ಯಲಬುರ್ಗಾ ತಾಲೂಕಿನಲ್ಲಿ ೧೦ ಬಾಲಕಾರ್ಮಿಕರ ಪತ್ತೆ

ಕೊಪ್ಪಳ ನ.: ಯೂನಿಸೆಫ್‌ನ ಮಕ್ಕಳ ರಕ್ಷಣಾ ಕಾರ್ಯಕ್ರಮದಡಿ ಯಲಬುರ್ಗಾ ತಾಲೂಕು ಗುನ್ನಾಳ ಮತ್ತು ಹುಣಸಿಹಾಳ ಗ್ರಾಮಗಳಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ೧೦ ಬಾಲಕಾರ್ಮಿಕರನ್ನು ಪತ್ತೆಮಾಡಿ, ಮಕ್ಕಳನ್ನು ಶಾಲೆಗೆ ದಾಖಲಿಸಲಾಗಿದೆ.
ಗುನ್ನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣಸಿಹಾಳ ಮತ್ತು ಗುನ್ನಾಳ ಗ್ರಾಮಗಳ ೧೪ ವರ್ಷದೊಳಗಿನ ೧೦ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವುದನ್ನು ಪತ್ತೆಹಚ್ಚಿದ ಯೂನಿಸೆಫ್ ತಂಡ ಮಕ್ಕಳಾದ ಅಚಿಜನಿ, ಮುತ್ತು, ಮಂಜುನಾಥ, ರಾಘವೇಂದ್ರ, ಕರಿಯಮ್ಮ, ರತ್ನವ್ವ, ಗಂಗಮ್ಮ, ಶಾರದಾ, ವಿಜಯಲಕ್ಷ್ಮಿ, ಯಲ್ಲಮ್ಮ ಸೇರಿದಂತೆ ೧೦ ಮಕ್ಕಳನ್ನು ದುಡಿಯಲು ಟಂಟಂನಲ್ಲಿ ಹೊರಟ ಸಂದರ್ಭದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಯೂನಿಸೆಫ್ ಅಧಿಕಾರಿಗಳಾದ ಹರೀಶ್ ಜೋಗಿ, ಸೋಮಶೇಖರ್, ಶಿವರಾಮ್, ಬಿ.ಆರ್.ಪಿ.ವೈ. ಜಿ. ಪಾಟೀಲ್, ಸಿ.ಆರ್.ಪಿ. ಶರಣಪ್ಪ ಜಕ್ಕಲಿ, ಬೇವೂರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ದುರುಗಪ್ಪ, ಎ.ಎಸ್.ಐ. ಪುಂಡಲೀಕಪ್ಪ ಅವರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಮಕ್ಕಳನ್ನು ಶಾಲೆಗೆ ಸೇರಿಸಲಾಗಿದೆ. ಮಕ್ಕಳನ್ನು ಸಾಗಿಸುತ್ತಿದ್ದ ಟಂಟಂ ಮಾಲಿಕರ ಮೇಲೆ ಮೊಕದ್ದಮೆ ದಾಖಲು ಮಾಡಲಾಗಿದೆ. ಅಲ್ಲದೆ ಈ ಸಂದರ್ಭದಲ್ಲಿ ಹಾಜರಿದ್ದ ಪಂಚಾಯತ್ ವ್ಯಾಪ್ತಿಯ ಮುಖಂಡರಿಗೆ ಮಕ್ಕಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಶೇಖಮ್ಮ ಅವರಿಂದ ಇನ್ನೊಮ್ಮೆ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗದಂತೆ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ. ಯೂನಿಸೆಫ್ ಯೋಜನೆ ತಾಲೂಕು ಸಂಯೋಜಕ ಕಲ್ಲಪ್ಪ ತಳವಾರ, ಗುನ್ನಾಳ ಪಂಚಾಯತಿ ಸಮುದಾಯ ಸಂಘಟಿಕರಾದ ಮಂಜುನಾಥ ಪಾಟೀಲ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply