fbpx

ನೂತನ ಭೂ ಸ್ವಾಧೀನ ಸುಗ್ರೀವಾಜ್ಞೆ ಹಿಂಪಡೆಯಲು ಬಸನಗೌಡ ಬಾದರ್ಲಿ ಒತ್ತಾಯ

 

 ಕೇಂದ್ರ ಸರ್ಕಾರವು ಹೊರಡಿಸಿರುವ ಭೂ ಸ್ವಾಧೀನ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳಿಂದ ಅಂಕಿತ ಬಿದ್ದಿದ್ದು ವಿಧೇಯಕ ಜಾರಿಗೆ ಬಂದಿದೆ. ಈ ಕಾಯ್ದೆಯು ರೈತಾಪಿ ವರ್ಗಕ್ಕೆ, ಕೃಷಿ ಕಾರ್ಮಿಕರಿಗೆ ಮಾರಕವಾಗಿದ್ದು ಕೂಡಲೇ ಈ ನೂತನ ಭೂ ಸ್ವಾಧೀನ ಸುಗ್ರೀವಾಜ್ಞೆ ಹಿಂಪಡೆಯುವಂತೆ ಕೊಪ್ಪಳ ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ  ಬಸನಗೌಡ ಬಾದರ್ಲಿ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿ, ಒಂದೆಡೆ ವರ್ಷಂಪ್ರತಿ ಕಾರ್ಖಾನೆಗಳಿಗೆಂದು, ಲೇಔಟ್‌ಗಳ ನಿರ್ಮಾಣಕ್ಕೆ, ರಸ್ತೆ ಅಗಲೀಕರಣ… ಹೀಗೆ ಹಲವು ಕಾರಣಗಳಿಗಾಗಿ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಸಾಗುವಳಿ ಭೂಮಿಯೂ ಸತತವಾಗಿ ಪರಭಾರೆಯಾಗುತ್ತಲೇ ಇದೆ. ಮತ್ತೊಂದೆಡೆಯಲ್ಲಿ ಮಳೆ ಭಾರದೆ, ರಸಗೊಬ್ಬರ ದೊರೆಯದೆ, ಕೀಟಬಾಧೆ, ಅಥವಾ ಅಧಿಕ ಮಳೆಗೆ ಬೆಳೆ ನಾಶವಾಗುತ್ತಿದೆ. ಆಹಾರ ದಾನ್ಯಗಳ ಉತ್ಪಾದನೆಯಲ್ಲಿ ಕುಂಟಿತವಾಗುತ್ತಿದೆ. ೨೦೧೨-೧೩ ನೇ ಸಾಲಿನಲ್ಲಿ ಉತ್ಪನ್ನವಾದ ಆಹಾರ ಧಾನ್ಯಗಳ ಉತ್ಪಾದನೆ ೨೫೫.೩೬ ಕೋಟಿ ಟನ್‌ಗಳಷ್ಟಿದ್ದರೆ, ಅದಕ್ಕೂ ಹಿಂದಿನ ವರ್ಷದಲ್ಲಿ ೨೫೯.೨೯ ಕೋಟಿ ಟನ್‌ಗಳಷ್ಟಿತ್ತೆಂದು ಅಂದಾಜಿಸಲಾಗಿದೆ, ಇದೇ ಪ್ರಮಾಣದಲ್ಲಿ ಕುಸಿಯುತ್ತಾ ಹೋದರೆ ಮುಂದಿನ ಪೀಳಿಗೆಯವರಿಗೆ ಕೈತುತ್ತಿಗೂ ತತ್ವಾರ ಎದುರಾಗುವ ಸ್ಥಿತಿ ನಿರ್ಮಾಣವಾಗಲಿದೆ. ಅನ್ನದಾತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಿಸಬೇಕಾದ್ದು ಸರ್ಕಾರದ ಆದ್ಯಕರ್ತವ್ಯವಾಗಿರಬೇಕು. ಆದರೆ ಕೇಂದ್ರ ಸರ್ಕಾರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಅವಕಾಶ ಮಾಡಿಕೊಡುವಂತಹ ಕಾನೂನನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿದೆ. ಹೀಗಾದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗಲು ಹೇಗೆ ಸಾಧ್ಯ?! ನೂತನ ಕಾಯ್ದೆಯಿಂದ ಭೂಮಾಲೀಕರಿಗೆ ಹಣ ದೊರೆಯಬಹುದು. ಆದರೆ ಕೃಷಿ ಭೂಮಿಯನ್ನು ಅವಲಂಭಿಸಿರುವ ಕೃಷಿ ಕಾರ್ಮಿಕರು,  ಗೇಣಿದಾರರ ಬದುಕು ಮೂರಾಬಟ್ಟೆಯಾಗಲಿದೆ. ನಮ್ಮ ರಾಜ್ಯದ  ಇತಿಹಾಸವನ್ನು ಮೊಗೆದಲ್ಲಿ ದಿ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ ಅವರು ಬಡ ಗೇಣಿದಾರರನ್ನು ರಕ್ಷಿಸುವ ಸಲುವಾಗಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಈ ಕಾಯ್ದೆಯಿಂದ ಹೂಡಿಕೆದಾರರು ರಾಜ್ಯದತ್ತ ಮುಖಮಾಡುವುದಿಲ್ಲವೆಂದು ಹೇಳಲಾಗುತ್ತಿತ್ತು. ಆದರೂ ಅರಸರು ಅಂಜದೆ ಜಾರಿಗೆತಂದು ಲಕ್ಷಾಂತರ ಕೃಷಿ ಕುಟುಂಬಗಳಿಗೆ ವರದಾನವಾಗುವಂತೆ ಮಾಡಿದರು. ದೇಶಕ್ಕೆ ಇದೊಂದು ಮಾದರಿ ನಡೆಯಾಗಿತ್ತು.
ಕಳೆದ ಹಲವು ವರ್ಷಗಳ ಅವಧಿಯಲ್ಲಿ ವಿಷೇಶ ಆರ್ಥಿಕ ವಲಯಗಳ ಅಭಿವೃದ್ಧಿಗಾಗಿ ವಶಪಡಿಸಿಕೊಂಡ ೧,೧೪,೦೮೮ ಎಕರೆ ಭೂಮಿಯಲ್ಲಿ ೪೩,೩೫೩ ಎಕರೆ ಭೂಮಿಯಲ್ಲಿ ಏನೇನು ಕೆಲಸ ನಡೆದಿಲ್ಲ! ಇದಿಷ್ಟೇ ಅಲ್ಲದೆ ವಿಶೇಷ ಆರ್ಥಿಕವಲಯ ಸ್ಥಾಪಿಸುವ ನೆಪದಲ್ಲಿ ೬,೩೦೯  ಕೋಟಿ ರೂಪಾಯಿಗಳ  ಸಾಲ ಪಡೆದಿವೆಯೆಂಬ ವರದಿಗಳು ಬಹಿರಂಗಗೊಂಡಿರುವುದನ್ನು ತಾವು ಗಮನಿಸಿರಬಹುದು. ಅತ್ತ ಕೃಷಿ ಭೂಮಿಗೆ ಗುನ್ನ- ಇತ್ತ ಉದ್ದಿಮೆಗಳ ಸ್ಥಾಪನೆಯೂ ಇಲ್ಲ. ಮಧ್ಯದಲ್ಲಿ ಮತ್ಯಾರೋ ‘ಸಾಲದ’  ಸಂಪತ್ತು ಅನುಭವಿಸುತ್ತಿರುವಂತೆ ಗೋಚರಿಸುವುದಿಲ್ಲವೇ?! ಈ ರೀತಿಯ ಭೂ ಸ್ವಾಧೀನಗಳ ವಿರುದ್ಧ ಕೃಷಿಕರು ನಡೆಸಿದ ಹೋರಾಟಕ್ಕೆ ಸ್ಪಂದಿಸಿ ೨೦೧೩ ರಲ್ಲಿ  ಅಂದಿನ ಕೇಂದ್ರ ಸರ್ಕಾರ ಬಡವರ, ರೈತರ ಮತ್ತು ಕೃಷಿಕರಪರಾಗಿದ್ದ ಕಾಯ್ದೆಯನ್ನು ಜಾರಿಗೆ ತಂದಿದ್ದು ತಮಗೂ ತಿಳಿದಿರಬಹುದು. ಈ ಮಸೂದೆಯಂತೆ ಕೃಷಿ ಭೂಮಿ ಬೇಕಾಬಿಟ್ಟಿ ಮಾರಾಟಕ್ಕೆ ಕಡಿವಾಣ ಬಿದ್ದಿತ್ತು. ಭೂಸ್ವಾಧೀನಕ್ಕೆ ಶೇ. ೮೦ ರಷ್ಟು ರೈತರು ಒಪ್ಪಿಗೆ ಸೂಚಿಸುವುದನ್ನು ಮತ್ತು ಭೂಮಿ ಬೆಲೆಯನ್ನು ಮಾರಾಕಟ್ಟೆ ದರಕ್ಕಿಂತಲೂ ಎರಡು ಪಟ್ಟು ಹೆಚ್ಚು ನಿಗದಿಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ರೈತರ ಹಿತ ಕಾಯಲು ಇದು ಸೂಕ್ತವಾಗಿತ್ತು. ಈ ಕಾಯ್ದೆಯನ್ನು ಎಲ್ಲಾ ರಾಜ್ಯಗಳಲ್ಲಿ ಸಮರ್ಪಕವಾಗಿ ಜಾರಿಗೆ ತರುವ ಮುನ್ನವೇ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆಯ ಮೂಲಕ ವಿಧೆಯಕವನ್ನು ತಂದಿದೆ.
ನೂತನ ಭೂ ಸ್ವಾಧೀನ ಮಸೂದೆಯಲ್ಲಿರುವ ಹುಳುಕುಗಳ ಕುರಿತು ತಮ್ಮಂತಹ ಮೇಧಾವಿಗಳಿಗೆ ಹೇಳುವ ಅಗತ್ಯವಿಲ್ಲ. ಆದರೂ ಕ್ಲುಪ್ತವಾಗಿ ಇಲ್ಲಿ ಉಲ್ಲೇಖಿಸಿದ್ದೇನೆ. ಭೂ ಸ್ವಾಧೀನ ನಡೆಸುವಾಗ ರೈತರ ಒಪ್ಪಿಗೆ ಪಡೆಯುವ, ರೈತರೊಂದಿಗೆ ಚರ್ಚಿಸಿ ಬೆಲೆ ನಿಗದಿಗೊಳಿಸುವ ಕೃಷಿಕರ ಒಪ್ಪಿಗೆಯ ಷರತ್ತಿನ ವ್ಯಾಪ್ತಿಯಿಂದೆಲ್ಲಾ ಹೋರಗಿಡಲಾಗಿದೆ. ಪರಿಸರ ಹಾಗೂ ಸಾಮಾಜಿಕ ವೆಚ್ಚಗಳನ್ನು ಉದ್ಯಮಿಗಳು ಭರಸಬೇಕ್ಕೇನ್ನುವ ಷರತ್ತುಗಳಿಂದೆಲ್ಲಾ ಸಡಿಲಗೊಳಿಸಲಾಗಿದೆ. ಹೀಗಾಗಿಯೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯೂ ಈ ಮಸೂದೆಯನ್ನು ರೈತರ, ಕೃಷಿಕರ, ಜನ, ಪರಿಸರವಿರೋಧಿ ಎಂದು ಪರಿಗಣಿಸಿದೆ. ಈ ದೇಶಕ್ಕೆ ಮಾರಕವಾಗಿ ಈ ಮಸೂದೆ ಕಾಡಲಿದೆ. ಅನ್ನದಾತರ ಪಾಲಿಗಿದು ಮರಣಶಾಸನವಾಗಲಿದೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯು ನೂತನ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತದೆ. 
ನಮ್ಮ ಹೋರಾಟದ ಹಿಂದಿನ ಕಾಳಜಿ ರೈತರ ಪರವಾಗಿದೆ. ಅನ್ನದಾತರ ಅಂಗಳ ರಕ್ಷಿಸಬೇಕು. ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗಬೇಕು. ಈ ಕಳಕಳಿ  ನಮ್ಮ ಧೇಯವಾಗಿದ್ದು. ಕೇಂದ್ರ ಸರಕಾರದ ಗಮನಕ್ಕೆ ತಂದು ನೂತನ ಭೂ ಸ್ವಾಧೀನ ಸುಗ್ರೀವಾಜ್ಞೆಯನ್ನು ಹಿಂಪಡೆಯುವಂತೆ ಕೊಪ್ಪಳ ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಸನಗೌಡ ಬಾದರ್ಲಿ ಹಾಗೂ ಅವರ ನೇತೃತ್ವದ ಯುವ ಕಾಂಗ್ರೆಸ್ ಮುಂಖಡರಾದ ಶರಣಬಸವರಾಜ, ಸುರೇಶ ದಾಸರಡ್ಡಿ, ಮುರ್ತುಜಾಸಾಬ, ಅರುಣರಡ್ಡಿ ಇನಾಮತಿ, ಪರಶುರಾಮ ಮೆಕ್ಕಿ, ಅಂದಪ್ಪ, ಶರೀಫಸಾಬ, ಅಜಗರಅಲಿ, ಶಾಹಿನ್, ರಾಜುನಾಯಕ, ಚಂದ್ರುಗೌಡ, ಬಸವರಾಜ, ಶರಣಪ್ಪ ಶೆಟ್ಟಿ ಸೇರಿದಂತೆ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. 
Please follow and like us:
error

Leave a Reply

error: Content is protected !!