You are here
Home > Koppal News > ಜಾತಿ ಕಾಲಂನಲ್ಲಿ ಗೋಂಧಳಿ ಎಂದು ನಮೂದಿಸಲು ಮನವಿ

ಜಾತಿ ಕಾಲಂನಲ್ಲಿ ಗೋಂಧಳಿ ಎಂದು ನಮೂದಿಸಲು ಮನವಿ

ಬಳ್ಳಾರಿ,ಏ.೭-ಇದೇ ಏಪ್ರಿಲ್ ೧೧ರಿಂದ ೩೦ರವರೆಗೆ ರಾಜ್ಯದಲ್ಲಿ ಜಾತಿಗಣತಿ ಆರಂಭವಾಗಲಿದ್ದು, ಗೋಂಧಳಿ ಸಮುದಾಯದ ಎಲ್ಲ ಜನರು ಜಾತಿ ಕಾಲಂನಲ್ಲಿ ‘ಗೋಂಧಳಿ’(ಗೋಂಧಲಿ) ಎಂದು ನಮೂದಿಸಬೇಕೆಂದು ಅಖಿಲ ಕರ್ನಾಟಕ ಗೋಂಧಳಿ ಸಮಾಜ ಸಂಘದ ಸಂಘಟನಾ ಕಾರ್ಯದರ್ಶಿ ಗೋಂಧಳಿ ಗೋಪಾಲ್ ಮನವಿ ಮಾಡಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಅಲೆಮಾರಿ ಜನಾಂಗವಾಗಿ ಎಲ್ಲ ಕ್ಷೇತ್ರದಲ್ಲಿಯೂ ತುಳಿತಕ್ಕೊಳಗಾಗಿ ಅತಿ ಹಿಂದುಳಿದು, ಹರಿದು ಹಂಚಿಹೋಗಿದ್ದರೂ ಗೋಂಧಳಿ ಸಮಾಜಕ್ಕೆ ಸಾಂಸ್ಕೃತಿಕ ಪರಂಪರೆ ಇದೆ. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರುವುದರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದೇವೆ. ಗೋಂಧಳಿ ಸಮಾಜದಲ್ಲಿ ಬರುವ ಬೆಡಗುಗಳಲ್ಲಿ ಜೋಷಿ, ಗೋಗರೆ, ಕಾಳೆ, ಇಂಗಳೆ, ಗಣಾಚಾರಿ, ಮೋತ್ಕರ್, ಪಾರಗೆ, ಮೊರ್ಕರ್, ಸಿಂಧಗಾನ್, ಚವ್ಹಾಣ್, ದವಡತೆ, ಗಾಯಕವಾಡ, ಬಾಗಡಿ, ದಡೆ, ಜಾಧವ, ಪವಾರ್, ಭಂಡಾರಿ, ಕಾಕಡೆ, ಭಾಗವತ, ಮುಕ್ಕೆ, ವಾಕೊಡೆ, ವಾಘಮೋರೆ, ಮಂಡಲಕರ, ಭಿಸೆ, ನಾಯ್ಕಲ್, ದುಮಾಳೆ, ವಾಸ್ಟರ್, ಭೋಸಲೆ, ಏಡೆ, ಸಾಳುಂಕೆ, ಸಿಂಧೆ, ಹಸಗುಂಟೆ, ವಿಷ್ಣು, ರೇಣುಕೆ, ಸಿಂಗನಾಥ, ವಾಡಗನ, ಗೋತ್ರಾಳೆ, ಚೋರಗೆ, ಮುತ್ತಟಕರ, ಲಾಖೆ, ಲಾಗವೆ, ಬೋರಾತ್, ನವಲೆ, ಗುಡಕರ, ದುರವೆ, ಉಗಡೆ, ಬಡಗಿ, ಸುಗತೆ, ಅಟಕ, ಟೀಕೆ, ಪಾಚಂಗೆ, ಬೊಳೆ, ಉಬಾಳೆ, ಗುರು, ಸಾಗರ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಸಮಾಜದ ಜನರು ಗೋಂಧಳಿ ಎಂದೇ ಜಾತಿ ಕಾಲಂನಲ್ಲಿ ಬರೆಸಬೇಕೆಂದು ಕೋರಿದ್ದಾರೆ.
ಈಗಾಗಲೇ ರಾಜ್ಯದ ಸರ್ಕಾರಿ ಜಾತಿ ವರ್ಗೀಕರಣ ಪಟ್ಟಿಯಲ್ಲಿ ಜೋಷಿ, ವಾಸುದೇವ, ಬುಡಬುಡಕಿ, ಗೋಂಧಳಿ-ವರ್ಗಗಳು ಪ್ರವರ್ಗ-೧ರಲ್ಲಿ ಬರುವುದರಿಂದ ಇದೇ ಹೆಸರನ್ನು ನಮೂದಿಸಬೇಕು. ಭಾರತೀಯ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯನ್ನು ಪ್ರಾಮಾಣಿಕ, ವಸ್ತುನಿಷ್ಠವಾಗಿ, ನಿರ್ಭಯವಾಗಿ ಮಾಹಿತಿ ಭರ್ತಿ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Leave a Reply

Top