You are here
Home > Koppal News > ಭಾರಿ ಮಳೆಯಿಂದ ಬೆಳೆ ಹಾನಿ- ಏ. ೧೭ ರೊಳಗೆ ಸಮಗ್ರ ವರದಿ ಸಲ್ಲಿಸಿ : ಶಿವರಾಜ್ ತಂಗಡಗಿ

ಭಾರಿ ಮಳೆಯಿಂದ ಬೆಳೆ ಹಾನಿ- ಏ. ೧೭ ರೊಳಗೆ ಸಮಗ್ರ ವರದಿ ಸಲ್ಲಿಸಿ : ಶಿವರಾಜ್ ತಂಗಡಗಿ

ಕೊಪ್ಪಳ ಏ.  : ಇದೇ ಏ. ೧೨ ಮತ್ತು ೧೩ ರಂದು ಕೊಪ್ಪಳ ಜಿಲ್ಲೆಯಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಯಿಂದ ಉಂಟಾಗಿರುವ ಬೆಳೆ, ಮನೆ, ಜಾನುವಾರು ಹಾನಿ ಕುರಿತು ಸರ್ವೆ ನಡೆಸಿ, ಏ. ೧೭ ರ ಒಳಗಾಗಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಉಂಟಾದ ಹಾನಿ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕಳೆದ ಏ. ೧೨ ಮತ್ತು ೧೩ ರಂದು ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಗಂಗಾವತಿ ತಾಲೂಕಿನಲ್ಲಿ ಬಹುತೇಕ ಭತ್ತದ ಬೆಳೆ ನೆಲಕಚ್ಚಿದೆ.  ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಪ್ರಾಥಮಿಕ ವರದಿಯಂತೆ ಜಿಲ್ಲೆಯಲ್ಲಿ ಸುಮಾರು ೨೭ ಸಾವಿರ ಹೆಕ್ಟೇರ್ ಭತ್ತದ ಬೆಳೆ ನಾಶವಾಗಿದ್ದು, ಅಂದಾಜು ೧೬೯. ೪೭ ಕೋಟಿ ರೂ. ಹಾನಿಯಾಗಿದೆ.  ೬೯೪ ಎಕರೆ ತೋಟಗಾರಿಕೆ ಬೆಳೆ ಹಾನಿಯಿಂದ ೩೧. ೪ ಲಕ್ಷ ರೂ. ನಷ್ಟ ಸಂಭವಿಸಿದೆ.  ೧೨ ಕುರಿಗಳು, ೧೦ ಆಡುಗಳು ಸಾವನ್ನಪ್ಪಿದ್ದರಿಂದ ೧. ೨೪ ಲಕ್ಷ ರೂ. ಹಾನಿಯಾಗಿದೆ.  ೧ ಪಕ್ಕಾ ಮನೆ ಬಿದ್ದಿದ್ದು, ೫೮೯ ಕಚ್ಚಾ ಮನೆಗಳು ಹಾನಿಗೊಳಗಾಗಿವೆ.  ಇದು ಕೇವಲ ಪ್ರಾಥಮಿಕ ಸರ್ವೆ ವರದಿಯಾಗಿದ್ದು, ಹಾನಿಯ ಪ್ರಮಾಣ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ.  ಹಾನಿ ಅನುಭವಿಸಿದ ರೈತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ಕೃಷಿ ಮತ್ತು ಕಂದಾಯ ಅಧಿಕಾರಿಗಳನ್ನೊಳಗೊಂಡ ತಂಡದಿಂದ ತ್ವರಿತವಾಗಿ ಸರ್ವೆ ಕಾರ್ಯ ನಡೆಸಿ, ಜಿಲ್ಲೆಯಲ್ಲಿ ಉಂಟಾಗಿರುವ ಕೃಷಿ ಬೆಳೆ, ತೋಟಗಾರಿಕೆ, ಜಾನುವಾರು ಹಾನಿ ಕುರಿತಂತೆ ಸಮಗ್ರ ವರದಿಯನ್ನು ಏ. ೧೭ ರೊಳಗಾಗಿ ಸಲ್ಲಿಸಬೇಕು.  ಮನೆ, ರಸ್ತೆಗಳ ಹಾನಿ ಕುರಿತು ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸರ್ವೆ ನಡೆಸಿ ವರದಿ ಸಲ್ಲಿಸಬೇಕು.  ಮನೆ ಹಾನಿ ಅನುಭವಿಸಿರುವವರಿಗೆ ಪರಿಹಾರ ವಿತರಣೆ ಪ್ರಾರಂಭವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆ ವಿಮೆ ವಿವರ ಸಲ್ಲಿಸಿ : ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಭತ್ತ ನೆಲಕಚ್ಚಿದ್ದು, ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಬೆಳೆ ಸಾಲ ಪಡೆಯುವಾಗ ರೈತರು ಬೆಳೆ ವಿಮೆಗೆ ಪ್ರೀಮಿಯಂ ಕಟ್ಟಿರುತ್ತಾರೆ.  ಬೆಳೆ ಸಾಲ ಪಡೆಯುವ ರೈತರು, ಬೆಳೆ ಹಾನಿ ಆದಲ್ಲಿ, ಆರ್ಥಿಕ ಭದ್ರತೆಗಾಗಿಯೇ ಬೆಳೆ ವಿಮೆ ಮಾಡಿಸಿರುತ್ತಾರೆ.  ಸಮಯಕ್ಕೆ ಸರಿಯಾಗಿ ವಿಮೆ ಪರಿಹಾರ ರೈತರಿಗೆ ತಲುಪದಿದ್ದಲ್ಲಿ, ವಿಮೆ ಮಾಡಿಸಿ ಏನು ಲಾಭ ಎಂದು ಪ್ರಶ್ನಿಸಿದ ಸಚಿವರು, ಇದೀಗ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾಗಿದ್ದು, ರೈತರಿಗೆ ಸಂಬಂಧಪಟ್ಟ ವಿಮಾ ಕಂಪನಿಯಿಂದ ವಿಮಾ ಪರಿಹಾರ ಮೊತ್ತ ಪಾವತಿಯಾಗಬೇಕಿದೆ.  ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕುಗಳ ಮೂಲಕ ಬೆಳೆ ಸಾಲ ಪಡೆದ ರೈತರ ಸಂಖ್ಯೆ, ಪ್ರೀಮಿಯಂ ಪಾವತಿಸಿದ ಮೊತ್ತದ ಸಮಗ್ರ ವಿವರವನ್ನು ಸಿದ್ಧಪಡಿಸಿ ಸಲ್ಲಿಸಬೇಕು.  ಏ. ೧೮ ರಂದು ಕೊಪ್ಪಳದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ಏರ್ಪಡಿಸಲಾಗಿದ್ದು, ಸಭೆಗೆ ಸಂಬಂಧಪಟ್ಟ ವಿಮಾ ಕಂಪನಿ, ಸಹಕಾರ ಇಲಾಖೆ ಹಾಗೂ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಹಾಜರಾಗಬೇಕು ಎಂದು ಸಚಿವರು ಸೂಚನೆ ನೀಡಿದರು.
ಹೆಚ್ಚಿನ ಪರಿಹಾರಕ್ಕೆ ಯತ್ನ : ಭಾರಿ ಮಳೆಯಿಂದ ಬೆಳೆ ಹಾನಿ ಅನುಭವಿಸಿರುವ ರೈತರಿಗೆ, ಭತ್ತದ ಬೆಳೆಗೆ ಹೆಕ್ಟೇರ್‌ಗೆ ೯ ಸಾವಿರ ರೂ. ಪರಿಹಾರ ನೀಡಲು ನಿಯಮಗಳಲ್ಲಿ ಅವಕಾಶವಿದೆ.  ಆದರೆ ರೈತರು ಪ್ರತಿ ಎಕರೆಗೆ ೨೫ ರಿಂದ ೩೦ ಸಾವಿರ ರೂ. ವೆಚ್ಚ ಮಾಡಿದ್ದಾರೆ.  ಈಗಾಗಲೆ ಜಿಲ್ಲೆಯಲ್ಲಿ ಉಂಟಾದ ಹಾನಿಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಸಮಗ್ರ ವರದಿಯನ್ನು ಶೀಘ್ರ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.  ಮುಖ್ಯಮಂತ್ರಿಗಳು, ಕೃಷಿ ಮತ್ತು ಕಂದಾಯ ಸಚಿವರೊಂದಿಗೆ ಚರ್ಚಿಸಿ, ಹೆಚ್ಚಿನ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
  ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಸೇರಿದಂತೆ ಕೃಷಿ, ತೋಟಗಾರಿಕೆ, ಸಹಕಾರ, ಕಂದಾಯ, ಪಂಚಾಯತಿ ರಾಜ್ ಮತ್ತು ಇಂಜಿನಿಯರಿಂಗ್, ಪಶುಸಂಗೋಪನೆ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Top