fbpx

ಮತ್ತೊಂದು ಹಸಿ ಸುಳ್ಳು ಬಯಲಾಯಿತು!

-ಸುರೇಶ್ ಭಟ್, ಬಾಕ್ರಬೈಲ್

ಜನಾಂಗ ಶ್ರೇಷ್ಠತೆ ಮತ್ತು ಸಂಸ್ಕೃತಿ ಶ್ರೇಷ್ಠತೆಯ ಕಲ್ಪನೆಗಳ ಮೂಲಕ ಮುಗ್ಧ ಜನರನ್ನು ಮರುಳಾಗಿಸುವ ಸಂಘ ಪರಿವಾರ ತನ್ನ ಉದ್ದೇಶ ಸಾಧನೆಗಾಗಿ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೆಣೆಯುತ್ತಲೆ ಬಂದಿದೆ. ಉದಾಹರಣೆಗೆ ತಾಜ್‌ಮಹಲ್‌ನ ನೈಜ ಹೆಸರು ತೇಜೊ ಮಹಾಲಯ, ಜೆರುಸಲೆಂ ಅಂದರೆ ಯದು (ಯಾದವ ವಂಶದ ಕೃಷ್ಣನ) ಶಾಲ್ಯಂ, ಮಕ್ಕಾದ ಕಾಬಾ ಮೂಲತಃ ವಿಷ್ಣು ಮಂದಿರ, ಪ್ಯಾರಿಸ್ ನಿಜವಾಗಿಯೂ ಒಂದು ಹಿಂದೂ ನಗರ; ಅದರ ಹೆಸರು ಪರಮೇಶ್ವರ್ಯಂ ಇತ್ಯಾದಿ ಇತ್ಯಾದಿ! ಈಗಲಂತೂ ತಮ್ಮದೇ ಸರಕಾರ ಸ್ಥಾಪಿತವಾದ ನಂತರ ಸಂಘ ಪರಿವಾರಿಗರ ಬಾಯಿಗೆ ಕಡಿವಾಣವೇ ಇಲ್ಲವಾಗಿದೆ. ಸಾರ್ವಜನಿಕ ಸಮಾರಂಭವೊಂದರಲ್ಲಿ ಸ್ವತಃ ಪ್ರಧಾನಿ ಮೋದಿ ಕೂಡ ಗಣೇಶನ ಮುಂಡಕ್ಕೆ ಆನೆಯ ರುಂಡವನ್ನು ಜೋಡಿಸಿದ್ದ ಪ್ರಾಚೀನ ಭಾರತೀಯರ ಪ್ಲಾಸ್ಟಿಕ್ ಸರ್ಜರಿ ಜ್ಞಾನವನ್ನು ಕೊಂಡಾಡಿದ ಮೇಲೆ ಇನ್ನು ಮಿಕ್ಕವರ ಸುಳ್ಳುಗಳನ್ನು ನಿಯಂತ್ರಿಸುವವರಾರು? ತೀರ ಇತ್ತೀಚೆಗಷ್ಟೆ ದೇಶ, ವಿದೇಶಗಳ ವಿಜ್ಞಾನಿಗಳು ಭಾಗವಹಿಸಿದಂತಹ ಭಾರತೀಯ ವಿಜ್ಞಾನ ಪರಿಷತ್ತಿನ ಘನಗಂಭೀರ ಸಭೆಯಲ್ಲಿಯೂ ಯಥಾಪ್ರಕಾರ ಪ್ಲಾಸ್ಟಿಕ್ ಸರ್ಜರಿ, ಪ್ರಣಾಳ ಶಿಶು, ಟಿವಿ, ವಿಮಾನ, ಅಂತರ್‌ಗ್ರಹ ಯಾನ ಮುಂತಾದ ತಂತ್ರಜ್ಞಾನಗಳು ಭಾರತೀಯ ಋಷಿಮುನಿಗಳ ಕೊಡುಗೆಗಳೆಂದು ಪ್ರತಿಪಾದಿಸಲಾಯಿತು. ವಿಮಾನಗಳ ಬಗ್ಗೆ ಕೆಲವು ಸಂಸ್ಕೃತ ಶ್ಲೋಕಗಳನ್ನು ಉದ್ಧರಿಸಿದ ಕ್ಯಾಪ್ಟನ್ ಆನಂದ್ ಬೋಡ್ಸೆ ಎಂಬವರ ಪ್ರಕಾರ ಪುರಾತನ ಕಾಲದಲ್ಲಿ ರಾಡಾರ್‌ಗಳು ಇದ್ದವಂತೆ ಮತ್ತು ಅದರಲ್ಲಿ ಇಡೀ ವಿಮಾನದ ಚಿತ್ರ ಕಾಣಿಸುತ್ತಿತ್ತಂತೆ! ಮಾತ್ರವಲ್ಲ ವೈಮಾನಿಕರಿಗೆ ಕೊಡಲಾಗುವ ವಿಶೇಷ ಆಹಾರದ ಪ್ರಸ್ತಾಪವೂ ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಇದೆಯಂತೆ! ನಮ್ಮ ಪೂರ್ವಜರು ಗಣಿತಶಾಸ್ತ್ರ, ಖಗೋಳಶಾಸ್ತ್ರ, ಶಸ್ತ್ರಚಿಕಿತ್ಸೆಯಂತಹ ಕೆಲವು ಕ್ಷೇತ್ರಗಳಲ್ಲಿ ಮಾಡಿರುವ ಕೆಲವು ಸಾಧನೆಗಳನ್ನು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ. ಆದರೆ ಸಂಘ ಪರಿವಾರದ ರಾಜಕಾರಣಿಗಳು ಮತ್ತು ಕೆಲವು ಬಾಲಂಗೋಚಿ ವಿಜ್ಞಾನಿಗಳು ಪ್ರತಿಯೊಂದು ಆವಿಷ್ಕಾರದ ಮೂಲವೂ ಭಾರತವೆಂದು ವೈಭವೀಕರಿಸಲು ಹೊರಟು ತಾವು ನಗೆಪಾಟಲಿಗೆ ಗುರಿಯಾಗುವುದರೊಂದಿಗೆ ದೇಶದ ಮಾನವನ್ನೂ ಕಳೆಯುತ್ತಿರುವುದು ಶೋಚನೀಯ. ಭಾರದ್ವಾಜ ಮುನಿ ಬರೆದ ವೈಮಾನಿಕ ಶಾಸ್ತ್ರ ಎಂಬ ಗ್ರಂಥದಲ್ಲಿ ವಿಮಾನಗಳು ಮತ್ತು ಅಂತರ್‌ಗ್ರಹ ಯಾನದ ವಿವರಗಳು ಇವೆ ಎನ್ನುವ ಸಂಘ ಪರಿವಾರಿಗರ ಪ್ರತಿಪಾದನೆ ಶುದ್ಧ ಸುಳ್ಳೆಂದು ಇದೀಗ ತಿಳಿದುಬಂದಿದೆ. ವಾಸ್ತವವಾಗಿ ಈ ವೈಮಾನಿಕ ಶಾಸ್ತ್ರವನ್ನು 20ನೆ ಶತಮಾನದಲ್ಲಿ ರಚಿಸಲಾಗಿದೆಯೆಂಬ ಆಘಾತಕಾರಿ ಸತ್ಯವನ್ನು ಖುದ್ದು ನಮ್ಮ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಏರೊನಾಟಿಕಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಐವರು ವಿಜ್ಞಾನಿಗಳ ತಂಡವೊಂದು 1974ರಲ್ಲೆ ಹೊರಗೆಡವಿದೆ! ವೈಮಾನಿಕ ಶಾಸ್ತ್ರವನ್ನು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಿದ್ದ ಐಐಎಸ್‌ಸಿ ವಿಜ್ಞಾನಿಗಳಾದ ಎಚ್. ಎಸ್. ಮುಕುಂದ, ಎಸ್.ಎಂ. ದೇಶಪಾಂಡೆ, ಎಚ್. ಆರ್. ನಾಗೇಂದ್ರ, ಎ. ಪ್ರಭು ಮತ್ತು ಎಸ್. ಪಿ. ಗೋವಿಂದರಾಜು ಕಂಡುಕೊಂಡಿರುವಂತೆ ಗ್ರಂಥದ ಲೇಖಕರು ಕರ್ನಾಟಕದ ಆನೇಕಲ್‌ನ ಪಂಡಿತ ಸುಬ್ಬರಾಯ ಶಾಸ್ತ್ರಿ ಎನ್ನುವವರು ಮತ್ತು ಅವರು ಅದನ್ನು 1920-22ರ ಮಧ್ಯೆ ಬರೆದಿದ್ದರು! ಐಐಎಸ್‌ಸಿ ತಂಡದ ಜಂಟಿ ವರದಿ ಸಯಂಟಿಫಿಕ್ ಒಪೀನಿಯನ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ವರದಿ ಹೇಳುವಂತೆ ಸುಬ್ಬರಾಯ ಶಾಸ್ತ್ರಿಯವರ ಗ್ರಂಥದಲ್ಲಿರುವ ಶಕುನ, ಸುಂದರ, ರುಕ್ಮ ಮತ್ತು ತ್ರಿಪುರ ಎಂಬ ನಾಲ್ಕು ತರಹದ ವಿಮಾನಗಳ ಚಿತ್ರಗಳನ್ನು 1900-19ರ ಅವಧಿಯಲ್ಲಿ ರಚಿಸಲಾಗಿದೆ. ಆ ಚಿತ್ರಗಳನ್ನು ಬಿಡಿಸಿದವರು ಸ್ಥಳೀಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡ್ರಾಫ್ಟ್ಸ್‌ಮನ್ (ನಕಾಸೆಗಾರ) ಆಗಿದ್ದ ಎಲ್ಲಪ್ಪಎಂಬವರು!
ತಮಾಷೆ ಏನೆಂದರೆ ವೈಮಾನಿಕ ಶಾಸ್ತ್ರದಲ್ಲಿ ಹೇಳಲಾಗಿರುವ ಐಡಿಯಗಳನ್ನು ಪ್ರಾಯೋಗಿಕವಾಗಿಸುವ ಬಗ್ಗೆ ತನಗೇ ಖಾತರಿ ಇರಲಿಲ್ಲವೆಂದು ಖುದ್ದು ಸುಬ್ಬರಾಯ ಶಾಸ್ತ್ರಿ ತನ್ನ ಆತ್ಮಕಥೆಯಲ್ಲಿ ಬರೆದಿದ್ದಾರೆ! ಈ ವಿಮಾನಗಳೆಲ್ಲ ಬರೀ ಕಲ್ಪನಾಲೋಕದ ವಿಲಾಸಗಳೆ ಹೊರತು ನೈಜವಲ್ಲ. ಅವುಗಳಲ್ಲಿ ಒಂದಕ್ಕಾದರೂ ಗಗನದಲ್ಲಿ ಹಾರಾಡಲು ಸಾಧ್ಯವಿಲ್ಲ ಏಕೆಂದರೆ ಅವುಗಳ ವಿನ್ಯಾಸ ಹಾರಾಟಕ್ಕೆ ತೀವ್ರ ವಿರೋಧವನ್ನು ಒಡ್ಡುವಂತಿದೆ… ಎಂದ ಐಐಎಸ್‌ಸಿ ವಿಜ್ಞಾನಿಗಳು, ಒಂದನ್ನು ನಿರ್ಮಿಸಿ ಹಾರಿಸಿ ತೋರಿಸಲಿ ಎಂದು ಸವಾಲು ಹಾಕಿದ್ದರು. ಇದುವರೆಗೂ ಅವರ ಸವಾಲನ್ನು ಸ್ವೀಕರಿಸಿದವರಿಲ್ಲ. ವಿಮಾನ, ಅಂತರ್‌ಗ್ರಹ ಯಾನ, ರಾಡಾರ್ ಇತ್ಯಾದಿಗಳ ಪ್ರತಿಪಾದಕರು ಈಗಲಾದರೂ ಆ ಕೆಲಸವನ್ನು ಮಾಡಬಹುದಲ್ಲ. (ಆಧಾರ: 7.1.15ರ ಡೆಕ್ಕನ್ ಹೆರಾಲ್ಡ್ ನಲ್ಲಿ ಕಲ್ಯಾಣ್ ರೇಯವರ ಲೇಖನ)
Please follow and like us:
error

Leave a Reply

error: Content is protected !!