ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಎಲ್ಲ ಭಕ್ತಾದಿಗಳಿಗೆ ಆಹ್ವಾನ

  ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಪ್ಪಳ ಜಿಲ್ಲೆ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಮೇ. ೭ ರಿಂದ ಪ್ರಾರಂಭವಾಗಲಿದ್ದು, ಮೇ. ೧೪ ರಂದು ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಲಿದೆ.
  ಶ್ರೀ ಹುಲಿಗೆಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮೇ. ೭ ರಂದು ಶ್ರೀ ಹುಲಿಗೆಮ್ಮ ದೇವಿಗೆ ಕಂಕಣಧಾರಣ, ಮೇ. ೧೩ ರಂದು ಸಂಜೆ ೭ ಗಂಟೆಗೆ ಉತ್ಸವ, ಮೇ. ೧೪ ರಂದು ಸಂಜೆ ೫-೩೦ ಗಂಟೆಗೆ ಮಹಾರಥೋತ್ಸವ ಮೇ. ೧೫ ರಂದು ಬಾಳಿದಂಡಿಗೆ ಅಂಗವಾಗಿ ಕೊಂಡದ ಪೂಜಾ, ಗಂಗಾದೇವಿ ಪೂಜಾ, ಬಾಳಿದಂಡಿಗೆ ಆರೋಹಣ, ಮೇ. ೧೬ ರಂದು ಪಾಯಸ ಅಗ್ನಿಕುಂಡ ಮುಂತಾದ ಧಾರ್ಮಿಕ ವಿಧಿ ವಿಧಾನ ಪೂಜಾ ಕಾರ್ಯಕ್ರಮಗಳು ಜರುಗಲಿವೆ.  ಹುಲಿಗೆಮ್ಮ ದೇವಿಗೆ ಸಲ್ಲಿಸುವ ಮುಡುಪು, ಕಾಣಿಕೆ, ಬೆಳ್ಳಿ, ಬಂಗಾರಗಳನ್ನು ದೇವಸ್ಥಾನದ ಕಚೇರಿಯಲ್ಲಿಯೇ ಕೊಟ್ಟು ರಸೀದಿ ಪಡೆಯಬೇಕು ಅಥವಾ ಹುಂಡಿ ನಿಧಿಯಲ್ಲಿ ಹಾಕಬೇಕು, ರಸೀದಿ ಪಡೆಯದೇ ಕೊಡುವ ಕಾಣಿಕೆಗಳು ಶ್ರೀ ದೇವಿಯ ನಿಧಿಗೆ ಸೇರುವುದಿಲ್ಲ.  ಜಾತ್ರಾ ಸಂದರ್ಭದಲ್ಲಿ ಪ್ರಾಣಿಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘಿಸುವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದಲ್ಲದೆ ದಂಡವನ್ನು ಸಹ ವಿಧಿಸಲಾಗುವುದು.  ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ತಿಳಿಸಿದ್ದಾರೆ.
Please follow and like us:
error