ಧೂಳುಯುಕ್ತ ನಗರಕ್ಕೆ ಅಸಮಾಧಾನ

ಕೊಪ್ಪಳ ನಗರದ ಪ್ರಮುಖ ರಸ್ತೆಗಳು ಧೂಳುಮಯವಾಗಿದ್ದು, ಇದಕ್ಕೆ
ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಕೊಪ್ಪಳದಂತಹ
ಹೊಸ ಜಿಲ್ಲಾ ಕೇಂದ್ರ ಸ್ಥಾನದ ಅಭಿವೃದ್ಧಿ ಕೊರತೆಗೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು
ಯೋಜನೆಗಳ ಅನುಷ್ಠಾನದಲ್ಲಿ ತಾಳುವ ನಿರಾಸಕ್ತಿ ಮನೋಭಾವನೆ ಕಾರಣವಾಗಿದೆ.  ನಗರದ
ಎನ್.ಹೆಚ್. ಹೆದ್ದಾರಿ ಅಭಿವೃದ್ಧಿ, ಒಳಚರಂಡಿ, ಕುಡಿಯುವ ನೀರು ಕಾಮಗಾರಿ ಹೀಗೆ ವಿವಿಧ
ಯೋಜನೆಗಳ ಕಾಮಗಾರಿಗಳು ಹಲವು ವರ್ಷಗಳಿಂದಲೂ ನಡೆಯುತ್ತಲೇ ಇದ್ದು, ಇದು
ಪೂರ್ಣಗೊಳ್ಳುವುದು ಯಾವಾಗ, ಜನರು ಧೂಳಿನಿಂದ ಮುಕ್ತಿ ಹೊಂದುವುದು ಯಾವಾಗ ಎಂದು ನಗರಸಭೆ
ಅಧಿಕಾರಿಗಳಿಗೆ ಪ್ರಶ್ನಿಸಿದರು.  ಯಾವುದೇ ನಗರ ಅಥವಾ ಪಟ್ಟಣಗಳ ಅಭಿವೃದ್ಧಿಗೆ ಮುಂದಿನ
೨೦ ವರ್ಷಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಅಭಿವೃದ್ಧಿ ಯೋಜನೆಗಳನ್ನು
ರೂಪಿಸಬೇಕು.  ಯಾವುದೇ ಬೃಹತ್ ಯೋಜನೆಗಳ ಟೆಂಡರ್ ಕಾರ್ಯಾದೇಶವನ್ನು ನೀಡುವ ಮೊದಲು, ಅಂತಹ
ಕಂಪನಿ, ಏಜೆನ್ಸಿ ಅಥವಾ ಗುತ್ತಿಗೆದಾರರ ಕಾರ್ಯಕ್ಷಮತೆ, ಆರ್ಥಿಕ ಸಾಮರ್ಥ್ಯವನ್ನು
ಅವಲೋಕಿಸಿ ನೀಡಬೇಕು. ಇಲ್ಲದಿದ್ದಲ್ಲಿ ಕಾಮಗಾರಿಗಳು ನಿಗದಿತ ಕಾಲಿಮಿತಿಯಲ್ಲಿ
ಪೂರ್ಣಗೊಳ್ಳುವುದು ಕಷ್ಟಸಾಧ್ಯ ಎಂದು ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ
ಬಸವರಾಜ್ ಅವರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಪೌರಾಯುಕ್ತ ರುದ್ರಮುನಿ
ಅವರು, ಈಗಾಗಲೆ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ
ಸಂಬಂಧಪಟ್ಟ ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದ್ದು, ಈ ಕುರಿತು ತೀವ್ರ ನಿಗಾ
ವಹಿಸಲಾಗುವುದು ಎಂದರು.
     ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ.ಪಿ.
ಮೋಹನ್‌ರಾಜ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳ ಜನರು ಗುಳೇ ಹೋಗುವ
ಪ್ರಮಾಣ ಹೆಚ್ಚಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಅಧಿಕವಾಗಿದೆ. 
ಇದನ್ನು ತಪ್ಪಿಸಲು, ಪ್ರತಿ ಹೋಬಳಿಯಲ್ಲಿಯೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ವಿಶೇಷ
ಮಂಜೂರಾತಿ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮನವಿ
ಮಾಡಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಕೃಷ್ಣ ಡಿ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಸೆಪತ್, ಜಿ.ಪಂ.
ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ
ಅಧಿಕಾರಿಗಳು ಭಾಗವಹಿಸಿದ್ದರು.

Related posts

Leave a Comment