಂತಿರುವ ೧/೪  ಇಂಚಿನಿಂದ ೩/೪ ಇಂಚಿನಷ್ಟು ಅಗಲವಾದ ಮಚ್ಚೆಗಳು ಒಂದಕ್ಕೊಂದು ಬೆಸೆದು ಇಡೀ ಎಲೆಯೇ ಕುಸಿದು ಬೀಳುತ್ತದೆ.  ತಂಪಾದ ವಾತಾವರಣದಲ್ಲಿ ಕಂದು ಅಥವಾ ಕಪ್ಪು ಚುಕ್ಕೆಗಳು ಕಂಡುಬರುತ್ತವೆ.  ಗಡ್ಡೆಗಳ ಮೇಲುಂಟಾಗುವ ಗಾಯಗಳು ಈ ಶಿಲೀಂದ್ರಕ್ಕೆ ಆಸರೆ ನೀಡುತ್ತವೆ. ರಾಶಿ ಮಾಡಿದ ನಂತರ ಹಾಗೆಯೇ ಉಳಿದ ಬೆಳೆಯ ಉಳಿಕೆ ಈ ಶಿಲೀಂದ್ರದ ಮುಖ್ಯ ಆಗರ. ಇದಲ್ಲದೆ ರೌದಿ, ಕಸ ಕಡ್ಡಿ ಮುಂತಾದವುಗಳಿಂದ ಈ ಶಿಲೀಂದ್ರ ವೇಗವಾಗಿ ಹರಡುತ್ತದೆ. ಇದೇ  ಕಾರಣಕ್ಕಾಗಿ ಧ್ರಿಪ್ಸ್‌ನುಸಿ  ಮಾಡಿದ ಗಾಯದಿಂದಾಗಿ ಈ ಶೀಲಿಂದ್ರದ ತೀವ್ರತೆ ಹೆಚ್ಚಾಗಿ ಕಾಣುತ್ತದೆ. ಅದಕ್ಕಾಗಿಯೇ ಕೀಟ ಮತ್ತು ರೋಗ ನಾಶಕ ಗಳನ್ನು ಒಂದೇ ಸಾರಿ ಬಳಕೆ ಮಾಡುವುದು ಅಗತ್ಯವಾಗಿದೆ.
    ತಂಪಾದ ವಾತಾವರಣದಲ್ಲಿ ಈರುಳ್ಳಿಗೆ ತಗಲುವ ಇತರೇ ಮುಖ್ಯ ರೋಗಗಳೆಂದರೆ, ಬೂದುರೋಗ, ಕುತ್ತಿಗೆ ಕೊಳೆರೋಗ. ಇವೆಲ್ಲವೂ ಬೇರೆ, ಬೇರೆ ರೋಗಾಣುಗಳಿಂದ (ಪೋರೊಸ್ಪೋರಾ, ಬಾಟ್ರಿಟಿಸ್ ಮುಂ.) ಗಳಿಂದ ಹರಡುತ್ತವೆ.
ಹತೋಟಿ ಕ್ರಮಗಳು:- ಎಲ್ಲ ಶಿಲೀಂದ್ರಗಳು ಕಸ, ಕಡ್ಡಿ ರೋಗಗ್ರಸ್ತ ಗಡ್ಡೆಗಳನ್ನು ಸ್ವಚ್ಚ ಮಾಡದೇ ಹೊಲವನ್ನು ಹಾಗೇ ಬಿಟ್ಟಿರುವುದು, ೩-೪ ವರ್ಷಗಳಿಂದ ಈರುಳ್ಳಿಯನ್ನೇ  ಬೆಳೆಯುವುದು ಅಲ್ಲದೇ ಸಾಧಾರಣ, ರೋಗಗ್ರಸ್ತ ಬೀಜ ಗಡ್ಡೆಗಳ ಬಳಕೆ, ಅಧಿಕ ಸಾರಜನಕಯುಕ್ತ ಗೊಬ್ಬರಗಳ ಬಳಕೆ ಮಾಡುವುದು ಈ ರೋಗ ಕೀಟಗಳು ವ್ಯಾಪಕವಾಗಿ ಹರಡಲು  ಮುಖ್ಯ ಕಾರಣವಾಗಿವೆ. ಗುಣಮಟ್ಟದ ಗೊಬ್ಬರಗಳ ಬಳಕೆ ಮೊದಲನೇಯದಾಗಿ ಪರ್‍ಯಾಯ ಬೆಳೆ ಬೆಳೆಯುವುದು, ಗುಣಮಟ್ಟದ ಬೀಜಗಳ  ಆಯ್ಕೆ ಬೀಜೋಪಚಾರ ಮತ್ತು ಸ್ಚಚ್ಚತೆಯಿಂದ ಈ ರೋಗಗಳನ್ನು ಹತೋಟಿ ಮಾಡಬಹುದಾಗಿದೆ. ಇದಲ್ಲದೇ ಶೇಖರಣಾ ಸಮಯದಲ್ಲಿ ೩೨-೪೦ ಡಿಗ್ರಿ ಉಷ್ಟಾಂಶ, ೬೫-೭೦ ಶೇ ಆರ್ದ್ರತೆ ಕಾಪಾಡಿಕೊಳ್ಳಬೇಕು. ಗಡ್ಡೆಗಳಿಗೆ ಗಾಯಗಳಾಗದಂತೆ ನೋಡಿಕೊಳ್ಳಬೇಕು. ಇನ್ನು ರಾಸಾಯನಿಕ ಬಳಕೆಗೆ  ಬಂದಾಗ ದ್ರಿಪ್ಸ್ ನುಸಿ ನಾಶಕ ಹಾಗೂ  ಶೀಲೀಂದ್ರ ನಾಶಕಗಳನ್ನು ಬಳಸುವುದು ಸೂಕ್ತ.
     ಮ್ಯಾಂಕೋಜೆಬ್ ೨.೦೦ ಗ್ರಾಂ. ಮತ್ತು ಪ್ರೋಫೆನೋಫಾಸ್ ೧.೫೦ ಮಿ.ಲೀ. ಬೂದುರೋಗ ಕಂಡು ಬಂದಲ್ಲಿ ರೀಡೋಮೀಲ ಎಂ.ಜೆಡ್. ೨.೦೦ ಗ್ರಾಂ. ಮತ್ತು ಕ್ಲೋರೋಥಲೋನಿಲ್ ೨.೦೦ ಗ್ರಾಂ. ೧.ಲೀ. ನೀರಿಗೆ ಬೆರೆಸಿ  ಸಿಂಪಡಿಸಬೇಕು. ತಂಪಾದ ವಾತಾವರಣ ವಿದ್ದಲ್ಲಿ ೧೫ ದಿನಗಳ ನಂತರ ಸಿಂಪರಣೆಯನ್ನು ಪುನರಾವರ್ತಿಸಬೇಕು.
    ಇತ್ತೀಚೆಗೆ ತರಕಾರಿ, ಹಣ್ಣು ಬೆಳೆಗಳಲ್ಲಿ ಹೆಚ್ಹೆಚ್ಚು ರಾಸಾಯನಿಕಗಳ ಬಳಕೆ ಆಗುತ್ತಿದ್ದು, ಅನೇಕ ರೋಗಗಳಿಗೆ  ಕಾರಣವಾಗುತ್ತಿದೆ. ತರಕಾರಿ ಹಾಗೂ ಹಣ್ಣಿನ ಬೆಳೆಗಳ  ಸಂಗ್ರಹಣಾ ಸಮಯ ಕಡಿಮೆ ಇರುವುದರಿಂದ ಸಾವಯವ ಪೀಡೆ ನಾಶಕಗಳನ್ನೇ ಬಳಸಬೇಕು. ಅಗತ್ಯ ವಿದ್ದಾಗ ಮಾತ್ರ ಶಿಫಾರಸು ಮಾಡಿದಷ್ಟೇ ಪ್ರಮಾಣದ ರಾಸಾಯನಿಕಗಳನ್ನು ಬಳಸಬೇಕು. ತರಕಾರಿ, ಹಣ್ಣುಗಳನ್ನು ಬಳಸುವಾಗ ಬಿಳಿ ವಿನಿಗಾರ ನಿಂದ ಮತ್ತು  ಬಿಸಿ ನೀರಿನಿಂದ ತೊಳೆದು ಬಳಸಬೇಕು.
    ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಪ್ಪಳ ಮತ್ತು ಆಯಾ ತಾಲ್ಲೂಕು ತೋಟಗಾರಿಕೆ ಕಛೇರಿಗಳನ್ನು ಮತ್ತು  ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ.
Please follow and like us:
error