ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿ ಕೊಪ್ಪಳ ಜಿಲ್ಲಾ ಪಂಚಾಯತಿಯ ಒಕ್ಕೊರಲ ಮನವಿ.

ಕೊಪ್ಪಳ ಜು. ೧೪  ರೈತರ ಆತ್ಮಹತ್ಯೆ ಪ್ರಕರಣಗಳ ಹೆಚ್ಚಳಕ್ಕೆ ತೀವ್ರ ಆತಂಕ ವ್ಯಕ್ತಪಡಿಸಿದ ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ ಅವರು, ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಕಾರ್ಯ ಆಗಬೇಕಿದೆ ಎಂದರು.  ಇದಕ್ಕೆ ಜಿ.ಪಂ. ನ ಎಲ್ಲ ಸದಸ್ಯರು ಒಕ್ಕೊರಲ ಬೆಂಬಲ ವ್ಯಕ್ತಪಡಿಸಿದರು. ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯ ಪ್ರಾರಂಭದಲ್ಲಿ ಮೃತ ರೈತರ ಆತ್ಮಕ್ಕೆ ಶಾಂತಿಯನ್ನು ಕೋರಿ ಸಭೆ ಎರಡು ನಿಮಿಷಗಳ ಮೌನವನ್ನು  ಆಚರಿಸಿದ ನಂತರ ಅಮರೇಶ್ ಕುಳಗಿ ಅವರು ಮಾತನಾಡಿದರು.ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಇದು ತೀವ್ರ ಆತಂಕಕಾರಿ ಸಂಗತಿಯಾಗಿದೆ.  ಸದ್ಯ ರೈತರಲ್ಲಿ ಆತ್ಮವಿಶ್ವಾಸದ ಕೊರತೆ ಇದ್ದು, ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವಂತಹ ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕಿದೆ.  ರೈತರು ಪಡೆದಿರುವ ಸಾಲ ಹಾಗೂ ಸಾಲ ವಸೂಲಾತಿಗಾಗಿ ಕಿರುಕುಳ ಆಗುತ್ತಿರುವ ಬಗ್ಗೆ ಮಾಹಿತಿ ಬಂದಲ್ಲಿ, ಅಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕಿದೆ.  ಈ ನಿಟ್ಟಿನಲ್ಲಿ ಸರ್ಕಾರವೂ ಸಹ ಸೂಕ್ತ ಕ್ರಮ ಕೈಗೊಂಡಿದ್ದು, ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ಸಹ ನೀಡಿದೆ.  ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಯಾವುದೇ ಕ್ರಮಕ್ಕೆ ಜಿಲ್ಲಾ ಪಂಚಾಯತಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಮರೇಶ್ ಕುಳಗಿ ಅವರು ಹೇಳಿದರು.  ಇದಕ್ಕೆ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ ಸೇರಿದಂತೆ ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.ವರ್ಗಾವಣೆ ಪತ್ರಕ್ಕೆ ಅಸಮಾಧಾನ : ಜಿಲ್ಲೆಯ ಕೆಲವು ಖಾಸಗಿ ಶಾಲೆಗಳು, ತಮ್ಮ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು, ಶಿಕ್ಷಣದಲ್ಲಿ ಹಿಂದುಳಿದ ೯ ನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರವನ್ನು ನೀಡಿ, ಶಾಲೆಯಿಂದ ಹೊರ ಹಾಕುತ್ತಿದ್ದು, ಇದರಿಂದ ಶಿಕ್ಷಣ ನೀತಿಗೆ ಅವಮಾನ ಮಾಡಿದಂತಾಗುತ್ತಿದೆ.  ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ ಅವರು ಪ್ರಸ್ತಾಪ ಮಾಡಿದರು.  ಇದಕ್ಕೆ ಬಹುತೇಕ ಜಿ.ಪಂ. ಸದಸ್ಯರುಗಳು ದನಿಗೂಡಿಸಿ, ಶಾಲೆಗಳ ಇಂತಹ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಈ ಕುರಿತು ವಿವರಣೆ ನೀಡಿದ ಡಿಡಿಪಿಐ ಶ್ಯಾಮಸುಂದರ್ ಅವರು, ಇಂತಹ ಪ್ರಕರಣಗಳ ಬಗ್ಗೆ ತಮಗೂ ದೂರುಗಳು ಬಂದಿದೆ ಎಂದರು.  ಕೊಪ್ಪಳ ಬಿಇಓ ಉಮೇಶ್ ಪೂಜಾರ್ ಅವರು ಮಾತನಾಡಿ, ಕೊಪ್ಪಳದಲ್ಲಿ ಈ ರೀತಿ ೧೪೫ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರವನ್ನು ನೀಡಿದ್ದಾರೆ ಎನ್ನುವ ಮಾಹಿತಿಯನ್ನು ಕಲೆ ಹಾಕಲಾಗಿದ್ದು,  ಸಂಬಂಧಪಟ್ಟ ಶಾಲೆಗಳಿಗೆ ಈ ಕುರಿತು ನೋಟೀಸ್ ಜಾರಿ ಮಾಡಲಾಗಿದೆ. ಸಮಂಜಸ ಉತ್ತರ ಬರುವವರೆಗೂ, ಅಂತಹ ಶಾಲೆಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದರು.  ಅಂತಹ ಶಾಲೆಗಳ ಮಾನ್ಯತೆ ನವೀಕರಣವನ್ನೂ ಸಹ ಪರಿಗಣಿಸದಂತೆ ಜಿ.ಪಂ. ಸದಸ್ಯರುಗಳು ಒತ್ತಾಯಿಸಿದರು.ಅಂಗನವಾಡಿಗಳಲ್ಲಿ ಉತ್ತಮ ಆಹಾರ ಪೂರೈಸಿ : ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಹಾಗು ಗರ್ಭಿಣಿಯರಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದ್ದು, ಆದರೆ ಆಹಾರ ಸಾಮಗ್ರಿಗಳು ಕಳಪೆಯಾಗಿವೆ ಎಂದು ಜಿ.ಪಂ. ಸದಸ್ಯ ಈರಪ್ಪ ಕುಡಗುಂಟಿ ಅವರು ಆಹಾರ ಸಾಮಗ್ರಿಯ ಮಾದರಿಯನ್ನು ಸಭೆಯಲ್ಲಿ ಪ್ರದರ್ಶಿಸಿ ಆರೋಪ ಮಾಡಿದರು.  ಇದಕ್ಕೆ ಸ್ಪಂದಿಸಿದ ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಆಹಾರ ಪೂರೈಕೆ ಮಾಡಲು ಅಗತ್ಯ ಕ್ರಮ ಜರುಗಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರಿಗೆ ಸೂಚನೆ ನೀಡಿದರು.  ಅಲ್ಲದೆ ಜು. ೧೫ ರ ಬುಧವಾರದಂದೇ ಜಿ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಸದಸ್ಯರು ಹಾಗೂ ಅಧಿಕಾರಿಗಳ ಜೊತೆಗೂಡಿ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿ ಹಾಗೂ ವಿತರಣೆ ಮಾಡಲಾಗುತ್ತಿರುವ ಆಹಾರ ಸಾಮಗ್ರಿಗಳ ಬಗ್ಗೆ ಖುದ್ದು ಪರಿಶೀಲಿಸುವ ತೀರ್ಮಾನ ಕೈಗೊಳ್ಳಲಾಯಿತು.  ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ ಅವರು ಆಹಾರ ಸಾಮಗ್ರಿಗಳ ಗುಣಮಟ್ಟ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ, ವರದಿ ಪಡೆಯುವಂತೆ ಸೂಚನೆ ನೀಡಿದರು.
ಸಂಜೀವಿನಿ ಯೊಜನೆ ಸಮರ್ಪಕ ಅನುಷ್ಠಾನಗೊಳಿಸಿ : ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆಯಡಿ ಪ್ರತಿಯೊಂದು ಗ್ರಾಮ ಪಂಚಾಯತಿಯಿಂದ ೪೦ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ, ಅವರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ತರಬೇತಿ ನೀಡುವ ಸಂಜೀವಿನಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ.  ಅಲ್ಲದೆ ತರಬೇತಿ ಕಾರ್ಯಕ್ರಮವನ್ನು ಮಾರ್ಗಸೂಚಿಯನುಸಾರ ಕೈಗೊಂಡಿಲ್ಲ, ಅಭ್ಯರ್ಥಿಗಳಿಗೆ ಸರಿಯಾದ ತರಬೇತಿಯಾಗಿಲ್ಲ,  ಆದರೆ ತರಬೇತಿ ಸಂಸ್ಥೆಗಳಿಗೆ ಅನುದಾನ ಪಾವತಿಸಲಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ ಆರೋಪಿಸಿದರು.  ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಅವರು, ಜಿಲ್ಲೆಗೆ ಸರ್ಕಾರದ ಮಟ್ಟದಲ್ಲಿ ನಾಲ್ಕು ತರಬೇತಿ ಸಂಸ್ಥೆಗಳನ್ನು ನಿಗದಿಪಡಿಸಿದ್ದು, ಈಗಾಗಲೆ ೯೫೫ ಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದೆ.  ಪ್ರತಿ ಅಭ್ಯರ್ಥಿಗೆ ತರಬೇತಿಗೆ ೩ ಸಾವಿರ ರೂ. ನಂತೆ ಮಾರ್ಗಸೂಚಿಯನುಸಾರವೇ ಅಮರೇಶ್ವರ ಗ್ರಾಮೀಣಾಭಿವೃದ್ದಿ ಶಿಕ್ಷಣ ಸಂಸ್ಥೆಗೆ ೪೫ ಲಕ್ಷ ರೂ. ಹಾಗೂ ವಿನೂತನ ಶಿಕ್ಷಣ ಸಂಸ್ಥೆಗೆ ೩೪. ೨೨ ಲಕ್ಷ ರೂ. ಪಾವತಿಸಲಾಗಿದೆ ಎಂದರು.   ಜು. ೧೬ ರಂದು ಜಿಲ್ಲೆಯ ನಾಲ್ಕೂ ತರಬೇತಿ ಕೇಂದ್ರಗಳಿಗೆ ಜಿ.ಪಂ. ಉಪಾಧ್ಯಕ್ಷರ ನೇತೃತದ ಸಮಿತಿಯೊಂದಿಗೆ ಭೇಟಿ ನೀಡಿ, ಸಮಗ್ರ ಮಾಹಿತಿ ಕಲೆ ಹಾಕಲು ನಿರ್ಧಾರ ಕೈಗೊಳ್ಳಲಾಯಿತು.ಸಭೆಯಲ್ಲಿ ಜಿಲ್ಲಾ ಪಂಚಾಯತಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅರವಿಂದಗೌಡ ಪಾಟೀಲ್, ವೀರೇಶ್ ಸಾಲೋಣಿ, ಪರಸಪ್ಪ ಕತ್ತಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಸೇರಿದಂತೆ ಜಿ.ಪಂ. ಸದಸ್ಯರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Please follow and like us:
error

Related posts

Leave a Comment