You are here
Home > Koppal News > ಹನುಮಸಾಗರ ದ್ಯಾಮಾಂಬಿಕಾದೇವಿ ಜಾತ್ರೆಯಲ್ಲಿ

ಹನುಮಸಾಗರ ದ್ಯಾಮಾಂಬಿಕಾದೇವಿ ಜಾತ್ರೆಯಲ್ಲಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕ ಹನುಮಸಾಗರದಲ್ಲಿ ದಿನಾಂಕ ೨೪.೦೪.೨೦೧೫ ರಿಂದ ೨೯.೦೪.೨೦೧೫ ರವರೆಗೆ ನಡೆದ ಗ್ರಾಮದ ಅಧಿದೇವತೆ ಶ್ರೀ ದ್ಯಾಮವ್ವ ದೇವಿಯ ಜಾತ್ರಾಮಹೋತ್ಸವದ ಸಂದರ್ಭದಲ್ಲಿ  ಹರೆಕೆಯ ಹೆಸರಿನಲ್ಲಿ ಭಕ್ತಿಯ ಅಮಲಿನಲ್ಲಿ ನಡೆಯಬೇಕಾಗಿದ್ದ ಕೋಣ, ಕುರಿ, ಟಗರು, ಮೇಕೆ, ಕೊಳಿ ಮುಂತಾದ ಸಾವಿರಾರು ಪ್ರಾಣಿಗಳ ಬಲಿ-ಮಾರಣ ಹೋಮ, ರಕ್ತದೊಕುಳಿಗೆ ಸ್ವಯಂ ಪ್ರೇರಣೆಯಿಂದ ತಿಲಾಂಜಲಿ ನೀಡಿ, ಮಾಂಸಾಹಾರದ ನೈವೇದ್ಯ ಮತ್ತು ದೇವಾಲಯದ  ಸುತ್ತಮುತ್ತ ಮಾಂಸಾಹಾರದ ಸಾಮೂಹಿಕ ಭೋಜನವನ್ನು ತ್ಯಜಿಸಿ, ಹೋಳಿಗೆ, ಕಡುಬು ಮುಂತಾದ ಶುದ್ದ ಸಸ್ಯಾಹಾರಿ ಸಿಹಿ ಪದಾರ್ಥಗಳ ನೈವೇದ್ಯ ಹಾಗೂ ಅನ್ನ, ಸಾರು,ಕಾಯಿ ಪಲ್ಲೆ ಸಜ್ಜಕಗಳ (ಸಿಹಿ) ಸಾಮೂಹಿಕ ಭೋಜನವನ್ನು ಉಣ ಬಡಿಸುವುದರ ಮೂಲಕ ಸಾತ್ವಿಕ ಪೂಜೆ-ಧಾರ್ಮಿಕ ಆರಾಧನಾ ಪರಂಪರೆಗಳಿಗೆ ನಾಂದಿಹಾಡಿ ಇತಿಹಾಸವೊಂದರ ಸೃಷ್ಠಿಸಿದ ಕೀರ್ತಿಗೆ ಹನುಮಸಾಗರದ ಭಕ್ತರು ಭಾಜನರಾದರು. ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದ ಅಮಾನುಷ, ಅನಾಗರಿಕ, ಕ್ರೌರ್ಯ, ಮೌಡ್ಯ ಪರಂಪರೆಗೆ ಕೊನೆಯ ವಿದಾಯ ಹೇಳಿ ಹನುಮಸಾಗರದ ದ್ಯಾಮಾಂಬಿಕಾ ಜಾತ್ರೆಯನ್ನು ಪ್ರಾಣಿಬಲಿ ಮುಕ್ತ ಜಾತ್ರೆ ಎಂದು ಘೋಷಿಸುವುದರ ಮೂಲಕ ಇಡೀ ದೇಶಕ್ಕೆ ಮಾದರಿಯಾದರು.
ಈ ಅಪೂರ್ವ ಯಶಸ್ವು ಕರ್ನಾಟಕ ಸರ್ಕಾರ, ಕೊಪ್ಪಳ ಜಿಲ್ಲಾ ಆಡಳಿತ, ಪೊಲೀಸ ಇಲಾಖೆ, ಸುದ್ದಿ ಮಾಧ್ಯಮಗಳು, ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಬಸವ ಸಮಿತಿ, ಶರಣ ಸಾಹಿತ್ಯ ಪರಿಷತ್ತು, ಜೈನ ಸಮಾಜ ಹಾಗೂ ಇನ್ನಿತರ ಸಂಘಟನೆಗಳ ಸಂಯುಕ್ತ ಕಾರ್ಯಾಚರಣೆಯ ಫಲಶೃತಿಯಾಗಿದೆ. ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷರೂ, ಕರ್ನಾಟಕ ಸರ್ಕಾರದ ರಾಜ್ಯ ಗೋ ಸೇವಾ ಆಯೋಗದ ಸದಸ್ಯರು ಆದ  ಬೆಂಗಳೂರಿನ ಬಸವಧರ್ಮ ಜ್ಞಾನಪೀಠದ ದಯಾನಂದ ಸ್ವಾಮೀಜಿ, ಮಂಡಳಿಯ ರಾಷ್ಟ್ರೀಯ ಮಹಿಳಾ ಸಂಚಾಲಕಿ ಸುನಂದಾದೇವಿಯವರ ನೇತೃತ್ವದಲ್ಲಿ ಕೈಗೊಂಡ ಅಹಿಂಸಾ ಪ್ರಾಣಿ ದಯಾ ಸಂದೇಶ ಯಾತ್ರೆಯು ಕೊಪ್ಪಳ, ಕುಷ್ಟಗಿ, ಹನಮಸಾಗರ, ಮುಂತಾದಡೆಯಲ್ಲಿ ಸಂಚರಿಸಿ ಪ್ರಾಣಿ ಬಲಿ ತಡೆ ಕುರಿತು.  ಜನರಲ್ಲಿ ಜಾಗೃತಿ ಮೂಡಿಸಿದ್ದುದೂ ಇದರ ಯಶಸ್ವಿಗೆ ಸಹಕಾರಿಯಾಗಿದೆ. ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲೀಸ ವರಿಷ್ಠಾಧಿಕಾರಿಗಳವರ ಮಾರ್ಗದರ್ಶನದಲ್ಲಿ ಗಂಗಾವತಿ ಡಿ.ವೈಎಸ್ಪಿ, ಕುಷ್ಟಗಿಯ ಸಿ.ಪಿ.ಐ, ತಹಶಿಲ್ದಾರ, ಹನುಮಸಾಗರದ ಪಿ.ಎಸ್.ಐ ಹಾಗೂ ಇನ್ನಿತರ ಅಧಿಕಾರಿಗಳು ಸುಮಾರು ೧೫೦ ಹೆಚ್ಚು ಪೊಲೀಸರು ಅರ್ಹನಿಶಿ ಈ ಪ್ರಾಣಿಬಲಿ ತಡೆಗೆ ಶ್ರಮಿಸಿದ್ದರು. ಗ್ರಾಮದಲ್ಲಿ ಪೊಲೀಸರ ಪಥ ಸಂಚಲನವು ಸಹ  ೨೮/೦೪/೨೦೧೫ ಸಾಯಂಕಾಲ ರಂದು ನಡೆಯಿತು. ಸುದ್ದಿ ಮಾಧ್ಯಮದವರು ಈ ಪ್ರಾಣಿ ಬಲಿತಡೆಗೆ ಬೆಂಬಲಿಸಿ ನಾಲ್ಕು ದಿನಗಳಿಂದ ನಿರಂತರವಾಗಿ ವಿಶೇಷವಾದ ವ್ಯಾಪಕ ಪ್ರಚಾರ ನೀಡಿ ಸಹಕರಿಸಿದರು. ಈ ಹಿನ್ನಲೆಯಲ್ಲಿ  ಮೆಲ್ಕಂಡವರೆಲ್ಲರಿಗೂ ಮುಖ್ಯವಾಗಿ ದೇವಾಲಯದ ಆಡಳಿತ ಮಂಡಳಿ ಹಾಗೂ ಹನುಮಸಾಗರದ ಭಕ್ತರಿಗೆಲ್ಲರಿಗೂ ದಯಾನಂದ ಸ್ವಾಮೀಜಿ ಹೃತ್ಪೂರ್ವಕ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸಿದ್ದಾರೆ.  ಇದೇ ಹನುಮಸಾಗರದ ದ್ಯಾಮಾಂಬಿಕೆಯ ಹಿಂದಿನ ವರ್ಷಗಳ ಜಾತ್ರೆಗಳಲ್ಲಿ ದೇವಾಲಯದ ಮುಂದೆ ಕೋಣಗಳ ಬಲಿ ನೀಡಲಾಗುತ್ತಿತ್ತಲ್ಲದೆ. ಹರಕೆಯ ಹೆಸರಿನಲ್ಲಿ ದೇವಿಗೆ ಸಲ್ಲಿಸಿದ ಕೋಣ, ಕುರಿ, ಮೇಕೆ, ಕೋಳಿ, ಮುಂತಾದ ಪ್ರಾಣಿಗಳನ್ನು ಅಲ್ಲಿಯೆ ಬಲಿ ನೀಡಿ ದೇವಾಲಯದ ಆವರಣದಲ್ಲಿಯೇ ಮಾಂಸದ ಅಡಿಗೆಯನ್ನು ಮಾಡಿ ದೇವಿಗೆ ಮಾಂಸದ ನೈವೇದ್ಯ ಎಡೆ ಮಾಡಿ ಹಬ್ಬಕ್ಕೆ ಬಂದ ಸಾವಿರಾರು ಜನರಿಗೆ ಮಾಂಸದ ಊಟವನ್ನು ಉಣಬಡಿಸುತ್ತಿದ್ದುದೂ ಸರ್ವೆ ಸಾಮಾನ್ಯವಾಗಿತ್ತು. ಎಲ್ಲಿ ನೋಡಿದರೂ ರಕ್ತದ ಹೊಳೆಯೆ ಹರಿಯುತ್ತಿತ್ತು ಎಂಬುದು ಈ ಹಿಂದೆ ಜಾತ್ರೆ ನೋಡಿದವರಿಂದ ತಿಳಿದು ಬಂದ ವರದಿ.
    ಈ ವರ್ಷದಿಂದ ಇವೆಲ್ಲವೂ ಕೊನೆಗೊಂಡಿದ್ದು ಶುದ್ದ ಸಸ್ಯಹಾರವನ್ನು, ಸಿಹಿ ಅಡುಗೆಯ ಊಟವನ್ನು ದೇವಾಲಯದ ಆಡಳಿತ ಮಂಡಳಿಯವರೇ ತಯಾರಿಸಿ ದೇವಾಲಯದ ಆವರಣದಲ್ಲಿ ಕಮ್ಯೂನಿಟಿ ಹಾಲ್‌ನಲ್ಲಿ ಉಣ ಬಡಿಸಿದರು. ಸ್ವತ: ದಯಾನಂದ ಸ್ವಾಮೀಜಿ ಮತ್ತವರ ಯಾತ್ರಾತಂಡ, ಪೊಲೀಸ ಅಧಿಕಾರಿಗಳು ಮತ್ತವರ ಸಿಬ್ಬಂದಿ, ಪತ್ರಿಕಾಪ್ರತಿನಿಧಿಗಳು ಹಾಗೂ  ಗ್ರಾಮದ ಸರ್ವ ಪಂಗಡಗಳ-ಸಮುದಾಯಗಳ ಮುಖಂಡರು ನೂರಾರು ಸಾರ್ವಜನಿಕರು, ಮಹಿಳೆಯರು, ಮಕ್ಕಳು ಈ ಅನ್ನ ಪ್ರಸಾದವನ್ನು ಒಂದೇ ಪಂಕ್ತಿಯಲ್ಲಿ ಕುಳಿತು ಸ್ವೀಕರಿಸುವುದರ ಮೂಲಕ ಭಾವ್ಯಕತೆಯನ್ನು ಕೂಡಾ ಈ ಸಂದರ್ಭದಲ್ಲಿ ಸಾರಿದರು.    
ಹನುಮಸಾಗರದ ದ್ಯಾಮಾಂಬಿಕೆಯ ಭಕ್ತರಂತೆಯೆ ಹುಲಗಿ, ದೊಣ್ಣೆಗುಡ್ಡ, ಕಬ್ಬರಗಿ, ಕುಂಬಳಾವತಿ ಮುಂತಾದ ಗ್ರಾಮದ ಭಕ್ತರು ಕೂಡಾ ಮುಂಬರುವ ತಮ್ಮ ತಮ್ಮ ಊರಿನ ಜಾತ್ರೆಯನ್ನು ( ಹಬ್ಬಗಳನ್ನು) ಪ್ರಾಣಿ ಬಲಿ ಮುಕ್ತ ಜಾತ್ರೆ ಗಳನ್ನಾಗಿ ಆಚರಿಸಬೇಕೆಂದು ಈ ಸಂದರ್ಭದಲ್ಲಿ ದಯಾನಂದ ಸ್ವಾಮೀಜಿಯವರು ಭಕ್ತರಲ್ಲಿ ಮನವಿ ಮಾಡಿದರು.  

Leave a Reply

Top