ಆಕಾಶವಾಣಿ ಹಬ್ಬ : ಮನಸೆಳೆದ ನಾಟಕ

  ಆಕಾಶವಾಣಿ ಹಬ್ಬದ ಅಂಗವಾಗಿ ಹೊಸಪೇಟೆ ಆಕಾಶವಾಣಿ ಎಫ್.ಎಂ. ಕೇಂದ್ರವು ಕೊಪ್ಪಳದ ಸಾಹಿತ್ಯ ಭವನದಲ್ಲಿ ಮಂಗಳವಾರ ಫೆ.೨೧ ರಂದು ಹಮ್ಮಿಕೊಂಡಿದ್ದ ನಾಟಕ, ಸಮೂಹ ಗಾಯನ ಹಾಗೂ ಆಕಾಶವಾಣಿಯ ಅಪರೂಪದ ಭಾವಚಿತ್ರಗಳ ‘ಆಕಾಶವಾಣಿ ಆಲ್ಬಂ’ ಪ್ರದರ್ಶನ ನೆರೆದ ಜನರ ಮನಸೆಳೆಯುವಲ್ಲಿ  ಯಶಸ್ವಿಯಾದವು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಜಾನಪದ ಕಲಾವಿದ ಮಾರೆಪ್ಪ ಮಾರೆಪ್ಪ ದಾಸರ ಆರಂಭದಲ್ಲಿ ಮಾತನಾಡಿ, ಜನಪದ ಕಲೆಯು ಎಲ್ಲ ಕಲೆಗಳಿಗೆ ತಾಯಿಯಿದ್ದಂತೆ. ಆಕಾಶವಾಣಿಯು ಜನಪದ ಕಲೆಗಳನ್ನು ಉಳಿಸಲು ಹಲವಾರು ವರ್ಷಗಳಿಂದ ಶ್ರಮಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹೊಟ್ಟೆಪಾಡಿಗಾಗಿ ಹಾಡಿಕೊಂಡಿದ್ದ ನನ್ನಂತಹ ಅನೇಕ ಜನರನ್ನು ಅಧಿಕೃತವಾಗಿ ಕಲಾವಿದರೆಂದು ಗುರುತಿಸಿ, ಬೆಳೆಸಿದ ಶ್ರೇಯಸ್ಸು ಆಕಾಶವಾಣಿಗೆ ಸಲ್ಲುತ್ತದೆ.  ಯುವಜನರಲ್ಲಿ ಜನಪದಕಲೆಗಳ ಸದಭಿರುಚಿಯನ್ನು ಬೆಳೆಸಲು ಇನ್ನಷ್ಟು ಪ್ರಯತ್ನಗಳಾಗಬೇಕು, ಶರೀಫರ ತತ್ವಪದಗಳನ್ನು ಆಸ್ವಾದಿಸುವ ಅವಕಾಶವನ್ನು ಜನಸಾಮಾನ್ಯರಿಗೆ ಕಲ್ಪಿಸಿಕೊಡಬೇಕು ಎಂದರು. 
ಹೊಸಪೇಟೆ ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಆನಂದ ವಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಅಖಿಲಭಾರತ ಮಟ್ಟದಲ್ಲಿ ಏಕಕಾಲಕ್ಕೆ ಎಲ್ಲ ಆಕಾಶವಾಣಿ ಕೇಂದ್ರಗಳಲ್ಲಿ ಇದೇ ಮೊದಲ ಬಾರಿಗೆ ಆಕಾಶವಾಣಿ ಹಬ್ಬ ಆಯೋಜಿಸಲಾಗಿದೆ.ಅದರ ಭಾಗವಾಗಿ ಹೊಸಪೇಟೆ ಎಫ್.ಎಮ್.ಕೇಂದ್ರ ಅತಿಹೆಚ್ಚು ಕೇಳುಗರನ್ನು ಕೊಪ್ಪಳ ಭಾಗದಲ್ಲಿ ಹೊಂದಿರುವದರಿಂದ ಇಲ್ಲಿ ಹಬ್ಬ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಕನಕಗಿರಿಯಲ್ಲಿ ಯುವಕವಿಗೋಷ್ಟಿಯನ್ನು ಅಲ್ಲಿನ ರಾಜೀವ  ಗಾಂಧಿ ಯುವ ಶಕ್ತಿ ಸಂಘದ ಸಹಯೋಗದಲ್ಲಿ  ಹಾಗೂ  ಕೊಪ್ಪಳದಲ್ಲಿ ಗವಿಸಿದ್ಧೇಶ್ವರ ಕಾಲೇಜಿನ ಸಹಕಾರದೊಂದಿಗೆ  ಯುವಸ್ಪಂದನ ಕಾರ್ಯಕ್ರಮ ಸಂಘಟಿಸಿ  ಪ್ರಸಾರ ಮಾಡಲಾಯಿತು .  ಆಕಾಶವಾಣಿಯ ಮೂಲಕ ಬೆಳಕಿಗೆ ಬಂದಿರುವ   ಈ ಭಾಗದ ಹಿರಿಯ ಜನಪದ ಕಲಾವಿದ  ಮಾರೆಪ್ಪ ಮಾರೆಪ್ಪ ದಾಸರ  ಸಂತ ಶಿಶುನಾಳ ಶರೀಫರ ತತ್ವಪದಗಳಿಗೆ ಮೊಟ್ಟ ಮೊದಲು ಜನಪ್ರಿಯತೆ ತಂದುಕೊಟ್ಟವರು ಆದರೆ ಬಹಳಷ್ಟು ಜನ ಇದನ್ನು ಮರೆತು  ಬಿಟ್ಟಿದ್ದಾರೆ. ಸಿ.ಅಶ್ವತ್ಥ ಅವರಿಗಿಂತಲೂ ಹಲವಾರು ದಶಕಗಳ ಮೊದಲೇ  ಮಾರೆಪ್ಪ ,ಶರೀಫರ ಹಾಡುಗಳನ್ನು ನಾಡಿನ ನಾನಾ ಭಾಗಗಳಿಗೆ ಪರಿಚಯಿಸಿದ್ದಾರೆ . ತತ್ವ ಪದಗಳನ್ನು ಹಾಡುವಾಗ  ಸಾಂಪ್ರದಾಯಿಕವಾಗಿ ಎಲ್ಲರೂ ಏಕತಾರಿ ಬಳಸುತ್ತಾರೆ  ಆದರೆ  ಮಾರೆಪ್ಪ ದಾಸರ  ಪಿಟೀಲು ಬಳಸುವದು ವಿಭಿನ್ನ ಮತ್ತು ವಿಶಿಷ್ಟ ಎಂದರು. ಜನಪದ ಕಲಾವಿದರಲ್ಲಿರುವ ಹಳ್ಳಿಗಾಡಿನ ಸೊಗಡು, ಒರಟುತನದ ನಡುವೆಯೂ ಮಾರೆಪ್ಪನವರ ಕಂಠದಲ್ಲಿ ಒಂದು ಮಾಧುರ್ಯವಿದೆ ಎಂದು ಹೇಳಿದರು. ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು  ಡಾ.ಚಂದ್ರಶೇಖರ ಕಂಬಾರ, ಕುವೆಂಪು ಮತ್ತಿತರ ಕವಿಗಳ ಗೀತೆಗಳನ್ನು ಸಮೂಹ ಗಾಯನದಲ್ಲಿ ಪ್ರಸ್ತುತಪಡಿಸಿದರು.
ಡಾ.ಗಜಾನನ ಶರ್ಮ ರಚಿತ, ಮಹದೇವ ಹಡಪದ ನಿರ್ದೇಶನದ  ‘ಹಂಚಿನಮನಿ ಪರಸಪ್ಪ’ ನಾಟಕವನ್ನು ಮರಿಯಮ್ಮನಹಳ್ಳಿಯ ನಾಟ್ಯಕಲಾರಂಗದ ಯುವ ಕಲಾವಿದರು ಪ್ರದರ್ಶಿಸಿದರು.  ಬಡತನದ ಕರಾಳತೆಯ ಕಥಾವಸ್ತುವನ್ನು ಹೊಂದಿದ್ದ ನಾಟಕದ ಎಲ್ಲ ಪಾತ್ರಗಳಿಗೆ ಕಲಾವಿದರು ಜೀವತುಂಬಿ ಮನೋಜ್ಞವಾಗಿ ಅಭಿನಯಿಸಿದರು.
ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ  ಕೆ.ವೆಂಕಟೇಶ, ಡಾ.ಅನುರಾಧಾ ಕಟ್ಟಿ. ಪ್ರಸಾರ ನಿರ್ವಾಹಕರಾದ ಬಿ.ಸಿದ್ದಣ್ಣ, ಮಂಜುನಾಥ ಡಿ.ಡೊಳ್ಳಿನ ಹಾಗೂ ಸಿಬ್ಬಂದಿ ವರ್ಗದ ಎ.ಜಿ.ಮನಿಯಾರ್, ಅಶೋಕ, ರೆಡ್ಡಿ, ಬಿ.ಪ್ರಸಾದ, ವೆಂಕಟೇಶ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೋಮೇಶ  ಉಪ್ಪಾರ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
Please follow and like us:
error