ಕರ್ನಾಟಕದ 21ನೆ ಮುಖ್ಯಮಂತ್ರಿ
ಸ್ವಚ್ಚ, ಪಾರದರ್ಶಕ ಆಡಳಿತಕ್ಕೆ ಒತ್ತು: ಜಗದೀಶ್ ಶೆಟ್ಟರ್
ಬೆಂಗಳೂರು, ಜು.12: ಸ್ವಚ್ಚ, ಪಾರದರ್ಶಕ ಅಡಳಿತಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದರು.
ರಾಜ್ಯದ 21ನೆ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಅವರು, ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದರು.
ಬಿಜೆಪಿಯ ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಸದಾನಂದ ಗೌಡರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಸ್ವಚ್ಚ, ಪಾರದರ್ಶಕ ಆಡಳಿತ ನಡೆಸುತ್ತೇನೆ. ಸಮಗ್ರ ಕರ್ನಾಟಕದ ಸಮಾನ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮತೋಲನ ಸರಿಪಡಿಸಲು ಹೆಚ್ಚಿನ ಆದ್ಯತೆ ನೀಡುತ್ತೇನೆ. ಬರಗಾಲ ಸಮಸ್ಯೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ತಿಳಿಸಿದರು.
ರಾಜ್ಯದ ಜನತೆಯ, ಪಕ್ಷದ ಹಿರಿಯ ನಾಯಕರ ಆಶೀರ್ವಾದ ಮತ್ತು ಎಲ್ಲಾ ಶಾಸಕರ ಸಹಕಾರದಿಂದ ಮುಖ್ಯಮಂತ್ರಿಯಾಗುವಂತಹ ಸುವರ್ಣಾವಕಾಶ ಒದಗಿ ಬಂದಿದೆ ಎಂದು ತಿಳಿಸಿದ ಅವರು, ಯಡಿಯೂರಪ್ಪನವರ ರೈತ ಪರ ಯೋಜನೆಗಳು ಹಾಗೂ ಡಿ.ವಿ. ಸದಾನಂದ ಗೌಡರ ‘ಸಕಾಲ’ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಜಾಗತಿಕ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಕರ್ನಾಟಕ 79ನೆ ಸ್ಥಾನದಲ್ಲಿರುವುದು ಹಾಗೂ ಬೆಂಗಳೂರು ವಿಶ್ವದಲ್ಲಿ 16ನೆ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು, ಸರಕಾರದ ಕಾರ್ಯನಿರ್ವಹಣೆಯಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಆದುದರಿಂದ ಮಾಧ್ಯಮಗಳು ಸಹಕಾರ ನೀಡುವಂತೆ ಕೋರಿದರು.