ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಜಿಲ್ಲಾ ಸಮಿತಿ-ಕೊಪ್ಪಳ ಮನವಿ

ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಹಾಗೂ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಭೂ ಮಂಜೂರಾತಿ ನೀಡುವ ಕುರಿತು. 

   ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಈ ಪತ್ರದ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಸುಗ್ರೀವಾಜ್ಞೆ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯಿಂದ ದೇಶದ ಕೃಷಿ ಕ್ಷೇತ್ರ ಅಪಾಯಕ್ಕೆ ಸಿಲುಕಲಿದೆ. ಶೇ, ೬೫ ರಷ್ಟು ಜನರಿಗೆ ಉದ್ಯೋಗಕ್ಕೆ ಆಧಾರವಾಗಿರುವ ಕೃಷಿ ಕ್ಷೇತ್ರವನ್ನು ಎಮ್‌ಎನ್‌ಸಿಎಸ್, ಕಾರ್ಪೋರೇಟ್ ಸಂಸ್ಥೆಗಳ ಅಧೀನಕ್ಕೊಳಪಡಿಸುವುದು ಸರ್ಕಾರದ ತೀರ್ಮಾನ ರೈತ ವಿರೋಧಿಯಾಗಿದೆ. ಕೈಗಾರಿಕೆ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಭೂಮಿ ಪಡೆಯುವ ಕಂಪನಿಗಳು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಳಸಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಇಂತಹ ಅನೇಕ ಭೂಸ್ವಾಧೀನ ಪ್ರಕರಣಗಳು ದುರುಪಯೋಗವಾಗಿರುವುದು ಗೊತ್ತಿರುವ ವಿಷಯವಾಗಿದೆ.

           ಉದಾಹರಣೆಗೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಒಡೆತನದ ಬ್ರಹ್ಮಿಣಿ ಉಕ್ಕು ತಯಾರಿಕಾ ಕಂಪನಿ ಬಳ್ಳಾರಿಯಲ್ಲಿ ಎಕರೆಗೆ ೫ ಲಕ್ಷ ದರದಲ್ಲಿ ೫ ಸಾವಿರ ಎಕರೆ ಭೂಮಿ ಖರೀಧಿಸಿದೆ. ಸದರಿ ಈ ಭೂಮಿಯನ್ನು ಪ್ರತಿ ಎಕರೆಗೆ ೨೫ ಲಕ್ಷ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೊಸದುರ್ಗದ ರಿಲಾಯನ್ಸ್ ಸಿಮೆಂಟ್ ಕಂಪನಿಗೆ ೨೫೦೦ ಎಕರೆ, ಜುವಾರಿ ಸಿಮೆಂಟ್ ಕಂಪನಿಗೆ ೯೦೦ ಎಕರೆ, ಸುವರ್ಣ ಸಿಮೆಂಟ್ ಕಂಪನಿಗೆ ೧೬೫೦ ಎಕರೆ ಸೇರಿದಂತೆ ರಾಜ್ಯದಲ್ಲಿ ೧.೨೦ ಲಕ್ಷ ಎಕರೆ ಭೂಮಿಯನ್ನು ವಿವಿಧ ಕಂಪನಿಗಳಿಗೆ ನೀಡಲಾಗಿದೆ. ಆದರೆ ಯಾವ ಕಂಪನಿಗಳೂ ಉದ್ದೇಶಿತ ಉತ್ಪಾದನೆಗೆ ಸಂಬಂಧಿಸಿದ ಯಾವ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡಿಲ್ಲ. ರಾಜ್ಯದ ಅನೇಕ ಭಾಗಗಳಲ್ಲಿ ಕೈಗಾರಿಕೆ ಹೆಸರಿನಲ್ಲಿ ಖರೀಧಿಸಿದ ಭೂಮಿ ಪಾಳು ಬಿದ್ದಿದೆ, 
         ದಿನಾಂಕ: ೩೦-೦೧-೨೦೧೫ ರಂದು ಹೈಕೋರ್ಟ್ ಪೀಠವು ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸದ, ಕಾನೂನು ಪರಿಜ್ಞಾನವಿಲ್ಲದ ಅನಕ್ಷರಸ್ಥರಿಗೆ ಅರ್ಜಿ ಸಲ್ಲಿಸಲು ೨೭-೦೨-೨೦೧೫ ರ ವರೆಗೆ ಕಾಲಾವಕಾಶ ಮಾಡಿಕೊಡಬೇಕೆಂದು ಆದೇಶ ಮಾಡಿದೆ. ಆದರೆ ಸರ್ಕಾರ ಹೈಕೋರ್ಟ್‌ನ ಆದೇಶದ ಕುರಿತು ಅಧೀಕೃತ ಪ್ರಕಟಣೆ ಮಾಡದೇ ಮತ್ತು ಸರ್ಕಾರದ ಮುಂದಿನ ತೀರ್ಮಾನದ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಕಾರಣ ರಾಜ್ಯದ ಲಕ್ಷಾಂತರ ಭೂಹೀನ ಬಡ ರೈತರಿಗೆ ಭೂಮಿಯ ಹಕ್ಕು ಪಡೆದುಕೊಳ್ಳಲು ತೊಂದರೆಯಾಗಿದೆ. ಈ ಕಾರಣದಿಂದ ಸರ್ಕಾರ ತುರ್ತು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಕೋರಲಾಗಿದೆ. ಇದಲ್ಲದೇ ೧೯೯೦ ಹಾಗೂ ೧೯೯೯ ರ ೨ ಅವಧಿಯಲ್ಲಿ ಅಕ್ರಮ ಸಕ್ರಮ ಯೋಜನೆಯನ್ನು ದುರುಪಯೋಗಪಡಿಸಿಕೊಂಡ ಬಲಿಷ್ಠರು, ರಾಜಕಾರಣಿಗಳು ಬೇನಾಮಿ ಹೆಸರಿನಲ್ಲಿ ಲಕ್ಷಾಂತರ ಎಕರೆ ಭೂಮಿಯ ಒಡೆತನ ಹೊಂದಿದ್ದಾರೆ. ಈ ಕುರಿತು ಸಮಗ್ರ ನ್ಯಾಯಾಂಗ ತನಿಖೆಗೆ ಸರ್ಕಾರ ಮುಂದಾಗಬೇಕಿದೆ. 
         ಮಲೆನಾಡು ಭಾಗದ ಭೂಮಿಗೆ ಭೂಮಿತಿ ಕಾಯ್ದೆ ಅನ್ವಯಿಸದ ಕಾರಣ ಭಾರೀ ಭೂ ಮಾಲೀಕರು ಸಾವಿರಾರು ಎಕರೆ ಭೂಮಿಯ ಅಕ್ರಮ ಒಡೆತನ ಹೊಂದಿದ್ದಾರೆ. ತಮ್ಮ ಒಡೆತನದಲ್ಲಿರುವ ಭೂಮಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ, ಕಸ್ತೂರಿ ರಂಗನ್ ವರದಿ ವಿರೋಧಿಸಲು ಸಣ್ಣ ಹಾಗೂ ಬಡ, ಮಧ್ಯಮ ವರ್ಗದ ರೈತರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರ ಬಾಲಸುಬ್ರಮಣ್ಯಂ ವರದಿ ಪ್ರಕಾರ ೧ ಲಕ್ಷ ೪೫ ಸಾವಿರ ಎಕರೆ ಭೂಮಿಯ ಅತಿಕ್ರಮಣದ ವಾಸ್ತವತೆಯನ್ನು ಅಧ್ಯಾಯನ ಮಾಡಿ ೫ ಎಕರೆ ಸಾಗುವಳಿ ಮಾಡುತ್ತಿರುವ ಸಣ್ಣ ರೈತರಿಗೆ ಭೂಮಿಯ ಪಟ್ಟ ಕೊಡಬೇಕು ಹಾಗೂ ಬಲಿಷ್ಠರ ವಶದಲ್ಲಿರುವ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಬೇಕು. ಮಾಧವ ಗಾಡ್ಗಿಲ್ ವರದಿಯನ್ನು ಜಾರಿಗೊಳಿಸಿ ಪಶ್ಚಿಮ ಘಟ್ಟವನ್ನು ರಕ್ಷಿಸಬೇಕೆಂದು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಜಿಲ್ಲಾ ಸಮಿತಿ-ಕೊಪ್ಪಳ ರಾಜ್ಯಪಾಲರಿಗೆ ಸಲ್ಲಿಸಲಾದ  ಪತ್ರದಲ್ಲಿ  ಮನವಿ ಮಾಡಿದ್ದಾರೆ.
Please follow and like us:
error