ರೆಸಾರ್ಟ್‌ನತ್ತ ಬಿಜೆಪಿ ಪಯಣ; ಜೆಡಿಎಸ್ ನಡೆಯೇ ಅಂತಿಮ

ಪರಿಷತ್ ಚುನಾವಣೆಯ ತಳಮಳ: 
 ಬೆಂಗಳೂರು,ಡಿ : ವಿಧಾನ ಪರಿಷತ್ ಚುನಾವಣೆಯಿಂದ ದೂರ ಉಳಿದಿದ್ದ ಜೆಡಿಎಸ್ ಕಾಂಗ್ರೆಸ್ ಪರವಾಗಿ ನಿಲ್ಲುವ ಲಕ್ಷಣಗಳು ಗೋಚರವಾಗುತ್ತಿ ದ್ದಂತೆ ಬಿಜೆಪಿಯೊಳಗೆ ತಳಮಳ ಉಂಟಾಗಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಕೆಯಾದಂದಿ ನಿಂದ ಜೆಡಿಎಸ್ ಚುನಾವಣೆಯಿಂದ ದೂರ ಉಳಿದಿತ್ತು. ಇದರಿಂದ ಶ್ರೀರಾಮುಲು ಹಾಗೂ ಪಕ್ಷೇತರರು ಕೂಡಾ ಸುಮ್ಮನಿದ್ದರಿಂದ ನಿಟ್ಟಿಸಿರು ಬಿಟ್ಟಿದ್ದ ಆಡಳಿತಾರೂಢ ಬಿಜೆಪಿಗೆ ಇದೀಗ ಮತ್ತೆ ಕಂಟಕ ಎದುರಾದಂತಾಗಿದೆ. ರೆಸಾರ್ಟ್ ರಾಜಕೀಯ ಮಾಡುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದ ಮುಖ್ಯಮಂತ್ರಿ ಸದಾನಂದ ಗೌಡ, ಇಂದು ತಮ್ಮ ರಾಗ ಬದಲಿಸಿದ್ದಾರೆ.ತಮ್ಮ ಪಕ್ಷದ ಶಾಸಕರೆಲ್ಲರೂ ಒಂದು ದಿನ ಒಂದೆಡೆ ಸೇರಿದರೆ ತಪ್ಪೇನು ಎಂದು ಹೇಳುವ ಮೂಲಕ ನಾಳೆ ರೆಸಾರ್ಟ್‌ಗೆ ತಮ್ಮ ಶಾಸಕರನ್ನೆಲ್ಲ ಕರೆದೊಯ್ಯುವ ಮುನ್ಸೂಚನೆ ನೀಡಿದ್ದಾರೆ.
ನಾಳೆ ಬೆಳಗ್ಗೆ ತಮ್ಮ ಶಾಸಕರನ್ನೆಲ್ಲ ನಗರದ ಹೊರವಲಯದ ರೆಸಾರ್ಟ್‌ಗೆ ಕರೆದೊಯ್ಯಲು ಮುಂದಾಗಿರುವ ಬಿಜೆಪಿ, ಗುರುವಾರ ಮತದಾನದ ವೇಳೆ ನೇರ ವಿಧಾನಸೌಧಕ್ಕೆ ಕರೆದು ಕೊಂಡು ಬರಲು ನಿರ್ಧರಿಸಿದೆ ಎನ್ನಲಾಗಿದೆ.
ಬಿಜೆಪಿ ನಗರದ ಹೊರವಲಯದಲ್ಲಿರುವ ಗೋಲ್ಡನ್ ಫಾರ್ಮ್ ರೆಸಾರ್ಟ್‌ಗೆ ತನ್ನ ಶಾಸಕರನ್ನು ಕರೆದೊಯ್ದು ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ. ಗುರುವಾರ ಬೆಳಗ್ಗೆ ವಿಧಾನಸೌಧದ ಮತದಾನ ಕೇಂದ್ರಕ್ಕೆ ಕರೆದು ಕೊಂಡು ಬರಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ವಿರೋಧಿ ಬಣ ಅನಂತ ಕುಮಾರ್, ಜಗದೀಶ್ ಶೆಟ್ಟರ್ ಅಂತಿಮವಾಗಿ ತೆಗೆದು ಕೊಳ್ಳುವ ನಿರ್ಧಾರ ಸದಾನಂದ ಗೌಡರ ಗೆಲುವಿಗೆ ಮೆಟ್ಟಿಲಾಗಲಿದೆ. ಯಡಿಯೂರಪ್ಪ ಹಾಗೂ ಅನಂತ ಕುಮಾರ್ ಬಣದ ಒಳಜಗಳ ಕೂಡಾ ಒಂದೆಡೆ ಸದಾನಂದ ಗೌಡರಿಗೆ ದೊಡ್ಡ ಕಂಟಕವನ್ನು ತಂದೊಡ್ಡಿದೆ.
ಕುತೂಹಲ ಕೆರಳಿಸಿರುವ ಶಾಸಕಾಂಗ ಸಭೆ
ನಾಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಶಾಸಕಾಂಗ ಸಭೆ ನಡೆಸಲು ಮುಂದಾಗಿದ್ದು, ಸಭೆಯಲ್ಲಿನ ಅಂತಿಮ ನಿರ್ಧಾರ ಇದೀಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ನಾಳೆ ನಡೆಯಲಿರುವ ಜೆಡಿಎಸ್ ಸಭೆಯಲ್ಲಿನ ನಿರ್ಧಾರವೇ ಕಾಂಗ್ರೆಸ್ ಹಾಗೂ ಬಿಜೆಪಿ ಗೆಲುವಿಗೆ ಅಂತಿಮ ಮುದ್ರೆಯನ್ನು ಒತ್ತಲಿದೆ. ಜೆಡಿಎಸ್ ಸಭೆಯಲ್ಲಿ ಕಾಂಗ್ರೆಸ್‌ಗೆ ಮತಹಾಕಲು ಮುಂದಾದರೆ, ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು ಸೇರಿದಂತೆ ಒಟ್ಟು ಆರು ಮಂದಿ ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆ. ಜೊತೆಗೆ ಶ್ರೀರಾಮುಲುರೊಂದಿಗಿರುವ ಹಲವಾರು ಮಂದಿ ಕೂಡಾ ಕಾಂಗ್ರೆಸ್‌ಗೆ ಮುಖಮಾಡಿ ನಿಲ್ಲುವ ಸಂಭವವಿದೆ. ಇದರಿಂದ ಜೆಡಿಎಸ್ ನಿರ್ಣಯವೇ ಅಂತಿಮವಾಗಲಿರುವುದರಿಂದ ನಾಳಿನ ಸಭೆ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ.
ಯಡಿಯೂರಪ್ಪರ ಯಾಗ, ಹೇಳಿಕೆಗಳು ಮುಖ್ಯಮಂತ್ರಿ ಸ್ಥಾನದ ಕುರಿತು ಗೊಂದಲವನ್ನುಂಟು ಮಾಡುತ್ತಿರುವುದರಿಂದ ಈ ಕುರಿತು ಮಾಜಿ ಯಡಿಯೂರಪ್ಪ ಸ್ಪಷ್ಟನೆ ನೀಡುವಂತೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಒತ್ತಾಯವೇರಿದ್ದು, ನಾಳೆ ಸಂಜೆಯ ಗಡುವು ಕೂಡಾ ನೀಡಿದ್ದಾರೆ.
ಜೊತೆಗೆ ಯಡಿಯೂರಪ್ಪ ಮತ್ತೆ ಸಿಎಂ ಆಗುವುದಾದರೆ ಸದಾನಂದ ಗೌಡರಿಗೆ ಮತ ಚಲಾಯಿಸುವ ಅಗತ್ಯವಾದರೂ ಏನಿದೆ ಎಂದು ಅವರು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. ನಾಳೆ ಬಿಜೆಪಿ ಅಥವಾ ಯಡಿಯೂರಪ್ಪ ಸ್ಪಷ್ಟನೆ ನೀಡದಿದ್ದರೆ, ಜೆಡಿಎಸ್ ಪಕ್ಷವು ಕಾಂಗ್ರೆಸ್‌ನ್ನು ಬೆಂಬಲಿಸುವುದು ಸ್ಪಷ್ಟ.ಅಲ್ಲದೆ ಜೆಡಿಎಸ್‌ನಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ಶಾಸಕರು ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಚುನಾವಣಾ ಕಣದಿಂದ ದೂರ ಉಳಿದರೆ ಬಿಜೆಪಿಯನ್ನು ಬೆಂಬಲಿಸಿದಂತಾಗುತ್ತದೆ, ಆದ ಕಾರಣ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದು ಒಲಿತು ಎಂಬ ಮಾತುಗಳು ಕೇಳಿಬಂದಿವೆ.ಈ ಹಿನ್ನೆಲೆಯಲ್ಲಿ ನಾಳೆ ಗೋಲ್ಡನ್ ಪಿಂಚ್ ಹೋಟಲ್‌ನಲ್ಲಿ ನಡೆಯುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ವಿಧಾನಸಭೆಯಲ್ಲಿ ಸಭಾಧ್ಯಕ್ಷರು ಸೇರಿದಂತೆ ಬಿಜೆಪಿ ಒಟ್ಟು 120 ಸಂಖ್ಯಾ ಬಲವನ್ನು ಹೊಂದಿದೆ. ಕಾಂಗ್ರೆಸ್ 71 ಮಂದಿ ಶಾಸಕರನ್ನು ಹೊಂದಿದ್ದರೆ, ಜೆಡಿಎಸ್ 26 ಹಾಗೂ 7 ಮಂದಿ ಪಕ್ಷೇತರರು ಇದ್ದಾರೆ.ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಳೆ ಕಾಂಗ್ರೆಸ್ ಪರ ನಿಂತರೆ, ಪಕ್ಷೇತರರು ಕೂಡಾ ಕಾಂಗ್ರೆಸ್‌ನ್ನೆ ಬೆಂಬಲಿಸಲಿದ್ದು, ಜೊತೆಗೆ ಶ್ರೀರಾಮುಲು ಪರವಿರುವ ಬಿಜೆಪಿಗರು ಕೂಡಾ ಕಾಂಗ್ರೆಸ್‌ಗೆ ಅಡ್ಡಮತ ಚಲಾಯಿಸುವ ಸಾಧ್ಯತೆ ಇದೆ. ನಾಳೆ ಜೆಡಿಎಸ್ ತೆಗೆದುಕೊಳ್ಳುವ ನಿರ್ಧಾರದ ನಂತರ ನಾವು ಸಭೆ ಸೇರಿ ನಿರ್ಧಾರಕ್ಕೆ ಬರುವುದಾಗಿ ಪಕ್ಷೇತರರಾದ ಡಿ.ಸುಧಾಕರ್, ಗೂಳಿಹಟ್ಟಿ ಶೇಖರ್, ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ ಹಾಗೂ ವಂಕಟರಮಣಪ್ಪ ಹೇಳಿದ್ದಾರೆ. ಇದರಿಂದ ಬಿಜೆಪಿಯೊಳಗೆ ತಳಮಳ ಉಂಟಾಗಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಗಾಲ ಹಾಕಲು ಮುಂದಾಗಿದ್ದಾರೆ.
Please follow and like us:
error