ಉತ್ತಮ ಸೇವೆ ಸಲ್ಲಿಸಿದವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ.

ಕೊಪ್ಪಳ ಜ. ೨೬ (ಕ.ವಾ)  ಸರ್ಕಾರಿ ಸೇವೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ರಾಜ್ಯ ಸರ್ಕಾರಿ ಅಧಿಕಾರಿ, ನೌಕರರಿಗೆ ಸರ್ಕಾರದ ವತಿಯಿಂದ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ಕೊಪ್ಪಳ ಜಿಲ್ಲೆಯ ಆರು ಅಧಿಕಾರಿ, ಸಿಬ್ಬಂದಿಗಳಿಗೆ ರಾಜ್ಯ ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಪ್ರದಾನ ಮಾಡಿದರು. ಸರ್ಕಾರಿ ಸೇವೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಜಿಲ್ಲಾ ಮಟ್ಟದಲ್ಲಿಯೂ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದೆ.  ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ, ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಎಸ್. ರೆಡ್ಡಿ ಕೊಂಡಮಡಗುಲಾ, ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಎಸ್.ಎಂ. ಶೆಟ್ಟಿ, ಆನೆಗೊಂದಿ ಪಿಡಿಓ ಸುರೇಶ ಚಲವಾದಿ, ಬೂದಗುಂಪಾ ಗ್ರಾಮ ಲೆಕ್ಕಿಗ ಈಶ್ವರಪ್ಪ ಹಾಗೂ ಆರೋಗ್ಯ ಇಲಾಖೆ ವಾಹನ ಚಾಲಕ ಸುಲ್ತಾನ್ ಮಹಮ್ಮದ್ ಅವರು ಈ ವರ್ಷದ ಸರ್ವೋತ್ತಮ ಸೇವಾ ಪ್ರಶಸ್ತಿಗೆ
ಆಯ್ಕೆಯಾಗಿದ್ದು, ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ೬೭ನೇ ಗಣರಾಜ್ಯೋತ್ಸವ
ದಿನಾಚರಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸರ್ವೋತ್ತಮ ಸೇವಾ ಪ್ರಶಸ್ತಿ
ಪ್ರದಾನ ಮಾಡಿ ಸನ್ಮಾನಿಸಿದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ :
ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವವರನ್ನು
ಸನ್ಮಾನಿಸಲಾಯಿತು.  ಕ್ರೀಡಾ ಕ್ಷೇತ್ರದಲ್ಲಿ ಗಂಗಾವತಿಯ ಸಾಧಿಕ್ ನವಾಜ್.  ಶಿಕ್ಷಣ
ಕ್ಷೇತ್ರದಲ್ಲಿ ಕುಕನೂರಿನ ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ ಗಾಯಿತ್ರಿ
ಕುಲಕರ್ಣಿ ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿ ಕೊಪ್ಪಳದ ಹಿರಿಯ ಜಾನಪದ ಕಲಾವಿದ ಗೊಂದಲಿಗರ
ಹನುಮಂತಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
     ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ, ವಿಧಾನಪರಿಷತ್ ಸದಸ್ಯ ಅಮರನಾಥ ಪಾಟೀಲ್,  ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್, ನಗರಸಭೆ ಅಧ್ಯಕ್ಷೆ ಬಸಮ್ಮ ರಾಮಣ್ಣ ಹಳ್ಳಿಗುಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ್ ಜುಮ್ಮನ್ನವರ್, ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error