fbpx

೦೧ ಲಕ್ಷ ಶೌಚಾಲಯ ಗುರಿ ಸಾಧನೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ- ಟಿ. ಜನಾರ್ಧನ ಹುಲಿಗಿ

ಕೊಪ್ಪಳ ಜಿಲ್ಲೆಯನ್ನು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ೨೦೧೪ ರ ಮಾರ್ಚ್ ೩೧ ರ ಒಳಗೆ ೦೧ ಲಕ್ಷ ವಯಕ್ತಿಕ ಶೌಚಾಲಯ ನಿರ್ಮಾಣ ಮಾಡಬೇಕೆನ್ನುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕೆ ಕಂದಾಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳು, ಆರೋಗ್ಯ ಇಲಾಖೆಗಳೂ ಸೇರಿದಂತೆ ಎಲ್ಲ ಸ್ವಯಂ ಸೇವಾ ಸಂಘಟನೆಗಳು, ಯುವತಿ-ಯುವಕ ಮಂಡಳಗಳು ಸೇರಿದಂತೆ ಎಲ್ಲ ಜನಪ್ರತಿನಿಧಿಗಳ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.

  ನಗರದ ಸಾಹಿತ್ಯ ಭವನದಲ್ಲಿ ಗುರುವಾರ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ   ಹೆಚ್ಚು ವಯಕ್ತಿಕ ಶೌಚಾಲಯ ನಿರ್ಮಿಸುವ ಗುರಿ ಸಾಧನೆ ಕುರಿತಂತೆ ಜಿಲ್ಲೆಯ ಎಲ್ಲ ೧೩೪ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕೊಪ್ಪಳ ಜಿಲ್ಲೆಯಲ್ಲಿ ೦೧ ಲಕ್ಷ ವಯಕ್ತಿಕ ಶೌಚಾಲಯ ನಿರ್ಮಾಣ ಮಾಡಿ, ಜಿಲ್ಲೆಯನ್ನು ಬಯಲು ಮಲವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದ್ದು, ೨೦೧೪ ರ ಮಾರ್ಚ್ ೩೧ ರ ಒಳಗಾಗಿ ಈ ಸಾಧನೆ ಮಾಡಬೇಕೆನ್ನುವ ಕಾಲಮಿತಿಯನ್ನು ಹಾಕಿಕೊಳ್ಳಲಾಗಿದೆ.  ಈಗಾಗಲೆ ಸ್ವಚ್ಛತಾ ಧೂತರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವರು ವಯಕ್ತಿಕ ಶೌಚಾಲಯಕ್ಕೆ ಪ್ರೇರಣೆ ನೀಡುವ ಕಾರ್ಯದಲ್ಲಿ ಉತ್ತಮ ಸಾಧನೆ ತೋರಿದ್ದಾರೆ.  ಈಗಾಗಲೆ ಸುಮಾರು ೧.೫ ಲಕ್ಷ ಅರ್ಜಿಗಳನ್ನು ಮುದ್ರಿಸಿ ಎಲ್ಲ ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದ್ದು, ಡಿ. ೨೮ ಮತ್ತು ೩೦ ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಬಹುದೊಡ್ಡ ಅಭಿಯಾನವನ್ನು ನಡೆಸಲು ಯೋಜಿಸಲಾಗಿದೆ.  ಡಿ. ೨೮ ರಂದು ಬೆಳಿಗ್ಗೆ ೮ ಗಂಟೆಯ ಒಳಗಾಗಿ ಆಯಾ ಗ್ರಾಮಗಳಲ್ಲಿ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸೇರಿ, ನಂತರ ಶೌಚಾಲಯ ರಹಿತ ಕುಟುಂಬಗಳ ಮನೆಗಳಿಗೆ ಅರ್ಜಿ ನಮೂನೆಯೊಂದಿಗೆ ತೆರಳಿ, ಸ್ಥಳದಲ್ಲಿಯೇ ಅರ್ಜಿಯನ್ನು ಭರ್ತಿ ಮಾಡಿಕೊಂಡು ಸ್ವೀಕೃತಿ ನೀಡಲಾಗುವುದು.  ನಂತರ ಈ ಅರ್ಜಿಗಳನ್ನು ಇದಕ್ಕಾಗಿ ತಯಾರಿಸಲಾಗಿರುವ ತಂತ್ರಾಂಶದಲ್ಲಿ ಅಳವಡಿಸಲಾಗುವುದು.  ಡಿ. ೨೮ ರಂದು ಬಿಟ್ಟು ಹೋದ ಮನೆಗಳನ್ನು ಡಿ. ೩೦ ರಂದು ತಲುಪಿ, ಶೌಚಾಲಯ ರಹಿತ ಕುಟುಂಬಗಳಿಂದ ಅರ್ಜಿಯನ್ನು ಪಡೆದುಕೊಳ್ಳಲಾಗುವುದು. ಇಡೀ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಮೊದಲ ಬಾರಿಗೆ ಈ ರೀತಿಯ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.  ಇದುವರೆಗೂ ಜಿಲ್ಲೆಯಾದ್ಯಂತ ಕೇವಲ ೧೧ ಸಾವಿರ ಅರ್ಜಿಗಳನ್ನು ಮಾತ್ರ ಸಾಫ್ಟ್‌ವೇರ್ ನಲ್ಲಿ ಎಂಟ್ರಿ ಮಾಡಲಾಗಿದ್ದು, ಈ ಸಾಧನೆ ತೃಪ್ತಿಕರವಾಗಿಲ್ಲ.  ಜಿಲ್ಲೆಯಲ್ಲಿ ೧ ಲಕ್ಷ ಶೌಚಾಲಯ ನಿರ್ಮಿಸುವ ಗುರಿ ಸಾಧಿಸಬೇಕೆಂದರೆ, ಅಧಿಕಾರಿಗಳು ಆಸಕ್ತಿ ಮತ್ತು ಆದ್ಯತೆ ನೀಡಿ ಕಾರ್ಯ ನಿರ್ವಹಿಸಬೇಕು.  ಸರ್ಕಾರಿ ಕೆಲಸದ ಜೊತೆಗೆ ಸಮಾಜಕ್ಕೆ ನೀಡಬಹುದಾದ ಒಂದು ಅತ್ಯುತ್ತಮ ಸೇವೆ ಎಂಬುದಾಗಿ ಪರಿಗಣಿಸಿ ಸೇವಾ ಮನೋಭಾವನೆಯಿಂದ ಪ್ರಾಮಾಣಿಕ ಯತ್ನ ಮಾಡಬೇಕು.  ಹಲವಾರು ಒತ್ತಡಗಳ ನಡುವೆಯೂ ನಾವು ಉತ್ತಮ ಸಾಧನೆಯನ್ನು ತೋರಬೇಕಿದ್ದು, ಗುರಿ ಮುಟ್ಟುವ ತನಕವೂ ನಮ್ಮ ಪ್ರಯತ್ನವನ್ನು ಮಾಡಬೇಕಿದೆ ಎಂದರು.
ಶೌಚಾಲಯ ಕಡ್ಡಾಯ ಕಾನೂನು : ಸರ್ಕಾರದ ಯಾವುದೇ ಯೋಜನೆಗಳ ಸೌಲಭ್ಯ ಪಡೆಯಬೇಕು ಎಂದರೆ ಅಂತಹ ಕುಟುಂಬಗಳು ಕಡ್ಡಾಯವಾಗಿ ಶೌಚಾಲಯವನ್ನು ಹೊಂದಿರಬೇಕು ಎನ್ನುವ ಕಾನೂನು ಸದ್ಯದಲ್ಲೇ ರಾಜ್ಯದಲ್ಲಿ ಜಾರಿಗೆ ಬರಲಿದೆ.  ಶೌಚಾಲಯ ರಹಿತ ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಸೌಲಭ್ಯ ದೊರೆಯುವುದಿಲ್ಲ.  ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳು ಈಗಿನಿಂದಲೇ ಈ ಕುರಿತಂತೆ ಪ್ರಚಾರ ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದರು.
ಪರಿಶಿಷ್ಟರಿಗೆ ೧೪೨೦೦ ರೂ. ಸಹಾಯಧನ : ವಯಕ್ತಿಕ ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ತಂತ್ರಾಂಶದಲ್ಲಿ ಅಳವಡಿಸಲಾಗುವುದು.  ಇತರೆ ವರ್ಗದವರಿಗೆ ಶೌಚಾಲಯಕ್ಕೆ ೧೦೦೦೦ ರೂ. ಗಳ ಸಹಾಯಧನ ಇದ್ದರೆ, ಪ.ಜಾತಿ/ಪ.ಪಂಗಡದವರಿಗೆ ರೂ. ೧೪೨೦೦ ಗಳ ಸಹಾಯಧನ ನೀಡಲಾಗುವುದು.  ಆದ್ದರಿಂದ ಇವರಿಗೆ ಶೌಚಾಲಯದ ಜೊತೆಗೆ ಸ್ನಾನಗೃಹ ನಿರ್ಮಿಸಬೇಕೆನ್ನುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.  ಈ ಪೈಕಿ ೧೦೦೦೦ ರೂ. ನಿರ್ಮಲಭಾರತ ಅಭಿಯಾನದಿಂದ ಉಳಿದ ೪೨೦೦ ಗಳನ್ನು ವಿಶೇಷ ಘಟಕ ಯೋಜನೆಯಿಂದ ಭರಿಸಲಾಗುವುದು ಎಂದರು.
  ಡಿ. ೨೮ ರಿಂದ ಹಮ್ಮಿಕೊಳ್ಳಲಾಗಿರುವ ವಯಕ್ತಿಕ ಶೌಚಾಲಯ ಅಭಿಯಾನಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು/ ಕಾರ್ಯದರ್ಶಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಸ್ವಸಹಾಯ ಗುಂಪುಗಳು, ಸಂಘ ಸಂಸ್ಥೆಗಳು, ಯುವಕ-ಯುವತಿ ಮಂಡಳಗಳು ಒಗ್ಗೂಡಿ ಸಹಕರಿಸಿದಲ್ಲಿ, ಕೊಪ್ಪಳ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಜನಾರ್ಧನ ಹುಲಿಗಿ ಅವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಎಲ್ಲ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!