ಅಪೌಷ್ಠಿಕತೆಯ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಪೂರೈಕೆ

ಮಕ್ಕಳಿರಲವ್ವ ಮನೆತುಂಬ ಎಂಬುದು ಬಹು ಹಿಂದಿನ ಮಾತು, ಆದರೆ ಜನಸಂಖ್ಯಾ ಸ್ಪೋಟ, ಹಾಗೂ ಆಧುನಿಕ ಆಹಾರ ಪದ್ಧತಿ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಈಗ ಹೆಣ್ಣಿರಲಿ, ಗಂಡಿರಲಿ, ಆರೋಗ್ಯವಂತ ಒಂದು ಮಗುವಿರಲಿ ಎಂಬುದು ಹಿತನುಡಿಯಾಗಿ ಪರಿಣಮಿಸಿದೆ.  ಪಾಲಕರು ಆರೋಗ್ಯವಂತ ಬದುಕನ್ನು ತಾವೇ ರೂಪಿಸಿಕೊಳ್ಳಬೇಕಾಗಿದೆ.   ಗೃಹಿಣಿಗೆ ಹೆರಿಗೆ ಮರು ಜನ್ಮವಿದ್ದಂತೆ. ಅವರು ಗರ್ಭಿಣಿಯವರಾದಾಗ ಮತ್ತು ಮಗುವಿಗೆ ಜನ್ಮ ನೀಡಿದಾಗ ಆರೋಗ್ಯ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.  
ನಮ್ಮ ಸಮಾಜದಲ್ಲಿ ಅಪೌಷ್ಠಿಕತೆಯಿಂದ ಸಾಕಷ್ಟು ಮಕ್ಕಳು ಬಳಲುತ್ತಿದ್ದಾರೆ. ಮಕ್ಕಳಲ್ಲಿಯ ತೀವ್ರ ಅಪೌಷ್ಠಿಕತೆಯು ವೈದ್ಯಕೀಯವಲ್ಲವೇ ಸಾಮಾಜಿಕ ಸಮಸ್ಯೆಯಾಗಿಬಿಟ್ಟಿದೆ. ಪೌಷ್ಠಿಕತೆಯ ಕೊರತೆಯಿಂದ ಮಗು ಸಾಮಾನ್ಯ ರೀತಿಯಲ್ಲಿ ಬೆಳವಣಿಗೆ ಆಗದೇ ವಿವಿಧ ರೋಗಗಳಿಗೆ ತುತ್ತಾಗಿ ಸಾವನಪ್ಪುತ್ತದೆ.
ತಾಯಿಯ ಹಾಲಿನ ಅಸಮರ್ಪಕ ಪೂರೈಕೆ, ಬಡತನ, ಆರೋಗ್ಯ ಶಿಕ್ಷಣದ ಕೊರತೆ, ಬಾಲ್ಯ ವಿವಾಹ, ಪೂರಕ ಪೌಷ್ಠಿಕ ಆಹಾರ ನೀಡದಿರುವ ಕಾರಣಗಳಿಂದ ಮಗು ಅಪೌಷ್ಠಿಕತೆಗೆ ತುತ್ತಾಗುತ್ತದೆ. ಇಂತಹ ತೀವ್ರ ಅಪೌಷ್ಠಿಕತೆಯ ಮಕ್ಕಳನ್ನು ಗುರುತಿಸಿ ಅವರನ್ನು ಆಸ್ಪತ್ರೆಗಳಲ್ಲಿ ತಾಯಿಯೊಂದಿಗೆ ದಾಖಲು ಮಾಡಿ, ನಿರಂತರ ಆರೋಗ್ಯ ಸೇವೆ ಕಲ್ಪಿಸುವುದಕ್ಕಾಗಿ ಕರ್ನಾಟಕ ಸರ್ಕಾರ ಪೌಷ್ಠಿಕತೆಯ ಪುನಶ್ಚೇತನ ಕೇಂದ್ರಗಳನ್ನು ಸ್ಥಾಪಿಸಿದೆ. 
ಏನಿದು ಅಪೌಷ್ಠಿಕತೆ? – ಮಗು ಜನಿಸಿದಾಗ ಕಡಿಮೆ ತೂಕವನ್ನು ಹೊಂದಿರುವುದು, ಹಾಗೂ ಬೆಳೆಯುವ ವಯಸ್ಸಿಗೆ ತಕ್ಕ ತೂಕವನ್ನು ಹೊಂದಿಲ್ಲದಿರುವುದು, ಮಾಂಸಖಂಡಗಳು ಬಲಹೀನವಾಗಿ ಮಗು ತೆಳ್ಳಗಾಗುತ್ತದೆ ಅಥವಾ ಮಾಂಸ ಮೂಳೆಗೆ ಅಂಟಿಕೊಂಡಿರುತ್ತೆ. ಹೊಟ್ಟೆಯು ದಪ್ಪವಾಗಿ ಎದ್ದು ಕಾಣುತ್ತದೆ. ಮಗುವಿಗೆ ಯಾವ ಚಟುವಟಿಕೆಯಲ್ಲೂ ಆಸಕ್ತಿ ಇರುವುದಿಲ್ಲ. ಕೂದಲು ಕಂದು ಬಣ್ಣಕ್ಕೆ ತಿರುಗಿ, ತೀವ್ರ ಬಲಹೀನತೆ, ಪಾದ ಹಾಗೂ ಮುಖದಲ್ಲಿ ಊತ, ಅತಿಸಾರ ಭೇದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಮಗುವಿಗೆ ಹಸಿವು ಕಡಿಮೆಯಾಗುವುದು ಹಾಗೂ ಬೇಗ ಆಯಾಸಗೊಳ್ಳುವಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಮಕ್ಕಳು ರಕ್ತಹೀನತೆಯಿಂದ ಬಳಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ಅತಿಸಾರ, ವಾಂತಿ, ನ್ಯುಮೊನಿಯಾದಂತಹ ಸೋಂಕುಗಳು ಈ ಮಗುವಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತವೆ.  ಇಂತಹ ಲಕ್ಷಣಗಳನ್ನು ಅಪೌಷ್ಠಿಕತೆ ಎಂದು ಪರಿಗಣಿಸಲಾಗುತ್ತಿದೆ.
ಕಾರಣಗಳು : ಬಡತನ, ಆರೋಗ್ಯ, ಶಿಕ್ಷಣದ ಕೊರತೆ, ಮಹಿಳೆಯರಲ್ಲಿ ಅನಕ್ಷರತೆ, ಲಿಂಗ ತಾರತಮ್ಯ, ಬಾಲ್ಯ ವಿವಾಹ ಹಾಗೂ ಎಳೆಯ ವಯಸ್ಸಿನಲ್ಲಿ ಗರ್ಭಧಾರಣೆ ಸಮರ್ಪಕವಾಗಿ ಎದೆಹಾಲು ಉಣಿಸದೇ ಇರುವುದು ಪೂರಕ ಪೌಷ್ಠಿಕ ಆಹಾರವನ್ನು ಆರು ತಿಂಗಳಾದ ತಕ್ಷಣ ಪ್ರಾರಂಭಿಸದೇ ಇರುವುದು ಹಾಗೂ ಸ್ವಚ್ಚತೆ ಅನುಸರಿಸುವುದೇ ಇರುವುದು ಅಪೌಷ್ಠಿಕತೆಗೆ ದಾರಿ ಮಾಡಿಕೊಡುತ್ತದೆ. ಅಲ್ಲದೇ ಮಗು ಹುಟ್ಟಿದ ಅರ್ಧಗೊಂಟೆಯೊಳಗೆ ಮೊದಲು ಎದೆಹಾಲನ್ನು ಉಣಿಸದೇ ಇರುವುದು, ಇದು ಸೂತಕದ ಹಾಲು ಎಂಬ ಮೂಡನಂಬಿಕೆಯು ಸಹ ಅಪೌಷ್ಠಿಕತೆಗೆ ಕಾರಣವಾಗುತ್ತದೆ. 
ನಿವಾರಣೆ : ಮಗು ಹುಟ್ಟಿದ ಅರ್ಧಗೊಂಟೆಯೊಳಗೆ ಎದೆಹಾಲನ್ನು ಕುಡಿಸುವುದರಿಂದ ಹಾಲಿನಲ್ಲಿರುವ ಕ್ಯಾಲ್ಸಿಯಂ ನಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಗು ಹುಟ್ಟಿದ ಆರು ತಿಂಗಳವರೆಗೆ ಕಡ್ಡಾಯವಾಗಿ ಎದೆಹಾಲು ನೀಡುವುದರಿಂದ ಯಾವುದೇ ಸೋಂಕು ಬಾರದಂತೆ ತಡೆಗಟ್ಟಬಹುದು. ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ಪೂರಕ ಆಹಾರವನ್ನು ಬೇಳೆಯ ತಿಳಿ, ಹಣ್ಣಿನ ರಸ ಚೆನ್ನಾಗಿ ಬೇಯಿಸಿದ ತರಕಾರಿ ಅವುಗಳನ್ನು ನೀಡುವುದು ಈ ಪೂರಕ ಆಹಾರದೊಂದಿಗೆ ಮಗುವಿಗೆ ೨ ವರ್ಷಗಳು ತುಂಬುವವರೆಗೂ ಎದೆ ಹಾಲನ್ನು ಉಣಿಸುವುದು ಕಡ್ಡಾಯ. ೫ ವರ್ಷಗಳು ತುಂಬುವವರೆಗೂ ಪ್ರತಿ ತಿಂಗಳು ತೂಕ ಮಾಡಿಸಿ ಮಗುವಿನ ತೂಕ ಹೆಚ್ಚಾಗುತ್ತಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಈ ಕ್ರಮಗಳಿಂದಾಗಿ ಅಪೌಷ್ಠಿಕತೆಯನ್ನು ನಿವಾರಿಸಬಹುದು.
ಪುನರ್ವಸತಿ ಕೇಂದ್ರ : ಅಪೌಷ್ಠಿಕತೆಯನ್ನು ತೀವ್ರವಾಗಿ ಅನುಭವಿಸುತ್ತಿರುವ ಮಕ್ಕಳಿಗೆ ಆರೋಗ್ಯ ಇಲಾಖೆಯು ಆಯ್ದ ಆಸ್ಪತ್ರೆಗಳಲ್ಲಿ ಪೌಷ್ಠಿಕ ಪುನರ್ವಸತಿ ಕೇಂದ್ರಗಳನ್ನು ಪ್ರಾರಂಭಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿಯಲ್ಲಿ ತೀವ್ರ ಅಪೌಷ್ಠಿಕ ಮಕ್ಕಳಿಗೆ ಪ್ರತಿ ದಿನ ೬.೯೦ ರೂ. ಮೌಲ್ಯದ ಪೂರಕ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ. ತುರ್ತು ಚಿಕಿತ್ಸೆಯ ಅಗತ್ಯವಿರುವ ಮಕ್ಕಳಿಗೆ ಬಾಲ ಸಂಜೀವಿನಿ ಯೋಜನೆಯಡಿ ರಾಜ್ಯದ ೧೫ ಆಸ್ಪತ್ರೆಗಳ ಮೂಲಕ ಗುರುತಿಸಿರುವ ೧೮ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಪೌಷ್ಠಿಕ ಮಕ್ಕಳಿಗೆ ವಾರದಲ್ಲಿ ೪ ದಿನ ಮೊಟ್ಟೆ ಹಾಗೂ ೨ ದಿನ ೨೦೦ ಎಂ ಎಲ್ ಹಾಲನ್ನು ಅಥವಾ ಮೊಟ್ಟೆತಿನ್ನದ ಮಕ್ಕಳಿಗೆ ವಾರದಲ್ಲಿ ೬ ದಿನ ಹಾಲನ್ನು ನೀಡಲಾಗುತ್ತಿದೆ. ತೀವ್ರ ಅಪೌಷ್ಠಿಕ ಮಕ್ಕಳ ವೈದ್ಯಕೀಯ ವೆಚ್ಚ ಯೋಜನೆಯಡಿ ಔಷಧಿ ಹಾಗೂ ಚಿಕಿತ್ಸೆಗೆ ಪ್ರತಿವರ್ಷ ಮಗುವಿಗೆ ೭೫೦ ರೂ. ಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ವಿವರಗಳಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಥವಾ ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಬಹುದಾಗಿದೆ.
                                                                –       : ತುಕಾರಾಂ ರಾವ್ ಬಿ.ವಿ. ಜಿಲ್ಲಾ ವಾರ್ತಾಧಿಕಾರಿ,    ಕೊಪ್ಪಳ

Leave a Reply