ಮರಣದ ಸ್ಪಷ್ಟ ಕಾರಣಗಳು ಹೆಚ್ಚಿನ ಸಂಶೋಧನೆಗೆ ಸಹಕಾರಿ- ಡಿ.ಸಿ. ಕನಗವಲ್ಲಿ.

ಕೊಪ್ಪಳ ಡಿ. ೧೭ (ಕ ವಾ)ಯಾವುದೇ ವ್ಯಕ್ತಿಯ ಸಾವಿಗೆ ಸಂಬಂಧಿಸಿದಂತೆ ವೈದ್ಯರು ಮರಣದ ಕಾರಣವನ್ನು ಸ್ಪಷ್ಟವಾಗಿ ಪ್ರಮಾಣ ಪತ್ರದಲ್ಲಿ ನಮೂದಿಸಬೇಕು.  ಅಂಕಿ-ಅಂಶಗಳು  ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಂಶೋಧನೆ ಸೇರಿದಂತೆ ಹಲವು ಕಾರ್ಯಗಳಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ‘ಮರಣ ಕಾರಣದ ವೈದ್ಯಕೀಯ ಪ್ರಮಾಣ ಪತ್ರ’ ಕುರಿತು ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳಿಗಾಗಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  ಗುರುವಾರ ಏರ್ಪಡಿಸಿದ ಒಂದು ದಿನದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ವೈದ್ಯರು ಯಾವುದೇ ವ್ಯಕ್ತಿಯ ಮರಣದ ಪ್ರಮಾಣ ಪತ್ರದಲ್ಲಿ, ಆ ವ್ಯಕ್ತಿಯ ಮರಣದ ಕಾರಣವನ್ನು ಸ್ಪಷ್ಟವಾಗಿ ನಮೂದಿಸದಿರುವುದನ್ನು, ವೈದ್ಯರ ಕರ್ತವ್ಯ ನಿರ್ಲಕ್ಷ್ಯ ಎಂದೇ ಪರಿಗಣಿಸಲಾಗುತ್ತದೆ.  ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಕಾರಣಗಳಿಂದ ಸಾವು ಪ್ರಕರಣಗಳು ಸಂಭವಿಸುತ್ತವೆ. ರಕ್ತಹೀನತೆ ಎಂಬ ಪದ ಸಾಮಾನ್ಯವಾಗಿದ್ದರೂ, ರಕ್ತ ಹೀನತೆಯ ಬಗ್ಗೆ ಅನೇಕ ವಿಶ್ಲೇಷಣೆಗಳಿವೆ.  ನಿಖರ ವರದಿಯಿಂದ ಮಾತ್ರ ರಕ್ತಹೀನತೆಯ ಪ್ರಮಾಣ ನಮ್ಮ ದೇಶದಲ್ಲಿ ಎಷ್ಟು ಇದೆ ಎಂಬುದನ್ನು ಅಂಕಿ-ಅಂಶಗಳು ನಿಖರವಾಗಿ ತಿಳಿಸುತ್ತವೆ.  ಸಾವಿನ ಕಾರಣವನ್ನು ಆಯಾ ಕರ್ತವ್ಯ ನಿರತ ವೈದ್ಯರು ಸ್ಪಷ್ಟವಾಗಿ ನಮೂದಿಸಿದಲ್ಲಿ, ಆಯಾ ಪ್ರದೇಶದಲ್ಲಿನ ಭೌಗೋಳಿಕ ಹವಾಮಾನದ ತೊಂದರೆಗಳು, ಪ್ರಮುಖ ಕಾರಣಗಳನ್ನು ಅರಿಯಲು ಸಾಧ್ಯವಾಗುತ್ತದೆ.  ಅಲ್ಲದೆ ಆ ಪ್ರದೇಶದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕಾರ್ಯಗಳಿಗೂ ಅನುಕೂಲವಾಗಲಿದೆ.  ವೈದ್ಯರು ಮರಣದ ಪ್ರಮಾಣಪತ್ರದಲ್ಲಿ ಮರಣದ ನಿಖರ ಕಾರಣವನ್ನು ನಮೂದಿಸಿದಲ್ಲಿ, ಅದು ಮನುಷ್ಯರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲುವ ಅವಶ್ಯಕತೆ ಇದೆ.  ಮರಣ ಕಾರಣದ ಸ್ಪಷ್ಟ ವರದಿಯ ಅಂಕಿ-ಅಂಶಗಳ ಆಧಾರದಲ್ಲಿ ಸರ್ಕಾರ ಆರೋಗ್ಯ ಯೋಜನೆಗಳಿಗೆ ಸಂಬಂಧಿತ ತನ್ನ ಕಾರ್ಯ ನೀತಿಯನ್ನು ರೂಪಿಸಲು ಸಹಕಾರಿಯಾಗಲಿದೆ.  ವೈದ್ಯರು ಇಂತಹ ಕಾರ್ಯಗಾರವನ್ನು ಗಂಭೀರವಾಗಿ ಪರಿಗಣಿಸಿ, ಮಾರ್ಗಸೂಚಿಗಳಂತೆ ಕ್ರಮ ವಹಿಸಬೇಕು.  ಈ ದಿಸೆಯಲ್ಲಿ ಎಲ್ಲ ವೈದ್ಯಾಧಿಕಾರಿಗಳು, ಆಸಕ್ತಿ ವಹಿಸಿ ಶ್ರಮಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ವೈದ್ಯರಲ್ಲಿ ಮನವಿ ಮಾಡಿದರು.
      ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಭೀಮಶಾ ಸಿಂಗೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನನ ಮತ್ತು ಮರಣ ನೋಂದಣಿ ಅಧಿನಿಯಮದಡಿ ರೋಗಿಗೆ ಶುಶ್ರೂಷೆ
ನೀಡಿದ ವೈದ್ಯರು ರೋಗಿಯ ಮರಣದ ನಂತರ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನೀಡುವುದನ್ನು
ಕಡ್ಡಾಯಗೊಳಿಸಲಾಗಿದೆ.  ಈ ರೀತಿ ವಾರ್ಷಿಕವಾಗಿ ಸಂಗ್ರಹಿಸಲಾಗುವ ಅಂಕಿ-ಅಂಶಗಳನ್ನು
ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ವಸತಿ, ಆರೋಗ್ಯ, ಶಿಕ್ಷಣ ಮತ್ತಿತರ
ಯೋಜನಾ ಕಾರ್ಯಕ್ರಮಗಳನ್ನು ನಿರೂಪಿಸಲು ಉಪಯುಕ್ತವಾಗಲಿದ್ದು, ಆರೋಗ್ಯ ಸಂಶೋಧನಾ
ಕಾರ್ಯದಲ್ಲಿ ಇವು ಮಹತ್ವವನ್ನು ಪಡೆಯಲಿವೆ.  ಈ ಕಾರಣದಿಂದಾಗಿಯೇ ವೈದ್ಯಾಧಿಕಾರಿಗಳಿಗೆ
ಅರಿವು ಮೂಡಿಸಲು ಮೂರು ವರ್ಷಕ್ಕೊಮ್ಮೆ ಇಂತಹ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ
ಎಂದರು.
       ಹಿರಿಯ ವೈದ್ಯ ಡಾ. ಕೆ.ಜಿ.
ಕುಲಕರ್ಣಿ, ತಾಲೂಕು ವೈದ್ಯಾಧಿಕಾರಿ ಡಾ. ದಾನರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.
ಲೋಕೇಶ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ವೇದಿಕೆಯಲ್ಲಿ
ಉಪಸ್ಥಿತರಿದ್ದರು.  ಕೊಪ್ಪಳ ಕಿಮ್ಸ್ ಉಪನ್ಯಾಸಕರುಗಳಾದ ಡಾ. ಅನಿರುದ್ ಕುಷ್ಟಗಿ, ಡಾ.
ಅಜೇಯಕುಮಾರ್, ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.  ಕಾರ್ಯಾಗಾರದಲ್ಲಿ ಜಿಲ್ಲೆಯ
ಎಲ್ಲ ತಾಲೂಕಿನ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು,
ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಭಾಗವಹಿಸಿದ್ದರು.

Please follow and like us:
error