ಮುಖ್ಯಮಂತ್ರಿ ಗಾದಿ- ಮುಂದುವರಿದ ಯಡ್ಡಿ ತಂತ್ರಗಾರಿಕೆ

ಬೆಂಗಳೂರು, ಜ.4: ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿನವರಿಗೆ ರಾಷ್ಟ್ರ ರಾಜಕಾರಣದಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ವರಿಷ್ಠರು ಭರವಸೆ ನೀಡಿದ್ದರೂ, ಅದಕ್ಕೆ ಒಪ್ಪಿಗೆ ನೀಡದೆ ಮುಖ್ಯಮಂತ್ರಿ ಹುದ್ದೆಯೇ ಬೇಕು ಎಂದು ಅವರು ಹೈಕಮಾಂಡ್‌ನ ಮುಂದೆ ಒಂದಂಶದ ಬೇಡಿಕೆ ಇಟ್ಟಿದ್ದು, ಇದಕ್ಕಾಗಿ ಸಚಿವರು ಹಾಗೂ ಶಾಸಕರ ಮೂಲಕ ಲಾಬಿ, ಒತ್ತಡ ತಂತ್ರಗಾರಿಕೆಯನ್ನು ಮುಂದುವರಿಸಿದ್ದಾರೆ.
ಮುಖ್ಯಮಂತ್ರಿಯಾಗಿ ಮತ್ತೆ ತನ್ನನ್ನು ನೇಮಕಗೊಳಿಸುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ಕುರಿತು ಕಳೆದ ನಾಲ್ಕೈದು ದಿನಗಳಿಂದ ರೇಸ್‌ಕೋರ್ಸ್ ರಸ್ತೆಯಲ್ಲಿರುವ ತನ್ನ ನಿವಾಸದಲ್ಲಿ ಬೆಂಬಲಿಗ ಸಚಿವರು ಹಾಗೂ ಶಾಸಕರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಯಡಿಯೂರಪ್ಪ, ಇಂದು ಕೂಡಾ ಬಿರುಸಿನ ಸಭೆ ನಡೆಸಿದ್ದಾರೆ. ಪಕ್ಷದ ವರಿಷ್ಠರು ಯಡಿಯೂರಪ್ಪನವರಿಗೆ ರಾಷ್ಟ್ರ ರಾಜಕಾರಣದಲ್ಲಿ ಸೂಕ್ತ ಸ್ಥಾನಮಾನ ನೀಡುವ ಕುರಿತು ಬೆಂಬಲಿಗರಿಗೆ ಭರವಸೆ ನೀಡಿದ್ದರೂ, ಅದಕ್ಕೆ ಯಡಿಯೂರಪ್ಪ ಮಾತ್ರ ಒಪ್ಪಿಗೆ ನೀಡಿಲ್ಲ. ತನಗೆ ಮುಖ್ಯಮಂತ್ರಿ ಸ್ಥಾನವೇ ಬೇಕು, ರಾಷ್ಟ್ರ ರಾಜಕಾರಣಕ್ಕೆ ಬರುವುದಿಲ್ಲ ಎಂಬ ಸಂದೇಶವನ್ನು ಅವರು ವರಿಷ್ಠರಿಗೆ ರವಾನಿಸಿದ್ದು, ಈ ಸಂಬಂಧ ಇಂದು ತನ್ನ ಆಪ್ತರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.
ಇದರಿಂದ ಪಕ್ಷದೊಳಗೆ ಯಡಿಯೂರಪ್ಪನವರ ರಾಜಕೀಯ ಹೋರಾಟ ಬಿಜೆಪಿ ವರಿಷ್ಠರ ನಿದ್ದೆಗೆಡಿಸಿದೆ. ಇತ್ತೀಚೆಗಷ್ಟೇ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪನವರೊಂದಿಗೆ ಶೀತಲ ಸಮರ ಸಾರಿದ್ದ ಅವರು, ಇದೀಗ ತನ್ನ ನಿವಾಸದಲ್ಲಿ ಕುಳಿತು ಮುಂದಿನ ಹೋರಾಟದ ರೂಪುರೇಖೆಗಳನ್ನು ಸಿದ್ಧಪಡಿಸುತ್ತಿರುವುದು ಪಕ್ಷದೊಳಗೆ ಆತಂಕವನ್ನು ಸೃಷ್ಟಿಸಿದೆ. ಇಂದು ಕೂಡಾ ಯಡಿಯೂರಪ್ಪನವರ ನಿವಾಸ ರಾಜಕೀಯ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು.ಸಚಿವರಾದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಶಾಸಕರಾದ ಜೀವರಾಜ್, ಅಪ್ಪಚ್ಚುರಂಜನ್, ಸುರೇಶ್ ಗೌಡ, ಪಿ.ಬಿ.ಹರೀಶ್ ಸೇರಿದಂತೆ ಹಲವರು ಮಾಜಿ ಸಿಎಂರೊಂದಿಗೆ ಬಿರುಸಿನ ಸಭೆ ನಡೆಸಿದರು.
ಸಿಎಂ ಸ್ಥಾನ ಸೇರಿದಂತೆ ಸೂಕ್ತ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿರುವ ಯಡಿಯೂರಪ್ಪ, ತಮ್ಮ ಆಪ್ತರೊಂದಿಗೆ ದಿಲ್ಲಿಗೆ ಹೋಗಿ ಶಕ್ತಿ ಪ್ರದರ್ಶಿಸುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಜೊತೆಗೆ ರಾಜ್ಯದಲ್ಲಿರುವ ಜನಪ್ರಿಯತೆ, ರಾಜಕೀಯ ಶಕ್ತಿಯ ಕುರಿತು ವರಿಷ್ಠರಿಗೆ ಮನದಟ್ಟು ಮಾಡಲು ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸುವ ಕುರಿತು ಕೂಡಾ ಚರ್ಚಿಸಲಾಗಿದೆ. ಜ.15ರ ನಂತರ ಕೂಡಲ ಸಂಗಮದಲ್ಲಿ ಮೊದಲ ಸಮಾವೇಶ ನಡೆಸುವ ಕುರಿತು ಮಾತುಕತೆ ನಡೆದಿದೆ. 15ರ ಬಳಿಕ ದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಬದಲು ಮುಂದಿನ ಎರಡು ದಿನಗಳೊಳಗೆ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಕುರಿತು ಕೂಡಾ ಚರ್ಚೆ ನಡೆದಿದೆ.
ಒಂದೆಡೆ ದಿನ ಬೆಳಗಾದರೆ ಯಡಿಯೂರಪ್ಪರ ನಿವಾಸದಲ್ಲಿ ಅವರ ಆಪ್ತರ ದಂಡೇ ಸೇರುತ್ತಿರುವುದು ಇದೀಗ ಹೈಕಮಾಂಡ್‌ನ್ನು ಚಿಂತೆಗೀಡು ಮಾಡಿದೆ. ಜೊತೆಗೆ ಈಶ್ವರಪ್ಪರ ವಿರುದ್ಧ ಬಹಿರಂಗವಾಗಿ ಸಮರ ಸಾರಿರುವುದು ಕೂಡಾ ಯಡಿಯೂರಪ್ಪರ ನಡೆಯ ಕುರಿತು ಹಲವು ಅನುಮಾನಗಳನ್ನು ಮೂಡಿಸಿದೆ. ಪಕ್ಷದೊಳಗೆ ಹಗ್ಗಜಗ್ಗಾಟ ಇದೇ ರೀತಿ ಮುಂದುವರಿದರೆ ಕರ್ನಾಟಕದಲ್ಲಿ ಬಿಜೆಪಿ ಇಬ್ಭಾಗವಾಗುವುದು ಖಚಿತ ಎಂಬುದನ್ನು ಮನದಟ್ಟು ಮಾಡಿರುವ ಹೈಕಮಾಂಡ್ ಹಾಗೂ ಆರೆಸ್ಸೆಸ್ ಇದೀಗ ರಂಗ ಪ್ರವೇಶಿಸಿದ್ದು, ಯಡಿಯೂರಪ್ಪರನ್ನು ಸಮಾಧಾನ ಪಡಿಸಲು ಮುಂದಾಗಿದೆ.

Leave a Reply