fbpx

ವೈಜ್ಞಾನಿಕ ಸಂಶೋಧನೆಯು ಬದುಕನ್ನು ನೂತನ ವಿನ್ಯಾಸದಲ್ಲಿ ರೂಪಿಸುತ್ತಿದೆ -ವಿಜ್ಞಾನಿ ಡಾ. ಎಸ್.ಎಂ.ಶಿವಪ್ರಸಾದ್

ಹೊಸಪೇಟೆ- ಆಧುನಿಕ ಯುಗದಲ್ಲಿ ವೈಜ್ಞಾನಿಕ ಸಂಶೋಧನೆಯು ಮನುಷ್ಯನ ಬದುಕನ್ನು ನೂತನ ವಿನ್ಯಾಸದಲ್ಲಿ ರೂಪಿಸುತ್ತಿದೆ ಎಂದು ಜವಾಹರಲಾಲ್ ನೆಹರು ಅಡ್ವಾನ್ಸ್‌ಡ್ ಸೈನ್ಸ್ ರಿಸರ್ಚ್ ಸೆಂಟರ್‌ನ ನ್ಯಾನೋ ವಿಜ್ಞಾನಿ ಡಾ. ಎಸ್.ಎಂ.ಶಿವಪ್ರಸಾದ್ ಹೇಳಿದರು.
ನಗರದಲ್ಲಿ ಸೋಮವಾರ ವಿಜಯನಗರ ಕಾಲೇಜಿನಲ್ಲಿ ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಜ್ಯ ಮಟ್ಟದ ನ್ಯಾನೋ ಸೈನ್ಸ್ ಮತ್ತು ನ್ಯಾನೋ ಟೆಕ್ನಾಲಜಿ ವಿಷಯದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತಿಯಾದ ಸೌಲಭ್ಯಗಳು ಮನುಷ್ಯನ ಬದುಕನ್ನು ಸ್ವಾವಲಂಬಿಯಾಗಿಸುವುದಕ್ಕಿಂತಲೂ ಪರಾವಲಂಬಿಯಾಗಿಸುವ ಆತಂಕವನ್ನು ಪಡೆಯುವ ಸ್ವರೂಪದಲ್ಲಿದೆ.  ಇದು ವೈಜ್ಞಾನಿಕ ಸಂಶೋಧನೆಯಿಂದ ಉತ್ಪಾದನೆಯಾಗುವ ಶಕ್ತಿ ಮತ್ತು ಸಾಮರ್ಥ್ಯವನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದರ ಅರಿವಿನ ಕೊರತೆಯಿಂದ ಆದ ಆತಂಕವಾಗಿದೆ.  ವಿಜ್ಞಾನದ ಸದ್ಬಳಕೆ ಹೇಗೆ ಆಗಬೇಕು ಎಂಬುದರ ಬಗ್ಗೆ ಹೆಚ್ಚು ಗಮನಕೊಡಬೇಕಾದ ಅಗತ್ಯವಿದೆ ಎಂದರು. ಭಾರತವು ವಿಶ್ವದ ವೈಜ್ಞಾನಿಕ ಸಂಶೋಧನೆಯಲ್ಲಿ ಗಮನಾರ್ಹ ಸಾಧನೆಮಾಡುತ್ತಾ ಜಗತ್ತಿನ ಗಮನ ಸೆಳೆದಿದೆ.  ವೈದ್ಯಕೀಯ, ಭೌತ ವಿಜ್ಞಾನ, ರಸಾಯನಶಾಸ್ತ್ರ, ತಂತ್ರಜ್ಞಾನ, ಸಾರಿಗೆ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳಲ್ಲಿ ವೈಜ್ಞಾನಿಕವಾದ ಅವಿರತ ಶ್ರಮದಿಂದ ಕ್ರಾಂತಿಯ ಸ್ವರೂಪದ ಶೋಧಗಳನ್ನು ನಡೆಸುತ್ತಿದೆ.  ಶೈಕ್ಷಣಿಕ ಕ್ಷೇತ್ರದಲ್ಲಿ ಇವುಗಳ ವಿವರಗಳು ಆಧುನಿಕ ವಿದ್ಯುನ್ಮಾನದ ನೆರವಿನಿಂದ ಲಭ್ಯವಾಗುತ್ತಿದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅದರ ಸದುಪಯೋಗಮಾಡಿಕೊಳ್ಳಬೇಕಾಗಿದೆ.  ಮಾಹಿತಿಗಳ ಕ್ರೋಢಿಕರಣಕ್ಕಿಂತಲೂ ಅವುಗಳ ವಿಶ್ಲೇಷಣೆಮಾಡುತ್ತಾ ಇಂದಿನ ಬದುಕಿಗೆ ಅನ್ವಯಿಸಿಕೊಳ್ಳುವ ಉಪಾಯವನ್ನು ಕಂಡುಕೊಳ್ಳಬೇಕಾಗಿದೆ.   ಮನುಷ್ಯನ ಸ್ವಭಾವ ಎಂದರೆ ಹೆಚ್ಚು ಅನುಕೂಲಗಳು ಲಭ್ಯವಾಗುತ್ತಿದ್ದಂತೆ ಹೆಚ್ಚು ಅತೃಪ್ತಿಗೆ ಒಳಗಾಗುತ್ತಾನೆ.  ಈ ಎಚ್ಚರಿಕೆಯನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಾಗುತ್ತದೆ.  ಕಳೆದ ಮೂವತ್ತು ವರ್ಷಗಳಲ್ಲಿ ದೇಶದ ನಾಗರಿಕ ಬದುಕು ಮತ್ತು ಗ್ರಾಮೀಣ ಬದುಕು ಸಾಕಷ್ಟು ಸುಧಾರಣಾತ್ಮಕ ಬೆಳವಣಿಗೆಯನ್ನು ಪಡೆದಿವೆ.  ಗ್ರಾಮೀಣಹಂತದಲ್ಲಿ ಆತ್ಮವಿಶ್ವಾಸದ ಮಟ್ಟವು ನಾಗರಿಕಹಂತದಲ್ಲಿ ಇರುವ ಆತ್ಮವಿಶ್ವಾಸದ ಮಟ್ಟಕಿಂತಲೂ ಹೆಚ್ಚು ವ್ಯತ್ಯಾಸವನ್ನು ಕಂಡಿದೆ.  ಇವೆಲ್ಲವೂ ವೈಜ್ಞಾನಿಕ ಸಂಶೋಧನೆಯಿಂದ ಆದ ಮಹತ್ವದ ಪರಿಣಾಮಗಳಾಗಿವೆ.  ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ತಂತ್ರಜ್ಞಾನವನ್ನು ಅವಲಂಬಿಸಿಕೊಂಡು ಜ್ಞಾನದ ವಿಸ್ತಾರವನ್ನು ಪಡೆಯಬೇಕಾಗಿದೆ.  ಜೊತೆಗೆ ವಿಜ್ಞಾನದಿಂದ ಉತ್ಪಾದನೆಯಾಗುವ ಶಕ್ತಿಯನ್ನು ಸಂಗ್ರಹಿಸಿಕೊಳ್ಳುವುದು ನಮ್ಮ ಹೊಣೆಗಾರಿಕೆಯೂ ಆಗಿದೆ ಎಂದರು. ಮುಖ್ಯ ಅತಿಥಿ ವಿಜಯನಗರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಗುತ್ತಿಗನೂರ ವಿರೂಪಾಕ್ಷಗೌಡ ಮಾತನಾಡಿ, ವಿಜ್ಞಾನಿಗಳು ದೇಶದ ಸಂಪತ್ತು.  ಭಾರತದ ವಿಜ್ಞಾನಿಗಳು ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಗಳ ಮೂಲಕ ಇಂದು ದೇಶದ ಸಂಪನ್ಮೂಲವನ್ನು ಹೆಚ್ಚು ಗಟ್ಟಿಗೊಳಿಸುತ್ತಾ ಸಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.  ಅಂತರ ರಾಷ್ಟ್ರೀಯಮಟ್ಟದ ಇಸ್ರೋ, ನಾಸಾಗಳಂಥ ವೈಜ್ಞಾನಿಕ ಸಂಸ್ಥೆಗಳಲ್ಲಿ ನಮ್ಮ ಭಾರತದ ವಿಜ್ಞಾನಿಗಳು ಜಗತ್ತು ಮೆಚ್ಚುವಂಥ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.  ಇಂದು ವಿಶ್ವವೇ ಭಾರತದ ಕಡೆಗೆ ದೃಷ್ಟಿ ಇಟ್ಟು ನೋಡುವಂಥ ಸಂಶೋಧನೆಗಳು ನಡೆಯುತ್ತಿವೆ.  ಇತ್ತೀಚಿಗೆ ಮಂಗಳ ಗ್ರಹದ ಮೇಲೆ ನಮ್ಮವರು ನಡೆಸಿದ ಉಪಗ್ರಹದ ಯಶಸ್ವಿ ಪ್ರಯೋಗ ದೇಶವೇ ಮೆಚ್ಚುವಂಥ ಕಾರ್ಯವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಎಸ್.ಪೋಲಿಸ್ ಪಾಟೀಲ್ ಮಾತನಾಡಿ, ಆಧುನಿಕ ವೈಜ್ಞಾನಿಕ ಸಂಶೋಧನೆಯನ್ನು ನಾವು ಉಪಯುಕ್ತವಾಗಿ ಮತ್ತು ಅಭಿವೃದ್ಧಿಯ ಹಿನ್ನೆಲೆಯಲ್ಲಿ ಬಳಸಿಕೊಳ್ಳಬೇಕಾಗುತ್ತದೆ.  ಅದನ್ನು ದುರ್ಬಳಕೆ ಮಾಡಿಕೊಂಡರೆ ವಿಜ್ಞಾನಿಗಳ ಸಂಶೋಧನೆಯನ್ನು ದುರುಪಯೋಗ ಮಾಡಿಕೊಂಡಂತೆ.  ಉಳಿಸಿಕೊಳ್ಳುವುದು ಎಂಬುದು ಒಂದು ಅರ್ಥದಲ್ಲಿ ಸಾಧನೆಗೆ ನೀಡುವ ಗೌರವವಾಗಿದೆ.  ಇದನ್ನು ಅರಿತು ಎಲ್ಲರೂ ಬದುಕನ್ನು ಕಟ್ಟಬೇಕು ಎಂದರು.  ಸಮಾರಂಭದ ವೇದಿಕೆಯ ಮೇಲೆ ಕಾಲೇಜು ಆಡಳಿತ ಮಂಡಳಿಯ ಸದಸ್ಯರುಗಳಾದ ಬಿ.ಕುಮಾರಸ್ವಾಮಿ, ಲಿಂಗನಗೌಡ, ಜಿ.ಎಸ್.ಸತೀಶ್ ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಬಿ. ಬೆಲ್ಲದ್ ಹಾಜರಿದ್ದರು. ಡಾ. ಉಮಾಪತಿ ಪತ್ತಾರ್ ನಿರೂಪಿಸಿದರು. ರಾಗಶ್ರೀ, ರಾಧಿಕಾ, ಸಂಧ್ಯ ಮತ್ತು ನಿಹಾರಿಕಾ ಪ್ರಾರ್ಥನೆ ನಡೆಸಿಕೊಟ್ಟರು.
Please follow and like us:
error

Leave a Reply

error: Content is protected !!